ಕೆ ಜೆ ಕೊಟ್ರಗೌಡ ತೂಲಹಳ್ಳಿ
ಕಳೆದು ಹೋಗಬೇಕಿದೆ
ಕತ್ತಲೆಗಳ ಮೌನದಲ್ಲಿಯೇ
ಹಗಲಿನ ನೆನಪೇ ಬಾರದಂತೆ!
ತನ್ನರಿವಿನ ವ್ಯಾಪ್ತಿ ಮೀರಿದ
ಅಗಾಧ ಮೌನದಲ್ಲಿ
ತುಸು ನೆಮ್ಮದಿ ದೊರಕಬಹುದು
ಹಗಲ ತೊರೆದ ಅಲೆಮಾರಿಗೆ!
ಈಚೀಚೆಗೆ,
ಬರಬಹುದಾದ ಎಲ್ಲಾ ವಯಸ್ಕತೆಗಳಿಗೂ
ನಿವೃತ್ತಿ ಘೋಷಿಸಬೇಕು
ಯಾವ ವಯೋಮಾನವೇನು ದೊರಕಿಸಬಹುದು
ಮುಖವಾಡಗಳ ದೃಶ್ಯ ಬದುಕಲಿ?

ಸುಡುಗಾಡಿನ
ಕಿಡಿ ಕೆಂಡವೂ ಹೊತ್ತಿದೆ ನೂರು ಕಥೆಗಳ
ಈ ಹೊತ್ತಿಗೆ..
ಯಾವ ಪ್ರಲೋಭನೆಯ ರೇಚಕ
ಯಾರ ಬದುಕಿನ ಅನಿವಾರ್ಯವೋ?
ಹೀಗೆ ಕಳೆದುಹೋಗಬೇಕು
ವಿಳಾಸವಿಲ್ಲದ ರಾತ್ರಿಗೆ
ಬೆರೆಯಬೇಕು ತಾತ್ಸಾರವಿಲ್ಲದ ಮೌನದೊಂದಿಗೆ
ಅನಿವಾರ್ಯವಿಲ್ಲದ ಅನಿವಾರ್ಯತೆಗೂ ಒಗ್ಗಿಕೊಳ್ಳುವ ಜಮಾನ
ಎದುರಾಗುತ್ತಿರುವ ತರುವಾಯದಲ್ಲಿ!






0 Comments