ಮೆಹಂದಿ ಇಲ್ಲದೆ ಮದುವೆಯಾಗುವ ಆತಂಕದಲ್ಲಿ ಅತ್ತ ಪೂರ್ಣಿಮಾ!

ಮತ್ತೆ ಮತ್ತೆ ನೆನಪಾಗುವ ಗೌರತ್ತೆ  .. (ಕಾಟ!)

poornima hegde

ಪೂರ್ಣಿಮಾ ಹೆಗಡೆ

ನಮ್ಮ ಹುಟ್ಟಿದಾಗಿನಿಂದ ಸಾಯೋವರೆಗೂ ಅವನ ಜೀವನದ ಪ್ರತಿಯೊಂದು ಹಂತನೂ ಅತ್ಯಂತ ಮುಖ್ಯ ಅನ್ನೋದು ಅಕ್ಷರಶಃ ಸತ್ಯ.  ಹಾಗೇ ನಮ್ಮ ಜೀವನದ ಮಜಲುಗಳನ್ನು ಅಷ್ಟು ಮುಖ್ಯವಾಗಿಸಿಕೊಳ್ಳೋದು ಹೇಗೆ ಎನ್ನೋದು ನಮಗೇ ಬಿಟ್ಟಿದ್ದು! ಹಾಗೊಂದು ವೇಳೆ  ಜೀವನದ ಯಾವುದಾದರೂ ಒಂದು ಹಂತವನ್ನ ಮುಖ್ಯವಾಗಿ, ಮೆಮೋರೆಬಲ್ ಆಗಿಸಿಕೊಂಡಿದ್ದರೆ ಅದನ್ನ ಹಂಚಿಕೊಳ್ಳೋದ್ರಲ್ಲಿ ತಪ್ಪೇನಿಲ್ಲ ಅಲ್ವ ??!!
ಶಾಲೆ ಕಾಲೇಜು, ಕೆಲಸ  ಇವೆಲ್ಲ ಬಿಟ್ಟು ಮದುವೆ ವಿಷಕ್ಕೆ ಬಂದ್ರೆ, ಅದೆಷ್ಟೇ ಕಾಮನ್ ವಿಷವಾಗಿದ್ರೂ ಅದನ್ನ ಕೇಳೋದಕ್ಕೆ  ಕಿವಿಗಳಂತೂ ಸಿದ್ಧವಾಗಿರುತ್ತವೆ ನೋಡಿ!  ನಾನೂ ನನ್ನ ತಪ್ಪು ಒಪ್ಪಿನ ಮದುವೆ ಮಾತುಕತೆ  ಎಷ್ಟು ಕಲರ್ ಫುಲ್ ಆಗಿತ್ತು ಅನ್ನೋದನ್ನ ನಿಮಗೆ ಹೇಳಲೇ ಬೇಕು.
ಮದುವೆ ಅರೆಂಜೋ, ಲವ್ವೋ ಯಾವುದೇ ಇರ್ಲಿ, ಆದರೆ  ನೀವೆಷ್ಟೇ ಪ್ರಯತ್ನ ಪಟ್ರೂ ಆ ಸಂದರ್ಭದ, ಆ ಪ್ರತಿಯೊಂದು ಕ್ಷಣವನ್ನ ಅನುಭವಿಸದೇ ಇರೋಕೆ ಸಾಧ್ಯನೇ ಇಲ್ಲ. ಯಾಕಂದ್ರೆ, ಮದುವೆ ನಿಶ್ವಯ ಆದ ದಿನದಿಂದ ಮದುವೆ ಮುಗಿದು ಮರುದಿನ ಬೀಗರ ಊಟ ಮುಗಿಯೋವರೆಗೆ ಅದೆಷ್ಟೋ  ಸಂಬಂಧಗಳು ಹುಟ್ಟಿ, ಇನ್ನೆಷ್ಟೋ ಸಂಬಂಧಗಳು ಕೆಟ್ಟು ಕುತಿರ್ತವೆ. ಮದುಮಗಳಿಗೆ ಬಿಡಿ, ಬೆಳ್ಳಿ ಬಂಗಾರ, ಕಾಗೆ ಬಂಗಾರಕ್ಕೂ ಮದುವೆ ದಿನ ಶೃಂಗಾರ !
ಮದುವೆನೇ ಬೇಡ ಅಂತ ಹೇಳ್ತಿದ್ದ ನಾನೂ ( ಸತ್ಯನೋ ಭ್ರಮೆನೋ ನನಗೂ ಗೊಂದಲ ಇದೆ!) ಮದುವೆ ಆದೆ ನೋಡಿ.
ನನ್ನ ಮದುವೆ ಇಡೀ ಪ್ರಹಸನ ಇಲ್ಲಿ ವಿವರಿಸೊಲ್ಲ ಬಿಡಿ. ಆದ್ರೆ ನಾನು ಹೇಳಲೇ ಬೇಕು ಅಂದುಕೊಂಡದ್ದು,, ಅರಿಶಿನ ನೀರು  ಹುಯ್ಯೋ  ಶಾಸ್ತ್ರದ ಬಗ್ಗೆ.
mehndi-henna
ನಾಳೆನೇ ಮದುವೆ ಮುನ್ನಾದಿನ ಅಂತ ಮನಸ್ಸಿಗೆ ತಂದುಕೊಂಡು ರಾತ್ರಿ  ನಿದ್ದೆನೇ ಬಂದಿರ್ಲಿಲ್ಲ. ಬೆಳಗ್ಗೆ ಬೇಗ ಎದ್ದು, (ಮಲಗಿದ್ದಲ್ಲಿಂದ, ನಿದ್ದೆಯಿಂದಲ್ಲ!) ಸ್ನಾನ  ಮಾಡಿ ಸೀರೇ ಉಡೋದಿಕ್ಕೆ ಪ್ರಯತ್ನ ಪಡ್ತಿರೋವಾಗ್ಲೇ ಬಟ್ರು ಮನೆಗೆ ಬಂದಾಗಿತ್ತು. ನನ್ನ ಅಪ್ಪನಿಗೂ ಹುಚ್ಚು ಗಾಬರಿ, ಮದುವೆ ಹುಡುಗಿಗೇ ತಯಾರಿ ಆಗಿಲ್ಲ, ಹೀಗಾದ್ರೆ ಮದುವೆ ದಿನ ಮದುವೆ ಮುಹೂತ್ರ ಮುಗ್ದು ಹೋಗತ್ತೆ ಅಂತ ಜೋರಾಗಿ ಕೂಗಾಡಿದ್ದಕ್ಕೆ, ಅಮ್ಮ  ಅಪ್ಪನ ಮೇಲಿನ ಮೂವತ್ತು ವರ್ಷದ ದ್ವೇಷನೆಲ್ಲ ಅವತ್ತೇ ತೀರಿಸಿಕೊಂಡಿದ್ರು. ಇದ್ದೊಬ್ಬಳು ಮಗಳು ಅವಳನ್ನೂ ಮದುವೆ ಮಾಡಿ ಮನೆಯಿಂದ ಓಡ್ಸೋದಕ್ಕೆ ಇಷ್ಟೇಲ್ಲ ಅರ್ಜಂಟು ಮಾಡುದೆಂತಕ್ಕೇ? ಅಂತ,  ಅಪ್ಪ ಅಮ್ಮನ್ನ  ಬಾಯಿ ಜೋರಾಗಿ ಶಬ್ದ ಮಾಡೋದನ್ನ ಕೇಳಿ, ನಮ್ಮನೆ ಕೆಲಸಕ್ಕೆ ಬರೋ ವೆಂಕ್ಟ ಸಿಂಗಾರದ ಎಳೆ  ತಂದು ಅಪ್ಪನ ಕೈಗೆ ಕೊಟ್ಟು  ರಣರಂಗಕ್ಕೊಂದು ಪರದೆ ಎಳೆದಿದ್ದ (ತಾತ್ಕಾಲಿಕ)  ಬಟ್ರಿಗೆ ಪಾನಕ ಕೊಡೊದಕ್ಕೆ ಹೋದ ಅಮ್ಮನ ಕಣ್ಣಲ್ಲಿ ನೀರು, ಅಲ್ಲಿಯೇ ಇದ್ದ ಅಪ್ಪನ ಕಣ್ಣಲ್ಲಿನ ಗಾಬರಿ  ನನ್ನ ಕಣ್ಣಲ್ಲಿ ಇನ್ನೋ ಜೀವಂತವಾಗಿದೆ.
ಈ ಸಂಬಂಧವನ್ನ ಅದ್ಯಾರೂ ನನ್ನ ಅಪ್ಪಂಗೆ ಹೇಳಿದ್ರೋ ಗೊತ್ತಿಲ್ಲ, ಮನೆಯಲ್ಲಿ ನಾನು ಇದೂವರೆಗೂ ನೋಡದೇ ಇರೋ ಪದ್ಧತಿ ರೀತಿ ರಿವಾಜುಗಳನ್ನೆಲ್ಲ ಎದ್ದೂ ಬಿದ್ದು ಮಾಡ್ತಿದ್ರು. ಇದು ನನಗೆ ಕಿರಿಕಿರಿ ಎನಿಸಿದ್ರೂ ನನ್ನ ಮದುವೆ ಅನ್ನೋ ಕಾರಣಕ್ಕೆ ಎಲ್ಲವನ್ನೂ ಸುಮ್ಮನೆ ಅನುಸರಿಸಲೇ ಬೇಕಾಗಿತ್ತು. ಆದರೆ ನನ್ನ  ಶಂಬಣ್ಣನಿಗೆ ಇದೆಲ್ಲ  ಸರಿಬರೋದಿಲ್ಲ. ನನ್ನ ಪಕ್ಕನೇ ಇದ್ದು ಕಮೆಂಟ್ ಪಾಸ್ ಮಾಡುತಿದ್ದ. ಸಿದ್ಧಾಪುರದ ಗೌರತ್ತೆ ಈ ಸಂಬಂಧ ಹುಡುಕಿದ್ದು ಕೂಸೆ, ಅದಕ್ಕೆ ಈ ಆಚಾರ ವಿಚಾರ ಎಲ್ಲಾ ಅತೀಯಾದ್ದು.  ಅವಳು ಹೇಳಿದ ಮಳ್ಳು ಮಾತಿಗೆಲ್ಲ  ಇದ್ದವರೆಲ್ಲ ಕುಣಿತ. ನೋಡು ನೋಡು, ಗೌರತ್ತೆ ಹೇಳಿದ್ದು ಇಲ್ಲಿದ್ದವರಿಗೆ ಅರ್ಥ ಆಗ್ತಿಲ್ಲ, ಅವಳು ಹೇಳಿದ್ದು ಮಾಡದೇ ಇವರಿಗೆ ಬೇರೆ ಉಪಾಯವಿಲ್ಲ. ಅವನ ಮಾತಿಗೆ ಬರ್ತಿದ್ದ ನಗು ನಮ್ಮನೆಯವರ ಪರದಾಟ ನೋಡಿ ಇನ್ನೂ ಹೆಚ್ಚಾಗ್ತಾ ಇತ್ತು. ನಾನು ನಕ್ಕಿದ್ದು ಗೌರತ್ತೆ ಉಗ್ರ ಕಣ್ಣಿಗೆ ಬಿದ್ದದ್ದೇ ತಡ, ಹತ್ತಿರ ಬಂದು ಕೂಗಿ ಹೇಳಿದ್ರು. “ಮದುಮಗಳು ನೀನು ಹೀಗೆಲ್ಲ ನಗುವ ಹಾಗಿಲ್ಲ.  ಶಾಸ್ತ್ರಗಳನ್ನು ನೋಡುಕೊಂಡು ಹೇಳಿದ್ದು ಕೇಳಿಕೊಂಡು ಇರಬೇಕು ಅಷ್ಟೇ. ಅಲ್ಲ   ಮನೆ ಬಿಟ್ಟು ಹೋಗ್ತೇನೆ ಅಂತ  ಸ್ವಲ್ವ ಕಣ್ನಲ್ಲಿ  ನೀರು ತುಂಬಿಸ್ಕೋ ಕೂಸೆ”.  ನಾನು ಅಳದಿದ್ರೂ ಈ ಮಾತಿಂದ ನನ್ನ ಅಮ್ಮನನ್ನು ಅಳೋಹಾಗೆ ಮಾಡಿದ  ಕ್ರೆಡಿಟ್ ಮಾತ್ರ ಗೌರತ್ತೆಗೆ!
ಮನೆಯವರೆಲ್ಲ ತಡಬಡ ಮಾಡಿ ಅವರವರ ಕೆಲಸ ಮಾಡ್ರಾ ಇರ್ವಾಗಲೇ ಗೌರತ್ತೆ “ಅರಿಶಿನ ನೀರು ಹುಯ್ಯೋ ಶಾಸ್ತ್ರಕ್ಕೆ ಮುತೈದೆಯರೆಲ್ಲ  ಬನ್ನಿ” ಎಂದಿದ್ದೆ ತುಳಸಿ ಕಟ್ಟೆ ಎದುರು ನನಗೆ ಕುಳಿತುಕೊಳ್ಳೋದಕ್ಕೆ ವೇದಿಕೆ ಸಿದ್ಧವಾಗಿತ್ತು. ಅಮ್ಮ, ಗೌರತ್ತೆಯಿಂದ ಶುರುವಾದ ಅರಿಶಿನ ನೀರಿನ ಸ್ನಾನ  ಕಾರ್ಯಕ್ರಮ, ಗೌರತ್ತೆಯ ಮೊಮ್ಮಗಳು ದೀಪಿಕಾವರೆಗೂ ಮುಂದುವರೆದಿತ್ತು. ಸರದಿಯಲ್ಲಿ ಕೊನೆಯಲ್ಲಿ ನಿಂತಿದ್ದ ಲಕ್ಷ್ಮೀ ಅಕ್ಕ  ಮಾತ್ರ ಕೊಡದಲ್ಲಿದ್ದ ಅಷ್ಟೂ ನೀರನ್ನೂ ಹುಯ್ದು ನಿಜವಾದ ಸ್ನಾನ ಮಾಡಿಸಿದ್ಲು.
ಮತ್ತೆ ಪೂಜೆಗೆ ರೆಡಿಯಾಗಿ ಕುಳಿತ ನಾನೂ ಮತ್ತು ನನ್ನ ಮನೆಯವರು ಗೌರತ್ತೆಯ ಮುಂದಿನ ಆದೇಶಕ್ಕಾಗಿ ಕಾಯ್ತಾ ಇದ್ವಿ.  ಇನ್ನೊಂದಿಷ್ಟು ಶಾಸ್ತ್ರಾದಿ ಶಾಸ್ತ್ರಗಳನ್ನು ಮಾಡಿಸಿ ಅಂತೂ ಊಟಕ್ಕೂ ಗೌರತ್ತೆಯನ್ನು ಕೇಳಿ ಊಟ ಮಾಡಿ ಹರಟೆಹೊಡೆಯುತ್ತ ಕುಳಿತಿದ್ದಾಗ, ಮೆಹಂದಿ ಹಾಕಿಸಿಕೊಳ್ಲೋದಕ್ಕೆ ಪೇಟೆಗೆ ಹೋಗಿ ಬರಬೇಕು ಎನ್ನೋದು ನೆನಪಾಗಿ  ಹೊರಡಲು ಸಿದ್ಧ ವಾಗಿದ್ದೇ ಗೌರತ್ತೆ ದಾರಿಯಲ್ಲೇ ನಿಂತಿದ್ದರು. ಕಂಕಣ ಕಟ್ಟಿಕೊಂಡ ಮದುವಗಳು ಮನೆಯಿಂದ ಹೊರಗಡೆ ಹೋದ್ರೆ ಅಪಚಾರ, ನೋಡಿದೋರು ನನ್ನನ್ನು ಬೈತಾರೆ, ನಿಮಗೂ ಶಾಸ್ತ್ರ ಸಂಪ್ರದಾಯಗಳು ಗೊತ್ತಿಲ್ವೇ ಅಂತ. ನೀನಿ ಮದುವೆಯಾಗೋವರೆಗೂ ಎಲ್ಲಿಗೂ ಹೋಗೋ ಹಾಗಿಲ್ಲ ಎಂದು ತಾಕೀತು ಮಾಡಿದರು. ಅದೆಲ್ಲಿತ್ತೋ ಗಂಗಾ ನದಿ… ಗೌರತ್ತೆಯನ್ನು ಶಪಿಸಿ ಬರಬರನೆ ಕಣ್ಣೀರಿನ ರೂಪದಲ್ಲಿ ಹೊರಬಂದಿತ್ತು. ಗೌರತ್ತೆಯನ್ನು ಎದುರಿಸಲಾಗದೇ ಅಮ್ಮ ಅಪ್ಪನನ್ನು ಇನ್ನಷ್ಟು ಬೈದಿದ್ದರು. ಮೆಹಂದಿಯನ್ನು  ಹಾಕಿಕೊಳ್ಳದೇ ಮದುವೆಯೇ ಆಗದೇ? ಎಂಬ ಗೌರತ್ತೆಯ ಮಾತು  ನನ್ನನ್ನು ಇನ್ನಷ್ಟು  ಕೆರಳಿಸಿತು.  ಕೊನೆಗೂ ಮುಸ್ಲಿಂ ಗೆಳತಿಯೊಬ್ಬಳನ್ನು ಮನೆಗೇ ಕರೆಸಿ ಮೆಹೆಂದಿ ಹಾಕಿಸಿಕೊಂಡು ಗೌರತ್ತೆಯ ಮೇಲಿನ ಸಿಟ್ಟನ್ನು ನಾನು ತೀರಿಸಿಕೊಂಡೆನಾದರೂ  ಅವರ ಕೋಪಕ್ಕೆ ಮನೆಯವರೆಲ್ಲಾ ಬಲಿಯಾಗಿದ್ದರು. ಅದೇ ದಿನ ರಾತ್ರಿ ನನ್ನ ಭಾವಿ ಅತ್ತೆಯಾಗುವ ಹೆಂಗಸಿನಿಂದ “ಹಿತವಚನ”ವನ್ನೂ ಹೇಳಿಸಿದ್ದರು.
ನನ್ನ ಮದುವೆಯ ಸಮಯದಲ್ಲಿ  ಗೌರತ್ತೆ ವಿಲನ್  ನಂತೆ ಕಾಣಿಸಿಕೊಂಡರು ಆ ಸಂದರ್ಭ ಕಣ್ಮುಂದೆ ಬಂದರೆ ನಗು ಬರುತ್ತೆ. ಶಾಸ್ತ್ರಗಳನ್ನು ಮಾಡಿಸಲು ಬಂದ ಬಟ್ರು ಬರಿ ಶರಬತ್ತನ್ನೇ ಕುಡಿದಿದ್ದು (ಶಾಸ್ತ್ರಗಳು ಗೌರತ್ತೆಯಿಂದಲೇ ನೆರವೇರಿತ್ತು)  ಎಷ್ಟು ಸಹಜವಾಗಿತ್ತೋ, ಮನೆ ಬಿಟ್ಟು ಹೋಗುತ್ತೇನೆ ಎನ್ನುವ ದುಃಖ ಆ ದಿನ ನನ್ನನ್ನು ಕಾಡದೆ ಮೆಹೆಂದಿ ಹೊಕಿಕೊಳ್ಳದೇ ಮದುವೆಯಾಗುತ್ತೇನೇನೋ ಎನ್ನುವ ಆತಂಕದಿಂದ ನಾನು ಅತ್ತಿದ್ದೂ ಅಷ್ಟೇ ಸಹಜವಾಗಿತ್ತು!
 
 

‍ಲೇಖಕರು avadhi-sandhyarani

August 29, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: