ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಚ್ಚು ಕಪಿ ಮತ್ತು ವಿಪರೀತ ಚೇಷ್ಟೆ

ಪ್ರತಿಭಾ ನಂದಕುಮಾರ್

ಎಚ್ಚರ, ಒಂದು ದೀಪ ಹಚ್ಚೆಂದರೆ
ಇಡೀ ನಗರವನ್ನು ಸುಟ್ಟು ಬೂದಿ ಮಾಡುವ
ಕೋತಿ ನಾನು.
ಹೆಂಡ ಕುಡಿದ ಕೋತಿಯ ಹೊಸ ರೂಪ ನಾನು.
ಡೋಲು ಬಡಿದ ಸದ್ದಿಗೆ ಕುಣಿವ ರೂಢಿಯಿದೆ ನನಗೆ.
ಇದೆಂಥಾ ಮಂಗನಾಟ ಎಂದು ಅಲಕ್ಷಿಸಬೇಡಿ
ಅತೀ ದಾಸ್ಯ ವೃತ್ತಿಯನ್ನು ಕರತಲ ಮಾಡಿಕೊಳ್ಳುವುದು
ಸುಲಭವಲ್ಲ ಕಲಿಯುವ ವಿದ್ಯೆಯಲ್ಲ.

ವಿವೇಕ ಮತ್ತು ಹುಚ್ಚುತನಗಳು, ನನ್ನ ಮಟ್ಟಿಗೆ,
ಸಮಾನ ಮತ್ತು ವಿರುದ್ಧವಲ್ಲ, ಮಾತಿನ ಬಗ್ಗೆ ಎಚ್ಚರವಿರಲಿ
ವಿಲಕ್ಷಣ ಅನ್ನಿ ಪರವಾಗಿಲ್ಲ ಆದರೆ
ವಿಚಿತ್ರ, ಅಪಾಯಕಾರೀ ಆಟಗಳನ್ನು ಆಡಲು
ನನ್ನ ಒಡೆಯ ಅಪ್ಪಣೆ ಮಾಡಿದ್ದಾನೆ.
ಸಹಜವೇ ಅಸಹಜ, ಗೊತ್ತೇ?
ಈಗಾಗಲೇ ಆ ಪೆಡಂಭೂತ ಹೊಸಿಲು ದಾಟಿ
ಒಳಗೆ ಒಂದು ಹೆಜ್ಜೆ ಇಟ್ಟಾಗಿದೆ,
ಆ ಹಗ್ಗ ಕೊಡಿ,
ಬೇಡಾ ಮಂತ್ರದಂಡವಲ್ಲ
ಹಗ್ಗ ಸಾಕು.

ಮತ್ತೆ ಈ ನಿರ್ಬಂಧಗಳನ್ನೆಲ್ಲ ಹಾಕಿದ್ದು
ನನ್ನ ಒಳಿತಿಗೇ. ಅವರು ಹೇಳಿದರು
ಅಡ್ಡಡ್ಡ ಸೀಳಿ ಹಾಕು.
ಒಂದು ಕೊಡಲಿಯೇಟು ಛಕ್ಕನೆ ಸೀಳಿತು
ಇಡೀ ದೇಶವನ್ನು ಉದ್ದುದ್ದ
ಹುಚ್ಚು ಕಪಿಯ ಶಕ್ತಿಯನ್ನು ಅಲ್ಲಗಳೆಯಬೇಡಿ
ಅದರಲ್ಲೂ ಪಾನಮತ್ತ ಕಲಾಕಾರ ಕಪಿ.

ನನ್ನ ಹುಚ್ಚಾಟಗಳನ್ನೆಲ್ಲ
ವಿಶ್ಲೇಷಿಸುವ ತೊಂದರೆ ತೆಗೆದುಕೊಳ್ಳಬೇಡಿ.
ಅದನ್ನೆಲ್ಲ ನಿಮ್ಮ ಪಿಕಾಸೋ ಅಥವಾ ಮೊದಿಲಿಯಾನಿ
ಅಥವಾ ನಮ್ಮವರೇ ತಿಕ್ಕಲು ಕಲಾವಿದರಿಗೆ ಮೀಸಲಿಡಿ.
ನಿಮ್ಮ ನೆಲದ ಕಾನೂನಿಗೆ ನಾನು ಬಾಧ್ಯನಲ್ಲ
ನಾನೊಬ್ಬ ಸೂಪರ್ ಹೀರೊ, ದೇವತಾಪುರುಷ
ಮತ್ತು ಕಾರಿನ ಮೇಲಿನ ಸ್ಟಿಕ್ಕರ್.
ಇತರರು ಅಂಜುವ ಕಡೆಗೆ ನೇರ ನುಗ್ಗುವ ಅಂಜನಾಪುತ್ರ
ಯಾರನ್ನಾದರೂ ಸರಿ ಮುಡಿ ಹಿಡಿದು ಹೊರಗೆಳೆದು
ತದುಕಿ ಮುಗಿಸುವ ಸವಲತ್ತು ನನಗಿದೆ.
ನನ್ನ ಬುದ್ಧಿಗೇನೂ ಆಗಿಲ್ಲ, ಸುಮ್ಮನೆ ತಲೆಕೆಡಿಸಿಕೊಳ್ಳಬೇಡಿ
ಏನಿದ್ದರೂ, ನನ್ನ ಅತಿರೇಕಕ್ಕೆ ಭಯ ಪಡಿ
ಮತ್ತು ನನ್ನ ಮುಂದಿನ ಆಟಕ್ಕೆ ಕಾದಿರಿ.
ಏನಂದ್ರಿ? ಹುಚ್ಚುತನಕ್ಕೂ ಒಂದು ರೀತಿನೀತಿಮಿತಿ ಇದೆಯೇ?

‍ಲೇಖಕರು avadhi

12 April, 2020

2 Comments

  1. Sumangala

    ಏನಂದ್ರಿ? ಹುಚ್ಚುತನಕ್ಕೂ ಒಂದು ರೀತಿನೀತಿಮಿತಿ ಇದೆಯೇ? –
    ಯಾರವರು ಹೀಗೆ ಗಳಹಿದ್ದು? 
    ಎಳೆದು ತನ್ನಿ ಇಲ್ಲಿ!! 
    ಇದು ಸೂಪರ್ ಹೀರೋನ ಸೂಪರಾತಿಸೂಪರ್ ಹುಚ್ಚುತನ; 
    ಇದಕ್ಕಿಲ್ಲ ರೀತಿನೀತಿಮಿತಿಗಳು, ಅಂಥದೇನಾದರೂ ಇದ್ದರೆ ಅದು ನಿಮ್ಮ ಭ್ರಮಾಧೀನ ಮುಕ್ತಸ್ವಾತಂತ್ರ್ಯಕ್ಕೆ….
    ಹುಚ್ಚುತನಕ್ಕೂ ಒಂದು ರೀತಿನೀತಿಮಿತಿ ಇದೆಯೇ? ಎಂದು ಕೇಳಿದವರಾರು… ಎಳೆದು ತನ್ನಿ ಇಲ್ಲಿ!!!

  2. Sudha Hegde

    ಅರ್ಥಪೂರಣ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading