
ಚಕ್ರವ್ಯೂಹ-ಅಭಿಮನ್ಯು
ವಿಷ್ಣು ಭಟ್ಟ, ಹೊಸ್ಮನೆ
1
ಸೂಜಿಮೊನೆಯಷ್ಟೂ ಬಿಡೆ ಜಾಗವ
ಪಾಂಡವರ ಪಾರುಪತ್ಯಕೆ ಖಡುವಾಗಿ ನುಡಿದು
ದುರಹಂಕಾರದ ಕಿರೀಟದೊಳು ಸಂಧಾನ
ಮುರಿದು, ಅಜ್ಞಾತವಾಗಿಸಿದ ದಾಯಾದಿಗಳ
ಗೆದ್ದುದು ಪಗಡೆಯ-ದಾಳಗಳ ಹೊರಳುಗಳಲಿ
ವಂಚಿಸಿ, ಹೊರಗಟ್ಟಿದ ಕುರುಕುಲಾಧಿಪನಿಗೆ
ರಣದಿ ಸೋಲಿನ ಭಯ ಸುತ್ತಿಕೊಳ್ಳುತ್ತಿರೆ, ಗುರು ದ್ರೋಣರು
ಕಲಿಪಾರ್ಥನಿಲ್ಲದ ಗಳಿಗೆಯಲಿ ರಚಿಸಿ ಮಹಾ ಚಕ್ರವ್ಯೂಹ
ಈ ವ್ಯೂಹದ ಪರಿಯನರಿಯದ ಭಟರೇ ತುಂಬಿದ
ಪಾಂಡು ಸೇನೆಯೊಳು ತಳಮಳ; ನಮ್ಮ ಗೆಲಿಸುವವರಾರಿಲ್ಲ
ಎಂದು ಚಿಂತಿಸಿ, ಮರುಗುತಲಿಹ ಧರ್ಮಜನ ಕಾಡಿ, ಬೇಡಿ ಒಪ್ಪಿಸಿ
ಪರಮ ವಿಕ್ರಮದೊಳು ಹೊರಟ ಅಪ್ಪಣೆ ಪಡೆದು ಅಭಿಮನ್ಯು
ಚಕ್ರವ್ಯೂಹವ ಧೂಳಿಗೈಯುವ ತವಕದಿ; ತಡೆದಳು ಮಾತೆ ಬೆಚ್ಚಿ
ಚಕ್ರವ್ಯೂಹದ ರೌದ್ರದ ಬಗೆಗೆ ತಿಳಿಸುತ್ತ, ಬೇಡವೆಂದು ಅಂಗಲಾಚಿ,
ಅವುಡುಗಚ್ಚಿ, ಕಂಬನಿಯ ವರೆಸಿ-ಸಂತೈಸಿ ಹಠಹಿಡಿದು
ಹೊರಟ ಕಾಲಿಗೆರಗಿ ಋಣವು ತೀರಿದ ತೆರದಲಿ

ಮಡದಿ ಉತ್ತರೆಯ ಉತ್ತರವನೂ ನೋಡದೆ
ವೈರಿಗಳ ಕತ್ತರಿಸಲು ಖಡ್ಗ ಝಳಪಿಸುತ
ಹೊಕ್ಕು ಚಕ್ರವ್ಯೂಹದೊಳಗೆ, ವೀರಾದಿವೀರರ ಸದೆಬಡಿದು
ಸೋಲಿಲ್ಲದೆ ಉಗ್ರನಾಗಿ, ಗುರುಗೈದ ಕುತಂತ್ರಕೆ ಕರ್ಣನ
ಕತ್ತಿಗೆ ಬಲಿಯಾದ ಕೈಗಳ ಕಡೆಗಣಿಸಿ, ಭುಜಬಲದಿ ರಥಚಕ್ರಗಳ
ತಿರುಗಿಸುತ್ತ ಪರಾಕ್ರಮ ಮೆರೆಯುತಿರೆ, ಮತ್ತೆ ಬಂದೆರಗಿದ
ಸಾವು ಅನೀತಿಯ ಯುದ್ಧದೊಳು ಗೆಲ್ಲುತ್ತಾ ನೆಲಕ್ಕುರುಳಿದ ಅಭಿಮನ್ಯು
2
ಹುಟ್ಟುತಲೇ ಇರುವರು ಇಂದಿಗೂ ಕುರುಕುಲಾಧಿಪ-
ಅಭಿಮನ್ಯು ಅವತಾರಗಳು ಯುಗ ಯುಗ ಕಳೆದರೂ
ಗಡಿ-ಗಡಿಯ ಸಮರ ಎಂದಿಗೂ ನಿಲ್ಲದೇ ಇರುವೆಡೆ,
ಗಡಿಯೆಂಬುದೇ ಸದಾ ಯುದ್ಧ ಭೂಮಿ, ಗಡಿ ಇರದ
ನೆಲವ ಧರೆ ಕಂಡಿತೇ ಎಂದಾದರೂ? ಎಂತಾದರೂ?
ಅವನು ಸೈನಿಕನಾದ, ಹೆತ್ತವರಿಗೆ ಹೆಮ್ಮೆಯುಸಿರು,
ಅವನು ವೀರನಾದ ಹೊತ್ತಲ್ಲಿ ನಾವು ಎದೆತಟ್ಟಿ ಮೆಚ್ಚುತ್ತ
ನಮ್ಮ ನಾವೇ ಹೊಗಳುತ್ತ-ಸಿದ್ಧವಾಗುತ್ತ ಮತ್ತೆ ಚಕ್ರವ್ಯೂಹಗಳ
ಕಟ್ಟಲು-ಒಡೆಯಲು, ಅಡಿಗಡಿಗೆ-ಗಡಿಯಲಿ ತೊಡೆ ತಟ್ಟುತ್ತ
ಮತ್ತೆ-ಮತ್ತೆ ಬೇಕೇ ಚಕ್ರವ್ಯೂಹ–ಅಭಿಮನ್ಯು-ತಬ್ಬಲಿತನ?
ಕ್ರೌರ್ಯದ ಅಸ್ತಿತ್ವ ನಿರಂತರ; ಸಂಧಾನ ಮುರಿದು
ಚಕ್ರವ್ಯೂಹದೊಳಗೆ ಮತ್ತೆ ಅಭಿಮನ್ಯುವಾಗುತ್ತಾನೆ
ಹೆತ್ತೊಡಲ ಆಕ್ರಂದನ, ಪ್ರಿಯತಮೆಯ ವೈಧವ್ಯ,
ತಬ್ಬಲಿಯ ಕುಡಿಗಳು; ಪದೇಪದೇ ಅದೇ ನೋವುಗಳು
ಚಿತೆಗೆ ಕೊಳ್ಳಿ ಇಡುವಾಗ ನಡುಗುವ ಕೈಗಳ – ಎದೆಯೊಳಗೆ
ಉರಿಬೆಂಕಿ ಶಾಶ್ವತವಾಗಿ ಮನದ ಕದವ ತಟ್ಟದೇ-ತೆರೆಸದೇ?
ಕ್ರೌರ್ಯದ ಕಣ್ಣ, ಅಶಾಶ್ವತವಾದ ವಿಶ್ವದಲ್ಲಿ ಇನ್ನೊಬ್ಬ-ಮತ್ತೊಬ್ಬ
ಹುಟ್ಟುತ್ತಲೇ ಇರಬೇಕೇ? ಚಿರಂಜೀವಿಯಾಗದ ಅಭಿಮನ್ಯು.






dhanyavadagalu