ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಳುಮಾತುಗಳನು ಹಿಂದೆ ಬಿಟ್ಟು…

ವಸಂತ ಬನ್ನಾಡಿ


ಗಾಳಿ ಕೊರಳನು ತಬ್ಬಿದೆ
ಕಡಲಿನ ಮೊರೆತ ಸನಿಹದಲೇ ಇದೆ
ಮಳೆಕಳೆದು ಬಿಸಿಲು ರಾಚುತ್ತಿದೆ
ಕಳಚಿ ಹಿಂದೆ ಬಿದ್ದಿವೆ
ಮಹಾನ್ ನಗರಗಳು
ಹೊಳೆಹೊಳೆವ
ಕೃತಕ ಬೆಳಕುಗಳ ಗೊಂಚಲಗಳು


ನಾನು ಹಿಗ್ಗಿದ ನನ್ನ ಚರಿತ್ರೆಯ
ಕುಬ್ಜತನವ ಕಂಡರಸುತ್ತಿದ್ದೇನೆ
ನನ್ನ ಕಣ್ಣು ಕಂಡಿದ್ದಷ್ಟೇ
ಜಗತ್ತು ಎಂದು ಕೊಂಡಿದ್ದವನು
ನನ್ನ ಸುಖವನಷ್ಟೇ
ಹಾಸಿ ಹೊದ್ದವನು
ನನ್ನ ಕುಣಿತ ಮಣಿತಗಳಲ್ಲಿಯಷ್ಟೇ
ಪರಮ ಲಾಸ್ಯ ಕಂಡವನು


ಕಳಚಿಡಬೇಕೀಗ
ವಸ್ತ್ರವಿಲಾಸಗಳನು
ಅಂಟಿದ ಬಣ್ಣ ಬಡಿವಾರಗಳನು
ಕಿಕ್ಕಿರಿದು ಹಿಂಬಾಲಿಸಿವೆ
ಒಣಮಾತುಗಳು
ನೆಮ್ಮದಿಯ ನೂರು ಸೂತ್ರಗಳು
ಅಡಗದು ದನಿಪೆಟ್ಟಿಗೆ ಕೇಳುವ
ಕಿವಿಗಳಿರುವ ತನಕವು


ನಡೆದಷ್ಟೂ ಹಾದಿ ಇದೆ
ದುಗುಡದ ಕೋಟೆ ಇದೆ
ನನ್ನ ಕಣ್ಣ ಮುಂದಿದೆ,

ಎಳೆ ಬೆಳಕು ಚಿಮ್ಮುತ್ತಿರುವ
ಕಪ್ಪು ಮಣ್ಣಿನ ಮೇಲೆ
ಜೋಲಿ ತಪ್ಪದೆ ನಡೆಯುತ್ತಿರುವ
ಮಗುವಿನ ಹಾಲು ಹೆಜ್ಜೆಗಳು

‍ಲೇಖಕರು Admin

17 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading