ಗೋಪಾಲ್ ತ್ರಾಸಿ ಅವರ ‘ಒಟ್ರಾಸಿ ಪ್ರಸಂಗಗಳು’
ಈ ಕೃತಿಯ ಕುರಿತ ಸುಧಾಕರ ಪಿ. ಆಲೂರು ಅವರ ಬರಹ ಇಲ್ಲಿದೆ.
-ಸುಧಾಕರ ಪಿ. ಆಲೂರು
ಪುಸ್ತಕದ ಧಾಟಿ: ಸಾಮಾಜಿಕ ವಾಸ್ತವತೆಗೆ ಹಾಸ್ಯದ ರಂಗು ನೀಡಿದ ನಗುವಿನುಲ್ಲಾಸದ ಬರಹಗಳು. ಇದರಲ್ಲಿ ಬರವಣಿಗೆಯ ಬಗೆ ಹಾಗೂ ಕುಂದಾಪುರ ಕನ್ನಡದ ಸೊಗಡನ್ನು ಬಳಸಲಾಗಿದೆ.
ಮುಂಬಯಿಯ ಕಲೆ ಹಾಗೂ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿರುವ ಸಾಹಿತಿ, ರಂಗಕರ್ಮಿ. ಗೋಪಾಲ್ ತ್ರಾಸಿ. ಇವರ “ಒಟ್ರಾಸಿ ಪ್ರಸಂಗ” ಕೃತಿ ಓದಲು ಕುಳಿತೆ… ಈ ಕೃತಿ ಒಂದು ಹಾಸ್ಯರಸಯುಕ್ತ ಲೇಖನಗಳಿಂದ ಕೂಡಿರುವುದರಿಂದ ಓದುಗರ ನಗುವಿನುಲ್ಲಾಸ ಉತ್ತೇಜಿಸುತ್ತದೆ, ಇಲ್ಲಿ ಸಾಮಾಜಿಕ ವಾಸ್ತವತೆಯ ನೈಜ ಚಿತ್ರಣಕ್ಕೆ ಹಾಸ್ಯದ ರಂಗಿನಲೇಪನವಿತ್ತು ಸಾಹಿತ್ಯ ರಂಗಕ್ಕಿಳಿಸಿದ ಪುಸ್ತಕ ಇದಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಇಲ್ಲಿ ಲೇಖಕರ ಬರಹಗಳು ನಮಗೆ ಮುಖಾ ಮುಖಿ ಸಂಭಾಷಣೆಯ ಅನುಭವ ಮೂಡಿಸುತ್ತದೆ, ಇಲ್ಲಿನ ಹೆಚ್ಚಿನ ಲೇಖನಗಳು ಮರು ಓದಿಗೆ ಪ್ರೇರೇಪಿಸುತ್ತವೆ. ಬದುಕು, ಬವಣೆ, ಸ್ವ-ಅನುಭವ ಇವೆಲ್ಲದರ ಮಿಶ್ರಣದೊಂದಿಗೆ ಹಾಸ್ಯಭರಿತ ಬರಹದ ಓದು ನನ್ನೊಳು ಆಪ್ತತೆ ಮೂಡಿಸಿತು. ಕಾರಣ ಇವರು ಬಳಸಿದ ವಸ್ತು ವಿಷಯ, ಭಾಷಾ ಶೈಲಿ, ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲೂ ನಡೆದಿರುವ, ನೋಡಿರುವ, ಆಡಿರುವ ವಿಷಯಗಳೇ ಹೆಚ್ಚು, ಕರಾವಳಿಯ ಮಣ್ಣಿನ ಸೊಗಡು ಮತ್ತು ಭಾಷಾ ಶೈಲಿ, ಕುಂದಾಪುರ ಕನ್ನಡದ ಕಂಪು ಮತ್ತು ಕರಾವಳಿಯ ಭಾಷಾ ಶೈಲಿ ಈ ಕೃತಿಗೆ ವಿಶೇಷ ಮೆರುಗನ್ನು ನೀಡಿದೆ. “ಒಳ್ಳೆ ರೇಟ್ ಕಾಂತ್ ಕೂತ್ರೆ ಒಳ್ಗೆ ಒಲಿ ಉರಿಕ್ ಅಲ್ದೆ…” ಎನ್ನುವ ನಾಗಜ್ಜಿಯ ಮಾತುಗಳಲ್ಲಿನ ಮುಗ್ಧತೆ ಮತ್ತು ವಾಸ್ತವಿಕತೆಯನ್ನು ನೀವು ಹಿಡಿದಿಟ್ಟಿರುವ ರೀತಿ ಓದುಗರಿಗೂ ಆ ಮಣ್ಣಿನ ಕಂಪು ತಲುಪುವಂತೆ ಮಾಡುತ್ತದೆ. ಒಟ್ಟಿನಲ್ಲಿ ಒಟ್ರಾಸಿ ಪ್ರಸಂಗದಲ್ಲಿ ಒಟ್ಟು ರಾಶಿ ಅನುಭವಗಳನ್ನು ಲೇಖಕರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಬನ್ನಿ… ಏನಿದೆ ನೋಡೋಣ…
“ಮೇನಕೆಯಲ್ಲಾ”…! ಉದರ ಪೋಷಣೆಗೋಸ್ಕರ…! ರಂಭೆ, ಊರ್ವಶಿ, ಮೇನಕೆಯಂತಹ ರೂಪು ಲಾವಣ್ಯದಿ ಪುಂಡು-ಪುರುಷರು ಬೆಡಗು ವಯ್ಯಾರದಿ ಹೆಣ್ಣಿನ ರೂಪತಾಳಿ ಮೋಸದಿಂದ ಪುಂಡ ವಾಹನ ಚಾಲಕರನ್ನು ದೋಚುತ್ತಿದ್ದ ಸನ್ನಿವೇಶ ಬಹಳ ಅದ್ಬುತವಾಗಿ ಬಿತ್ತರಿಸಿದ್ದಾರೆ… ಇಂತಹ ಸನ್ನಿವೇಶ ನಾನು ವಿರಾರ್ ಕಡೆ ಗೋಡ್ಬಂಧರ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ನೋಡಿದ ನೆನಪು ಮರುಕಳಿಸಿತು. ಮುಂಬಯಿಯ ಬಹುಪಾಲು ಜನರ ಪುರುಸೊತ್ತಿಲ್ಲದ “ಬಿಜಿ”ಯ “ಗಜಿಬಿಜಿ”ಯಲ್ಲಿ ಮುಂಬಯಿಯ ಗಿಜಿಗಿಜಿ ಬದುಕಿನಲ್ಲೂ ಕಳೆದುಹೋಗದ ಮಾನವೀಯತೆ ಹಾಗೂ ಅಲ್ಲಿನ ಜನರ ವಿಚಿತ್ರ ‘ರೆಡಿಮೇಡ್’ ಸಂಭಾಷಣೆಗಳ ಚಿತ್ರಣ ಲೇಖಕರ ಸೂಕ್ಷ್ಮ ಅವಲೋಕನಕ್ಕೆ ಸಾಕ್ಷಿಯಾಗಿವೆ. ವಿಚಿತ್ರ ಮುಂಬಯಿಯ ಜಿಡುಕು ಜೀವನದಲ್ಲೂ ಸಂಘಜೀವಿಯಾಗಿ ‘ಹೀಗೊಂದು ಕೊರತೆ’ಯಲ್ಲಿ ಜೀವಿಸುತ್ತಿರುವ ಮುಂಬಯಿಗರು. ಹಾಗೆ ಸಂಘ ಸಭೆಗಳ ವಿಶೇಷತೆ, ಸಭಿಕರ ಭಾವನೆಗಳ ಶಬ್ಧ ಮುಗಿಸಿ, ಕಾಫಿ ಯಮನ್ ದಿಂದ ನಮ್ಮನೆಗೆ ತಂದ, ಸಂತ ಬಾಬ ಬುಡನ್ ಕತೆ ಹೇಳುತ್ತ ‘ಲೈಟ್ ಕಾಫಿ’ ಕುಡಿಯಲು ಕರೆಕೊಟ್ಟು ಸ್ನೇಹ ಸ್ವಾದದ ನೆಪದಲ್ಲಿ ಮಾತಿಲ್ಲದ ಚರ್ಚೆ ನೆಡಿಸಿ, ನೆಡೆದ ಎಡಬಿಡಂಗಿ ಕಾಫಿಯು ಕುಡಿದದ್ದು, ನಂತರ ‘ಅಭಾಕಾಸಂ’ ಸಭಾ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಂಪನ್ನಗೊಳಿಸಿದ ಬರಹ ನನ್ನ ಓದಿಗೆ ಇನ್ನಷ್ಟು ಕುತೂಹಲ ಮೂಡಿಸಿತು. ಮುಂದೆ…. ‘ಇದೊಂದು ಕೆಟ್ಟ ಚಟಾರಿ…’ ಮನೆಗೆ ಬಂದು ಮಂಡೆ ಬೆಚ್ಚದಲ್ಲಿ ಬರೆಯಲು ಕುಳಿತು, ಬರಹದ ಕೋಡಂಗಿತನಕ್ಕೆ, ಕೋಲ್ಗೇಟ್ ಸ್ಮೈಲ್ ಕೊಡುತ್ತಾ ಕೊಟ್ಟ ಮಾಹಿತಿಯ ಜೊತೆ, ಡಿಮ್ಯಾಂಡು, ಸಮಕಾಲೀನ ಸತ್ಯಗಳ ವಿಶ್ಲೇಷಣೆ ಬರಹಗಾರನ ತಳಮಳ: ಗಾಡ್ ಫಾದರ್ ಇಲ್ಲದ ಲೇಖಕನ ನೋವು ಮತ್ತು ಸಂಪಾದಕನ ಕತ್ತರಿ ಪ್ರಯೋಗದ ಕುರಿತಾದ ಲೇಖನ ಬರಹ ಮಾರ್ಮಿಕವಾಗಿದೆ. ‘ಅರ್ಧ ತೋಳಿನ ಚೌಕುಳಿ ಅಂಗಿ’ ಹಾಕಿ ಭೂ ಕಂಪನದ ಕುರಿತು ಬಿತ್ತರಿಸಿದ ಮಾಹಿತಿ ಸೈ, ಭೂಕಂಪ ಬಂದಾಗ ಓಡಿ ಬಯಲು ಪ್ರದೇಶ ಸೇರಲು ಅತ್ತ ಪುಣೆ ಇತ್ತ ರಾಜಸ್ಥಾನಕ್ಕೆ ಪಲಾಯನ ಹೋಗಬೇಕಾಯಿತು. ಮತ್ತೆ ದಾಸ ಸಂತ ಮಹಾಜನರ ಮಾತಿನಂತೆ ಆಗಾಗ ಭೂ ಕಂಪನ ಆಗಿ ಕೆಟ್ಟದ್ದು ಕೆಡಗಬೇಕು, ಸತ್ಕರ್ಮ ಧರ್ಮ ಸ್ಥಿರವಾಗಿರಬೇಕು, ಸಹಾಯದ ನೆಪದಲ್ಲಿ ಗಿಟ್ಟಿಸಿದ ವಸ್ತ್ರ ವಸ್ತುಗಳ, ಪುನರ್ ಮಾರಾಟದಲ್ಲಿ ತಾನೇ ಫ್ಯಾಷನ್ ಸ್ಟ್ರೀಟ್ನಲ್ಲಿ ಮರಳಿ ಖರೀದಿಸಿದ ಚೌಕುಳಿ ಅಂಗಿ ಪುರಾಣ ಭಲೇ ಮಜವಾಗಿತ್ತು.
‘ಬಜೆಟ್ ಪುರಾಣವೂ, ನಾಗಜ್ಜಿಯ ಮಾವಿನ ಮಿಡಿಯೋ’ ಬಜೆಟ್ ಪುರಾಣದಲ್ಲಿ… ಸಾಮಾನ್ಯವಾಗಿ ಸರಕಾರದ ಅಂದಾಜು ಖರ್ಚು ವೆಚ್ಚಗಳ ಒಂದು ದಸ್ತಾವೇಜು ಕೇವಲ ದೊಡ್ಡ ಮಟ್ಟದ ಬಂಡವಾಳದ ವ್ಯಾಪಾರ ವ್ಯವಹಾರದವರಿಗೆ ಬಜೆಟ್ ಒಂದು ಕುತೂಹಲದ ನಿರೀಕ್ಷೆ, ಸಾಮಾನ್ಯರಿಗೆ ಅಷ್ಟಕಷ್ಟೇ… ಜೋರ್ಜ್ ಫೆರ್ನಾಡಿಸ್ ರವರ ಬೆಂಬಲದೊಂದಿಗೆ ದಕ್ಷ ಅಧಿಕಾರಿ ಶ್ರೀಧರರವರ ನೇತೃತ್ವದ ಶ್ರಮದಿಂದ ಸ್ಥಾಪಿನೆಗೊಂಡ ಕೊಂಕಣ ರೈಲು ಇಲ್ಲಿ ಬಜೆಟ್ ಇದರ ಪ್ರಾಮುಖ್ಯತೆ ಹಾಗೆ ಇಂದಿನ ಸರ್ವಾಂಗೀಣ ಪ್ರಗತಿಗೆ ಬಜೆಟ್ನ ಅಗತ್ಯ, ಹಾಗೆ ಬಜೆಟ್ ಈಗ ಕಾಮನ್ ವರ್ಡ್ ಆಗಿರುವ ವಿಶ್ಲೇಷಣೆ ಬಣ್ಣಿಸುತ್ತ ಬಜೆಟ್ ಈಗ ಮರ್ಯಾದೆಯ ಮೌಲ್ಯ ಮಾಪನವಾಗಿ ಮಾರ್ಪಟ್ಟಿರುವುದು, ಐಡಿ ಅಲಿ ಸಾಹೇಬರ ಮತ್ತು ಊರಿನ ಕರಿಯಜ್ಜ, ಕೊಗ್ಗಣ್ಣನ ಜೊತೆ ಕೊಂಕಣ ರೈಲಿನ ಕುರಿತಾದ ಹಳಿತಪ್ಪಿದ ಸಂದರ್ಶನ, ಕೊನೆಯಲ್ಲಿ ಎಲೆಗಿಂತ ಅಧಿಕ ತುಂಬಿರುವ ಮಾವಿನ ಕಾಯಿಯ ಮರ ಕಾಯುತ್ತಿದ್ದ ನಾಗಜ್ಜಿಯ ಸಂದರ್ಶನದಿ ಮಾವಿನ ಮಿಡಿ ಉಪ್ಪಿನಕಾಯಿಗೆ ಬೆಲೆ ಬಜೆಟ್ ಬಗ್ಗೆ ಹೇಳಿದಾಗ ನಾಗಜ್ಜಿ “ಒಳ್ಳೆ ರೇಟ್ ಕಾಂತ್ ಕೂತ್ರೆ ಒಳ್ಗೆ ಒಲಿ ಉರಿಕ್ ಅಲ್ದೆ”, ಹೆಣ ಕಾದಂಗ್ ಈ ಮರನ್ನ ಕಾವುದ ಯಾರಿಗ್ ಬೇಕ್” ಒಂದೊಳ್ಳೆ ಸುದೀರ್ಘ ಅನುಭವದ ಮಾತಿನ ಸಂದರ್ಶನ ಅದ್ಭುತವಾಗಿತ್ತು.
ಗುಂಡಿ ಎಂದರೆ… ಜಲಪಾತದ ಕಲ್ಪನೆಯೇ ಇಲ್ಲದೆ… ಏಕಾಏಕಿ ಜೋಗ ಜಲಪಾತ ಗುಂಡಿ ಕಣ್ಮುಂದೆ ನೋಡಿ ಎದೆ ದಶಕ್ಕೆಂದ ಅನುಭವ, ಹಾಗೆ ಜೋಗ, ಝರಿ, ಹಳ್ಳ ಶರಾವತಿಯಾಗಿ ಹರಿಯುತ್ತಾ ಹೊನ್ನಾವರದಲ್ಲಿ ಸಾಗರದ ಜೊತೆ ಮಿಲನದೊಂದಿಗೆ,,, ಜೋಗದ ವೀಕ್ಷಣೆ ರೋಚಕ ಅನುಭೂತಿ ಮನಮುಟ್ಟುವಂತೆ ಲೇಖಕರು ಚಿತ್ರಿಸಿದ್ದಾರೆ. “ಗಾದೆಗಳೊ… ತಗಾದೆಗಳೋ”… ಕಿರಿದಲ್ಲೇ ಹಿರಿದನ್ನ ಸಮರ್ಥಿಸಿ ಹೇಳುವ ಪದಪುಂಜಗಳು ಸರ್ವವ್ಯಾಪಿಯಾಗಿ ಶೋಭಿಸುತ್ತಿರುವುದು. ಮಾತುಗಳು ಅಭಿವ್ಯಕ್ತಿಪಡಿಸುವಲ್ಲಿ ಅದರ ತಾತ್ವಿಕ ಭಾವಗಳು ಸ್ಪಷ್ಟವಾಗುತ್ತವೆ. ಕುಂದಾಪುರದ ಮಣ್ಣಿನ ಸೊಗಡನ್ನು ಹೊಂದಿದ ಗಾದೆಗಳ ಮನನ ಮಾಡಿಸಿದರು, ಗಾದೆಯ ಮಾತುಗಳೊಂದಿಗೆ ಭಾವೈಕ್ಯತೆ ಹೊಂದಿ ಬಾಳಬೇಕು ಎನ್ನುವ ಸಂದೇಶ ಉತ್ತಮವೆನಿಸಿತು. ‘ಒಂದು ಬ್ಯಾಟು ಒಂದು ಚೆಂಡು ಆರು ಗೂಟಗಳ ಆಟ’ ವಿಶ್ವ ಮಾನ್ಯತೆ ಪಡೆದ ಕ್ರಿಕೆಟ್ ಆಟವನ್ನು ಅವರದೇ ಕ್ರಿಕೆಟ್ ವೀಕ್ಷಕ ಹವ್ಯಾಸದನುಭವದಲ್ಲಿ ಆಟದ ಹುಟ್ಟು, ಬಾಲ್ಯ, ಯೌವ್ವನದಬ್ಬರದಲ್ಲಿ ಮೆರೆಯುತ್ತಿರುವ ಕ್ರಿಕೆಟ್ ಆಟವನ್ನು ಸಕಾರಾತ್ಮಕ ನಕಾರಾತ್ಮಕ ಬೆಳವಣಿಗೆಯ ಮೆರುಗನ್ನು ವಿವರಿಸಿದ ಪರಿ ಅತೀವ ಕುತೂಹಲ ಮೂಡಿಸುತ್ತದೆ.
“ಮಂಗ ಆಗುವುದಾ? ಮಾಡುವುದಾ” ವಾನರನಿಂದ ಮಾನವ, ಅಂದ ಮೇಲೆ ಮಾಡುವ ಆಗುವ ಪ್ರಕ್ರಿಯೆ ಅಲ್ಲ ಹೊರತಾಗಿ ಮೋಸಗೊಂಡ/ಮಾಡಿದ ಕ್ಷಣದ ಶಬ್ಧ ಇದಾಗಿದೆ, ಸರ್ವೇ ಸಾಮಾನ್ಯ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವ ಶಬ್ಧವು ಇದಾಗಿದೆ. ಹಾಗೆ ಮಂಗ ಆಗುವುದು/ಮಾಡುವುದು ಇದೊಂದು ವಿಶೇಷ ಕಲೆ ಎನ್ನುತ್ತ, ತಮ್ಮ ಮಿತ್ರನ ಬಟ್ಟೆ ಖರೀದಿಸಿ ಮಂಗನಾದ ಬಗೆ ಬಲು ಸೊಗಸಾಗಿತ್ತು, ಮುಂದೆ ನನಗಿಂತ ಶಾಣೆ ಇನ್ಯಾರಿಲ್ಲ ಅನ್ನುತ್ತಿದ್ದ ಗೋಟಿಯ ಸಾವಿತ್ರಿಯಿಂದ ಮಂಗನಾದ ಸಂಗತಿ ಬಲು ಮಜವಾಗಿತ್ತು. “ಸುಮ ಸಂದರ್ಶನ” ಕವಿಯತ್ರಿ ಸುಮನ ಸಂದರ್ಶನಕ್ಕೆಂದು ಹೋದಾಗ ಎದುರಾದ ಪರಿಸ್ಥಿತಿ ಹಾಗೆ ವಿಚಿತ್ರಗೊಂಡ ಮನಸ್ಥಿತಿಯ ಮಾತುಕತೆ ಅಲ್ಲಿಂದ ಕಾಲ್ಕಿತ್ತ ಲೇಖಕರ ಕಹಿ ಅನುಭವದ ಮುಜುಗರ ಓದುತ್ತಾ ನನ್ನ ಮುಖದಿ ಮಂದಹಾಸ ಮೂಡಿಸಿತು. ನಂತರ ಒಂದು ‘ಶಿಬಿರದ ಸುತ್ತಮುತ್ತ’ ಕ್ರಮಿಸುತ್ತಾ… ಮಾಧ್ಯಮಗಳ ಸ್ಥಿತ್ಯಂತರ: ಪತ್ರಿಕೋದ್ಯಮ ಉದ್ಯಮವಾಗಿ ಬದಲಾದಾಗ ಮುದ್ರಣ ಮಾಧ್ಯಮ ಎದುರಿಸಿದ ವಿಕಲಾಂಗ ಸ್ಥಿತಿ ಹಾಗೂ 1998ರ ರವಿ ರಾ. ಅಂಚನ್ ಅವರ ಪತ್ರಿಕೋದ್ಯಮ ಶಿಬಿರದ ನೆನಪುಗಳು ಕೃತಿಗೆ ಐತಿಹಾಸಿಕ ಮತ್ತು ಸಾಮಾಜಿಕ ಮೌಲ್ಯವನ್ನು ಚೆನ್ನಾಗಿ ಗುರುತಿಸಿ ವಿವರಿಸಿದ್ದಾರೆ.
ಒಟ್ಟಾರೆ ಅಂದಿನ ದಿನಗಳಲ್ಲಿ ವ್ಯತ್ತ ಪತ್ರಿಕೆಗಳ ಮಹತ್ವ, ಪ್ರಭಾವ, ಹಾಗೆ ಸಿಕ್ಕಿದ ಅಲ್ಪ ಸಮಯದಲ್ಲಿ ದಿನಪತ್ರಿಕೆಯನ್ನು ಓದುವವರನ್ನು ಕಂಡು ಸಂಭ್ರಮಿಸಿ, ಆದರ ಸನ್ಮಾನದಿ ಮನದಲ್ಲಿ ಮೂಡಿದ ಗೌರವ, ಕಾಲ ಕ್ರಮಿಸುತ್ತಾ ಟಿವಿ ನ್ಯೂಸ್, ಸೋಶಿಯಲ್ ಮೀಡಿಯಾ, ಹೈಟೆಕ್ ಮೊಬೈಲ್ ಗಳಿಂದ ಮುದ್ರಣ ಮಾಧ್ಯಮವು ಕ್ಷೀಣಿಸಿದ ನೋವು ತೋರ್ಪಡಿಸುತ್ತಾ, ಪತ್ರಿಕೆಯ ಮುನ್ನಡೆಗೆ ಮಂದಗತಿ ಎದುರಾದ ದುಸ್ಥಿತಿಗೆ ಬೇಸರವನ್ನು ಅಭಿವ್ಯಕ್ತಿಸಿ, ಪತ್ರಿಕೋದ್ಯಮ ಉದ್ಯಮವಾಗಿ ಪರಿವರ್ತನೆಗೊಂಡಾಗ ಮುದ್ರಣ ಮಾಧ್ಯಮಕ್ಕೆ ಸೂಕ್ತ ಚೌಕಟ್ಟಿನ ವಿಷಯ ಪ್ರಸಾರವಾಗದೆ ಪತ್ರಿಕೆಗಳು ನಡೆಯಲಾಗದೆ, ನಡೆಸಲಾಗದೆ ವಿಕಲಾಂಗ ಸ್ಥಿತಿಗೆ ತಲುಪಿತು ಎನ್ನುವುದು ಲೇಖಕರ ಅಭಿಪ್ರಾಯ ಹಾಗೆ ಸತ್ಯವೂ ಹೌದು. ಅಂತಿದ್ದ ಕಾಲಘಟ್ಟದಲ್ಲಿ 1998 ರಲ್ಲಿ ಸಾಹಿತಿ, ಸಂಘಟಕ, ಚಿಂತಕ ಮಾನ್ಯ ರವಿ ರಾ. ಅಂಚನ್ ರವರು ಆಯೋಜಿಸಿದ ಪ್ರಥಮ ಪತ್ರಿಕೋದ್ಯಮ ತರಬೇತಿ ಶಿಬಿರದಲ್ಲಿ ಉಪಸ್ಥಿತರಿದ್ದು ವಿಷಯ, ವಿಶ್ಲೇಷಣೆಯ ಜೊತೆಗೆ ದೊರೆತ ಮಾಹಿತಿಗಳನ್ನು ಸೂಕ್ತ ರೀತಿಯಲ್ಲಿ ಮಂಡಿಸಿದ್ದಾ ಕುರಿತು ಸಮರ್ಪಕ ಮಾಹಿತಿಯೊಂದಿಗೆ ಅಂದು ನಡೆದ ವಿಷಯಗಳನ್ನು ಓದುಗರಿಗೆ ಒಂದು ಮಾಹಿತಿಯೋಪಾದಿಯಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಈ ಕೃತಿಯ ಕೊನೆಯಲ್ಲಿ “ಅಧಿಕ ಪ್ರಸಂಗ” ಎಂಬ ಕಿರು ಪ್ರಹಸನ ಅತ್ಯದ್ಭುತವಾಗಿ ಮೂಡಿಬಂದಿದೆ.






0 Comments