ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹುಲಿಯು ನನ್ನದೇ ಮಲೆಯು ನನ್ನದೆ…’ – ಹರವು ಸ್ಫೂರ್ತಿಗೌಡ ಕವಿತೆ

ಹರವು ಸ್ಫೂರ್ತಿಗೌಡ


ಯಾವ ಗುರುತೋ, ಯಾರ ಮತವೂ
ಗೆದ್ದ ಮೇಲೆ ನಾವು ಯಾರು?
ಮತವ ಪಡೆದು ಬದುಕ ಕಳೆದು
ಪ್ರಶ್ನಿಸಿ ನಿಲ್ಲುವರು ನೀವು ಯಾರು?
ಕಾಡ ಕಣಿವೆಯಲಿ ಗುಡಿಸಲ ಕಟ್ಟಿ
ಉತ್ತಿ-ಬಿತ್ತಿ ಬದುಕ ಕಂಡ ಜೀವ ನಾವು
ಹುಲಿಯೇ ಇಲ್ಲದ ಸಂರಕ್ಷಿತ ಅರಣ್ಯವೆಂದು
ಕಿತ್ತು ಒದರಿದಿರೀ ಪುಟ್ಟ ಗುಡಿಸಲ ನೀವು
ಕಟ್ಟಿದ ಬದುಕ ಕೆಡವಿ ಹೋದವರೆ
ಕರಾವಳಿಯ ಕಾಣದ ಕಾನನ ಕಂಡಿರೇ ನೀವು
ಕೆಂಪು ಬಣ್ಣವ ಮುಖಕ್ಕೆ ಬಳಿದು
ಬಣ್ಣವಿಲ್ಲ ಕತ್ತಲಲಿ ಕೂರಿಸಿ ಕೇಳುವಿರಿ
ಕೆಂಪು ಹುಡುಗ ನೀನು ಯಾರು
ಕೆಂಪು ಹುಡುಗ ನಾನು ಯಾರು?
ಎಂದ ಮೇಲೆ ಹಿಡಿದೆ ಕೆಂಪು ಬಾವುಟ
ಗೇರು ಬೀಜದ ಸೋನೆಯ ಕೋಪ
ಗುಳೆ ಹೊರಟ ನನ್ನವರ ಬದುಕು ಇನ್ನೆಲ್ಲಿ
ತಿನ್ನುವ ಅನ್ನ ಮಣ್ಣಿಗೆ ಸುರಿದಿರಿ
ಸಿಡಿದು ಹಿಡಿಯ ಬಾರದೆ ಬಂದೂಕು?
ಕನಸ ಬೆರಸಿ ನೆಟ್ಟ ಅಡಿಕೆಗೆ
ಬೆಂಕಿಯಿಟ್ಟು ಕೇಕೆ ಹಾಕುವ ಪಡೆಯೇ
ಹಾಡಬಾರದೇ ಕ್ರಾಂತಿ ಗೀತೆಯ ನಾನು
ನಾನು ಮಲೆಕುಡಿಯ ನಾನು ಮಲೆಕುಡಿಯ
ಹುಲಿಯು ನನ್ನದೇ ಮಲೆಯು ನನ್ನದೆ
ಸಂರಕ್ಷಿತ ಅರಣ್ಯವೂ ನನ್ನದೇ
ಬಿಟ್ಟು ತೊಲಗಿರಿ ನೀವು..

‍ಲೇಖಕರು avadhi

17 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading