ನೆನಪಿನ ಮಸೂರ
ಪ್ರವೀಣ್
ಮಾಲ್ಡೀವ್ಸ್
ನಿನಗೆ ಸಮಯ ಸಿಕ್ಕಾಗ
ಮಾಡಲು ಮತ್ತೇನೂ ಕೆಲಸವಿಲ್ಲದಾಗ
ನನ್ನ ನೆನಪೇನಾದರೂ ಬಂದರೆ ಕರೆ ಕೊಡು,
ನಾನು ರಕ್ತವನ್ನೆಲ್ಲ ಕಿವಿಗೆ ಹರಿಸಿಕೊಂಡು
ಕಣ್ಣು ಮುಚ್ಚಿ ಧ್ಯಾನಿಯಾಗುತ್ತೇನೆ
ನೀನಾಡಿದ ಹಿಡಿಯಷ್ಟು ಮಾತು
ನನ್ನೆದೆಯಲ್ಲಿ ರಾಶಿಯಾಗಿ ಬೀಳುತ್ತವೆ.
ನಿನ್ನ ನಗೆಯ ಕನ್ನಡಿಯಲ್ಲಿ
ನನ್ನ ಖುಷಿಯ ಪ್ರತಿಬಿಂಬ ಆನಂದಿಸುತ್ತ
ತಾರೀಖುಗಳನ್ನು ಮರೆತುಬಿಡುವೆ,
ದಿಗಂತದಾಚೆ ಮರೆಯಾದ ನಿನ್ನ
ನೆನಪಿನ ಮಸೂರಿನಿಂದ ಬಳಿಸೆಳೆದು
ವರುಷಗಟ್ಟಲೆ ಕಳೆದುಹೋಗುವೆ ನಿನ್ನೊಳಗೆ.
ಹಿಮದ ಕಲ್ಲು ಹೊದ್ದುಕೊಂಡು ಒಳಗೆ
ಜುಳುಜುಳು ಹರಿಯುವ ತಪ್ತನದಿ ನೀನು;
ಪೈನ ಮರಗಳ ತುಂಬಾ ಮುಳ್ಳಂತೆ ಚಾಚಿಯೂ
ಪ್ರೇಮ ಬಿಸುಪಿಗೆ ಕರಗುವ ಮಂಜುಸೂಜಿ ನೀನು;
ಲಗ್ನದ ಬಾಗಿನ ಹೊತ್ತುಕೊಂಡು
ಮುತ್ತುವ ಮುಖಗಳ ಗದ್ದಲಕೆ ಮುದುಡದೇ
ಸುಮ್ಮನೆ ಮಿನುಗುವ ವಸ್ತ್ರ ನೀನು;
ಗೆಳತಿ ಹೇಳಿದ ಅಶ್ಲೀಲ ಜೋಕಿಗೆ ನಕ್ಕ
ಖೊಳ್ಳನೆ ನಗುವನ್ನು ನಡುಮಧ್ಯ
ನಿಲ್ಲಿಸುವ ಲಜ್ಜೆ ನೀನು.
ಹಗಲಿಡಿ ಸೂರ್ಯನಿಂದ ಸುಟ್ಟುಕೊಂಡ
ಒಬ್ಬಂಟಿ ಮುಗಿಲು ಕಾಯುತ್ತಿದೆ
ರಂಗಿನ ಬೆಳಕು ಚೆಲ್ಲಿ
ರಂಗಸಜ್ಜಿಕೆ ಆಣಿಗೊಳಿಸಿಕೊಂಡು
ದಿಗಂತದಂಚಿನಿಂದ ನಡೆದುಬರುವಿ
ಎಂದು,
ನಾನೂ ಕಾಯುತ್ತಿರುವೆ
ಅನಂತ ಆಕಾಶಕ್ಕೂ ಚಡಪಡಿಕೆ…
ಬೇಜಾರಾಗಿ ದಿನಕೊಂದು ಮುಖದೋರುವ
ಅಳುವ ಮಗ ಚಂದ್ರನನ್ನು ತಂದು ನಿಲ್ಲಿಸಿದೆ ಮುಗಿಲು
ನಾನೊಬ್ಬನೇ ಒಲ್ಲೆ ಎಂದು ಅವ ತಂಗಿ
ತಾರೆಯನ್ನು ಕರೆತಂದು
ಏನೂ ಮಾಡಲು ಹೊಳೆಯದೇ
ಅಳುಮೊಗದಲ್ಲಿ ನಿಂತುಬಿಟ್ಟರು ನಿಧಾನ.
ಭೂಮಿ ತಿರುಗುತ್ತಿದೆ ಸುಮ್ಮನೆ
ಕಾಲದ ಕಾದ ಹಂಚಿನ ಮೇಲೆ ನನ್ನ
ಕಣ್ಣೀರು ಚುರ್ರೆಂದು ಆವಿಯಾಗಿ ಹಾರುತ್ತದೆ.






ಕಾಲದ ಕಾದ ಹಂಚಿನ ಮೇಲೆ ನನ್ನ
ಕಣ್ಣೀರು ಚುರ್ರೆಂದು ಆವಿಯಾಗಿ ಹಾರುತ್ತದೆ.
– ಸೊಗಸಾಗಿದೆ.
ತುಂಬಾ ಚೆನ್ನಾಗಿದೆ.