ಸಂಧ್ಯಾರಾಣಿ ಕಾಲಂ : ಅಲೆಯಿಡುವ ಮುತ್ತಿನೊಲು ಕಾಣುವುದು ನಿನ್ನೊಲುಮೆ…

sandhya columnಅಲೆಯಿಡುವ ಮುತ್ತಿನೊಲು ಕಾಣುವುದು ನಿನ್ನೊಲುಮೆ
ಇಲ್ಲ ಮೇಲಿನ ವಾಕ್ಯವನ್ನು ನಾನು ತಪ್ಪಾಗಿ ಬರೆದಿಲ್ಲ, ಅದು ’ಅಲೆಯಿಡುವ ಮುತ್ತಿನೊಳು ಕಾಣುವುದು ನಿನ್ನೊಲುಮೆ, ಒಳ ಗುಡಿಯ ಮೂರ್ತಿ ಮಹಿಮೆ’ ಎನ್ನುವುದು ನನಗೆ ಗೊತ್ತು. ಆದರೆ ನಾನೇನು ಮಾಡಲಿ, ನನಗೆ ಅತ್ಯಂತ ಆಳದ ಒಲುಮೆಗಳೆಲ್ಲಾ ಕಡಲ ಅಲೆಯಿಡುವ ಮುತ್ತಿನೊಲು ಕಾಣುತ್ತವೆ. ನನಗೆ ಕಡಲೆಂದರೆ ಇಷ್ಟ, ನದಿಯೆಂದರೆ ಇಷ್ಟ, ಮಳೆಯೆಂದರೆ ಇಷ್ಟ ನೀರಿನ ಎಲ್ಲಾ ರೂಪಗಳನ್ನೂ ನಾನು ಅತ್ಯಂತ ಉತ್ಕಟತೆಯಿಂದ ಮೋಹಿಸುತ್ತೇನೆ.  ನನ್ನ ಗೆಳತಿ ಹಿಮಾಲಯದ ಬಗೆಗಿನ ಅವಳ ಅಸೀಮ ಮೋಹದ ಬಗ್ಗೆ ಹೇಳುತ್ತಾ, ಹೇಗೆ ಪದೇ ಪದೇ ಅದು ಅವಳನ್ನು ಸೆಳೆಯುತ್ತದೆ ಎಂದು ಹೇಳಿದಾಗೆಲ್ಲಾ, ನನಗೆ ಆ ಅದಮ್ಯ, ಅಸೀಮ ಮೋಹದ ಕೊನೆಯ ನಿಲ್ದಾಣ ಸಮುದ್ರವಾಗೇ ಕಂಡಿದೆ. ನನಗೆ ಅದು ಸಾಗರವಲ್ಲ, ಸಮುದ್ರ. ’ಸಾಗರ’ ಅನ್ನುವ ಹೆಸರು ಸೌಮ್ಯವಾಗಿ ನದಿಗೆ ಹೊಂದುವ ಹಾಗೆ ಇದೆ. ಆದರೆ ಸಮುದ್ರ ಹಾಗಲ್ಲ… ಸಮುದ್ರವೆಂದರೆ ಆಳ, ಸಮುದ್ರವೆಂದರೆ ತಲ್ಲಣ, ಸಮುದ್ರವೆಂದರೆ ಗುರಿ, ಸಮುದ್ರವೆಂದರೆ ಆತ್ಯಂತಿಕವಾದ, ಸಂಪೂರ್ಣವಾದ ಒಪ್ಪಿಕೊಳ್ಳುವಿಕೆ, ಸಮುದ್ರವೆಂದರೆ ತಾಳ್ಮೆಯ ಪಾಠ, ಸಮುದ್ರ ಒಂದು ಸವಾಲು, ಸಮುದ್ರ ಒಂದು ಆಕರ್ಷಣೆ, ಸಮುದ್ರ ಒಂದು ಬದುಕು, ಸಮುದ್ರ ಅಗಾಧ ಮೌನ, ಸಮುದ್ರ ಆರ್ಭಟ, ಸಮುದ್ರವೆಂದರೆ ಚಲನೆ, ಸಮುದ್ರವೆಂದರೆ ಕಣ್ಣೆದುರಿನ ಸಂಪತ್ತು, ಕುಡಿಯಲಾರದ ಅಮೃತ, ಸಮುದ್ರ ಎಂದರೆ ಕಣ್ಣುಗಳು, ಸಮುದ್ರ ಎಂದರೆ ’ ನೀನೊಂದು ಮುಗಿಯದ ಮೌನ… ನಾ ಹೇಗೆ ತಲುಪಲಿ ನಿನ್ನಾ..
ನೀನೊಂದು ಕಡಲಿನ ಧ್ಯಾನ.. ನಾ ಹೇಗೆ ಬೆರೆಯಲಿ ನಿನ್ನಾ……’.
ನನ್ನ ಸಮುದ್ರದ ಮೋಹ ಇಂದಿನದಲ್ಲ. ಮೊದಲ ಸಲ ಸಮುದ್ರವನ್ನು ಕಂಡಾಗಲೇ ನಾನು ಅದರ ಮೋಹದಲ್ಲಿ ಬಿದ್ದಿದ್ದೆ. ಎಂತಹ ಮೋಹವೆಂದರೆ ನೇರ ಅದರೊಳಗೆ ನಡೆದು ಹೋಗಿಬಿಡುವ ಸೆಳೆತ. ಮೊದಲ ಸಲ ಸಮುದ್ರವನ್ನು ನೋಡಿದಾಗ ನಾನಿನ್ನೂ ಶಾಲೆಯಲ್ಲಿದ್ದೆ, ಆಗಲೂ ಅದನ್ನು ಕಂಡು ಹೆದರಿಕೆಯಾಗಿರಲಿಲ್ಲ. ಆಗ ಕಡಲನ್ನು ಕಂಡರೆ ಕುತೂಹಲ, ಬೆರಗು ಇತ್ತು. ಕಡಲು ನನಗೆ ಹತ್ತಿರವಾದದ್ದು ನಾನು ಮಂಗಳೂರಿನಲ್ಲಿ ವಾಸಮಾಡುತ್ತಿದ್ದಾಗ. ಅದೊಂದು ಮೌನದ ಮೊಟ್ಟೆಗೆ ಉಸಿರು ಕಾವು ಕೊಡುತ್ತಿದ್ದ ಕಾಲ.  ಮನೆಗೆ ಒಂದೆರಡು ಕಿಲೋಮೀಟರುಗಳ ದೂರದಲ್ಲಿ ಕಡಲು, ರಾತ್ರಿಯಾಗುತ್ತಿದ್ದಂತೆ, ಹೊರಗಿನ ಜಗತ್ತು ನೀರವವಾಗುತ್ತಿದ್ದಂತೆ, ಕಡಲು ಮಾತನಾಡಲು ಶುರು ಮಾಡುತ್ತಿತ್ತು. ವಿಚಿತ್ರವೆಂದರೆ ಆಯಾ ದಿನದ ನನ್ನ ಭಾವಜಗತ್ತಿಗನುಗುಣವಾಗಿ ಕಡಲು ನನ್ನೊಂದಿಗೆ ಮಾತನಾಡುತ್ತಿತ್ತು. ಒಮ್ಮೊಮ್ಮೆ ಸಣ್ಣ ಸಣ್ಣ ಅಲೆಗಳ ಹರಟೆ, ಮನಸ್ಸು ಭೋರಿಡುತ್ತಿದ್ದಾಗ ಕಡಲು ಜೋಗುಳ, ಮನಸು ಬೇಸರದಲ್ಲಿದ್ದಾಗ ಕಡಲಿನ ಯಕ್ಷಗಾನ, ಮಾತು ಸೋಲುತ್ತಿದ್ದ ಕ್ಷಣಗಳಲ್ಲಿ ಸುಮ್ಮನೆ ಸಾಂತ್ವನ. ಮೊನ್ನೆ ಒಮ್ಮೆ ಮಾತನಾಡುತ್ತಾ ರೇಖಾರಾಣಿ ಕಡಲು ಅವರೊಡನೆ ಸಂವಹಿಸಿದ್ದ ರೀತಿಯನ್ನು ಹೇಳುತ್ತಾ, ’ನಿನಗೆ ಇದು ನಂಬಲಾಗದಿರಬಹುದು ಸಂಧ್ಯಾ’ ಎಂದಿದ್ದರು. ಆದರೆ ಅವರು ಮಾತು ಮುಗಿಸುವ ಮೊದಲೇ ನಾನು ಅವರ ಮಾತುಗಳನ್ನು ಒಪ್ಪಿಕೊಂಡು ನಾನು ತಲೆ ಆಡಿಸುತ್ತಿದ್ದೆ. ಅವರು ನನ್ನ ಭಾಷೆಯನ್ನೇ ಮಾತನಾಡುತ್ತಿದ್ದರು.
ಮಂಗಳೂರಿನಲ್ಲಿದ್ದಾಗ ಹಲವು ದಂಡೆಗಳಿಂದ ಕಡಲನ್ನು ನೋಡಿದ್ದೆ, ಮಾತನಾಡಿಸಿದ್ದೆ, ಆಲಿಸಿದ್ದೆ. ಪಣಂಬೂರು, ಸುರತ್ಕಲ್ಲು, ಮರವಂತೆ, ಮಲ್ಪೆ, ಮುರುಡೇಶ್ವರ. ಆದರೆ ನನ್ನ ಕಾಲ ಕೆಳಗಿನ ನೆಲ ಕುಸಿದಂತೆ ನಾನು ಆಕರ್ಷಿತಳಾಗಿದ್ದು ಸೋಮೇಶ್ವರದ ಕಡಲಿಗೆ. ಅಲ್ಲಿ ಕಡಲಿಗೊಂದು ರುದ್ರ ರಮಣೀಯ ಸೆಳೆತ ಇತ್ತು. ಅಲ್ಲಿನ ಮರಳೋ, ಹತ್ತಲು ಮಡಿಲಾಗುತ್ತಿದ್ದ ಆ ಬಂಡೆ ಕಲ್ಲೋ, ದಡದಲ್ಲಿದ್ದ ದೇವಸ್ಥಾನದ ಮೆಟ್ಟಿಲುಗಳೋ, ಯಾವುದು ಆ ಕಡಲನ್ನು ಅಷ್ಟು ಸಿಂಗರಿಸಿತ್ತೋ ಹೇಳಲಾರೆ. ಇಂದು ಗೋವ, ಕನ್ಯಾಕುಮಾರಿ, ರಾಮೇಶ್ವರ, ಪಾಂಡಿಚೆರಿ, ಎಷ್ಟೊಂದು ಊರುಗಳ ಕಡಲನ್ನು ನೋಡಿದರೂ ನನ್ನ ಪ್ರೇಮ ಸೋಮೇಶ್ವರದ ಕಡಲಿಗೇ ಅಂಕಿತ!
ಪ್ರತಿ ಸಲ ಮನೆಯವರೆಲ್ಲಾ ಯಾವುದಾದರೂ ಊರಿಗೆ ಹೋಗಬೇಕು ಎಂದು ಯೋಜನೆ ಹಾಕುವಾಗಲೂ ಕಡಲಿರುವ ಊರಿಗೇ ಹೋಗುವಂತೆ ಮಾಡಲು ನಾನಾ ಹುನ್ನಾರಗಳನ್ನು ಹಾಕುತ್ತಿರುತ್ತೇನೆ! ಹೋದ ಸಲ ಗೋವಾಗೆ ಹೋಗಿದ್ದೆವು. ಎತ್ತರದಿಂದ ಕೆಳಗೆ ನೋಡಲು ಎದೆ ನಡುಗುವ ನಾನು ಕಡಲಿನ ಮೇಲೆ ಪ್ಯಾರಾ ಸೈಲಿಂಗ್ ಮಾಡುವಾಗ ಒಂದಿಷ್ಟಾದರೂ ಹೆದರಿದ್ದರೆ ಕೇಳಿ! ಅರೆ ನಾನು ಈ ಭಯವನ್ನು ಗೆದ್ದೆ ಎನ್ನುವ ಸೊಕ್ಕಿದ್ದದ್ದು ಮತ್ತೆ ಮಹಡಿಯ ಮೇಲಿಂದ ನೆಲ ನೋಡುವವರೆಗೆ ಮಾತ್ರ… ಆಮೇಲೆ ಯೋಚಿಸಿದಾಗ ಅರ್ಥವಾಗಿದ್ದು, ಬಹುಶಃ ಪ್ಯಾರಾ ಸೈಲಿಂಗ್ ನಿಂದ ಬಿದ್ದರೆ ನೇರ ಸಮುದ್ರದ ಮಡಿಲಿಗೆ ಎನ್ನುವ ಯೋಚನೆಯೇ ಒಂದೇ ಸಮಯಕ್ಕೆ ಧೈರ್ಯವನ್ನೂ, ನಿರೀಕ್ಷೆಯನ್ನೂ ಹುಟ್ಟಿಸಿತ್ತೇನೋ ಎಂದು!
ಮೊನ್ನೆ ಮೊನ್ನೆ ಹೀಗೆ ಒಂದು ಪಯಣ ಪಾಂಡಿಚೆರಿಯ ಕಡೆಗೆ, ಕಡಲಿರುವ ಊರಿಗೆ. ಐದಾರು ಗಂಟೆಗಳ ಪಯಣ ಎಂದು ನಮ್ಮದೇ ಗಾಡಿಯಲ್ಲಿ ಡ್ರೈವ್ ಮಾಡುತ್ತಾ ಹೋಗಿದ್ದು. ನಡುವೆ ಎಲ್ಲೋ ರಸ್ತೆ ಕೆಟ್ಟು ಪಯಣ ಎಂಟು ಗಂಟೆಗಳಷ್ಟು ಹಿಗ್ಗಿತ್ತು. ಆದರೆ ಎಲ್ಲೂ ಬೇಸರವಾಗಿರಲಿಲ್ಲ, ಗುರಿಯನ್ನು ಮಾತ್ರವಲ್ಲದೆ ಪಯಣವನ್ನೂ ಅನುಭವದ ಖಾತೆಗೆ ಸೇರಿಸಿದರೆ ಯಾವುದೇ ಪಯಣ ಮತ್ತಷ್ಟು ಸುಂದರವಾಗುತ್ತದೆ ಎನ್ನುವುದು ನನ್ನ ದೃಢವಾದ ನಂಬಿಕೆ. ದಿನಚರಿಯ ಧಾವಂತದಲ್ಲಿ, ಗಡಿಯಾರದ ಕ್ಷಣ, ನಿಮಿಷ, ಗಂಟೆಗಳಲ್ಲಿ ಹರಿದು ಹಂಚಿ ಹೋಗುವ ಸಮಯ ಇಡಿಯಾಗಿ ನಮ್ಮ ಕೈಗೆ ಅಲ್ಲಿ ಸಿಗುತ್ತದೆ. ಗಾಡಿಯ ನಾಲ್ಕು ಬಾಗಿಲುಗಳ ಒಳಗಿನ ಜಗತ್ತು ಒಂದು ಮಿತಿಯೂ ಹೌದು, ಸಾಧ್ಯತೆಯೂ ಹೌದು. ಹಾಗಾಗೇ ಬೇಕಾದವರ ಜೊತೆಗಿನ ಯಾವ ಧೀರ್ಘ ಪಯಣವೂ ನನಗೆ ಧೀರ್ಘವಲ್ಲ!
2
ಹೊರಡುವ ಹಿಂದಿನ ದಿನ ಅಲ್ಲೆಲ್ಲಾ ಮೋಡ ಕವಿದ ವಾತಾವರಣ ಎಂದು ನನ್ನ ತಂಗಿ ತಳಮಳಗೊಳ್ಳುತ್ತಿದ್ದರೆ ನಾನು ಗುಟ್ಟಾಗಿ ಮನದೊಳಗೆ ಸೀಟಿ ಹೊಡೆಯುತ್ತಿದ್ದೆ. ’ಮಳೆ ಬರಲಿ, ಮಳೆ ಬರಲಿ…’ ಎನ್ನುವ ಹಾಡನ್ನು ರಿಪೀಟ್ ಮೋಡ್ ನಲ್ಲಿ ಮನಸ್ಸು ಹಾಡುತ್ತಿತ್ತು. ಮೋಡ ಕವಿದ ವಾತಾವರಣ ನಾವು ಪಾಂಡಿ ಸೇರಿ, ಹೋಟಲಿಗೆ ಚೆಕ್ ಇನ್ ಆಗಿ, ಪಕ್ಕದಲ್ಲೇ ಇದ್ದ ಸಮುದ್ರದೆಡೆಗೆ ಹೆಜ್ಜೆ ಹಾಕುವಷ್ಟರಲ್ಲಿ ದಟ್ಟವಾಗುತ್ತಿತ್ತು. ಕಡಲಿನ ಕೈ ಬೆರಳುಗಳು ಅಂಗಾಲ ಮಿದುವನ್ನು ಸ್ಪರ್ಷಿಸಲು ಪ್ರಾರಂಭಿಸಿತ್ತಷ್ಟೇ, ಸಣ್ಣಗೆ ಹನಿ ಶುರುವಾಯಿತು. ನಾನು ಆಗಸದತ್ತ ದೃಷ್ಟಿ ನೆಟ್ಟು ಕಾಯುತ್ತಲೇ ಇದ್ದೆ. ’ಬಾ ಮಳೆಯೇ ಬಾ, ಇನ್ನಷ್ಟು ಬಿರುಸಾಗಿ ಬಾ’ ಎಂದು ನನಗೆ ಬೇಕಾದಂತೆ ಪದಗಳನ್ನು ಬದಲಾಯಿಸಿಕೊಳ್ಳುತ್ತಿದ್ದೆ. ಬಂತು ಮಳೆ, ’ಕಡಲಗೆ ಬಂತು ಶ್ರಾವಣ, ಕುಣಿಧಾಂಗ ರಾವಣ’ ಎನ್ನುವ ಬೇಂದ್ರೆಯಜ್ಜನ ಕವನದ ಸಾಲಿನಂತೆ ಮಳೆ ಕಡಲಿನ ಒಡಲಿನ ಮೇಲೆ ರುದ್ರ ನರ್ತನ ನಡೆಸಿತ್ತು. ಹತ್ತು ತಲೆಗಳ, ಇಪ್ಪತ್ತು ತೋಳುಗಳ ರಾವಣ ಕಡಲನ್ನು ತನ್ನೆಲ್ಲಾ ಕಣ್ಣುಗಳಿಂದ, ಬಾಹುಗಳಿಂದ ಅಪ್ಪಿಕೊಂಡು ಪ್ರೇಮಿಸಿದಂತೆ.  ಯಾವಾಗಲೂ ನನ್ನ ಕಲ್ಪನೆಯಲ್ಲಿ ’ಅವನಾಗಿದ್ದ’ ಕಡಲು ಮೊದಲ ಸಲ ’ಅವಳಂತೆ’ ಕಂಡಿದ್ದಳು.  ಬೊಗಸೆ ತುಂಬಾ ಹೂವಿನ ಪಕಳೆಗಳನ್ನು ಹಿಡಿದ ಬಾನು ಕಡಲಿನ ಮೇಲೆ ತೆರೆ ತೆರೆಯಾಗಿ ಮಳೆ ಸುರಿಯುತ್ತಿದ್ದರೆ, ಒಂದೊಂದು ಹನಿಯೂ ಕಡಲನ್ನು ತಾಕಿದೊಡನೆ ಮುತ್ತಾಗಿ ಕುಣಿಯುತ್ತಿತ್ತು. ಒಂದೊಂದು ಮುತ್ತಿಗೂ ಮಳೆಯ ಆವೇಶ ಹೆಚ್ಚುತ್ತಿದ್ದಂತೆ, ಕಡಲಿನ ತಲ್ಲಣವೂ ಹೆಚ್ಚಾಗುತ್ತಿತ್ತು. ಕಡಲಿನ ತೆರೆಗಳಿಗೆ ನಮ್ಮನ್ನೊಪ್ಪಿಸಿಕೊಂಡ ನಿಂತ ಆ ಕ್ಷಣಗಳಲ್ಲಿ ಕಡಲಿನ ಸೆಳೆತ, ಮಳೆಯ ಚುಂಬನ ನಮ್ಮೊಳಗೆ ಒಂದೊಂದು ಕಡಲನ್ನು ಹುಟ್ಟು ಹಾಕುತ್ತಿತ್ತು. ಆ ದಿವ್ಯಕ್ಷಣಗಳಲ್ಲಿ ’ಅಲೆ ಬಂದು ಸೆಳೆಯುವುದು ನಿನ್ನೊಲುಮೆಯರಮನೆಗೆ, ಒಳಗಡಲ ರತ್ನ ಪುರಿಗೆ’ ಹಾಡು ಕಡಲ ಅಲೆಗಳ ಬೆರಳುಗಳಲ್ಲಿ ನಿಜವಾಗುತ್ತಿತ್ತು.
ಆಗಾಗ ಮಳೆ ಮತ್ತು ಕಡಲ ಸ್ಪರ್ಶಕ್ಕೆ ಕಂಪಿಸಿದ ಕಡಲಂಚು ರೋಮಾಂಚನಗೊಂಡಂತೆ ಮಿಂಚೊಂದು ಆಗಸದಲ್ಲಿ ಹುಟ್ಟಿ ಕಡಲಿನ ಒಡಲೊಳಗೆ ಧುಮ್ಮಿಕ್ಕುತ್ತಿತ್ತು. ’ಎಲ್ಲೋ ನಿನ್ನ ಜಗದ ದೇಶ ಕಾಲದಲ್ಲಿ ಮುಳುಗಿರುವ ನಿನ್ನಲ್ಲಿ ಕವನದ ಸಾಲೊಂದು ಹೊಳೆದು ನಿನಗೆ ನನ್ನ ನೆನಪಾದಂತೆ’ ಮಿಂಚು ಮಿಂಚುತ್ತಿತ್ತು.
’ಕರೆಯುತ್ತದೆ, ಕರಗಿಸುತ್ತದೆ,
ನೀರಾಗಿಸುತ್ತದೆ,
ಕೊಟ್ಟದ್ದೆಲ್ಲವ ಮುತ್ತಿಟ್ಟು
ಮರಳಿಸುತ್ತದೆ ಕಡಲು,
ಬಾ ಗೆಳೆಯ ಒಮ್ಮೆ ಮುಳುಗಿಸು ನನ್ನ…’ ಕಡಲಿಗಿಳಿದಾಗ ಮನಸ್ಸೂ ಕಡಲೇ..
ಹುಣ್ಣಿಮೆಯ ಕಡಲನ್ನು ಕಂಡಿಲ್ಲ ನಾನು, ಆದರೆ ಆ ಭೋರೆಂದು ಸುರಿಯುವ ಮಳೆಯಲ್ಲಿ ನಾ ಕಂಡ ಕಡಲು ಮತ್ತು ಆ ಕಡಲ ಸ್ಪರ್ಶದಿಂದಲೇ ನನ್ನೊಳಗೆ ಹುಟ್ಟಿದ ಮತ್ತೊಂದು ಕಡಲನ್ನು ನಾನೆಂದಿಗೂ ಮರೆಯಲಾರೆ. ಆ ರಾತ್ರಿಯಿಡೀ ಎದೆಯಲ್ಲಿ, ಕಣ್ಣಲ್ಲಿ, ಕಿವಿಗಳಲ್ಲಿ ಕಡಲು ತುಯ್ಯುತ್ತಿತ್ತು.
ಕಡಲಿನ ಅಸೀಮತೆಯೇ ಅದರ ಹಿರಿಮೆ ಎಂದುಕೊಂಡಿದ್ದ ನನಗೆ ಕಡಲ ಸೀಮಾರಾಹಿತ್ಯವೇ ಒಂದು ಮಿತಿ ಎಂದು ಅನಿಸುವಂತೆ ಮಾಡಿದ್ದು ಗುಲ್ಜಾರ್. ಎಂದೋ ಓದಿ ಮರೆತ ಗುಲ್ಜಾರರ ಒಂದು ಕವಿತೆ ನನಗೆ ನೆನಪಾಯಿತು.  ಆ ಕವಿತೆಯ ಹೆಸರು ನೆನಪಿಲ್ಲ, ಆದರೆ ಕವಿತೆಯಲ್ಲಿ ಅವರು ಸಂಬಂಧಗಳು ಮತ್ತು ನೀರಿನ ಪಾತ್ರಗಳ ಬಗ್ಗೆ ಬರೆದಿದ್ದರು. ’ಕೆಲವು ಸಂಬಂಧಗಳು ಸರೋವರದ ಹಾಗೆ, ಅವು ನಿಂತಲ್ಲೇ ನಿಂತಿರುತ್ತವೆ, ಅವಕ್ಕೆ ಸೀಮೆಗಳು ನಿಶ್ಚಿತವಾಗಿರುತ್ತವೆ, ದಡಗಳ ಬಗ್ಗೆ ಗೊಂದಲವಿರುವುದಿಲ್ಲ. ಇನ್ನೂ ಕೆಲವು ಸಂಬಂಧಗಳು ಕಡಲಿನ ಹಾಗೆ.. ಅವಕ್ಕೆ ದಂಡೆಗಳಿದ್ದರೂ ಸೀಮೆಗಳಿರುವುದಿಲ್ಲ. ಅವು ಎಲ್ಲಿಗೂ ಹರಿಯುವುದಿಲ್ಲ, ಹಾಗೆಂದು ದಡ ತಲುಪಿದ ನಿಶ್ಚಿಂತತೆಯೂ ಇರುವುದಿಲ್ಲ. ಕಡಲ ದಂಡೆಗಳಿಗೆ ಅನಿಶ್ಚಯತೆ ತಪ್ಪುವುದೇ ಇಲ್ಲ. ಕೆಲವು ಸಂಬಂಧಗಳು ಮಾತ್ರ ನದಿಯ ಹಾಗಿರುತ್ತದೆ, ಅದು ಹರಿಯುತ್ತಾ ಹೋಗುತ್ತದೆ, ಹಾಗೆ ಹೋಗ ಹೋಗುತ್ತಲೇ ತನ್ನ ಪಾತ್ರವನ್ನು ಕಟ್ಟಿಕೊಳ್ಳುತ್ತಾ ಹೋಗುತ್ತದೆ. ಜೀವನವನ್ನು ಕಟ್ಟುತ್ತಾ ಹೋಗುತ್ತದೆ’ ಹೀಗೆ ಅರ್ಥ ಬರುವ ಹಾಗೆ ಆ ಕವಿತೆ ಇತ್ತು. ಆ ಕವಿತೆ ನೆನಪಾದಾಗಿನಿಂದ ಕಡಲನ್ನು ಕಂಡರೆ ಅನುಕಂಪವಾಗುತ್ತದೆ, ಪ್ರೀತಿಯಾಗುತ್ತದೆ, ಹೆದರಿಕೆಯೂ ಆಗುತ್ತದೆ.
ತೆರೆಗಳ ಮೇಲೆ ಆಡುವವರಿಗೆ, ದಂಡೆಯಲ್ಲಿ ನಿಂತು ನೋಡುವವರಿಗೆ ಕಡಲು ಕಣ್ಣಿನ ಹಬ್ಬ ಮಾತ್ರ. ಕಡಲಿಗಿಳಿದಾಗ, ಅಲೆಗಳೊಂದಿಗೆ ಹೆಜ್ಜೆ ಹಾಕಿದಾಗ, ಕಡಲಿನ ಅಬ್ಬರದ ಜೊತೆ ಜೊತೆಯಲ್ಲೇ ಕಡಲಿನ ಮೌನವನ್ನೂ ಆಲಿಸಿದಾಗ, ಸೋಸದೆ, ಆರಿಸದೆ, ವಿಂಗಡಿಸದೆ ಅಪ್ಪಿಕೊಂಡಾಗ, ಒಪ್ಪಿಕೊಂಡಾಗ ಕಡಲನ್ನು ಬಹುಶಃ ಕಡಲಿನಂತೆಯೇ ಪ್ರೀತಿಸಬಹುದೇನೋ.. ಕಡಲಿನ ಬಗ್ಗೆ ಎಂದೂ ಕಡಿಮೆಯಾಗದ ಪ್ರೀತಿಯನ್ನು ನೆನೆದಾಗೆಲ್ಲಾ ಈ ಸಾಲುಗಳು ನೆನಪಾಗುತ್ತವೆ…
’ಅವನು ಕಡಲು, ನಾನು ದ೦ಡೆ
ಪ್ರತಿಬಾರಿ ಬಳಿಸಾರಿ, ಭೋರ್ಗರೆದು,
ಆವರಿಸಿ ಮರಳುವಾಗಲೂ
ನನ್ನಲ್ಲಿನ ನನ್ನನ್ನು ಇಷ್ಟಿಷ್ಟೇ
ತನ್ನೊ೦ದಿಗೆ ಒಯ್ಯುವ ಅವನ
ತೋಳುಗಳಲ್ಲಿ ಸಾವಿನ ಅ೦ಜಿಕೆ,
ಬದುಕಿನ ಆಕರ್ಷಣೆ…’
 

‍ಲೇಖಕರು avadhi-sandhyarani

August 28, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. lakshmikanth itnal

    ಸಂಧ್ಯಾಜಿ, ಕಡಲಿನ ಸೆಳೆತಗಳೊಂದಿಗೆ ಕಾವ್ಯಮಯ ಸಾಲುಗಳಲ್ಲಿ ನಮಗೆ ಮಿಂದಿಸಿ, ನೆಂದಿಸಿ, ಸುಖಿಸಿದ್ದೀರಿ, ಅದು ಕಡಲೂ ರೀ, …ಅದರ ಸೆಳೆತ ದೈವಿಕತೆಯಂತೆ…ನಿರಂತರ …ಮುಗಿಯದ ಪಯಣದಂತೆ…ಕಾಲಯಾಣದಂತೆ. ನಿಮ್ಮ ಬರಹದ ದಟ್ಟತೆ ಇಷ್ಟಿದೆಯೆಂದರೆ ಕಣ್ಮುಚ್ಚಿದರೆ ಕಡಲೇ ಆರ್ಭಟಿಸುತ್ತಿದೆ ಕಿವಿಗಳಲ್ಲಿ, ಮುಚ್ಚಿದ ಕಣ್ಣ ಮುಂದೆಯೇ…ವಂದನೆಗಳು

    ಪ್ರತಿಕ್ರಿಯೆ
  2. sheshagirijodidar

    ಆ ಭೋರೆಂದು ಸುರಿಯುವ ಮಳೆಯಲ್ಲಿ ನಾ ಕಂಡ ಕಡಲು ಮತ್ತು ಆ ಕಡಲ ಸ್ಪರ್ಶದಿಂದಲೇ ನನ್ನೊಳಗೆ ಹುಟ್ಟಿದ ಮತ್ತೊಂದು ಕಡಲನ್ನು ನಾನೆಂದಿಗೂ ಮರೆಯಲಾರೆ. ಆ ರಾತ್ರಿಯಿಡೀ ಎದೆಯಲ್ಲಿ, ಕಣ್ಣಲ್ಲಿ, ಕಿವಿಗಳಲ್ಲಿ ಕಡಲು ತುಯ್ಯುತ್ತಿತ್ತು….Just loved the description of the wild sea…what a pluviophile….? means the mad lover of the rain…..a person who has an obsession for rain…

    ಪ್ರತಿಕ್ರಿಯೆ
  3. chaithra

    ಕಡಲೆಂದರೆ ಹಾಗೇ….. ಬರಹ ಎಷ್ಟು ಚೆನ್ನಾಗಿದೆ ಎಂದರೆ ಏನೂ ಹೇಳಲು ತಿಳಿಯದೆ ಕಣ್ಣೇ ಮಾತಾಡುತ್ತಿದೆ ನನಗೆ, ಸೋಮೇಶ್ವರದ ಮೇಲೆ ನನಗೂ ಇದೆ ಭಾವ…. ಒಂದೇ ಮಾತಿನಲ್ಲಿ ಹೇಳುವುದಾದರೆ ನನ್ನ ಭಾಷೆಯನ್ನೇ ಬರೆದಿದ್ದೀರಿ….

    ಪ್ರತಿಕ್ರಿಯೆ
  4. Palahalli Vishwanath

    ಬಹಳ ಚೆನ್ನಾಗಿ ಬರೆದಿದ್ದೀರಿ. ನಾನು ಸಮುದ್ರ ತೀರದಲ್ಲಿನೆಲೆಸಿದ್ದರೂ ಅನೆಕ ಬಾರಿ ಪರ್ವತ ಪ್ರದೇಶಗಳಿಗೂ ಹೋಗುತ್ತಿದ್ದೆ. ಎರಡರ ಸೆಳೆತವೂ ನನಗೆ ಹೆಚ್ಚು. ಆದರೆ ಎಲ್ಲೋ ಸಮುದ್ರ ಹೆಚ್ಚ್ಾಗಿಸೆಳೆಯುತ್ತದೆ. ಪರ್ವತ ಸಾತ್ವಿಕ ತೇಜಸ್ . ಸಮುದ್ರ ರಾಜಸಿಕ .

    ಪ್ರತಿಕ್ರಿಯೆ
  5. Anil Talikoti

    ಯಾರು ಹೇಳಿದ್ದೋ ಗದ್ಯಕ್ಕೆ ಪದ್ಯದ ಭಾವುಕತೆ ಇಲ್ಲವೆಂದು? ನಿಮ್ಮ ಗದ್ಯ ಒದ್ದೆ ಗದ್ದೆಯಲ್ಲಿ ಗೇಯುತ್ತಿರುವ ಮಣ್ಣುಹುಳದಂತೆ ಮೋಹಕವಾಗಿದೆ.
    ~ಅನಿಲ

    ಪ್ರತಿಕ್ರಿಯೆ
  6. jayashree Deshpande

    ಸಮುದ್ರವೆಂದರೆ ಆಳ, ಸಮುದ್ರವೆಂದರೆ ತಲ್ಲಣ, ಸಮುದ್ರವೆಂದರೆ ಗುರಿ,
    ಸಾಗರ: ಸಾಗರೋಪಮೆ.. ತು೦ಬಾ ಹಿಡಿಸಿತು .

    ಪ್ರತಿಕ್ರಿಯೆ
  7. Bharathi b v

    ಸಮುದ್ರವೆಂದರೆ ಪ್ರಣಯದ ಹಾಗೆನಿಸುತ್ತದೆ ನನಗೆ …. ತೀರದ ಆಕರ್ಷಣೆಯ ಜೊತೆಜೊತೆಗೆ ವಿವರಿಸಲಾಗದ ಭಯ ಕೂಡಾ ….

    ಪ್ರತಿಕ್ರಿಯೆ
  8. ರಘುನಂದನ ಕೆ.

    ಸಮುದ್ರ ಮತ್ತು ಕಾಡು ಸದಾ ನನ್ನ ಕಾಡುವ ಕಾಣ್ಕೆಗಳು, ಸಮುದ್ರ ತೀರಕ್ಕೆ ಕರೆದೊಯ್ದು ಬಂತು ನಿಮ್ಮ ಬರಹ…
    ಇಷ್ಟವಾಯ್ತು.

    ಪ್ರತಿಕ್ರಿಯೆ
  9. sindhu

    ಸಂಧ್ಯಾ,
    ನಿಮ್ ಆರ್ಟಿಕಲ್ ತುಂಬ ಚೆನಾಗಿದೆ.
    ಅದ್ಯಾಕೋ ನಂಗೆ ಕಡಲನ್ನ ಅವನು, ಇವಳು ಅಂತ ಭಾವಿಸೋಕೆ ಇಲ್ಲೀವರೆಗೂ ಆಗಿಲ್ಲ. ಸಮುದ್ರ ನನಗೆ ಯಾವತ್ತಿಗೂ ಸಮುದ್ರವೇ.. ವಿಸ್ಮಯ ಮತ್ತು ತನ್ಮಯ ಭಾವ ಅದರ ದಂಡೆಯಲ್ಲಿ ಕೂತಾಗ. ಅದು ಬರಿಯ ಅದು.. ಇದು ಕೂಡ ಅಲ್ಲ. ಅದು ಅಲ್ಲಿದೆ ನಾನಿಲ್ಲಿರುವೆ ಎಂಬ ಭಾವ ಇರಬಹುದು.
    ನಾನು ಹಲವರು ಕಡಲಿನ ಬಗ್ಗೆ ಬರೆದ ಕವಿತೆ, ಭಾವುಕತೆ ಎಲ್ಲವನ್ನೂ ಓದಿರುವೆ. ನೀವು ಬರೆದಿದ್ದು ಭಾವತೀವ್ರವಾಗಿದೆ. ಚೆನಾಗಿದೆ.
    ಕೆಲವು ಕವಿತೆಗಳಲ್ಲಿ ಮತ್ತು ಭಾವಗಳಲ್ಲಿ ಆಲ್ ಇನ್ ಕ್ಲೂಸಿವ್ ಭಾವವನ್ನು ಉದ್ದೀಪಿಸುವ ಸಮುದ್ರದ ವರ್ಣನೆ ಇದೆ. ಇದು ನನಗೆ ಯಾಕೋ ಇಷ್ಟ.
    ಆಳ.. ನಿರಾಳವೂ.. ಮತ್ತು ತಲ್ಲಣಗಳೂ ಎರಡಕ್ಕೂ ಸಮುದ್ರದ ಹಾಗೆ ಒದಗುವ ಇನ್ನೊಂದಿಲ್ಲ ಅನ್ಸುತ್ತೆ. ಏನು ಬಂದರೂ ತನ್ನೊಳಗೆ ಕರಗಿಸಿಕೊಳ್ಳುವ ಈ ಸಮುದ್ರ ಒಂದು ಆತಂಕಮಿಶ್ರಿತ ಸ್ವಾಗತ ಕೋರುತ್ತೆ ಅಲ್ಲವಾ.. ಎಲ್ಲಿ ಕರಗಿಹೋಗುವೆನೋ ಅಂದ್ಕೊಂಡೇ ಇದರೊಳಗೆ ಹೆಜ್ಜೆ ಇಡುವೆ ನಾನು.
    ನಾನು ನೋಡಿದ ತುಂಬ ಸೆನ್ಸಿಟಿವ್ ಬರಹಗಾತಿಯರಲ್ಲಿ ನೀವೊಬ್ಬರು. ಇದೊಂದು ಹೊಸ ಆಲೋಚನೆ ನಿಮಗಾಗಿ. ಸಮುದ್ರ ಮಟ್ಟ. ಅಂತಾರಲ್ಲ.. ಆ ಆಳ. ಅಲ್ಲಿಂದ ಕೆಳಕ್ಕೇನಿರತ್ತೆ. ಆ ಆಳದಲ್ಲಿ ಮನಸ್ಸು ಬಹುಶಃ ಎತ್ತರದಲ್ಲಿ ಬೆಳೆಯುವ ನೆಲ್ಲಿಕಾಯಿಗೆ ಕಾತರಿಸದೆ ಇದ್ದ ಹಾಗೆ ಅನಿಸುವುದು ಎಲ್ಲಕ್ಕಿಂತ ದೊಡ್ಡ ನಿರಾಳ ಇರಬಹುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: