ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಯಕ್ಷಿಣಿ ವಿದ್ಯೆ ಇರಬೇಕಿತ್ತು..

 

 

 

ಸುನೀತ ಹೆಬ್ಬಾರ್

 

 

 

 

ಪೂತಿನಿಯ ಮೊಲೆ ಹಾಲ ಕುಡಿದಂತೆ
ಗೋರಖ್ ಪುರದಲ್ಲಿ ಬಲಿಯಾದ ಕಂದಮ್ಮಗಳೆಲ್ಲ ಮತ್ತೆ
ತನ್ನಮ್ಮ ತೂಗುವ ತೊಟ್ಟಿಲಲ್ಲಿ
ನಗುತ್ತ ಮಲಗುವಂತೆ ಮಾಡುವ
ಯಕ್ಷಿಣಿ ವಿದ್ಯೆಯೊಂದು ಇರಬೇಕಿತ್ತು .

ಪ್ಯಾಲೆಸ್ತೇನ್ ,ಬರ್ಮಾದ ರೊಹಿಂಗ್ಯ
ಮಕ್ಕಳೆಲ್ಲ ಎಂದಿಗೂ ಎಡವದಂತೆ ,
ಜಾರಿ ಬೀಳದಂತೆ ,ಮುಳ್ಳುಕಂಟಿಗಳನ್ನೆಲ್ಲ
ಅವರ ಹಾದಿಯಿಂದ ಕಿತ್ತೊಗೆದು
ಮಕ್ಕಳಿಗೆಲ್ಲ ಒಂದೊಂದೇ ಹೂ ಮುತ್ತನಿಟ್ಟು ಹೂದೋಟದಲ್ಲಿ ಆಟವಾಡಲು ಬಿಡುವಂತಹ
ಯಕ್ಷಿಣಿ ವಿದ್ಯೆಯೊಂದು ಇರಬೇಕಿತ್ತು

ಸಿರಿಯಾದ ಸಮುದ್ರತೀರದಲ್ಲಿ ಬಿದ್ದಿದ್ದ
ಹಸುಗೂಸು ಅಯಾನನನ್ನು ಎತ್ತಿ
ಅವನ ಮೊಣಕಾಲಿಗೂ ಅಲೆತಾಗದಂತೆ
ದಡದ ಮರಳಲ್ಲಿ ಪುಟ್ಟ- ಪುಟ್ಟ ಹೆಜ್ಜೆಯನ್ನಿಡಿಸಿ ನಡೆಸುತ್ತಾ
ಸಮುದ್ರದ ಬೆರಗನ್ನು ಅವನಿಗೆ ತೋರಿಸಲು
ಯಕ್ಷಿಣಿ ವಿದ್ಯೆಯೊಂದು ಇರಬೇಕಿತ್ತು.

ಕೊಲೆಯಾದ ದಾನಮ್ಮ , ನಿರ್ಭಯಾರೆಲ್ಲ
ಮತ್ತೊಮ್ಮೆ ನಮ್ಮ ನಡುವಲ್ಲಿ
ಘನತೆಯ ಬದುಕು
ಹೊಂದುವಂತೆ ಮಾಡಲು
ಯಕ್ಷಿಣಿವಿದ್ಯೆಯೊಂದು ಇರಬೇಕಿತ್ತು

ಸದಾ ಬಾವಲಿಯಂತೆ
ಎಲ್ಲವನ್ನೂ ತಲೆಕೆಳಗಾಗಿಯೇ ನೋಡುವಂತ
ಈ ರಕ್ತಪಿಪಾಸುಗಳಿಗೆಲ್ಲ
ಗಾಂಧಿಯೋ,ಬುದ್ಧನೋ ಶಾಂತಿಯ ಪಾಠ ಕಲಿಸುವಂತ
ಜಗದ ಗಾಯಗಳಿಗೆಲ್ಲ ಮುಲಾಮು ಸವರುವಂತ
ಯಕ್ಷಿಣಿವಿದ್ಯೆಯೊಂದು ಇರಬೇಕಿತ್ತು.

 

‍ಲೇಖಕರು Avadhi GK

6 February, 2018

1 Comment

  1. Mamatha Arsikere

    ಅದ್ಭುತ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading