ಹಿಂದೀ ಮೋಹಿನಿಯೂ.. ಮಾಂತ್ರಿಕ ಜೋಶಿ ಗುರುನಾಥರೂ…

ಸಿದ್ಧಲಿಂಗ ಪಟ್ಟಣಶೆಟ್ಟಿ

ಹಿಂದೀ ಭಾಷೆ, ಸಾಹಿತ್ಯ, ಸಂಪರ್ಕಗಳು ‘ಬಿಟ್ಟೆನೆಂದರೂ ಬಿಡದೀ ಮಾಯೆ’ ಎಂಬಂತೆ ನನ್ನನ್ನು ಕಾಡಿದುವು, ಆಗ ನಾನು ಮತ್ತೆಮತ್ತೆ ನೆನೆಸಿದ್ದು ‘ಗುರು’ ‘ನಾಥ’ ‘ಜೋಯಿಸ’ರನ್ನು. ಸ್ವತಃ ತಮ್ಮನ್ನು ಕಾಡಿದ್ದ, ಮೋಹಿಸಿದ್ದ ಹಿಂದೀ ಮಾಯಾರಜ್ಜುವನ್ನು ಬಳಸಿ, ತಮಗೆ ಪರಿಚಿತರಾದ ಯಾರನ್ನಾದರೂ ಕಟ್ಟಿ ಹಾಕಲು ಜೋಶಿಯವರು ಯತ್ನಿಸಲಿಲ್ಲ, ಆದರೆ ಹಿಂದಿಯನ್ನು ಬಳಸಿಕೊಂಡು ಅವರು ಮಾಡಿದ ಕನ್ನಡ ಸೇವೆ, ಸಾಹಿತ್ಯ ಸೇವೆ, ರಾಷ್ಟ್ರಸೇವೆ ಅಗಾಧವಾಗಿತ್ತು, ಅದು ಅವರ ಬೆನ್ನಿಗೆ ಬಿದ್ದ ‘ಬಿಡದಮಾಯೆ’ಯಾಗಿತ್ತು; ಆರಂಭದಲ್ಲಿ ಅವರನ್ನು ಒಪ್ಪದೆಯೂ ಒಪ್ಪಿಕೊಂಡ, ಸ್ವೀಕರಿಸಿದ ನನ್ನಂಥ ಅನೇಕ ಮೂಕ ಅನುಗಾಮಿಗಳನ್ನು ಅವರು ಹೊಂದಿದ್ದರು.

ಆರಂಭದಲ್ಲಿ ಹಿಂದೀ ನನ್ನ ಪಾಲಿನ ‘ಬೇತಾಳ’ವಾಗಿತ್ತು, ನಂತರ ಸಹ ‘ತಾಳ’ವಾಗಿ ಸ್ಪಂದಿಸತೊಡಗಿತ್ತು; ಇದಕ್ಕೆ ಗುರುನಾಥ ಜೋಶಿಯವರ ಪ್ರೇರಣೆ, ಸದಿಚ್ಛೆಗಳು ಕಾರಣವಾಗಿದ್ದುವು. ತಮ್ಮ ನೇರ ನೆರವು ನೀಡದೆಯೂ ಪರೋಕ್ಷವಾಗಿ ಸಹಕರಿಸಿದ ಜೋಶಿಯವರ ಮತ್ತು ನನ್ನ ಒಡನಾಟದ ವೈರುಧ್ಯ ಪ್ರೇಮದ ಆಕರ್ಷಣೆಯ ಪುಟ್ಟ ಕಥಾನಕ ಈ ಲೇಖನ.

ಧಾರವಾಡದ ಸರಕಾರೀ ಪ್ರ್ಯಾಕ್ಟಿಸಿಂಗ್ ಸ್ಕೂಲಿನಲ್ಲಿ ಕಲಿಯುತ್ತಿದ್ದೆ. ಏಳನೇತ್ತದಲ್ಲಿದ್ದೆ. ‘ಅ’ ವರ್ಗದವರಿಗೆ ನೇಯ್ಗೆ, ‘ಬ’ ವರ್ಗದ ನಮಗೆ ಒಕ್ಕಲುತನ ಕಡ್ಡಾಯ ವಿಷಯಗಳಾಗಿದ್ದುವು. ಸಾಮೂಹಿಕ ಪ್ರಾರ್ಥನೆ ಮುಗಿಸಿ, ಸಾಲಾಗಿ, ನಮ್ಮ ನಮ್ಮ ವರ್ಗಕ್ಕೆ ಬರುತ್ತಿದ್ದೆವು. ಬ.ಪ. ನವಲಗುಂದ ಗುರುಗಳು ಹಾಜರಿ ತೆಗೆದುಕೊಳ್ಳುತ್ತಿದ್ದರು. ಹಾಜರಿ ಮುಗಿದ ಕೂಡಲೇ ಎಲ್ಲರೂ ತಕಲಿ ಹಿಡಿದು ನೂಲುವುದು ನಿಯಮವಾಗಿತ್ತು. ಮೊದಲೇ ತೂಕ ಮಾಡಿ ಇಟ್ಟಿದ್ದ ಹತ್ತಿಯ ಪುಡಿಕೆ ನಮಗೆ ಕೊಡುತ್ತಿದ್ದರು; ಹತ್ತೀಕಾಳು ಕೂಡಿಡಲು, ಹಾಳು ಸಂಗ್ರಹಿಸಲು ಡಬ್ಬಿ; ತಕಲಿ, ನೂಲು ಸುತ್ತಿಟ್ಟುಕೊಳ್ಳುವ ಕಡ್ಡಿ; ಹಿಂಜಿದ ಅರಳಿ, ಹಂಜಿ ಇಟ್ಟುಕೊಳ್ಳಲು ಚಿಲಕದ ನಮ್ಮನಮ್ಮ ಸಣ್ಣ ಡಬ್ಬಿ.

ನಾವು ನೂತ ನೂಲನ್ನು ವಾರಕ್ಕೊಮ್ಮೆ ನೇಕಾರಿಕೆ ವಿಭಾಗಕ್ಕೆ ವರ್ಗಾಯಿಸುವ ಕೆಲಸಕ್ಕಾಗಿ ನವಲಗುಂದ ಗುರುಗಳು ನಮ್ಮ ವರ್ಗದ ಶಂಕರ ಬಂಗಾರಿ ಮತ್ತು ಜಕ್ಕನಗೌಡನನ್ನು ನೇಮಿಸಿದ್ದರು. ಶಂಕರ ಎಲ್ಲ ವಿಷಯಗಳಲ್ಲಿ ಜಾಣನಿದ್ದ. ಅವನು ವರ್ಗದ ಮುಂದಾಳು. ಅವನ ತಂದೆ ಮಲ್ಲಪ್ಪ ಬಂಗಾರಿ ಅವರು ನಮ್ಮ ಶಾಲೆಯ ಹೆಡ್‌ಮಾಸ್ತರ್. ನವಲಗುಂದ ಗುರುಗಳ ಪಕ್ಕದಲ್ಲಿ ಹೋಗಿ ನಿಂತು, ಬಂಗಾರಿ ಆಯಾ ದಿನದ ಮುಖ್ಯ ಪತ್ರಿಕಾಸುದ್ದಿ, ವರದಿ, ಇತರ ಸೂಚನೆ, ನಮ್ಮನಮ್ಮ ಕುರಪಿ, ಸಲಿಕೆ, ಝರಝರಿಗಳ ಜೊತೆಗೆ ಮಡಿಗಳಿಗೆ ಹೋಗುವ ಅಂದಿನ ಅವಧಿ ಇತ್ಯಾದಿ ಹೇಳುತ್ತಿದ್ದ.

ಅವತ್ತು ಶಂಕರ ಬಿತ್ತರಿಸಿದ ಒಂದು ಹೊಸ ಸುದ್ದಿಯನ್ನು ಕೇಳಿ ಎಲ್ಲರೂ ದಂಗಾದೆವು. ನಮ್ಮ ಟ್ರೇನಿಂಗ್ ಕಾಲೇಜಿನಲ್ಲಿ ಶಿಕ್ಷಕ ವಿದ್ಯಾರ್ಥಿಗಳಿಗೆ ಹಿಂದೀ ಕಲಿಸುತ್ತಿದ್ದ ಗುರುನಾಥ ಜೋಶಿಯವರು ಸ್ವಲ್ಪ ಹೊತ್ತಿನಲ್ಲಿಯೇ, ಒಂದು ವಿಶೇಷ ಕಾರ್ಯಕ್ಕಾಗಿ ಬರಲಿದ್ದಾರೆ, ಅದನ್ನು ನಮ್ಮ ವರ್ಗದಿಂದಲೇ ಆರಂಭಿಸಲಿದ್ದಾರೆ, ಅಂದ. ನವಲಗುಂದ ಗುರುಗಳು ಕಾಲು ಮಡಿಚಿಗೊಂಡು, ತಲೆ ತಗ್ಗಿಸಿಕೊಂಡು, ತಮ್ಮ ಪೆಟ್ಟಿಗೆಯ ಮೇಲೆ ಏನೋ ಬರೆಯತೊಡಗಿದರು.

ನಾವು ಗುಸುಗುಸು ಮಾತಾಡುತ್ತ ತಕಲಿ ಪೆಟ್ಟಿಗೆ ಎತ್ತಿಕೊಳ್ಳತೊಡಗಿದೆವು. ಅಷ್ಟರಲ್ಲಿ ಗುರುನಾಥ ಜೋಶಿಯವರು ಕೈಯಲ್ಲಿ ಒಂದೆರಡು ಪುಸ್ತಕ ಹಿಡಿದುಕೊಂಡು ನೇರವಾಗಿ ಮೂಲೆಯಲ್ಲಿದ್ದ ನಮ್ಮ ವರ್ಗಕ್ಕೆ ಬಂದು ಬಿಟ್ಟರು. ನವಲಗುಂದ ಗುರುಗಳು ಎದ್ದು ನಿಂತು ಅವರಿಗೆ ನಮಸ್ಕಾರ ಹೇಳಿ, ನಮಗೆ ಜೋಶಿಯವರ ಮಾತು ಕೇಳಲು ತಿಳಿಸಿ, ಮತ್ತೆ ತಮ್ಮ ಹಾಜರಿ ಪುಸ್ತಕದಲ್ಲಿ ಮುಳುಗಿದರು.

ನಮ್ಮ ಶಾಲೆಯ ಎಲ್ಲ ಗುರುಗಳೂ ಖಾದೀಧಾರಿಗಳು. ಧೋತರ, ಉದ್ದಂಗಿ, ಮೇಲೆ ಕರಿಯ ಕೋಟು, ಕರಿಯ ಟೊಪ್ಪಿಗೆ ಧರಿಸಿದ ಜೋಶಿ ಅವರು ಬಂದು, ತಾವು ಬಂದ ಉದ್ದೇಶ ತಿಳಿಸಿದರು: ‘ಈ ವರ್ಷದಿಂದ ನಮ್ಮ ಮುಂಬಯಿ ಸರಕಾರ ಏಳನೇತ್ತದಿಂದಲೇ ಜಾರಿಗೆ ಬರುವಂತೆ, ಹೈಸ್ಕೂಲು ಮತ್ತು ನಂತರದ ಶಿಕ್ಷಣದಲ್ಲಿಯೂ ಹಿಂದೀ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಸದ್ಯ ಒಮ್ಮೆಲೇ ಶುರು ಮಾಡುವುದು ಕಷ್ಟ, ಆದ್ದರಿಂದ ನಮ್ಮ ವಿದ್ಯಾರ್ಥಿಗಳಲ್ಲಿ ಹಿಂದಿಯ ಕನಿಷ್ಠ ಜ್ಞಾನ, ತಿಳಿವಳಿಕೆ ಎಷ್ಟಿದೆ ಎಂದು ವರದಿ ಮಾಡಲು ಸರಕಾರ ಹೇಳಿದೆ. ಇಂದು ನಾನು ನಿಮಗೆ ಕೆಲವು ಸರಳ ಹಿಂದೀ ಶಬ್ದಗಳನ್ನು ಕೇಳುತ್ತೇನೆ. ನಿಮ್ಮ ಉತ್ತರಗಳ ಆಧಾರದ ಮೇಲೆ ವರದಿ ಸಲ್ಲಿಸಬೇಕಾಗಿದೆ’ ಎಂದು ಉಪೋದ್ಘಾತ ಹಾಕಿದರು.

ನನ್ನ ವರ್ಗದಲ್ಲಿದ್ದ ಕೆಲವರು ಅವರ ಆಗಮನದ ಉದ್ದೇಶ ತಿಳಿದು ಸಂತಸಪಟ್ಟರು. ಉಳಿದವರು ಮೌನ. ಹಳ್ಳಿಯಿಂದ ಬಂದಿದ್ದ ನನ್ನಂಥವನಿಗೆ ಏನೂ ಅರ್ಥವಾಗಲಿಲ್ಲ. ವೇಳೆ ಕಳೆಯದೇ ಜೋಶಿ ಅವರು, ‘ನಾನು ಕೇಳುವ ಶಬ್ದಕ್ಕೆ ಅರ್ಥ ಹೇಳಬೇಕು’ ಎನ್ನುತ್ತ, ‘ಮ್ಞಾ ಅಂದರೇನು?’ ಎಂದರು. ತಕ್ಷಣ ಶಂಕರ ‘ತಾಯಿ’ ಎಂದು ಹೇಳಿಬಿಟ್ಟ. ಈಗ ಜೋಶಿಯವರು ಒಂದು ಸೂಚನೆ ಕೊಟ್ಟರು, ‘ಎಲ್ಲರೂ ಒಮ್ಮೆಲೇ ಗದ್ದಲ ಮಾಡಬಾರದು. ಉತ್ತರ ಗೊತ್ತಿದ್ದವರು ಕೈ ಎತ್ತಿರಿ, ನಾನು ಕೇಳಿದವರು ಮಾತ್ರ ಹೇಳಬೇಕು’ ಎಂದರು.

ಜೋಶಿಯವರು ‘ಬಾಪ್ ಇದರ ಅರ್ಥ ಏನು?’ ಎಂದು ಕೇಳಿದರು. ೪-೬ ಮಂದಿ ಕೈ ಎತ್ತಿದರು. ಜೋಶಿಯವರು, ಸುನಗದ ಮೌಲಾಸಾಬನನ್ನು ಕೇಳಿದರು. ಅವನು ನಿರರ್ಗಳವಾಗಿ, ‘ತಂದೆ’ ಎಂದು ಬೀಗುತ್ತ ಹೇಳಿದ. ಜೋಶಿಯವರು ‘ಶಬಾಶ್’ ಎಂದು, ನಗುತ್ತ ಈ ಸಲ ಒಂದು ಭಿನ್ನ ಬಗೆಯ ಶಬ್ದ ಕೊಟ್ಟರು. ‘ಮೋಟಾ ತಗಡಾ ಅಂದರೇನು?’ ಇಷ್ಟು ಹೊತ್ತು ಮಿಕಿಮಕಿ ಎಲ್ಲರನ್ನೂ ನೋಡುತ್ತಿದ್ದ ನನಗೆ ಸುಮ್ಮನಿರಲು ಆಗಲಿಲ್ಲ. ಅಭಿಮಾನದಿಂದ, ಖುಶಿಯಿಂದ ನಾನೂ ಕೈ ಎತ್ತಿದೆ. ವರ್ಗದಲ್ಲಿ ಗಾಂಧೀ ಟೊಪ್ಪಿಗೆ ಹಾಕಿಕೊಂಡಿದ್ದ ಏಕಮಾತ್ರ ಹುಡುಗನಾಗಿದ್ದ ನಾನು ಕೈ ಎತ್ತಿದ್ದು ನೋಡಿ ಜೋಶಿಯವರಿಗೆ ಮಹದಾನಂದವಾಗಿತ್ತು. ಮುಗುಳುನಗುತ್ತ ನನ್ನ ಕಡೆ ಕೈ ಮಾಡಿದರು. ಸುಮ್ಮನಿರಬಾರದು, ಏನಾದರೂ ಹೇಳಲೇಬೇಕು ಎಂದುಕೊಂಡಿದ್ದ ನಾನು, ಎದ್ದು ನಿಂತವನೇ ದಿಟ್ಟವಾಗಿ, ‘ಮೋಟರ ತಗಡ’ ಎಂದವನೇ ದಬಕ್ಕನೇ ಕುಳಿತೆ.

ಜೋಶಿ ಗುರುಗಳು ಸಮೇತ ಎಲ್ಲರೂ ಬಿದ್ದುಬಿದ್ದು ನಗತೊಡಗಿದರು. ನನಗೆ ಬಹಳ ಗಾಬರಿಯಾಯಿತು. ಈ ಗದ್ದಲದಿಂದ ಬೆಚ್ಚಿಬಿದ್ದು ನವಲಗುಂದ ಗುರುಗಳು ಸುಮ್ಮನೇ ನಗೆಯಲ್ಲಿ ಪಾಲುಗೊಳ್ಳುತ್ತ, ‘ಏನಾಯಿತು?’ ಎಂದು ಕೇಳಿದರು. ಜೋಶಿಯವರು ವಿಷಯ ತಿಳಿಸಿದರು. ಎಲ್ಲರಿಗೂ ‘ಮೋಟಾ ತಗಡಾ ಅಂದರೆ ದಷ್ಟಪುಷ್ಟ, ಹೃಷ್ಟಪುಷ್ಟ, ದಪ್ಪ, ಆರೋಗ್ಯವಂತ’ ಇತ್ಯಾದಿ ವಿವರಿಸುತ್ತ ನನ್ನ ಕಡೆಗೆ ಕರುಣವಾಗಿ ನೋಡಿದರು. ಅಲ್ಲಿದ್ದ ಗೆಳೆಯರೂ ಹಾಗೆಯೇ ನೋಡಿದರು.

ಭಯಂಕರ ಅಪಮಾನದಿಂದ ನೊಂದು ನಾನು ಮುಖ ಕೆಳಗೆ ಹಾಕಿ ಕುಳಿತುಬಿಟ್ಟೆ. ತಕ್ಷಣ ಜೋಶಿಯವರು, ‘ನಿಮ್ಮಂಥವರಿಗೆ ಹಿಂದೀ ಕಲಿಸುವುದು ಕಷ್ಟ, ಕಡ್ಡಾಯ ಮಾಡುವುದು ಸಾಧ್ಯವಿಲ್ಲ’ ಎನ್ನುತ್ತ, ನವಲಗುಂದ ಗುರುಗಳಿಗೆ ಹೇಳಿ, ನಮ್ಮ ಪಕ್ಕದಲ್ಲಿದ್ದ ಏಳನೇತ್ತ ‘ಅ’ ವರ್ಗಕ್ಕೆ ಹೋದರು. ಜೋಶಿಯವರು ನೀಡುವ ವರದಿಯ ಪರೋಕ್ಷ ಸೂಚನೆ ಕೆಲವರಿಗೆ ತಕ್ಷಣ ಅರ್ಥವಾಯಿತು, ಅನಿರೀಕ್ಷಿತ ಆಘಾತವಾಗಿ ಬರಲಿದ್ದ ಹಿಂದೀ ಎಂಬ ರಾಕ್ಷಸನಿಂದ ಪಾರಾದವರಂತೆ ಎಲ್ಲರಿಗೂ ಭಾರೀ ಸಮಾಧಾನವಾಗಿತ್ತು. ಒಂದನೇ ಅವಧಿ ಮುಗಿಯುವ ಗಂಟೆ ಬಾರಿಸಿದ್ದರಿಂದ, ಎಲ್ಲರೂ ಎದ್ದು ಬಂದು ನನ್ನನ್ನು ಎತ್ತಿ ಹಿಡಿದು ಅಭಿನಂದಿಸತೊಡಗಿದರು, ‘ನಿನ್ನಿಂದಾಗಿ ನಮಗೆ ಆ ಹಿಂದೀ ಕಲಿಯುವುದು ತಪ್ಪಿತು ಮಾರಾಯಾ…!’ ಎನ್ನುತ್ತ ಕುಲುಕುಲು ನಗತೊಡಗಿದರು. ನನಗಂತೂ ಏನೂ ತಿಳಿಯಲಿಲ್ಲ.

ಇದು ಹಿಂದಿಯ ಬಗ್ಗೆ ನನಗಿದ್ದ ಜ್ಞಾನ, ಅಲ್ಲ, ಅಜ್ಞಾನ. ಈ ಅಜ್ಞಾನದ ಕಾರಣವಾಗಿ ಒಳಗೊಳಗೇ ಬಹಳ ನೊಂದುಕೊಂಡೆ. ಈ ವರೆಗೆ ಯಾವ ವಿಷಯದ ಬಗೆಗೂ, ಸದಾ ನನ್ನ ವೈರಿಯಂತಿದ್ದ ಗಣಿತದ ಬಗೆಗೂ, ನಾನು ಎಂದೂ ಹೆದರಿದವನಲ್ಲ. ಹಟ ಹಿಡಿದು ಅದನ್ನೂ ಸಾಧಿಸಿದ್ದೆ. ಅಂಥವನು ಇಂದು ಬಹಿರಂಗವಾಗಿ ಅಪಮಾನಕ್ಕೆ ಈಡಾಗುವ ಪ್ರಸಂಗ ಬಂದಿತ್ತು. ಆದರೆ ಇಂದು ಹೇಗೂ ಈ ಕಂಟಕ ತಾನಾಗಿ ದೂರವಾಯಿತು, ನನ್ನ ಅಜ್ಞಾನದಿಂದ ಎಷ್ಟೊಂದು ಜನರಿಗೆ ಉಪಕಾರ ಮಾಡಿದೆ ಎಂಬ ಸಮಾಧಾನದಿಂದ ತೃಪ್ತನಾದೆ.

ಮುಲ್ಕೀ ಪಾಸಾಗಿ, ಎಂಟನೇತ್ತಕ್ಕೆ ಬಾಸೆಲ್ ಮಿಶನ್ ಹೈಸ್ಕೂಲಿಗೆ ಹೆಸರು ಹಚ್ಚಿಸಿದೆ. ಅಲ್ಲಿ ಬಂದರೆ ಮತ್ತೆ ಭಯಂಕರ ಭೂತ ಕಾದಿತ್ತು. ಮುಖ್ಯಮಂತ್ರಿ ಮುರಾರಜಿ ದೇಸಾಯಿ ಮತ್ತು ಶಿಕ್ಷಣ ಮಂತ್ರಿ ಬಿ.ಜಿ. ಖೇರ್ ಎಂಬ ಭಾಷಾಕಂಟಕರಿಂದಾಗಿ, ಮೊದಲಿನಿಂದ ಕಡ್ಡಾಯವಾಗಿದ್ದ ಇಂಗ್ಲಿಷ್‌ದ ಜೊತೆಗೆ, ‘ಕಂಪಲ್ಸರಿ’ ಹಿಂದೀ, ಮಾತೃಭಾಷೆ ಕನ್ನಡ ಮತ್ತು ಸಂಸ್ಕೃತ ಅಥವಾ ಜರ್ಮನ್ ಹೀಗೆ ನಾಲ್ಕು ಭಾಷೆಗಳನ್ನು ಕಲಿಯಲೇಬೇಕಿತ್ತು. ಅಲ್ಲಿ ಇತಿಹಾಸ, ಪೌರನೀತಿ, ಭೂಗೋಲ, ಗಣಿತ, ಡ್ರಾಯಿಂಗ್ ಇತ್ಯಾದಿಗಳ ಜೊತೆಗೆ ಬದ್ಧ ವೈರಿಯಾಗಿ ಆಗಮಿಸಿದ್ದ ಈ ಹಿಂದಿಯಿಂದಾಗಿ ನಾನು ಮುಂದಿನ ಶಿಕ್ಷಣ ಪಡೆಯುವುದು ಬಹುಶಃ ಇಲ್ಲಿಗೇ ನಿಲ್ಲಬಹುದು ಅಂದುಕೊಂಡೆ. ತ್ರೈಮಾಸಿಕ ಮತ್ತು ಷಾಣ್ಮಾಸಿಕ ಪರೀಕೆಗಳಲ್ಲಿ ಹಿಂದಿಯಲ್ಲಿ ನಪಾಸಾದೆ. ಆದರೆ ಮುಂದಿನ ದಿನಮಾನಗಳಲ್ಲಿ ಛಲ ನನ್ನ ಕೈ ಹಿಡಿಯಿತು, ಮುನ್ನಡೆಸಿತು.

ನಮ್ಮ ಹೈಸ್ಕೂಲಿನಲ್ಲಿದ್ದ ಇಬ್ಬರು ‘ಕಂಪಲ್ಸರಿ’ ಹಿಂದೀ ಶಿಕ್ಷಕರು ತಮ್ಮ ಬಿಗುಮಾನದಲ್ಲಿಯೇ ಇದ್ದರು, ಅವರು ಪ್ರೀತಿಯಿಂದ ಸಹಕರಿಸಲಿಲ್ಲ. ಪ್ರಾಥಮಿಕ ಶಾಲೆಯಲ್ಲಿ ನನ್ನನ್ನು ಅವಮಾನಿಸಿದ್ದ, ಆ ಶಾಲೆಯಿಂದ ಹೈಸ್ಕೂಲಿಗೆ ಬಂದರೂ ಬೇತಾಳನಂತೆ ಬೆನ್ನೇರಿ ಕಾಡತೊಡಗಿದ್ದ ಈ ಹಿಂದಿಯನ್ನು ಗೆದ್ದೇ ತೀರಬೇಕು, ಅರ್ಥಾತ್ ಸೋಲಿಸಿಯೇ ಬಿಡಬೇಕು ಎಂದು ಮನಸ್ಸಿನಲ್ಲಿಯೇ ನಿರ್ಧಾರ ಮಾಡಿಕೊಂಡೆ. ಮುಂಬಯಿ ಸರಕಾರದ ನಿಷ್ಠುರ ಹಿಂದೀ ಧೋರಣೆಯಿಂದಾಗಿ ಎಲ್ಲ ಕಡೆಗೆ, ಎಲ್ಲ ಊರುಗಳಲ್ಲಿ ಪ್ರತಿದಿನ ಬೆಳಗ್ಗೆ, ಸಂಜೆ ಹಿಂದೀ ಕಲಿಸುವ ಅಸಂಖ್ಯ ಖಾಸಗೀ ವರ್ಗಗಳು ನಡೆಯುತ್ತಿದ್ದವು.

ನಾನು ಆರ್‌ಎಲ್‌ಎಸ್ ಹೈಸ್ಕೂಲಿನಲ್ಲಿ ಕಾಶೀನಾಥಸ್ವಾಮಿ ಸಾರಂಗಮಠ ಸರ್ ಕಲಿಸುತ್ತಿದ್ದ ಸಂಜೆಯ ಕ್ಲಾಸುಗಳಲ್ಲಿ ಹೋಗಿ ಹಿಂದೀ ಕಲಿಯತೊಡಗಿದೆ. ಹಠದಿಂದ ಕಲಿತೆ. ಕಲಿಯುತ್ತ ಕಲಿಯುತ್ತ ಮುಂದೆ ಕನ್ನಡದಂತೆ ಹಿಂದಿಯಲ್ಲಿಯೂ ಮಾತನಾಡುವ, ಬರೆಯುವ ಕಲೆಯನ್ನು ಸಾಧಿಸಿದೆ. ನಂತರ ಜೀವನ ನಿರ್ವಹಣೆಗಾಗಿ ಹಿಂದೀ ಕಲಿಸತೊಡಗಿದೆ, ಪ್ರೀತಿಸತೊಡಗಿದೆ. ಬರಬರುತ್ತ ದ್ವೇಷಿಸತೊಡಗಿದ್ದ ಹಿಂದಿಯನ್ನು ಒಪ್ಪಿ ಅಪ್ಪಿಕೊಂಡೆ, ಬಯಸತೊಡಗಿದೆ. ನಾನೇ ಹಿಂದಿಯ ಬೆನ್ನು ಹತ್ತಿದೆನೋ ಅಥವಾ ಅದೇ ನನ್ನ ಬೆನ್ನು ಬಿದ್ದಿತೋ ತಿಳಿಯಲಾಗದಷ್ಟು ಹಿಂದಿಯಲ್ಲಿ ಒಂದಾಗಿಬಿಟ್ಟೆ.

ಈಗ ಹಿಂದಿಯ ಜೊತೆಗೆ ಒಡನಾಡತೊಡಗಿದ್ದ ನನ್ನ ಮತ್ತು ಗುರುನಾಥ ಜೋಶಿಯವರ ಸಂಬಂಧಗಳ ಬಗ್ಗೆ ಹೇಳಬೇಕಿದೆ. ಅಂದು ಏಳನೇತ್ತದಲ್ಲಿ ನನ್ನನ್ನು ‘ಮೋಟರ ತಗಡ’ ಮಾಡಿದ್ದ ಪ್ರಸಂಗದಿಂದ ಈಗ ಹಿಂದಿಯಲ್ಲಿ ‘ಮೋಟಾ ತಗಡಾ’ ಆಗುತ್ತಿದ್ದ ನನ್ನನ್ನು ನೋಡಿ, ಜೋಶಿಯವರಿಗೆ ಆನಂದವಾಗಿತ್ತು; ‘ತಮ್ಮ ಹಿಂದಿಯವನು’ ಎಂದು ನನ್ನನ್ನು ಅಕ್ಕರೆಯಿಂದ ಕಾಣತೊಡಗಿದರು. ಅವರು ಧಾರವಾಡದ ಕೀರ್ತಿ, ಪ್ರತಿಷ್ಠೆ ಹೆಚ್ಚಿಸಿದ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.

ಉಳಿದ ಹಲವು ಅಧ್ಯಾಪಕರಂತೆ ಹಣಕ್ಕಾಗಿ ಹಿಂದೀ ಕ್ಲಾಸ್ ನಡೆಸದೇ, ತಮ್ಮ ಹಿಂದೀ ಜ್ಞಾನವನ್ನು ಬಳಸಿಕೊಂಡು ಕನ್ನಡವನ್ನು ಬೆಳೆಸತೊಡಗಿದರು. ನಿರಂತರವಾಗಿ ಕನ್ನಡದಲ್ಲಿ ಅನುವಾದ ಮಾಡುತ್ತ ಬಂದರು. ಹಿಂದಿಯ ಪ್ರೇಮಚಂದ್ ಮತ್ತು ಬಂಗಾಲಿಯ ಶರತ್‌ಚಂದ್ರರ ಅನೇಕ ಕೃತಿಗಳನ್ನು ಕನ್ನಡಿಸುವ ಮೂಲಕ ಕನ್ನಡದಲ್ಲಿ ಹೊಸ ಓದುಗ ವರ್ಗವನ್ನು ಸೃಷ್ಟಿಸಿದರು. ಬಹುಶಃ ಹಿಂದಿಯ ಮೂಲಕ ಅವರಷ್ಟು ಪ್ರೇಮದಿಂದ, ಸಾಹಸದಿಂದ ನಿಃಸ್ವಾರ್ಥ ಕಾಯಕ ಮಾಡಿದವರು ಬೇರೆ ಯಾರೂ ಇಲ್ಲ.

ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದ ಬಡ ಕುಟುಂಬದಿಂದ ಬಂದು, ಈ ಎತ್ತರಕ್ಕೆ ಏರಿದ ಗುರುನಾಥ ಜೋಶಿಯವರ ಸಂಪರ್ಕ ನನ್ನಲ್ಲಿ ಅಭಿಮಾನವನ್ನು ಮೂಡಿಸಿತ್ತು. ಅವರು ಅಹಂಕಾರದಿಂದ ಬೀಗಿದ್ದುದನ್ನು ನಾನು ಎಂದೂ ಕಾಣಲಿಲ್ಲ. ನಾನು ಹೈಸ್ಕೂಲ್ ಕೊನೆಯ ವರ್ಷದಲ್ಲಿ ಕಲಿಯುತ್ತಿದ್ದಾಗ, ಕರ್ನಾಟಕ ಪ್ರಾಂತೀಯ ಹಿಂದೀ ಪ್ರಚಾರ ಸಭಾದವರು ನಡೆಸುತ್ತಿದ್ದ ಸಂಜೆಯ ವರ್ಗಗಳಲ್ಲಿ ‘ಹಿಂದೀ ಶಿಕ್ಷಕ ಸನದ್’ ಕಲಿಯುತ್ತಿದ್ದೆ.

ಆ ಹೊತ್ತಿಗೆ ಬೇರೆ ಬೇರೆ ಶಾಲೆಗಳಿಗೆ ‘ಪಾಠ ಕೊಡಲು’ ಹೋಗಬೇಕಾದ ಸಂದರ್ಭದಲ್ಲಿ ಕೆಲವು ಸಲ ಜೋಶಿಯವರ ಸಹಾಯ ಪಡೆದಿದ್ದೆ. ಲೈನ್ ಬಜಾರದ ನಾನಾ ದೀಕ್ಷಿತ ವಾಡಾ / ಮಣೇರಿಕರ ಚಾಳಿನಲ್ಲಿದ್ದ ಅವರ ಮನೆಗೆ ಹೋಗುತ್ತಿದ್ದೆ. ಕೊನೆಕೊನೆಗಂತೂ ತಮ್ಮ ಇಬ್ಬರು ಗಂಡುಮಕ್ಕಳು, ಒಬ್ಬ ಮಗಳ ಜೊತೆ ನನ್ನನ್ನೂ ಮಗನಂತೇ ಪ್ರೀತಿಸತೊಡಗಿದ್ದರು. ಅವರ ಚಿಕ್ಕ ಮಗ ಮುರಳೀಧರನಂತೂ ನನ್ನನ್ನು ಬಹಳ ಹಚ್ಚಿಕೊಂಡಿದ್ದ.

ಮಹಾತ್ಮಾ ಗಾಂಧೀ, ಪ್ರೇಮಚಂದ್, ಶರತ್‌ಚಂದ್ರರನ್ನು ಕಂಡು, ಮಾತಾಡಿಸಿ, ಅವರು ಬದುಕಿದ್ದಾಗಲೇ ಅವರ ಕೃತಿಗಳನ್ನು ಕನ್ನಡಿಸಿದ್ದ ಇಂಥವರು ನನಗೆ ಆತ್ಮೀಯರಾಗಿದ್ದು ಹೆಮ್ಮೆಯೆನಿಸುತ್ತಿತ್ತು. ಅಂಥ ಬಡತನದ ದಿನಗಳಲ್ಲಿಯೂ ಸಾಹಸ ಮಾಡಿ, ಕಾಶೀ ವಿದ್ಯಾಪೀಠದಲ್ಲಿ ಓದಿ, ಡಾ. ಭಗವಾನ್ ದಾಸ್‌ರಂಥ ವಿದ್ವಾಂಸರ ಶಿಷ್ಯರಾಗಿ ‘ಶಾಸ್ತ್ರೀ’ ಪದವಿ ಪಡೆದಿದ್ದರು. ರಂ.ರಾ. ದಿವಾಕರರಂಥವರ ಒಡನಾಡಿಯಾಗಿ ರಾಜಕೀಯ ಪ್ರವೇಶಿಸಿದ್ದರು, ಎರಡು ವರ್ಷ ಕಾರಾಗೃಹಕ್ಕೂ ಹೋಗಿದ್ದರು. ನಿಟ್ಟೂರ ಶ್ರೀನಿವಾಸರಾಯರ ಸಲಹೆಯಂತೆ, ಆ ಕಾಲದಲ್ಲಿಯೇ ಶಿವರಾಮ ಕಾರಂತರ ಬಾಲಪ್ರಪಂಚದ ಮೂರೂ ಭಾಗಗಳನ್ನು ಹಿಂದಿಗೆ ಭಾಷಾಂತರಿಸಿದ್ದರು. ಜೋಶಿಯವರ ಮನೆಯ ಕಪಾಟದಲ್ಲಿ ಹೊಂದಿಸಿ ಇಟ್ಟಿದ್ದ ಅವರ ಎಲ್ಲ ಕೃತಿಗಳನ್ನು ನೋಡಿ ಆಶ್ಚರ್ಯಪಡುತ್ತಿದ್ದೆ.

ನಾನು ಮದ್ರಾಸ್ ಹಿಂದೀ ಪ್ರಚಾರ ಸಭಾದ ಆರೂ ಪರೀಕ್ಷೆಗಳನ್ನು ಪಾಸಾಗಿದ್ದೆ. ‘ಹಿಂದೀ ಶಿಕ್ಷಕ್ ಸನದ್’ ಪರೀಕ್ಷೆಯಲ್ಲಿ ಮುಂಬಯಿ ಸರಕಾರಕ್ಕೆ ಪ್ರಥಮನಾಗಿ ಉತ್ತೀರ್ಣನಾಗಿದ್ದೆ. ಮುಂದೆ ಕಲಿಯುವುದು ಕಷ್ಟವಾಗಿದ್ದರಿಂದ, ಎಸ್‌ಎಸ್‌ಸಿ ಆದ ಕೂಡಲೇ ನೌಕರಿ ಹುಡುಕತೊಡಗಿದ್ದೆ. ನೇರವಾಗಿ ಗುರುನಾಥ ಜೋಶಿಯವರ ಬಳಿಗೆ ಹೋದೆ.

ನಾನು ‘ಶಿಕ್ಷಕ್ ಸನದ್’ ಮಾಡಿಕೊಂಡಿದ್ದುದನ್ನು ತಿಳಿದಿದ್ದ ಅವರು, ನನ್ನ ಹಿಂದೀ ಜ್ಞಾನದ ಬಗ್ಗೆ ಒಂದು ಅತ್ಯುತ್ತಮ ಪ್ರಮಾಣಪತ್ರವನ್ನು ಕೊಟ್ಟರಲ್ಲದೇ, ಸ್ವತಃ ನನ್ನನ್ನು ತಮ್ಮ ಟ್ರೇನಿಂಗ್ ಕಾಲೇಜಿನ ಮುಖ್ಯಸ್ಥರಾಗಿದ್ದ ಎಂ.ಜಿ. ಹಂದ್ರಾಳರ ಕಡೆಗೆ ಕರೆದುಕೊಂಡು ಹೋಗಿ, ನನ್ನ ಪರವಾಗಿ ಆಗ್ರಹಿಸಿ, ವಿನಂತಿಸಿಕೊಂಡಿದ್ದು ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು. ನಾನು ಕಲಿತಿದ್ದ ಹೈಸ್ಕೂಲಿನಲ್ಲಿಯೂ ಪ್ರಯತ್ನಿಸಿದ್ದೆ. ಎಲ್ಲಿಯೂ ಕೆಲಸ ಸಿಗಲಿಲ್ಲ. ಕೊನೆಗೆ ಕಾಲೇಜು ಸೇರಿಕೊಂಡೆ, ಬದುಕಿನ ದಿಕ್ಕೇ ಬದಲಾಯಿತು.

೧೯೫೭, ೧೯೫೮ ಎರಡೂ ವರ್ಷ ನಾನು ಅಖಿಲ ಭಾರತ ಯುವಜನ ಮಹೋತ್ಸವದಲ್ಲಿ ಹಿಂದೀ ಆಶುಭಾಷಣ ಸ್ಪರ್ಧೆಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮನಾಗಿ ಆಯ್ಕೆಗೊಂಡಿದ್ದೆ. ಆ ಎರಡೂ ವರ್ಷ ಗುರುನಾಥ ಜೋಶಿ, ಸಿದ್ಧನಾಥ ಪಂತ್, ಆರ್.ಸಿ. ಭೂಸನೂರಮಠರಂಥವರು ಆಯ್ಕೆ ಸಮಿತಿಯಲ್ಲಿದ್ದರು. ಮೊದಲ ವರ್ಷದ ಪ್ರಶಸ್ತಿಯನ್ನು ನನಗೆ ಕೊಡುವ ಸಂದರ್ಭದಲ್ಲಿ ಕೆಲವು ಅಧ್ಯಾಪಕರು, ಹುಬ್ಬಳ್ಳಿಯ ಒಂದು ಕಾಲೇಜಿನ ಪ್ರಿನ್ಸಿಪಾಲರು, ಪ್ರಶಸ್ತಿ ಕೊಡಲು ಬಂದಿದ್ದ ಡಾ. ಡಿ.ಸಿ. ಪಾವಟೆ ಅವರೊಂದಿಗೆ ಜಗಳಕ್ಕೆ ನಿಂತಿದ್ದರು.

‘ಪಟ್ಟಣಶೆಟ್ಟಿಯ ಮಾತೃಭಾಷೆ ಹಿಂದೀ ಇದೆ, ಈ ಸ್ಪರ್ಧೆ ಹಿಂದೀ ಮಾತೃಭಾಷೆ ಅಲ್ಲದವರ ಸಲುವಾಗಿ ಇದೆ’ ಎಂಬುದು ಅವರ ವಾದವಾಗಿತ್ತು. ಪಾವಟೆಯವರ ಸಲಹೆಯ ಮೇರೆಗೆ ಆಗ ವೇದಿಕೆಯ ಮುಂದೆ ಬಂದು, ಜೋಶಿಯವರು, ‘ಪಟ್ಟಣಶೆಟ್ಟಿಯನ್ನು ನಾನು ಗವರ್ಮೆಂಟ್ ಪ್ರೆöÊಮರಿ ಸ್ಕೂಲಿನಿಂದ ಬಲ್ಲೆ, ಈತ ಕನ್ನಡದ ಹುಡುಗ, ಅವನು ಹಿಂದಿಯನ್ನು ಅತ್ಯಂತ ನಿಷ್ಠೆಯಿಂದ ಕಲಿತಿದ್ದಾನೆ’ ಎಂದು ಸಮಝಾಯಿಸಿ ನೀಡಿದ್ದರು. ನನ್ನ ಬಗ್ಗೆ ಮೊದಲಿನಿಂದಲೇ ಅಭಿಮಾನ ಇಟ್ಟುಕೊಂಡಿದ್ದರು.

ನಾನು ಕರ್ನಾಟಕ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಜೋಶಿಯವರು ಇನ್ನೂ ಟ್ರೇನಿಂಗ್ ಕಾಲೇಜಿನ ಸೇವೆಯಲ್ಲಿದ್ದರು. ನಾನು ಇಂಟರ್‌ದಲ್ಲಿದ್ದೆ, ಆಗ ನಮ್ಮ ಕಾಲೇಜಿನಲ್ಲಿ ಮೊದಲ ಸಲ (೧೯೫೮) ‘ಹಿಂದೀ ಸಭಾ’ (ಅಸೋಶಿಯೇಶನ್) ಆರಂಭ ಮಾಡಲಾಯಿತು. ನಾನು ಅದರ ಕಾರ್ಯದರ್ಶಿ. ಸಂಘದ ಉದ್ಘಾಟನೆ ಮಾಡಲು, ಕಾಲೇಜಿನ ಪದ್ಧತಿಯಂತೆ, ಪ್ರಿನ್ಸಿಪಾಲ್ ವಿ.ಕೃ. ಗೋಕಾಕರನ್ನು ಕೇಳಿಕೊಂಡೆ. ಕಾಲೇಜಿನಲ್ಲಿ ಈ ಸಂಘ ಮೊದಲ ಸಲ ಅಸ್ತಿತ್ವಕ್ಕೆ ಬರುತ್ತಿರುವುದರಿಂದ, ಹಿಂದೀ ಕ್ಷೇತ್ರದಲ್ಲಿ ಪ್ರಸಿದ್ಧರಾದ ಗುರುನಾಥ ಜೋಶಿಯವರನ್ನು ಆಮಂತ್ರಿಸು, ಎಂದು ಹೇಳಿದರು.

ನಾನು ಜೋಶಿ ಅವರನ್ನು ಒಪ್ಪಿಸಿಕೊಂಡು ಬಂದೆ. ಅಂದಿನ ಅವರ ವ್ಯಾಖ್ಯಾನ, ನಿರರ್ಗಳ ಸರಳ ಹಿಂದೀ ಕೇಳಿ ಎಲ್ಲರಿಗೂ ಆನಂದವಾಗಿತ್ತು. ನಮ್ಮ ಪ್ರಿನ್ಸಿಪಾಲ್ ಗೋಕಾಕರೂ ಅವರಿಂದ ಹಿಂದೀ ಕಲಿಯುತ್ತಿದ್ದರಂತೆ. ಮುಂಬಯಿ ಸರಕಾರದ ನೀತಿಯಂತೆ, ಎಲ್ಲ ಸಂಸ್ಥೆಗಳ ಆಡಳಿತದ ಮುಖ್ಯಸ್ಥರು ಸಹ ಹಿಂದೀ ಕಲಿಯುವುದು ಕಡ್ಡಾಯವಾಗಿತ್ತಂತೆ. ಗುರುನಾಥ ಜೋಶಿಯವರು ಪ್ರತಿ ರವಿವಾರ ಗೋಕಾಕರ ಮನೆಗೆ ಹೋಗಿ ಹಿಂದೀ ಕಲಿಸುತ್ತಿದ್ದರೆಂದು ತಿಳಿಯಿತು.

ಜೋಶಿಯವರು ಸಾಹಸಿ, ಪರಿಶ್ರಮಿ, ನಿರಂತರ ಅಭ್ಯಾಸಿ. ಸರಕಾರೀ ಸೇವೆಯಿಂದ ನಿವೃತ್ತರಾಗಿ, ಕವಿವಿಯ ಬಾಹ್ಯ ವಿದ್ಯಾರ್ಥಿಯಾಗಿ ಹೆಸರು ನಮೂದಿಸಿಕೊಂಡರು. ನಾನು ಎಂಎ ಆದ ವರ್ಷವೇ (೧೯೬೩), ಹಿಂದೀ ಎಂಎ ಆದರು. ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಕೆಲವು ವರ್ಷ ಅಧ್ಯಾಪಕರಾದರು. ಅಷ್ಟೊತ್ತಿಗೆ ನಾನೂ ಕರ್ನಾಟಕ ಕಾಲೇಜಿನಲ್ಲಿ ಹಿಂದೀ ಅಧ್ಯಾಪಕನಾಗಿ ಸೇರಿದ್ದೆ. ಬಹಳಷ್ಟು ಪ್ರಾಚೀನ ಹಿಂದೀ ಕಾವ್ಯಗಳ ಅರ್ಥಗಳನ್ನು ತಿಳಿಯಲು, ಕೇಳಿಕೊಳ್ಳಲು ಆಗಾಗ ಅವರ ಮನೆಗೆ ಹೋಗುತ್ತಿದ್ದೆ. ಮುಕ್ತ ಮನಸ್ಸಿನಿಂದ ತಮ್ಮಲ್ಲಿದ್ದ ಪುಸ್ತಕಗಳನ್ನು ಕೊಡುತ್ತಿದ್ದರು.

ಆಗ ಭಾರತ ಮತ್ತು ಕೆಲವು ವಿದೇಶಗಳ ಸಹಯೋಗದಲ್ಲಿ, ಆದಾನ-ಪ್ರದಾನ ಯೋಜನೆಯಲ್ಲಿ ಎನ್‌ಡಿ. ಕೃಷ್ಣಮೂರ್ತಿಯವರ ಜೊತೆಗೆ ಸೇರಿಕೊಂಡು, ಅಮೆರಿಕ, ಇಂಗ್ಲಂಡ್, ಫ್ರಾನ್ಸ್ ದೇಶದ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಹಿಂದೀ ಕಲಿಸುತ್ತಿದ್ದರು. ಅಂಥ ವಿದೇಶೀ ವಿದ್ಯಾರ್ಥಿಗಳನ್ನು ನಮ್ಮ ಕಾಲೇಜಿಗೆ ಕರೆದುಕೊಂಡು ಬಂದು ನಮ್ಮಲ್ಲಿಯ ಸಂಸ್ಥೆಗಳನ್ನು, ವಿದ್ವಾಂಸರನ್ನು ಪರಿಚಯಿಸುತ್ತಿದ್ದರು. ಎರಡು ಸಲ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೇಮಚಂದ್ ಮತ್ತು ಶರತ್‌ಚಂದ್ರರ ಶತಮಾನೋತ್ಸವಗಳ ಸಂದರ್ಭದಲ್ಲಿ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಾನು ಪ್ರಬಂಧ ಓದಿದ್ದೆ.

ಕರ್ನಾಟಕ ಪ್ರಾಂತೀಯ ಹಿಂದೀ ಪ್ರಚಾರ ಸಭಾದವರು ತಮ್ಮ ಸಂಸ್ಥೆಯ ರಜತ ಜಯಂತಿಯ ಸ್ಮರಣಾರ್ಥ ಕಟ್ಟಿಸಿದ್ದ ಪುರುಷೋತ್ತಮ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಒಂದು ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಆ ಗೋಷ್ಠಿಯ ನಿರ್ವಹಣೆಯ ಪೂರ್ಣ ಹೊಣೆಗಾರಿಕೆಯನ್ನು ಸಂಘದ ಪ್ರಮುಖರಾದ ಸಿದ್ಧನಾಥ ಪಂತರು, ಅಂದಾನೆಪ್ಪ ಕೌದಿ ನನಗೆ ವಹಿಸಿದ್ದರು. ಗೋಷ್ಠಿಯಲ್ಲಿ ಹಿಂದಿಯ ಪ್ರಮುಖ ಕವಿ ಬಾಲಕೃಷ್ಣ ರಾವ್, ನರೇಂದ್ರ ಶರ್ಮಾ, ಧರ್ಮವೀರ್ ಭಾರತೀ ಮುಂತಾದವರು ಪಾಲುಗೊಳ್ಳಲಿದ್ದರು.

ಇದನ್ನು ಸಂಪೂರ್ಣ ಹಿಂದೀ ಕವಿಗೋಷ್ಠಿಯನ್ನಾಗಿ ಮಾಡಲು ಪಂತ್ ಮತ್ತು ಗುರುನಾಥ ಜೋಶಿಯವರು ಯೋಜನೆ ಹಾಕಿದ್ದರು. ಆದರೆ ನಾನು ಒತ್ತಾಯ ಮಾಡಿ, ‘ಕರ್ನಾಟಕ ಪ್ರಾಂತೀಯ’ ಎಂದು. ಹೇಳಿಕೊಳ್ಳುವ ಸದರೀ ಸಂಸ್ಥೆಯ ಈ ಕವಿಗೋಷ್ಠಿ ಕನ್ನಡ ಮತ್ತು ಹಿಂದೀ ಭಾಷೆಯಲ್ಲಿ ನಡೆಯಬೇಕು ಎಂದು ಅವರೊಡನೆ ಚರ್ಚಿಸಿ ಒಪ್ಪಿಸಿದೆ. ಆ ಮೇರೆಗೆ ಕನ್ನಡದ ಮೇರು ಕವಿ ಧಾರವಾಡದವರೇ ಆದ ಬೇಂದ್ರೆಯವರನ್ನು ಅಧ್ಯಕ್ಷತೆಗೆ ಆಮಂತ್ರಿಸಬೇಕು ಎಂದು ಹೇಳಿದೆ. ಅದಾಗಲೇ ಸಭಾದವರು ಬಾಲಕೃಷ್ಣ ರಾವ್ ಅವರಿಗೆ ತಿಳಿಸಿಯಾಗಿತ್ತು. ಇನ್ನು ಕೆಲವೇ ದಿನ ಮಾತ್ರ ಇರುವಾಗ, ಬೇಂದ್ರೆಯವರನ್ನು ವಿನಂತಿಸುವ, ಒಪ್ಪಿಸುವ ಧೈರ್ಯ ಯಾರಿಗೂ ಆಗಲಿಲ್ಲ.

ನಾನು ಹೊಣೆ ಹೊತ್ತೆ; ಸ್ವತಃ ಬೇಂದ್ರೆಯವರ ಮನೆಗೆ ಹೋಗಿ ಮಾತಾಡಿ ಒಪ್ಪಿಸಿಕೊಂಡೆ. ಬೇಂದ್ರೆ ಸಾಕಷ್ಟು ಮಾತಿನ ನಂತರ ಪ್ರೀತಿಯಿಂದ ಒಪ್ಪಿದರು. ಕವಿಗೋಷ್ಠಿ ಕನ್ನಡ ಮತ್ತು ಹಿಂದಿಯಲ್ಲಿ ನಡೆಯುತ್ತದೆ, ಅಧ್ಯಕ್ಷತೆ ದ.ರಾ. ಬೇಂದ್ರೆಯವರದು, ಗೋಷ್ಠಿಯ ಉದ್ಘಾಟನೆ ಬಾಲಕೃಷ್ಣ ರಾವ್ ಎಂದು ಆಯಿತು; ಕನ್ನಡದ ಕವಿಗಳ ಪಟ್ಟಿ ಮಾಡಿ, ಅವರನ್ನು ಆಮಂತ್ರಿಸಿ ಒಪ್ಪಿಸಿಕೊಂಡೆ. ಆ ಪ್ರಕಾರ ಮರುದಿನವೇ ಆಮಂತ್ರಣ ಪತ್ರಿಕೆ ಮಾಡಿಸಿ, ಪತ್ರಿಕಾಗೋಷ್ಠಿ ಇತ್ಯಾದಿ ಮಾಡಿದೆವು. ಆ ಪ್ರಕಾರವೇ ಎಲ್ಲವೂ ಸಾಂಗವಾಯಿತು. ಕವಿಗೋಷ್ಠಿ ಯಶಸ್ವಿಯಾಯಿತು.

ಗುರುನಾಥ ಜೋಶಿಯವರು ಯಾವುದೇ ಹಠ ಮಾಡದೇ, ನನ್ನ ಸಾರಥ್ಯವನ್ನು ಒಪ್ಪಿದ್ದು, ನನ್ನ ಸಲಹೆಯನ್ನು ಸ್ವೀಕರಿಸಿದ್ದು ಸಕಾಲಿಕವಾಗಿತ್ತು. ಇಡೀ ಗೋಷ್ಠಿಯಲ್ಲಿ ಬೇಂದ್ರೆಯವರ ಎಡಬದಿಯಲ್ಲಿ ನಾನು, ಬಲಬದಿಯಲ್ಲಿ ಜೋಶಿಯವರು ಕುಳಿತುಕೊಂಡಿದ್ದೆವು. ನಿರ್ವಹಣೆಯ ಜೊತೆಗೆ, ಕನ್ನಡ ಕವಿಗಳ ಪರಿಚಯ ಇತ್ಯಾದಿ ನಾನು ಮಾಡುವುದು ಮತ್ತು ಹಿಂದೀ ಕವಿಗಳ ಪರಿಚಯ ಜೋಶಿಯವರು ಮಾಡುವುದು ಎಂದು ಕೆಲಸ ಹಂಚಿದ್ದೆ. ಅಂದಿನ ನನ್ನ ಸಂಘಟನೆ ಮತ್ತು ಬೇಂದ್ರೆಯವರನ್ನು ಒಪ್ಪಿಸಿದ ರೀತಿಯನ್ನು ಗುರುನಾಥರು ಮನಸಾರೆ ಮೆಚ್ಚಿದರು. ಆ ಪ್ರಸಂಗದ ನಂತರ ನಾವು ಇನ್ನಷ್ಟು ಹತ್ತಿರ ಬಂದೆವು.

ಇಷ್ಟು ದುಡಿಯುತ್ತಿದ್ದರೂ ಅವರಿಗೆ ಕೊನೆಯ ವರೆಗೂ ಬಡತನದಿಂದ ಬಿಡುಗಡೆ ದೊರೆಯಲಿಲ್ಲ. ಒಂದು ಪ್ರಕಾಶನಕ್ಕೆ ಅವರು ಹಿಂದೀ, ಗುಜರಾತೀ, ಬಂಗಾಲೀ ಭಾಷೆಯ ಅನೇಕ ಪುಸ್ತಕಗಳನ್ನು ಅನುವಾದ ಮಾಡಿಕೊಟ್ಟಿದ್ದಾರೆ. ಅವುಗಳನ್ನು ತಮ್ಮ ತಾತ್ಕಾಲಿಕ ಅಡಚಣೆಗಳನ್ನು ನೀಗಿಸಿಕೊಳ್ಳಲು ಕೊಟ್ಟಿದ್ದರು. ಕೆಲವು ಕೃತಿಗಳನ್ನಂತೂ ಬಹಳ ಗಡಿಬಿಡಿಯಲ್ಲಿ, ಅವಸರದಿಂದ, ಸ್ವಲ್ಪ ನಿರ್ಲಕ್ಷ್ಯದಿಂದಲೇ ಮಾಡಿದ್ದು ಸಹ ಗೊತ್ತಾಗುತ್ತದೆ. ಡಾ. ಹಜಾರೀಪ್ರಸಾದ್ ದ್ವಿವೇದೀ ಅವರು ಸಂಪಾದಿಸಿದ ‘ಕಬೀರ್ ಪದಾವಲೀ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲು ಕೇಂದ್ರ ಸಾಹಿತ್ಯ ಅಕಾದೆಮಿಯು ಬೇಂದ್ರೆಯವರಿಗೆ ಕೆಲಸ ವಹಿಸಿತ್ತು.

ಹಿಂದಿಯನ್ನು, ಅದೂ ಕಬೀರರ ‘ಖಿಚಡೀ ಭಾಷೆ’ಯನ್ನು ಅನುವಾದಿಸಲು ತನಗೆ ಸಾಧ್ಯವಿಲ್ಲ ಎಂದು ಬೇಂದ್ರೆಯವರು ಹೇಳಬೇಕಿತ್ತು. ಹಾಗೆ ಮಾಡಲಿಲ್ಲ. ಅವರು ಕಬೀರದಾಸನ ಪದ್, ಸಾಖೀ ಮುಂತಾದುವನ್ನು, ಬಹುಶಃ ಸುದೀರ್ಘ ಪ್ರಸ್ತಾವನೆ ಸಮೇತ ಇಡೀ ಪುಸ್ತಕವನ್ನು ಗುರುನಾಥ ಜೋಶಿಯವರಿಂದ ಅನುವಾದ ಮಾಡಿಸಿಕೊಂಡಿದ್ದಾರೆ. ‘ಸಹಾಯ ಮಾಡಿದ್ದಾರೆ’ ಎಂದು ಒಂದು ಕಡೆ ಜೋಶಿ ಅವರ ಹೆಸರು ಹಾಕಿದ್ದಾರೆ, ಅಷ್ಟೆ. ಆ ಕೃತಿ ನೇರವಾಗಿ ತಮ್ಮದಲ್ಲವಾದ್ದರಿಂದ ಜೋಶಿಯವರೂ ಇಡೀ ಅನುವಾದವನ್ನು ‘ಮನಬಂದಂತೆ’, ‘ಎತ್ತೆತ್ತಾರ’ ಮಾಡಿ ಕೊಟ್ಟಿದ್ದಾರೆ.

ಜೋಶಿಯವರಿಗೆ ಅದರಿಂದ, ಕನಿಷ್ಠ ಪಕ್ಷ, ಆರ್ಥಿಕ ಅನುಕೂಲವಾದರೂ ಲಭಿಸಿತೋ ಇಲ್ಲವೋ ಗೊತ್ತಿಲ್ಲ; ಆದರೆ ಬಹಳ ಸಲ ಸೌಜನ್ಯಕ್ಕೆ, ಸ್ನೇಹಕ್ಕೆ, ಆರ್ಥಿಕ ಅಡಚಣೆಗಳಿಗೆ ತುತ್ತಾಗಿ, ತಮ್ಮ ಕೆಲವು ಬರೆಹಗಳು ಬೇರೊಬ್ಬರ ಹೆಸರಿನಲ್ಲಿ ಅಚ್ಚಾಗುವುದನ್ನು ನೋಡಿಯೂ ಮೌನವಾಗಿರುವಷ್ಟು ಸಜ್ಜನಿಕೆ ಗಾಂಧೀವಾದಿ ಗುರುನಾಥರನ್ನು ಕಾಡಬಾರದಿತ್ತು.

ಗುರುನಾಥ ಜೋಶಿಯವರು ಪ್ರವಾಸಪ್ರಿಯರಾಗಿದ್ದರು; ಸಾದಾಸೀದಾ ಬದುಕನ್ನು ಆಯ್ಕೆ ಮಾಡಿಕೊಂಡಿದ್ದ ಅವರು ಬಹುಶಃ ಸಂಪೂರ್ಣ ಭಾರತವನ್ನು ಸುತ್ತಿದ್ದರು, ಕಾಶಿ, ದಿಲ್ಲಿ, ಮುಂಬಯಿ, ಕೋಲಕಾತಾ, ಪಟನಾಗಳನ್ನಂತೂ ಬಹಳ ಸಲ ಕಂಡಿದ್ದರು.

ಆರೇಳು ಭಾಷೆಗಳನ್ನು ಅರಿತಿದ್ದ ಅವರು ಹಿಂದಿಯ ಮೂಲಕ ರಾಷ್ಟ್ರದ ಸೇವೆಯನ್ನು, ಕನ್ನಡ ನಾಡು, ನುಡಿಯ ಸೇವೆಯನ್ನು ಮಾಡಿದ್ದಾರೆ. ಅಂಥವರ ಜೀವನ ಹಾಗೂ ಕೊಡುಗೆಯನ್ನು ಕುರಿತು ನಮ್ಮ ಅಧ್ಯಾಪಕರು, ಸಾಹಿತಿಗಳು ಅಥವಾ ಹಿಂದೀ ಸಂಸ್ಥೆಗಳು ಕೃತಿಗಳನ್ನು ಪ್ರಕಟಿಸಬೇಕು; ಮತ್ತು ಜೋಶಿಯವರಿಂದ ರಚಿತವಾದ ಅನೇಕ ಸ್ವತಂತ್ರ, ಪರಿಚಯಾತ್ಮಕ, ಅನುವಾದಿತ ಕೃತಿಗಳನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು, ಇತಿಹಾಸವನ್ನು ರಕ್ಷಿಸಬೇಕು. ಜೋಶಿಯವರು ಹಿಂದಿಯನ್ನು ಕೇಂದ್ರದಲ್ಲಿ ಇಟ್ಟುಕೊಂಡಿದ್ದರೂ, ಅದರ ಮೂಲಕ ಅವರು ಮಾಡಿದ್ದು ಕನ್ನಡದ ಸೇವೆಯನ್ನೇ. ಆದರೆ ವಿಚಿತ್ರವೆಂದರೆ ಹಿಂದಿಯ ಮಂದಿಯೂ ಅವರನ್ನು ದೂರವಿಟ್ಟಿದ್ದಾರೆ, ಕನ್ನಡದವರೂ ಪರಿಗಣಿಸುತ್ತಿಲ್ಲ.

‘ಶರತ್‌ಚಂದ್ರ ಚಟ್ಟೋಪಾಧ್ಯಾಯ’ರನ್ನು ಕುರಿತು ತಮ್ಮ ಗಮನಕ್ಕೆ ಬಂದಿದ್ದ ಎಲ್ಲ ಹಿಂದೀ ಕೃತಿಗಳನ್ನು ಓದಿ ಜೋಶಿಯವರು ಒಂದು ಬೆಲೆಯುಳ್ಳ ಪುಸ್ತಕವನ್ನು (೧೯೭೬) ರಚಿಸಿದ್ದಾರೆ. ೨೨೪ ಪುಟಗಳ ಈ ಪುಸ್ತಕದಲ್ಲಿ, ಶರತ್‌ಚಂದ್ರರನ್ನು ಕುರಿತು ಕನ್ನಡದಲ್ಲಿ ಅದು ವರೆಗೆ ಪ್ರಕಟವಾಗಿದ್ದ ಎಲ್ಲ ಕೃತಿಗಳ ಸಮಗ್ರ ಪಟ್ಟಿಯನ್ನು ಕೊಟ್ಟಿದ್ದಾರೆ, ಅವರ ಓದಿನ ವ್ಯಾಪ್ತಿ ಮತ್ತು ಪುಸ್ತಕ ಸಂಗ್ರಹ ಅಷ್ಟು ಸಮೃದ್ಧವಾಗಿತ್ತು.

ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದವರು ಅದನ್ನು ಪ್ರಕಟಿಸಿದ್ದಾರೆ. ನಾನು ಓದಿದ ಉತ್ಕೃಷ್ಟ ಜೀವನಚರಿತ್ರೆಗಳಲ್ಲಿ ಅದು ತುಂಬ ಮಹತ್ವದ ಕೃತಿ. ಜೋಶಿಯವರ ಹೆಸರಿನಲ್ಲಿ ಇರುವ ಪುಸ್ತಕಗಳು ೬೦ಕ್ಕಿಂತ ಹೆಚ್ಚು. ಅವುಗಳಲ್ಲದೇ ಹಿಂದೀ, ಗುಜರಾತೀ, ಬಂಗಾಲೀ ಭಾಷೆಗಳಲ್ಲಿ ಬರೆದು ಪ್ರಕಟಿಸಿದ್ದ ಸ್ವತಂತ್ರ ಬಿಡಿ ಲೇಖನಗಳು, ಸಂಪಾದಿಸಿದ ಪುಸ್ತಕಗಳ ಪಟ್ಟಿ ಇನ್ನೂ ದೊಡ್ಡದಿದೆ.

೨೦೦೮ ಮೇ ತಿಂಗಳಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುನಾಥ ಜೋಶಿಯವರ ಶತಮಾನೋತ್ಸವ ಆಚರಿಸಿದ ಕಾರ್ಯಕ್ರಮದಲ್ಲಿ ನಾನು ಮುಖ್ಯ ಅತಿಥಿಯಾಗಿದ್ದೆ. ಜೋಶಿಯವರ ವ್ಯಕ್ತಿತ್ವದ ಬಗ್ಗೆ ನನಗೆ ತಿಳಿದ ಎಲ್ಲ ಮಗ್ಗುಲಗಳನ್ನು ಕುರಿತು ಮಾತಾಡಿದ್ದೆ. ಅಂದು ಅವರ ಮಕ್ಕಳು, ಕುಟುಂಬದವರು ಬಂದಿದ್ದರು; ಆದರೆ ಅವರ ಬರವಣಿಗೆಯಿಂದ ಹೆಸರು, ಹಣ ಮಾಡಿಕೊಂಡಿದ್ದವರು, ‘ಗುರಣ್ಣ, ನಮ್ಮ ಗುರಣ್ಣ, ನಮ್ಮ ಜೋಶಿ’ ಎಂದು ಬ್ಯಾಪರಿಸುತ್ತ ಅವರಿಂದ ಸಾಕಷ್ಟು ಕೆಲಸ ಮಾಡಿಸಿಕೊಂಡಿದ್ದವರು ಕಾಣೆಯಾಗಿದ್ದರು. ಬಹುಶಃ ಇದು ಪ್ರಾಪಂಚಿಕ, ಸಾರ್ವತ್ರಿಕ ವಿಧಿಯೇ ಆಗಿದ್ದಿರಬಹುದು.

ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಜೋಶಿಯವರಿಗೆ ಅನೇಕ ದೊಡ್ಡವರ ಪರಿಚಯವಿತ್ತು, ಆದರೂ ಅವರು ತಮಗಾಗಿ, ತಮ್ಮ ಮಕ್ಕಳಿಗಾಗಿ ಯಾರೆದುರೂ ಬಾಯಿ ಬಿಟ್ಟವರಲ್ಲ. ಮುರಲಿಗೆ ಒಂದು ಟೈಪ್‌ರೈಟರ್ ಕೊಡಿಸಿದ್ದರು; ಹೊಟ್ಟೆ ಹೊರೆಯುವುದಕ್ಕಾಗಿ ಅವನು ಕನ್ನಡ, ಹಿಂದೀ, ಇಂಗ್ಲಿಷ್ ಟೈಪಿಂಗ್ ಮಾಡುತ್ತ ದುಡಿಯತೊಡಗಿದ್ದುದನ್ನು ನಾನು ನೋಡಿದ್ದೇನೆ. ನಂತರ ಮಕ್ಕಳು ಬಹಳ ಕಷ್ಟಪಟ್ಟು ಕೆಲಸ ಹುಡುಕಿಕೊಂಡರು.

ಮುರಲಿ ಧಾರವಾಡ ನಗರಸಭೆಯಲ್ಲಿ ಕೆಲಸಕ್ಕೆ ಸೇರಿದ ನಂತರ ಸ್ವಲ್ಪ ನೆಮ್ಮದಿಯ ಬದುಕನ್ನು ಅವರು ಕಂಡರು. ಮಕ್ಕಳು ಪ್ರಯತ್ನಪಟ್ಟು ಹುಬ್ಬಳ್ಳಿಯಲ್ಲಿ ಬಸವೇಶ್ವರನಗರದ ಟೋಪಲಕಟ್ಟಿಯಲ್ಲಿ ಒಂದು ಪುಟ್ಟ ಜಾಗವನ್ನು ಕೊಂಡು ಅಲ್ಲಿ ಮನೆ ಕಟ್ಟಿಸಿದರು. ನಾನು ೨-೩ ಸಲ ಆ ಮನೆಗೂ ಹೋಗಿ, ಗುರುನಾಥ ಜೋಶಿಯವರನ್ನು ಕಂಡು ಬಂದಿದ್ದೇನೆ. ಕರೇ ಟೊಪ್ಪಿಗೆ, ಕೋಟು, ಕಪ್ಪು ಬಣ್ಣದ ದಪ್ಪ ಚೌಕಟ್ಟಿನ ಚಾಳೀಸಿನ ಈ ಗಾಂಧೀವಾದಿಗೆ ಧಾರವಾಡದಲ್ಲಿ ನೆಲೆ, ನೆಲ ಸಿಗಲಿಲ್ಲ, ಹೊರಗಿನವರಿಗೆ ಅದು ಗೊತ್ತಾಗಲಿಲ್ಲ.

‍ಲೇಖಕರು Admin

December 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shrivatsa Desai

    ಮಹಾ ಪಂಡಿತರೂ ಮಹಾನ್ ವ್ಯಕ್ತಿತ್ವದವರೂ ಆಗಿದ್ದ ಗುರುನಾಥ ಜೋಶಿಯವರ ಬಗ್ಗೆ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಮನೋಜ್ಞವಾಗಿ ಬರೆದು ಉಕ ಮಾಡಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವ ಖಾದಿಧಾರಿ ಗುರುನಾಥ ಜೋಶಿಯವರನ್ನು ಒಂದೆರಡು ಬಾರಿ ಚಿಕ್ಕಂದಿನಲ್ಲಿ ಧಾರವಾಡದಲ್ಲಿ ನೋಡಿದ ನೆನಪು. ಅಲ್ಲಿ ಬೆಳೆದ ನನಗೆ. ಗೊತ್ತಿದ್ದಂತೆ. ಇದನ್ನು ಬರೆದಿರುವ ಲೇಖಕರ ಹಿಂದಿಯ ಮೇಲಿನ ಹಿಡಿತ, ಅವರ ಮಾತಿಯೆ ಮೋಡಿ ಸಹ legendary. ಅವರ ವಿದ್ಯಾರ್ಥಿ ಸಹ ಆಗಿದ್ದೆ ಒಂದೆರಡು ಸಾರಿ. ಗುರುನಾಥ ಜೋಶಿಯವರ ಬಗ್ಗೆ ಅಧಿಕೃತವಾಗಿ ಮಾತಾಡ ಬಲ್ಲ ಕೆಲವೇ ಜನರಲ್ಲಿ LIC ಯ ನಿಗಮಗೀತೆ ಬರೆದ ಪಟ್ಟಣಶೆಟ್ಟಿಯವರು ಒಬ್ಬರು ಅಥವಾ ಒಬ್ಬರೇ ಕಾಣುತ್ತದೆ. ಇದನ್ನು ಪ್ರಕಟಿಸಿ ‘ಅವಧಿ’ ಉಪಕಾರ ಮಾಡಿದೆ. ಡಾ ಶ್ರೀವತ್ಸ ದೇಸಾಯಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: