ಎಂ ಡಿ ವಕ್ಕುಂದ
ಮಮತೆಯ ಮಡಿಲು
ಅಂತಃಕರಣದ ನದಿ
ಪ್ರೀತಿಸುವುದು ಮಾತ್ರ
ಗೊತ್ತಿರುವ
ದ್ವೇಷದ ಹಾದಿಯಗುಂಟ
ಹರಿದ ನೆತ್ತರಿನ ಕಲೆಯೊರಿಸಲು
ಜೀವ ತೇಯುತ್ತಿರುವ
ಹಿಡಿಗಾತ್ರದ ದೇಹ
ಪ್ರೇಮದ ಸ್ವರ ಯಾವ ಭಾಷೆಯಲ್ಲಿ
ಹೊರಟರೂ ಕನ್ನಡದ
ವಿವೇಕಕ್ಕೆ ತಂದು ಒಗ್ಗಿಸುವ
ತಪಸ್ವಿ
ದ್ವೇಷದ ಪರಿಣಾಮ
ಯಾವ ಮೂಲೆಯಲ್ಲಿ
ವಿಜೃಂಭಿಸಿದರೂ
ಕಣ್ಣ ಮುಂದೆ ಹಿಡಿದು
ಮನದ ಕೊನೆಯ ಮೊನೆಗೆ
ತಿವಿದು ದಾರಿ ತೋರುವ
ಗುರು
ದೇಶ ಸುತ್ತಿದಿರಿ ಪರಭಾಷಾ ಕೋಶಗಳ ಮೂಲಕ
ದೇಶದ ಸತ್ವವ ಹೀರಿದಿರಿ
ನಮಗೆ ಉಣಬಡಿಸಿದಿರಿ
ಕನ್ನಡಿಗರ ಅಂತರಂಗವ
ಸ್ವಚ್ಚವಾಗಿಡುವ ಹರಕೆ ಹೊತ್ತಿರಿ
ಹರಕೆ ತೀರಿಸಲು
ಅಸರಂತ ದುಡಿದಿರಿ

ಮನುಷ್ಯತ್ವದ ಅನುವಾದಕ
ನೀವು
ನಿಮ್ಮ ನೆನೆದು
ಮನುಷ್ಯರಾದೇವೇ
ನಾವು ?
ಮಗುವಿನಂಥ
ಹಸನಾದ ನಗುವಿನ
ನಯೀಮರೇ
ಕನ್ನಡಮ್ಮನ ಹೆಮ್ಮೆಯ ಕಂದ
ಸುರಕೋಡರೇ
ಏನೆಂದು ಕರೆಯಲಿ ನಿಮ್ಮ ?
ದ್ವೇಷದ ಬೆಂಕಿಯ ಆರಿಸಲು
ಪ್ರೇಮದ ಜೀವಜಲ ಹುಡುಕುತ್ತ
ಸಿಕ್ಕಷ್ಟು
ಸಿಂಪಡಿಸುತ್ತ ತಿರುಗುವ
ಫಕೀರನೆನ್ನಲೇ
ಮನುಷ್ಯತ್ವಕ್ಕೆ ಬೆಂಕಿ ಬಿದ್ದು
ಧಗ ಧಗ ಉರಿಯುತ್ತಿರುವುದನ್ನು
ಕಂಡು ಸದಾ ಒದ್ದೆ ಕಂಗಳಲಿ
ಒದ್ದಾಡುವ
ಅಸಹಾಯಕ ನಿಷ್ಪಾಪಿ
ಭಿಕಾರಿ ಎನ್ನಲೇ?
ನಿಮ್ಮ ದಾರಿಯಲ್ಲಿ
ಹೆಜ್ಜೆ ಹಾಕಲು
ಸರಿಯಾಗಿ ಕಲಿಸಿರಿ
ಹೆಜ್ಜೆ ತಪ್ಪದ ಹಾಗೆ
ಅರಿವ
ಬಿತ್ತಿರಿ ಒಳಗೆ
ಗುರುವೇ
ನಾನು
ನನ್ನಂಥವರಿಗೆ






wondeful poem