ಥ್ಯಾಂಕ್ಸ್ ಶ್ರೀದೇವಿ ಕೆರೆಮನೆ..

ಈ ಬರಹದೊಂದಿಗೆ ಶ್ರೀದೇವಿ ಕೆರೆಮನೆ ಅವರು ಪ್ರತೀ ವಾರ ತುಂಬು ಪ್ರೀತಿಯಿಂದ ಕಟ್ಟಿಕೊಡುತ್ತಿದ್ದ ‘ಶ್ರೀದೇವಿ ರೆಕಮೆಂಡ್ಸ್..’ ಅಂಕಣಕ್ಕೆ ವಿರಾಮ..

ಮಳೆ ನಿಂತರೂ ಮಳೆಹನಿ ತೊಟ್ಟಿಕ್ಕುವಂತೆ ಶ್ರೀದೇವಿ ಅವರ ಈ ಅಂಕಣ ಮುಗಿತಾಯ ಕಂಡರೂ ಅವರು ಪುಸ್ತಕಗಳ ಬಗ್ಗೆ ತೋರಿದ ಪ್ರೀತಿ ಓದುಗರ ಮನದಲ್ಲೂ, ಲೇಖಕರ ಎದೆಗೂಡಿನಲ್ಲೂ ತೊಟ್ಟಿಕ್ಕುತ್ತಲೇ ಇರುತ್ತದೆ.

‘ಒಂದು ಅಂಕಣ ಬರೆಯಿರಿ’ ಎಂದು ಶ್ರೀದೇವಿ ಅವರಿಗೆ ‘ಅವಧಿ’ ಕೇಳಿದಾಗ ಅವರ ಮೊದಲ ಉತ್ತರ ‘ಬರೆದೂ ಬರೆದೂ ಸಾಕಾಗಿದೆ’. ಅದು ನಿಜ ಎನ್ನುವಂತೆ ಅವರು ಆ ವೇಳೆಗೆ ಒಂದೇ ಕಾಲಕ್ಕೆ ಮೂರು ಅಂಕಣಗಳನ್ನು ಬರೆದು ವಿರಾಮಾಶ್ರಮಕ್ಕೆ ಹೊರಟಿದ್ದರು. ಆಗ ನಾವು ಪುಸ್ತಕದ ಬಗ್ಗೆಯೇ ಅಂಕಣ ಬರೆಯಿರಿ ಎಂದಾಗ ಪುಟ್ಟ ಮಗು ಚಾಕಲೇಟ್ ಬಾಚಿಕೊಳ್ಳುವಂತೆ ಅಂಕಣದ ಅವಕಾಶವನ್ನು ಬಾಚಿಕೊಂಡೇಬಿಟ್ಟರು.

ಆ ನಂತರ ಹೇಗೆ ಬರೆಯುವುದು ಎನ್ನುವ ಚರ್ಚೆಗಳು ಮೇಲಿಂದ ಮೇಲೆ ನಡೆದಾಗ ನಾವು ಅವರಿಗೆ ಹೇಳಿದ್ದು ಇಷ್ಟೇ. ಪುಸ್ತಕ ಹುಡುಕಿ ಓದುವಂತಾಗಬೇಕು ಹಾಗೆ ಬರೆಯಿರಿ. ಪುಸ್ತಕ ನಿಮ್ಮ ಬದುಕಿನ ಒಳಗೆ ಮಾಡಿದ ಅಲ್ಲೋಲ ಕಲ್ಲೋಲಗಳನ್ನು ಹೆಕ್ಕಿ ತೆಗೆಯಿರಿ .

ಶ್ರೀದೇವಿ ವ್ರತದಂತೆ ಶ್ರೀದೇವಿ ಇದನ್ನು ತುಂಬು ಪ್ರೀತಿಯಿಂದ ೩೦ಕ್ಕೂ ಹೆಚ್ಚು ವಾರ ಮಾಡಿದ್ದಾರೆ. ಅವರು ಬರೆದ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂದು ಪ್ರತೀ ವಾರ ಓದುಗರು ವಿಚಾರಿಸುವ ಈ ಮೇಲ್ ಗಳು ನಮಗೆ ಧಾಳಿ ಇಡುತ್ತಿವೆ ಅಂದರೆ ಶ್ರೀದೇವಿ ಗೆದ್ದಿದ್ದಾರೆ.

ಉತ್ತರ ಕನ್ನಡದ ಹಿರೇಗುತ್ತಿಯ  ಶ್ರೀದೇವಿ, ಕೆರೆಮನೆ ಹೆಸರನ್ನು ಜೊತೆಯಲ್ಲಿರಿಸಿಕೊಂಡು ಪುಸ್ತಕದ ಲೋಕದೊಳಗೆ ನಡೆದು ಬಂದಾಗ ಆಕೆಗೆ ಇನ್ನೂ ೧೦ ವರ್ಷವೇನೋ.. ಅಲ್ಲಿಂದ ಇಲ್ಲಿಯವರೆಗೆ ತಮ್ಮನ್ನು ಕಾಡಿದ ಪುಸ್ತಕಗಳ ಬಗ್ಗೆ ಬರೆದಿದ್ದಾರೆ. ಅವರಿಗೆ ಥ್ಯಾಂಕ್ಸ್… 

ಮಗದೊಮ್ಮೆ ನಕ್ಕ ಬುದ್ಧ

ನನಗೆ ನನ್ನ ಸ್ವಂತ ಅಜ್ಜ- ಅಜ್ಜಿಯರನ್ನು ನೋಡಿದ ನೆನಪೇ ಇಲ್ಲ. ನಾನು ಹುಟ್ಟುವುದಕ್ಕೆ ಕೇವಲ ಐದು ದಿನಗಳ ಮೊದಲು ನನ್ನ ಅಜ್ಜಿ ತೀರಿಕೊಂಡಿದ್ದರು. ಹೆಂಡತಿಯ ಅಗಲಿಕೆಯ ನೋವನ್ನು ಭರಿಸದೇ ಅಜ್ಜಿ ತೀರಿಕೊಂಡು ಒಂದು ವರ್ಷವಾಗುತ್ತಲೇ ನನ್ನ ಅಜ್ಜನೂ ಅಜ್ಜಿಯ ಹಿಂದೆಯೇ ನಡೆದುಬಿಟ್ಟಿದ್ದರು. ಬೇರೆ ಕಡೆಯಾದರೆ ಅದೊಂದು ದೊಡ್ಡ ಐತಿಹ್ಯ ಅಥವಾ ಪವಾಡ ಎಂಬಂತೆ ಬಿಂಬಿತವಾಗಬಹುದಿದ್ದ ಈ ಜೀವನಗಾಥೆ ಅಂತಹ ಯಾವ ವಿಶೇಷತೆಯನ್ನೂ ಪಡೆದುಕೊಳ್ಳದೇ ಮುಗಿದಿತ್ತು.

ಅಜ್ಜಿ ಮನೆಯ ಅಜ್ಜ ಅಜ್ಜಿ ಇದ್ದರಾದರೂ ಮನೆಗೆ ಬಂದಕೂಡಲೇ ಮುದ್ದಾಡುವ ಮನೆಯ ಅಜ್ಜ ಅಜ್ಜಿ ಇಲ್ಲ ಎನ್ನುವ ನೋವು ಯಾವಾಗಲೂ ಕಾಡುತ್ತಿತ್ತು. ಆದರೆ ಆ ನೋವು ನನ್ನನ್ನು ಕಾಡದಂತೆ ಅಜ್ಜನ ಪ್ರೀತಿಯನ್ನೆಲ್ಲ ಧಾರೆಯೆರೆದಿದ್ದು ನನ್ನ ಅಪ್ಪನ ಚಿಕ್ಕಪ್ಪ. ಸಿಣ್ಣಪ್ಪ ಎಂದು ಅಪ್ಪ, ಚಿಕ್ಕಪ್ಪ ಹಾಗೂ ಅತ್ತೆಯಂದಿರೆಲ್ಲ ಕರೆಯುತ್ತಿದ್ದರಿಂದ ನಾವು ಮೊಮ್ಮಕ್ಕಳೂ ಹಾಗೆಯೇ ಕರೆಯುತ್ತಿದ್ದೆವು. ನಮ್ಮ ಮೂಲ ಮನೆಯ ಪಕ್ಕದಲ್ಲೇ ಅವರ ಹೆಂಡತಿ ಮತ್ತು ಮಕ್ಕಳು ಇರುತ್ತಿದ್ದರೂ ಈ ಅಜ್ಜ ಮಾತ್ರ ಯಾವತ್ತೂ ಕೆರೆ ಪಕ್ಕದಲ್ಲಿರುವ ನಮ್ಮ ಮೂಲ ಮನೆಯನ್ನು ಬಿಟ್ಟು ಹೋದವರೇ ಅಲ್ಲ. ನಮ್ಮ ಮೂಲ ಮನೆಯನ್ನು ಕೆಡವಿ ನನ್ನ ಚಿಕ್ಕಪ್ಪ ಸ್ವಲ್ಪ ದೂರದಲ್ಲಿರುವ ನಮ್ಮ ಮನೆಗೆ ವಾಸಕ್ಕೆಂದು ಬಂದಾಗಲೂ ಅವರ ಜೊತೆಗೇ ಬಂದವರು ಮತ್ತು ಮೂಲ ಮನೆ ಇದ್ದ ಜಾಗದಲ್ಲೇ ಹೊಸತೊಂದು ಮನೆ ಕಟ್ಟಿದಾಗ ಪುನಃ ಚಿಕ್ಕಪ್ಪನೊಂದಿಗೆ ಆ ಮನೆಗೇ ಹಿಂದಿರುಗಿದ್ದರು.

ಸುಮಾರು ಎಂಬತ್ತೈದು ವರ್ಷದವರೆಗೂ ತುಂಬಾ ಆರೋಗ್ಯವಾಗಿದ್ದು ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಿದ್ದರು.  ನನ್ನ ಅತ್ತೆಯ ಮಕ್ಕಳು ಹೊರಗೆಲ್ಲಾದರೂ ಹೊರಟರೆ ಅವರನ್ನೆಲ್ಲ ಕರೆದೊಯ್ಯುವುದು ಸಿಣ್ಣಪ್ಪನದ್ದೇ ಜವಾಬ್ಧಾರಿ ಎಂದು ನಾವೆಲ್ಲ ತಿಳಿದುಕೊಳ್ಳುವಷ್ಟರ ಮಟ್ಟಿಗೆ ಮೊಮ್ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ನಾನು ಬಿ. ಇಡಿಗೆಂದು ಹಿರೇಗುತ್ತಿಯಲ್ಲಿಯೇ ಇದ್ದೆವು. ಹೀಗಾಗಿ ಚಿಕ್ಕಪ್ಪನ ಮನೆಯಿಂದ ವಾಕಿಂಗ್ ನೆಪ ಹೇಳಿ ಪ್ರತಿ ದಿನವೂ ನಮ್ಮ ಮನೆಗೆ ಬರುತ್ತಿದ್ದರು. ಒಂದೆರಡು ದಿನ ನಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ನಂತರ ವಯೋ ಸಹಜ ನಿಶ್ಯಕ್ತಿ ಕಾಡತೊಡಗಿತ್ತು. ಹೀಗಾಗಿ ಓಡಾಟ ಕಡಿಮೆಯಾಗಿತ್ತು. ಅದೇ ಸಮಯದಲ್ಲಿ   ನನ್ನ ಚಿಕ್ಕಪ್ಪನ ಮಗಳಿಗೆ ಮಗು ಹುಟ್ಟಿತ್ತು. ಆ ಪುಟ್ಟ ಮಗುವನ್ನು ನೋಡಲೆಂದು ನಾನು ಪ್ರತಿದಿನವೂ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದೆ. ಅಜ್ಜನೊಂದಿಗೂ ಒಂದಿಷ್ಟು ಸಮಯ ಮಾತನಾಡಿ ಕತ್ತಲಾದ ಮೇಲೆ ಮನೆಗೆ ಹಿಂದಿರುಗುತ್ತಿದ್ದೆ.

ಮಗುವನ್ನು ಅದರ ಮನೆಗೆ ಕಳುಹಿಸಿ ಕೊಟ್ಟಾದ ಮೇಲೆ ಸಹಜವಾಗಿಯೇ ನಾನೂ ಕೂಡ ಪ್ರತಿದಿನ ಹೋಗುವ ಪರಿಪಾಠ ನಿಂತು ಹೋಯಿತು. ಪರೀಕ್ಷೆಯ ಗಡಿಬಿಡಿ ಎಂದು ತುಂಬಾ ದಿನಗಳಿಂದ ಆ ಕಡೆ ಹೋಗಲು ಆಗಿರಲೇ ಇಲ್ಲ. ಒಂದು ದಿನ ಇಳಿ ಸಂಜೆಯ ಹೊತ್ತು. ಕೋಲು ಹಿಡಿದ ಅಜ್ಜ ಅಡ್ಡಾದಿಡ್ಡಿ ಹೆಜ್ಜೆ ಹಾಕುತ್ತ  ಮನೆಯ ಬಳಿ ಬಂದಿದ್ದರು. ನಾನೋ ಕಂಗಾಲಾಗಿ ಹೋಗಿದ್ದೆ.  “ಅವನಿಗೆ ಇಲ್ಲಿಗೆ ಹೋಗ್ತೇನೆ ಅಂದ್ರೆ ಬೇಡಾ ಅಂತಾನೆ. ಅವನು ಮನೆಲಿರಲಿಲ್ಲ. ನಿನ್ನ ನೋಡಬೇಕು ಅನ್ನಿಸ್ತು. ಅದಕ್ಕೇ ಬಂದು ಬಿಟ್ಟೆ.” ಎಂದು ಚಿಕ್ಕಪ್ಪ ಕಳಿಸುವುದಿಲ್ಲ ಎಂದಿದ್ದಕ್ಕೆ ದೂರು ಹೇಳಿದ್ದರು. ಒಂದುಕ್ಷಣ ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ.

ಗದ್ದೆಯ ಹಾಳಿಯ ಮೇಲೆ ಅದು ಹೇಗೆ ಬಂದರೋ, ಅಲ್ಲಿಯೇ ಬಿದ್ದು ಬಿಟ್ಟಿದ್ದರೆ ಗತಿ ಏನು? ಎಂಬೆಲ್ಲ ಯೋಚನೆಗಳು ನನಗೆ ಸಿಟ್ಟೇರುವಂತೆ ಮಾಡಿತ್ತು. ಅದೂ ಅಲ್ಲದೇ ಚಿಕ್ಕಪ್ಪ ಮನೆಗೆ ಬಂದ ಮೇಲೆ ಇವರು ಇಲ್ಲದಿರುವುದನ್ನು ಕಂಡು ಹುಡುಕುತ್ತಾರೆ. ಎಂಬೆಲ್ಲ ಚಿಂತೆ ಪ್ರಾರಂಭವಾಯಿತು. ಲ್ಯಾಂಡ್ ಲೈನ್ ನ ಕಾಲ ಅದು. ಆದರೆ ಫೋನ್ ಸತ್ತು ಬಿದ್ದು ಎರಡು ದಿನವಾಗಿತ್ತು. ಎರಡು ದಿನ ಇಲ್ಲಿಯೇ ಉಳಿಯುತ್ತೇನೆ ಅವರು ಗೋಗರೆದಂತೆ ಹೇಳುತ್ತಿದ್ದರು. ನನಗೋ ಅದು ಬಿ. ಇಡಿಯ ಪಾಠದ ಸಮಯ. ರಾತ್ರಿ ಒಂದು ಗಂಟೆ ಎರಡು ಗಂಟೆ ಅಂತಿಲ್ಲ.

ಪಾಠದ ತಯಾರಿ ಮಾಡಿಕೊಳ್ಳಬೇಕು. ಅವರನ್ನು ನೋಡಿಕೊಳ್ಳೋದು ಯಾರು ಎಂಬ ಭಯ.  ಹೀಗಾಗಿ ಅಜ್ಜನನ್ನು ತಕ್ಷಣ ಅಲ್ಲಿಂದ ಹೊರಡಿಸಿಕೊಂಡು ಚಿಕ್ಕಪ್ಪನ ಮನೆಗೆ ಕರೆದುಕೊಂಡು ಬಂದಿದ್ದೆ. ಮತ್ತೂ ಕತ್ತಲಾದರೆ ಅವರಿಗೆ ನಡೆಯಲು ಆಗದು ಎಂದು ಗಡಿಬಿಡಿಯಲ್ಲಿಯೇ ಹೊರಡಿಸಿದ್ದೆ. “ನೀನು ಬರೋದೇ ಇಲ್ಲ. ಈ ಅಜ್ಜನನ್ನು ನೋಡಬೇಕು ಅನ್ಸಲ್ವಾ?” ದಾರಿಯುದ್ದಕ್ಕೂ ಇದೇ ಮಾತು ಹತ್ತಾರು ವಿಧಧಲ್ಲಿ ಕೇಳಿದ್ದರು. ನಂತರ ಪ್ರತಿ ದಿನ ಬರಲಾಗದಿದ್ದರೂ ಎರಡು ದಿನಕ್ಕೊಮ್ಮೆಯಾದರೂ ಬರ್ತೇನೆ ಎಂದು ಪ್ರಾಮಿಸ್ ಮಾಡಿದೆ.

ಅದಾದ ನಾಲ್ಕೇ ದಿನ, ಭಾರತ ಪಾಕಿಸ್ತಾನ ತಂಡದ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ಚಿಕ್ಕಪ್ಪನ ಮನೆಯಲ್ಲಿ ಎಲ್ಲರೂ ಕ್ರಿಕೆಟ್ ನೋಡುತ್ತ ಕುಳಿತಿದ್ದರು. ಅಜ್ಜನೂಮಲಗಿದಲ್ಲಿಂದಲೇ ಟಿ.ವಿ. ನೋಡುತ್ತ ತಮ್ಮದೇ ವ್ಯಾಖ್ಯಾನ ಹೇಳುತ್ತಿದ್ದರಂತೆ. ಅಕಸ್ಮಾತ್ ಕರೆಂಟ್ ಹೋಯಿತು.  ಕರೆಂಟ್ ಬಂದಾಗ  ಮತ್ತೆ ಎಲ್ಲರೂ ಕ್ರಿಕೆಟ್ ಮೂಡಲ್ಲಿ. ಅಷ್ಟು ಹೊತ್ತು ಭಾರತೀಯ ಕ್ರಿಕೆಟಿಗರಿಗೆ ಬೈಯ್ದುಕೊಳ್ಳುತ್ತ ಭಾರತ ಸೋತು ಹೋದರೆ ಎಂದು ಒದ್ದಾಡುತ್ತಿದ್ದವರು ಒಂದು ಮಾತೂ ಆಡುತ್ತಿಲ್ಲವಲ್ಲ ಎಂದು ಹೋಗಿ ನೋಡಿದರೆ ಅಲ್ಲಿಯೇ ತೀರಿಕೊಂಡಿದ್ದರು.

ಎರಡು ದಿನ ನಿನ್ನ ಜೊತೆಯಲ್ಲಿರುತ್ತೇನೆ ಎಂದು ಗೋಗರೆದ ಅಜ್ಜನ ಮುಖ ಮತ್ತೆ ಈಗ ಕಣ್ಣ ಮುಂದೆ ಬಂದಂತಾಗಿ ಎರಡು ಹನಿ ಕಣ್ಣೀರು ಬರುವಂತೆ ಮಾಡಿದ್ದು  ಆನಂದ ಋಗ್ವೇದಿಯವರ ಮಗದೊಮ್ಮೆ ನಕ್ಕ ಬುದ್ಧ  ಕಥಾ ಸಂಕಲನದ ಟ್ರಾಫಿಕ್ ಜಾಮ್ ಕಥೆ.  ಅಲ್ಲಿ ಬರುವ ಅರುಣನ ಹೆಂಡತಿಯ ಚಿಕ್ಕಮ್ಮನ ವಿವರಣೆ ಓದಿದಂತೆಲ್ಲ ನನಗೆ ನನ್ನ ಅಜ್ಜನದ್ದೇ ನೆನಪು. ನನ್ನ ನೋಡೋಕೆ ಬರೋದೆ ಇಲ್ಲ ಎನ್ನುವ ಅವರ ಮಾತು, ಚಿಕ್ಕಂದಿನಲ್ಲಿ  ನಾನು ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದ ಅವರ ಪ್ರೀತಿ ಮತ್ತೆ ಮತ್ತೆ ನೆನಪಾಗುವಂತೆ ಮಾಡಿದ ಗೆಳೆಯ ಆನಂದ ಋಗ್ವೇದಿಯವರ ಮಗದೊಮ್ಮೆ ನಕ್ಕ ಬುದ್ಧ ನನ್ನ ಈ ವಾರದ ರೆಕಮಂಡ್.

ನಾನು ಕವನ ಬರೆಯಲು ಆರಂಭಿಸಿ, ಕವಿತೆಗಳನ್ನು ಆಯ್ದು ಆಯ್ದು ಓದುವ ಸಂದರ್ಭದಲ್ಲಿ ಆನಂದ ಋಗ್ವೇದಿಯವರದ್ದು ಈ ಕ್ಷೇತ್ರದಲ್ಲಿ ದೊಡ್ಡ ಹೆಸರು. ಎಷ್ಟು ಚಂದದ ಕವನ ಬರೆಯುತ್ತಾರೆ ಎಂದು ನಾವು ಸ್ನೇಹಿತೆಯರೆಲ್ಲ ಮಾತನಾಡಿಕೊಳ್ಳುವಂತೆ ಮಾಡಿದ್ದ ಆನಂದ ನಂತರದ ದಿನಗಳಲ್ಲಿ ಆತ್ಮೀಯ ಸ್ನೇಹಿತನಾಗಿದ್ದೂ ಒಂದು ವಿಚಿತ್ರವೇ. ನನಗೆ ಎಂದೂ ಅರ್ಥವಾಗದ ಸಾಹಿತ್ಯ ಲೋಕದ ಒಳಸುಳಿಗಳನ್ನು  ಸವಿವರವಾಗಿ ಹೇಳುತ್ತ, ನನ್ನ ಬರವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ, ತಪ್ಪಿದ್ದಲ್ಲೆಲ್ಲ ಅಕ್ಷರಶಃ ಕಿವಿ ಹಿಡಿದು ತಿದ್ದಿದ ಗೆಳೆಯ.

ಸಾಹಿತ್ಯ ಕ್ಷೇತ್ರದ ಅರ್ಥವೇ ಆಗದ  ವಿಚಿತ್ರ ತಿರುವಿನಲ್ಲಿ ನಾನು ಕಂಗೆಟ್ಟು ನಿಂತಾಗಲೆಲ್ಲ ನಾನು ಸಹಾಯಕ್ಕೆ ಕೂಗುವುದು “ಆನಂದಾ…” ಎಂದೇ. ಯಾವುದೇ ಬಿಂಕ ಬಿಗುಮಾನ ಇಲ್ಲದ, ಎಲ್ಲರೊಳಗೊಂದಾಗುವ ಸರಳ ವ್ಯಕ್ತಿತ್ವದ ಆನಂದ  ಹೆಚ್ಚಿನ ಯುವ, ಮತ್ತು ಇತ್ತೀಚೆಗೆ ಮಾಗಿದ ಹಲವಾರು ಲೇಖಕರ ಆತ್ಮೀಯ ಸಖ. ಸಾಹಿತ್ಯದ ವಿಷಯದಲ್ಲಿ ಯಾರೇನೇ ಕೇಳಿದರೂ ಇಲ್ಲ ಎನ್ನದೆ ಮಾರ್ಗದರ್ಶನ ಮಾಡುವ ಈತನ ಸ್ನೇಹಪರತೆಯೇ ಇವನ ಅತಿದೊಡ್ಡ ಆಸ್ತಿ. ಮಗದೊಮ್ಮೆ ನಕ್ಕ ಆನಂದ ಋಗ್ವೇದಿಯವರ ಎರಡನೆಯ ಕಥಾ ಸಂಕಲನ. ಅತ್ಯದ್ಭುತ ಎನ್ನುವಂತಹ ಭಾಷಾ ಹಿಡಿತ ಮತ್ತು ಭಾಷಾ ಪ್ರೌಢಿಮೆ ಆನಂದನ ಪ್ಲಸ್ ಪಾಯಿಂಟ್ ಗಳಲ್ಲೊಂದು. ಯಾವುದೇ ವಿಷಯವನ್ನಾದರೂ ಕಥೆಯ ಚೌಕಟ್ಟಿಗೆ ಒಳಪಡಿಸಬಲ್ಲ ಆನಂದನ ಕಥೆ ಕಟ್ಟುವಿಕೆಯ ಬಗ್ಗೆ ನನಗೆ ಯಾವತ್ತೂ ಅಚ್ಚಳಿಯದ ಕುತೂಹಲ.

ಇಡೀ ಸಂಕಲನದಲ್ಲಿ ನನ್ನನ್ನು ತೀವ್ರವಾಗಿ ಕಾಡಿದ್ದು ಅಪ್ಪನ ಐದು ಮುಖಗಳು  ಎನ್ನುವ ಐದು ವಿಭಿನ್ನ ಚಿತ್ರಗಳು.  ಹಾಗೂ ರಶೀದ ಮಗಳ ಮದುವೆಗೆ ಹೋಗಲಿಲ್ಲ ಎನ್ನುವ ಎರಡು ಕಥೆಗಳು.  ಅದರಲ್ಲೂ ಅಪ್ಪನ ಐದು ಮುಖಗಳನ್ನು ಓದಿದರೆ ಇದು ಕಥೆಯೇ ಎಂದು ನೀವು ಪ್ರಶ್ನಿಸಬಹುದಾದರೂ ಅಲ್ಲಿ ಬರುವ ಭಾವನೆಗಳು ಒಂದು ಕ್ಷಣ ನಮ್ಮನ್ನು ತಲ್ಲಣಗೊಳಿಸದೇ ಇರಲಾರದು. ತಾನು ನೆಟ್ಟ ಮರದ ಹಣ್ಣಿನ ರುಚಿ ನೋಡುವ ಅಧಿಕಾರ ನನಗಿದೆ ಎಂದು ಹೆತ್ತ ಮಗಳನ್ನೇ ಅನುಭವಿಸಿದ ಸುದ್ದಿಯನ್ನು ಓದಿ ಓದಿ ಬೇಸತ್ತ ಹೊತ್ತಿನ ಕಥೆಗಳೇ ಇವು? ಯಾಕೋ ಓದುವಾಗ ಶೂದ್ರ ಶ್ರಿನಿವಾಸರ ಾ ದಿನಗಳು ಕಾದಂಬರಿ ಕೂಡ ಕಣ್ಣೆದುರಿಗೆ ಹಾದು ಹೋದಂತಾಯಿತು.

ನಾನು ನನ್ನ ಅಪ್ಪನನ್ನಲ್ಲದೇ ಇಬ್ಬರು ಚಿಕ್ಕಪ್ಪಂದಿರನ್ನು ಹೊರತು ಪಡಿಸಿ, ಮೇಲೆ ಹೇಳಿದ ನನ್ನ ಅಜ್ಜನ ಇಬ್ಬರು ಮಕ್ಕಳನ್ನೂ ಅವರ ಹೆಸರಿನ ಮುಂದೆ ಅಪ್ಪ ಎಂದು ಕರೆಯುವುದು ರೂಢಿ. ನನ್ನ ಕೆರೆಮನೆಯ ಉಳಿದ ಚಿಕ್ಕಪ್ಪಂದಿರನ್ನೂ ಅದೇ ರೀತಿ ಹೆಸರಿನ ಮುಂದೆ ಅಪ್ಪ ಎಂದು ಸೇರಿಸಿ ಕರೆದು ಬಿಡುತ್ತೇನೆ. ಉದಯಪ್ಪ, ಗಣಪತಿಅಪ್ಪ, ನಾಗೇಶಪ್ಪ, ಸುಬ್ಬಣಪ್ಪ, ಸುಖದಪ್ಪ, ಪಮ್ಮಪ್ಪ ಹೀಗೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರ ಹೆಸರನ್ನು ಹೇಳದೆ  ಅಪ್ಪಾ ಎಂದು ಕರೆಯುವುದು  ರೂಢಿಯಾಗಿದೆ. ಎಷ್ಟೋ ಸಲ ಅವರ ಜೊತೆಗಿದ್ದವರು ನಿಮ್ಮ ಮಗಳಾ? ಎಂದು ಕೇಳಿದರೆ ಆ ಚಿಕ್ಕಪ್ಪಂದಿರೂ ಹಿಂದೆ ಮುಂದೆ ಯೋಚಿಸದೇ ಹೌದು ಎಂದು ಬಿಡುತ್ತಾರೆ. ಈ ಮಗಳ ಪ್ರೀತಿ ಅನುಭವಿಸುವುದಿದೆಯಲ್ಲ, ಅದು ನನಗೆ ಸಿಗದ ಆದರೆ ನಾನು ಯಥೇಶ್ಚವಾಗಿ  ಪಡೆದುಕೊಂಡ ಖುಷಿ.

ಆದರೆ ಈ ಕಥೆ ಅಪ್ಪಂದಿರ ನಾನಾ ಮುಖವನ್ನು ಬಿಚ್ಚಿಡುವಾಗ ಅದರಲ್ಲೂ  ಈ ಕಥೆಯ ಐದನೆಯ ಅಂಕ ತಲ್ಲಣಿಸುವಂತೆ ಮಾಡಿಬಿಟ್ಟಿತು. ಅಪ್ಪನ ಗೆಳೆಯ, ಅಪ್ಪ ದೂರವಾದ ನಂತರವೂ ತಾನಿಲ್ಲದಾಗ ಅಮ್ಮನ ಬಳಿ ಬರುತ್ತಾನೆಂದುಕೊಂಡರೂ ಅದರ ಬಗ್ಗೆ ಯಾವ ತಕರಾರೂ ಇಲ್ಲದೇ ಅವನನ್ನು ಸ್ವಂತ ಅಪ್ಪನಂತೆಯೇ ಪ್ರೀತಿಸಿದ್ದ ಸುಕನ್ಯಾ ಒಂದು ದಿನ ಆ ಅಪ್ಪ ಎಂಬುವವನಿಗೇ ಬಲಿಯಾಗಿ ಹೋದ ದುರಂತ ನಡುಗಿಸಿ ಬಿಡುತ್ತದೆ.

ಇನ್ನು ರಶೀದ ಮಗಳ ಮದುವೆಗೆ ಹೋಗಲಿಲ್ಲ ಎಂಬುದು ಪ್ರಸ್ತುತ ಸನ್ನಿವೇಶಕ್ಕೆ ತೀರಾ ಹೊಂದಿಕೆ ಆಗುವ ಕಥೆ. ಗೆಳೆಯ ಜಯಂತನೊಟ್ಟಿಗೆ ಬೆಳೆದ ರಶೀದ, ಬಾಲ್ಯದ ಗೆಳತಿ ರೇಣುಕಾಳೊಟ್ಟಿಗೆ ಜಯಂತನ ಮದುವೆ ಮಾಡಲು ಶ್ರಮಿಸಿದವನು. ಇಬ್ಬರಿಗೂ ಮಕ್ಕಳಾಗದೇ, ತುಂಬಾ ವರ್ಷಗಳ ನಂತರ ಜಯಂತನಿಗೆ ಮಗಳು ಹುಟ್ಟಿದಾಗ ಅವಳನ್ನು ತನ್ನ ಮನೆಗೂ ಕರೆತಂದು ಆಯಿಶಾ ಎಂದು ನಾಮಕರಣ ಮಾಡಿ ಸಂಭ್ರಮ ಪಟ್ಟವನು. ಆದರೆ ರಶಿದನ ಹಜ್ ಯಾತ್ರೆ, ಜಯಂತನ ಇತಿಹಾಸದ ಕೆದಕುವಿಕೆಯಲ್ಲಿ ಮಸೀದಿಯಲ್ಲಿ ದೊರೆತ ತ್ರೈಲೋಕೇಶ್ವರ ದೇಗುಲದ ನೆಲಗಟ್ಟು ಮತ್ತು ಅದಕ್ಕೋಸ್ಕರ ಾತ ಮಾಡುವ ಭಾಷಣಗಳು, ಮಸೀದಿಯನ್ನು ಉಳಿಸಿಕೊಳ್ಳಲು ಮತ್ತು ದೇಗುಲವನ್ನೂ ಉಳಿಸಿಕೊಳ್ಳಲು ರಶೀದ ಮಾಡಿದ ಯಾವ ಪ್ರಯತ್ನವೂ ಸಫಲವಾಗದೇ ಇಬ್ಬರ ನಡುವೆ ಹುಟ್ಟುವ ಭಿನ್ನಾಭಿಪ್ರಾಯ ಈ ಎಲ್ಲವೂ ಸೇರಿ  ಜಯಂತ ತನ್ನ ಮಗಳನ್ನು ಮದುವೆ ಮಾಡುವ ಸಂದರ್ಭದಲ್ಲಿ ಕೊಡುವ ನೋವು ಇಲ್ಲಿನ ಮುಖ್ಯ  ಅಂತರಾಳ.

ರಶೀದನಿಗೆ ಯಾರೋ ಮೂರನೆಯವರಿಗೆ ಕೊಡುವಂತೆ ಆಹ್ವಾನ ಪತ್ರಿಕೆಯನ್ನು ಕಳಿಸಿದಾಗ ಆಗುವ ನೋವನ್ನು ಕಥೆಗಾರ ಆನಂದ ಇಲ್ಲಿ ತುಂಬಾ ಪ್ರಬುದ್ಧವಾಗಿ ಹಿಡಿದಿಟ್ಟಿದ್ದಾರೆ. ಮಗಳ ಮದುವೆಗೆ ಹೋಗಬೇಕು. ಆದರೆ ಪ್ರೀತಿಯ ಆಹ್ವಾನ ಇಲ್ಲದ ಕಾಟಾಚಾರಕ್ಕೆ ಕರೆದ ಮದುವೆಗೆ ಹೋಗಲಾಗದ ಬಿಗುಮಾನದಲ್ಲಿ ರಶೀದ ಕೊನೆಗೂ ಮದುವೆಗೆ ಹೋಗದೆ ಮನೆಯಲ್ಲಿಯೇ ಆ ಮಗಳ ಭವಿಷ್ಯಕ್ಕಾಗಿ ಸಲ್ಲಿಸುವ ಪ್ರಾರ್ಥನೆಯೊಂದಿಗೆ ಕಥೆ ಮುಗಿಯುತ್ತದೆಯಾದರೂ ಅದರೊಳಗಿನ ವಿಷಣ್ಣ ಭಾವ ಬಹಳಷ್ಟು ದಿನಗಳ ಕಾಲ ಕಾಡುತ್ತಲೇ ಇರುತ್ತದೆ. ನನ್ನ ಅತ್ತೆಯ ಮಗಳೋಬ್ಬಳು ಮುಸ್ಲಿಂ ಧರ್ಮದವರನ್ನು ಮದುವೆಯಾಗಿದ್ದಾಳೆ. ಕೆಲವು ತಿಂಗಳ ಹಿಂದೆ ಅವರ ಮನೆಗೆ ಹೋದಾಗ,   “ನಾನು ಊರಿಗೆ ಬರೋದಿಲ್ಲಪ್ಪ, ಮುಸ್ಲಿಂ ಅಂತಾ ನಮ್ಮನ್ನು ಹೊಡೆದು ಓಡಿಸಿ ಬಿಡೋರು…” ಎಂದು ಹೇಳಿದಾಗಲೂ ನಾನು  ಇಂತಹುದ್ದೇ ಒಂದು ವಿಷಣ್ಣತೆಯನ್ನು ಅನುಭವಿಸಿದ್ದೆ.

ನನ್ನದೇ ಸಹೋದರಿಯೊಬ್ಬಳು ಧರ್ಮದ ಕಾರಣದಿಂದಾಗಿ ನಮ್ಮಿಂದ ದೂರವಾಗುತ್ತಾಳೆ ಎಂದಾದರೆ ಅದಕ್ಕಿಂತ ನೋವು ಬೇರೇನಿದೆ? ಅವಳು ಹೇಳಿದ್ದು ತಮಾಷೆಯೇ ಆಗಿರಬಹುದು. ಆದರೆ ಅಂತಹ ತಮಾಷೆಯನ್ನು ಸೃಷ್ಟಿಸುವ ಸ್ಥಿತಿಯನ್ನು ಈ ಸಮಾಜ ನಿರ್ಮಾಣ ಮಾಡಿದೆ ಎಂದರೆ ನಾವು ಯೋಚಿಸಲೇ ಬೇಕಿದೆ. ಅಸಹಿಷ್ಣುತೆ ಎಂಬುದು ಸಮಾಜದಲ್ಲಿ ಆಳವಾಗಿ ಬೇರೂರಿ ತನ್ನ ಫಲಗಳನ್ನು ನೀಡುತ್ತಿರುವ ಈ ಹೊತ್ತಿನಲ್ಲಿ  ಧರ್ಮ ಎಂಬುದು ಎಲ್ಲವನ್ನೂ ಮೀರಿ ಅಡ್ಡಗೋಡೆಯಾಗಿ ನಿಂತುಬಿಡುವ ಸೋಜಿಗವನ್ನು ಕಾಣಬಹುದು. ಹಾಗೆ ನೋಡಿದರೆ ಇಲ್ಲಿನ ಹೆಚ್ಚಿನ ಕಥೆಗಳು ತಮ್ಮೊಳಗೆ ಒಂದು ರೀತಿಯ ದುಗುಡವನ್ನೇ ಹೊತ್ತು ತಂದಂತಿದೆ.

ಕಳೆದ ವರ್ಷ ಸುಪಾ ಆಣೆಕಟ್ಟಿನ ಹಿನ್ನೀರಿನ ಪ್ರದೇಶಕ್ಕೆ ಹೋಗಿದ್ದೆವು. ಕಾಡುಮೇಡು ಸುತ್ತುತ್ತ ಹಾಯಾಗಿರುವ ನನಗೆ ಮಳೆಗಾಲ ಮುಗಿದು, ಒಂದಿಷ್ಟು ಬಿಸಿಲು ಪ್ರಖರವಾಗುವುದೇ ತಡ, ಕಾಡು ಕೈ ಬಿಸಿ ಕರೆಯತೊಡಗುತ್ತದೆ. ಅಣಶಿಯ ಕಾಡು, ಹುಲಿ ಸಂರಕ್ಷಿತ ವಲಯದಲ್ಲಿರುವ ಸೂಳಗೆರಾ ಕಾಡು, ಅಂಬಿಕಾನಗರದ ಸೈಕ್ಸ್ ಪಾಯಿಂಟ್ ಮತ್ತೆ ಮತ್ತೆ ಕರೆಯುತ್ತಲೇ ಇರುತ್ತದೆ. ಜೊಯ್ಡಾದ ಕಾಡುಗಳಂತೂ ಯಾವಾಗಲೂ ಆತ್ಮ ಸಂಗಾತಿಯೇ. ಹೀಗಾಗಿ ಜೊಯ್ಡಾ ಕಾಡುಗಳನ್ನೆಲ್ಲ ಸುತ್ತಾಡಿ ಸುಪಾ ಹಿನ್ನೀರನಲ್ಲಿ ಬೋಟಿಂಗ್ ಎಂದು ಹೋಗಿದ್ದೆವು. ಹೋಗಿದ್ದು ಪ್ರಖರ ಬಿಸಿಲಿನ ಎಪ್ರಿಲ್ ತಿಂಗಳಲ್ಲಿ. ನೀರಿನ ಮಟ್ಟ ಬಹಳಷ್ಟು ಕಡಿಮೆಯಾಗಿತ್ತು. ನೀರಿನಿಂದ ಮುಳುಗಡೆಯಾದ ಪ್ರದೇಶಗಳು ಕಾಣಿಸುತ್ತಿದ್ದವು. ಇಡೀ ಮರಗಳು ನೀರಿನಲ್ಲಿಯೇ ಬಹಳಷ್ಟು ವರ್ಷಗಳ ಕಾಲ ಇದ್ದುದರಿಂದ  ಒಣಗಿ ಗಟ್ಟಿಯಾದ ಕಲ್ಲಿನಂತಾಗಿಬಿಟ್ಟಿತ್ತು. ನೀರು ಬತ್ತಿದ ಕಡೆಯಲ್ಲೆಲ್ಲ ಮರದ ಬೊಡ್ಡೆಗಳು ವಿಚಿತ್ರವಾದ ಆಕಾರದಲ್ಲಿ ಕಾಷ್ಟ ಕಲಾಕೃತಿಗಳನ್ನು ನಿರ್ಮಿಸಿದಂತೆ ಕಾಣುತ್ತಿತ್ತು. ಜೊತೆಯಲ್ಲಿದ್ದ ಅರಣ್ಯಾಧಿಕಾರಿ ಸಿ ಆರ್ ನಾಯ್ ಎಷ್ಟೋ ವರ್ಷದ ನಂತರ ಇಷ್ಟು ಬರಗಾಲ ಬಂದಿರುವುದು ಎಂದಿದ್ದರು.

ಅದನ್ನು ಮುಗಿಸಿ ಮಾರನೆಯ ದಿನ  ಕೊಡಸಳ್ಳಿ ಜಲಾಶಯದ ಹಿನ್ನೀರಿಗೆ ಹೋಗುವುದೆಂದು ಮಾತನಾಡಿಕೊಳ್ಳುತ್ತಿದ್ದೆವು. ಜೊತೆಯಲ್ಲಿದ್ದ ಅರಣ್ಯ ರಕ್ಷಕರೊಬ್ಬರು ತಾವೂ ಬರುವುದಾಗಿ ಅರಣ್ಯಾಧಿಕಾರಿಗಳಲ್ಲಿ ಹೇಳುತ್ತಿದ್ದರು. “ ಈ ವರ್ಷ ಬಹಳ ಬರಗಾಲ. ನೀರೆಲ್ಲ ಕಡಿಮೆ ಆಗದಂತೆ. ಕೊಡಸಳ್ಳಿ ಡ್ಯಾಂ ಕಟ್ಟಿ ಇಷ್ಟು ವರ್ಷ ಆದ ಮೇಲೆ  ನಮ್ಮ ಮನೆ ಇದ್ದ ಜಾಗ ಕಾಣ್ತದಂತೆ. ಒಂದ್ಸಲ ಹೋಗಿ ನೋಡ್ಕಂಡು ಬರಬೇಕು.” ಎಂದು ಒಪ್ಪಿಸುವ ಮಾತನಾಡುತ್ತಿದ್ದರು.

ನನಗೋ ಆಶ್ಚರ್ಯ. “ಎಲ್ಲಿ ಭಟ್ರೆ ನಿಮ್ಮನೆ…?” ಎಂದೆ. “ಅಲ್ಲೇ ಮಾರಾಯ್ರೆ. ಕೊಡಸಳ್ಳಿ ಡ್ಯಾಂ ನ ಹಿಂದುಗಡೆ.” ಎಂದರು. ಹೌದಾ? ನಿಮ್ಮ ಮನೆ ಅಲ್ಲಿತ್ತಾ? ಎಂದೆ. ಹೋಗ್ಲಿ ಮಾರಾಯರೆ. ಅದನ್ನೇನು ಕೇಳ್ತೀರಿ? ಡ್ಯಾಂ ಗೆಂದು ಮುಳುಗಡೆಯಾದ ಜಾಗದವರಿಗೆ ಎಷ್ಟೆಲ್ಲ ಹಣ ಬಂತು. ಆದರೆ ಹಿನ್ನೀರಿನ ಪ್ರದೇಶದವರಿಗೆ ಜಾಸ್ತಿ ಹಣ ಕೊಡಲಿಲ್ಲ. ನಾವೂ ಮುಳುಗಡೇ ಸಂತ್ರಸ್ತರೇ ಅಲ್ವಾ? ನಮ್ಮ ಮನೆ ಗದ್ದೆ ತೋಟಾನೂ ಬಿಟ್ಟು ಬಂದಿದ್ದೀವಿ. ಆದರೂ ನಮಗೆ ಅವರಷ್ಟು ಹಣ ಸಿಗಲಿಲ್ಲ. ಎಂದರು. ಈಗ ನೀರು ಕಡಿಮೆ ಆಗದಲ್ಲ? ಹೋಗಿ  ನೋಡ್ಕಂಡು ಬರಬೇಕು.” ಎನ್ನುತ್ತ ಹನಿಗಣ್ಣಾದರು. ನಮ್ಮ ಜೊತೆಗೇ ಬಂದ ಅವರನ್ನು ಹಿಂಬಾಲಿಸಿ ಅವರ ಮನೆಯ ಗೋಡೆಯನ್ನು ದೂರದಿಂದ ನೋಡಿ ಬಂದಾಯ್ತು. ಅವರು ಎಷ್ಟೊಂದು ಬೇಸರಗೊಂಡಿದ್ದರು ಎಂದರೆ ಆ ಮನೆಯ ಗೋಡೆ ನೋಡುತ್ತಿದ್ದರೆ ತಮ್ಮ ಬಾಲ್ಯ, ಅಲ್ಲಿನ ಜೀವನ ಎಲ್ಲಾ ನೆನಪಾಗುತ್ತದೆ ಎನ್ನುತ್ತ ಒಂದೊಂದೇ ನೆನಪುಗಳನ್ನು ಹೆಕ್ಕಿ ಹೆಕ್ಕಿ ಹೇಳತೊಡಗಿದರು.

ಹೊತ್ತು ಮುಳುಗಿದ ಹೊತ್ತಲ್ಲೂ ಗೋಪಜ್ಜನದ್ದು ಇದೇ ಕಥೆ. ನಲವತ್ತು ವರ್ಷಗಳ ಹಿಂದೆ ತುಂಗಭದ್ರಾ ನದಿಗೆ ಚೆಕ್ ಡ್ಯಾಂ ಕಟ್ಟಿಸಿದಾಗ ಮುಳುಗಿ ಹೋಗಿದ್ದ ಪುರಾತನ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಅದರ ಸುತ್ತಲಿನ ಕಟ್ಟೆ ಎಲ್ಲವೂ ಕಾಣ್ತಿದೆ ಎಂಬುದನ್ನು ಕೇಳಿಯೇ ಎದ್ದು ನಿಂತ ಗೋಪಜ್ಜ  ನಿಧಾನವಾಗಿ ಹೆಜ್ಜೆ ಇಡುತ್ತ ಆ ಸ್ಥಳ ತಲುಪುತ್ತಾನೆ. ಅಲ್ಲಿ ಆತನ ಬಾಲ್ಯವಿದೆ, ಯೌವ್ವನವಿದೆ, ಕನಸುಗಳು ಅಲ್ಲಿಯೇ ಮುಳುಗಿ ಹೋದ ವ್ಯಥೆಯೂ ಇದೆ. ಊರ ಗದ್ದಲದಲ್ಲಿ, ಪೂಜಾರಿ ಹಾಗೂ ಊರಿನ ಹಿಂದಿನ ಛೇರ್ ಮನ್ ನ ಪ್ರತಿಷ್ಟೆಯಲ್ಲಿ ಬಾಳು ಕಳೆದುಕೊಂಡ ಇನ್ನೂ ಹರೆಯಕ್ಕೆ ಇಣುಕಿ ನೋಡುತ್ತ, ಗೋಪಾಲನ ಬದುಕಿನಲ್ಲಿ ಕಾಮನ ಬಿಲ್ಲನ್ನು ತುಂಬಿದ ಚಂದ್ರಿ ಎಂಬ ಎಳೆಯ ತರುಣಿಯ ವ್ಯಥೆ ಇದೆ. ತಾನಾಗಿಯೇ ಅವಳನ್ನು ಛೇರ್ ಮನ್ ರ ಬಾಯಿಗೆ ಒಪ್ಪಿಸಿ, ಅವಳು ದೇವಸ್ಥಾನದ ಬಾವಿಗೆ ಹಾರಿದಾಗ ಬೊಬ್ಬಿರಿದ ಮಗನ ಅಳುವಿನಿಂದಾಗಿ ಮಗ ಇಷ್ಟ ಪಟ್ಟ ಹುಡುಗಿ ಅವಳು ಎಂದು ತಿಳಿದು ಹಾಸಿಗೆ ಹಿಡಿದ ಬಿಷ್ಟ ಎಂಬುವವನ ನೋವಿದೆ.

ಕಸುಬು ಎಂಬ ಕತೆಯಲ್ಲಿಯೂ ಬ್ರಾಹ್ಮಣಿಕೆಯನ್ನು ಬಿಟ್ಟು ಕಾರ್ಮಿಕ ವರ್ಗದೊಂದಿಗೆ ಸೇರಿ ಹೋರಾಡಿದ ರಾಮನಾಥ ಕೊನೆಗೂ ಕಾರ್ಖಾನೆ ಮುಚ್ಚಿದಾಗ ಶವಾಗಾರದ ದೇಗುಲ ಒಂದರಲ್ಲಿ ಪೌರೋಹಿತ್ಯ ಮಾಡಿಕೊಂಡು ಬದುಕಬೇಕಾದ ಅನಿವಾರ್ಯತೆ, ಮತ್ತು  ಹೊಟ್ಟೆಗೇ ಹಿಟ್ಟಿಲ್ಲದಾಗ ಆ ಅನಿವಾರ್ಯತೆಯನ್ನು ಒಪ್ಪಿಕೊಳ್ಳದ  ಸಹಚರರು ಇವೂ ಕೂಡ ಮನಸ್ಸಿನಲ್ಲಿ ಒಂದು ಅಳಿಸಲಾಗದ ಖೇದವನ್ನು ಉಳಿಸಿಬಿಡುತ್ತದೆ.

ನನ್ನ ಹಿರೇಗುತ್ತಿಯ ಮನೆಯನ್ನು ರಾಷ್ಟ್ರೀಯ ಹೆದ್ದಾರಿಯ ಚಥುಷ್ಪತ ರಸ್ತೆಯ ಅಗಲೀಕರಣಕ್ಕಾಗಿ  ವಶಪಡಿಸಿಕೊಳ್ಳಲಾಗಿದೆ. ನಾನು ಚಿಕ್ಕವಳಿರುವಾಗಲೇ “ಹೈವೆ ಅಗಲ ಆಗ್ತದಂತೆ, ಮನೆ ಹೋಗ್ತದೆ ನಿಮ್ಮದು” ಎಂದು ಆಗಾಗ ವಿಘ್ನ ಸಂತೋಷಿಗಳು ನನ್ನಲ್ಲಿ ಹೇಳಿ ಹೇಳಿ ಅಳಿಸುತ್ತಿದ್ದರು. ಈಗ ಸುತ್ತಲಿನ ಜಾಗವೆಲ್ಲ ತೆರವು ಗೊಳಿಸಿದ್ದು ನಮ್ಮ ಮನೆಯ ಪಕ್ಕದಲ್ಲಿ ಇರುವ ಪುರಾತತ್ವ ಇಲಾಖೆಗೆ ಸೇರಿದ ದೇಗುಲದ ದೆಸೆಯಿಂದ ನಮ್ಮ ಮನೆ ಕೋರ್ಟ ನ ಆದೇಶಕ್ಕೆ ಕಾದು ನಿಂತಿದೆ. ನಾನು ತುಂಬಾ ಪ್ರೀತಿಸುವ, ನನ್ನದೇ ಹೆಸರಿರುವ ಮನೆಯನ್ನು ಕಳೆದುಕೊಳ್ಳುವ ನೋವು ಹೇಗಿರುತ್ತದೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತು.  ಆದರೆ ಚಿಕ್ಕವಳಿರುವಾಗ ನನಗೆ ಅದೆಲ್ಲ ಅರ್ಥವಾಗುತ್ತಿರಲಿಲ್ಲ.

ಯಾರಾದರೂ ಹೈವೆ ಅಗಲ ಮಾಡ್ತಾರಂತೆ ಎಂದಾಗಲೆಲ್ಲ ನನಗೆ ನನ್ನ ಗಿಡಗಳದ್ದೇ ಚಿಂತೆ. ಅಪ್ಪ ಮನೆ ಹಾಗೂ ಫಲ ಕೊಡುವು ಹತ್ತು ಹದಿನೈದು ತೆಂಗಿನ ಮರ ಹಾಗೂ ಮಾವಿನ ಮರಗಳ ಬಗ್ಗೆ ಯೋಚಿಸುತ್ತಿದ್ದರೆ ನಾನು ಆ ಮರಗಳ ಕೆಳಗೆ ನಾನು ಎಲ್ಲೆಲ್ಲಿಂದಲೋ ಸಂಗ್ರಹಿಸಿ ತಂದು ನೆಟ್ಟ  ಹೂವಿನ ಗಿಡಗಳ ಬಗ್ಗೆ ಚಿಂತಿಸುತ್ತಿದ್ದೆ,  ಇರುವೆ ಗೂಡು ಎಂಬ ಕಥೆಯಲ್ಲಿ ಅಜ್ಜ ಹಾಗೂ ಅಪ್ಪ ರಿಂಗ್ ರೋಡ್ ನಿರ್ಮಾಣಕ್ಕಾಗಿ ಮನೆ ಕಳೆದುಕೊಳ್ಳುವ ಚಿಂತೆಯಲ್ಲಿದ್ದರೆ ಪುಟ್ಟ ಸಮನ್ಯು ಮಾತ್ರ ಥೇಟ್ ಅಂದಿನ ನನ್ನಂತೆ ಮನೆಯ ತಳಪಾಯದಲ್ಲಿರುವ ಇರುವೆ ಗೂಡಿನ ಮೇಲೂ ಬುಲ್ಡೋಜರ್ ಹಾದು ಹೋದರೆ ಇರುವೆಗಳ ಗತಿ ಏನು ಎಂದು ಯೋಚಿಸುವುದು ಮಕ್ಕಳ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.

ಇನ್ನು ಸಂಕಲನದ ಮುಖ್ಯ ಕಥೆ ಮಗದೊಮ್ಮೆ ನಕ್ಕ ಬುದ್ಧನ ಬಗ್ಗೆ ನಾನು ಇಲ್ಲಿ ಮಾತನಾಡುವುದಿಲ್ಲ. ಮನೋ ವೈಜ್ಞಾನಿಕವಾದ ೀ ಕಥೆಯನ್ನು ಓದಲೆಂದಾದರೂ ನೀವು ಈ ಪುಸ್ತಕವನ್ನು ಓದಲೇ ಬೇಕು. ರಾತ್ರಿ ನಿದ್ದೆ ಇಲ್ಲದೆ ಕೆಲಸ ಮಾಡುವ ಹೆಚ್ಚುಗಾರಿಕೆಗೆ ಬಿದ್ದ ಸುಧಾಕರ ಹೇಗೆ ಹಂತಹಂತವಾಗಿ ನೆನಪುಗಳನ್ನು ಕಳೆದುಕೊಳ್ಳುತ್ತಾನೆ ಎಂಬ ರೋಚಕ ಅನುಭವವನ್ನು ಪಡೆಯಲಾದರೂ ನೀವು ಈ ಪುಸ್ತಕವನ್ನು ಓದಲೇ ಬೇಕು.

‍ಲೇಖಕರು avadhi

September 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ತಮ್ಮಣ್ಣ ಬೀಗಾರ

    ಪುಸ್ತಕ ಓದಿ ಅದನ್ನು ತನ್ನೊಳಗೆ ಕರಗಿಸಿಕೊಂಡು ಪುಸ್ತಕದ ಸಂಗತಿಯ ಜೊತೆಯಲ್ಲಿ ಓದುಗರನ್ನೂ ಕರೆದುಕೊಂಡು ಸಾಗುತ್ತಿದ್ದ ನಿಮ್ಮ ಬರೆಹ ಆಪ್ತ ವಾಗಿದೆ. ಈ ಮಾಲಿಕೆಯಲ್ಲಿ ನನ್ನ ಮಕ್ಕಳ ಕಥಾ ಸಂಕಲನ ಪರಿಚಯಿಸಿ ಓದುಗರ ಗಮನ ಸೆಳೆದಿದ್ದೀರಿ.ಸ್ವಲ್ಪ ವಿರಮಿಸಿ ಮತ್ತೊಂದು ಖುಷಿಯನ್ನು ನಮಗೆಲ್ಲ ಹಂಚಿ.ನಿಮಗೂ, ಅವಕಾಶ ನೀಡಿದ ಅವಧಿ ಬಳಗಕ್ಕೂ ವಂದನೆಗಳು.

    ಪ್ರತಿಕ್ರಿಯೆ
  2. Raju hegade

    ಶ್ರೀದೇವಿಯ ಈ ಅಂಕಣದ ಬರಹಗಳು, ಪುಸ್ತಕಗಳನ್ನು ಆಪ್ತವಾಗಿ ಪ್ರವೇಶಿಸುವ ಒಂದು ಹೊಸ ಬಗೆಯಾಗಿದೆ.

    ಪ್ರತಿಕ್ರಿಯೆ
  3. ಜಯಶ್ರೀ. ಜೆ.ಅಬ್ಬಿಗೇರಿ

    ಇನ್ನೂ ಇನ್ನೂ ಓದಬೇಕೆನ್ನುವ ಆಸೆ ಹಚ್ಚಿಸುವ ಅಂಕಣ ತಮ್ಮದಾಗಿತ್ತು ಶ್ರೀ
    ಓ ವಿದಾಯವೇ !!!
    ನಾಡಿನ ಮೌಲಿಕ ಕೃತಿಗಳನ್ನು ಪರಿಚಯಿಸಿ ಓದಿಸಿದ್ದಕ್ಜೆ ಅವಧಿಗೆ & ತಮಗೆ ಮನದಾಳದ ಧನ್ಯವಾದಗಳು

    ಪ್ರತಿಕ್ರಿಯೆ
  4. ರಾಜು ಪಾಲನಕರ ಕಾರವಾರ

    ಶ್ರೀದೇವಿ ಮೇಡಂ ರವರೇ…ಅವಧಿಯ ನಿಮ್ಮ ಶ್ರೀದೇವಿ ರೆಕಮೆಂಡ್ಸ ಅಂಕಣಕ್ಕೆ ನೀವು ವಿದಾಯ ಹೇಳುತ್ತಿರುವುದು ನಿಮ್ಮ ಅಭಿಮಾನಿಯಾದ ನನಗೆ ತುಂಬಾ ಬೇಸರ ತಂದಿದೆ…ಆದರೂ ಕೂಡ ಇಷ್ಟು ದಿನ ವಿವಿಧ ಲೇಖಕರ ಪುಸ್ತಕಗಳ ಕುರಿತು ತುಂಬಾ ಚೆನ್ನಾಗಿ ವಿಮರ್ಶೆ ಮಾಡಿ ಓದುಗರಿಗೆ ತಲುಪಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು..ಇನ್ನು ಮುಂದೆಯು ಕೂಡ ಅವಧಿಯಲ್ಲಿ ನಿಮ್ಮ ಹೊಸ ಅಂಕಣ ಮೂಡಿ ಬರಲಿ

    ಪ್ರತಿಕ್ರಿಯೆ
  5. Kaliveera Kallimani

    Really a pleasant way of review .
    In no way it hurts the writer, instead inspires more to move in the way…

    ಪ್ರತಿಕ್ರಿಯೆ
  6. ಧನಪಾಲ ನಾಗರಾಜಪ್ಪ, ನೆಲವಾಗಿಲು

    ನಮಸ್ಕಾರ ಶ್ರೀದೇವಿ ಕೆರೆಮನೆ ಮೇಡಮ್,

    ಎಂದಿನಂತೆ ನಿಮ್ಮ ಈ ಪುಸ್ತಕದ ವಿಶ್ಲೇಷಣೆ ಮನೋಜ್ಞವಾಗಿದೆ. ನೀವು ಅವಧಿಯಲ್ಲಿ ಇನ್ನೂ ಹಲವು ಪುಸ್ತಕಗಳ ಬಗ್ಗೆ ಬರೆಯಬೇಕಾಗಿತ್ತು. ನಿಮ್ಮಂತಹ ಪುಸ್ತಕ ವಿಶ್ಲೇಷಕರು ಅತಿ ಅಪರೂಪ.‌ ನಿಮ್ಮ ಕನ್ನಡದ ಕೆಲಸ ಅನನ್ಯ.

    ಇಂದಿನ ಕನ್ನಡ ಸಾಹಿತ್ಯದ ವಿಚಾರಕ್ಕೆ ಬಂದಾಗ ವಿಮರ್ಶೆಯ ಪ್ರಕಾರ ಬಹುತೇಕ ಹಾದಿ ತಪ್ಪಿದೆ. ವಿಮರ್ಶೆ ಎನ್ನುವುದು ಲೋಭದ ಸಾಧನೆಯ ಸಾಧನವಾಗಿದೆ. ಇಂತಹ ಚಿಂತಾಜನಕ ಪರಿಸ್ಥಿತಿಯಲ್ಲಿ ನಿಮ್ಮಂತಹವರು ಹೊಸ ಭರವಸೆಯನ್ನು ಮೂಡಿಸಿದ್ರಿ.

    ಈ ಪುಸ್ತಕ ವಿಶ್ಲೇಷಣೆಯ ಅಂಕಣ ಬರೆಯುವುದನ್ನು ನಿಲ್ಲಿಸಲು ಕಾರಣ ವೈಯಕ್ತಿಕ ವಿಚಾರವೆ? ಅಥವಾ ಅವಧಿಯವರ ತೀರ್ಮಾನವೆ?

    ಏನೇ ಆದೂ ಇದು ಬೇಸರದ ಸಂಗತಿ.

    ಮೇಡಮ್,
    ನಿಮ್ಮ ಬಿಡುವಿನಲ್ಲಿ *ಜೀವನ್ಮೃತರು* ಕಾದಂಬರಿಯ ಬಗ್ಗೆ ಬರೆಯಿರಿ. ಇದರಿಂದ ಈ ಕಾದಂಬರಿಯ ಜನಪರವಾದ ಆಶಯ ಹೆಚ್ಚು ಜನರನ್ನು ತಲುಪಲು ಸಹಕಾರಿಯಾಗುತ್ತದೆ.

    ಪ್ರತಿಕ್ರಿಯೆ
  7. Veeresh

    ಶ್ರೀದೇವಿ ಅವರು ಬರೆಯುವ ದಾಟಿ ಸುಂದರ ಮತ್ತು ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಮತ್ತು ಬರಹ ಬಹಳ ಆತ್ಮೀಯ ಅನಿಸುತ್ತದೆ.

    ಪ್ರತಿಕ್ರಿಯೆ
  8. ಮ ಶ್ರೀ ಮುರಳಿ ಕೃಷ್ಣ

    ಶ್ರೀದೇವಿ ಕೆರೆಮನೆ ಅವರ ಈ ಸರಣಿ ಬರೆಹಗಳು ಅವರ ಬರವಣಿಗೆಯ ಕಸಬಿಗೆ ಇನ್ನೊಂದು ಆಯಾಮವನ್ನು ನೀಡಿದೆ. ಅವರಿಗೆ ಮತ್ತು ‘ಅವಧಿ’ಗೆ ಹಾರ್ದಿಕ ಅಭಿನಂದಗೆಗಳು..

    ಪ್ರತಿಕ್ರಿಯೆ
  9. Sangeeta Kalmane

    ನಿರಂತರವಾಗಿ ಅವಧಿಯಲ್ಲಿ ಬರಿತಾನೇ ಇರಬೇಕಿತ್ತು…. ಛೆ! ವಿರಾಮನಾ…??

    ಪ್ರತಿಕ್ರಿಯೆ
  10. ಸುಜಾತ ಲಕ್ಷೀಪುರ

    ಪ್ರತಿವಾರವೂ ಶ್ರೀದೇವಿ ಅವರ ಅಂಕಣ ಓದಲು ಕಾಯುತ್ತಿದ್ದೇನೆ. ಅವರ ಬರವಣಿಗೆಯ ಶೈಲಿ ನನಗೆ ಎಂದಿಗೂ ಬೆರಗೆ.
    ಕನ್ನಡದಲ್ಲಿ ಹೊಸ ಬಗೆಯಲ್ಲಿ ಪುಸ್ತಕ ಪರಿಚಯ ಮಾಡಿದವರು ಶ್ರೀದೇವಿ. ಅನುಭವಗಳ ಕಥನದ ಮೂಲಕ ಪುಸ್ತಕವನ್ನು ಪ್ರವೇಶಿಸಿ, ಪುಸ್ತಕಗಳ ಸ್ವಾರಸ್ಯಕರ ಸಂಗತಿಗಳ ಮೂಲಕ ಕಥೆ ಹೇಳುತ್ತಾ,ಪ್ರತಿ ಪುಸ್ತಕದ ಒಳಗಿನ ಸತ್ವವನ್ನು ಕಾಳಜಿಯಿಂದ ಕಟ್ಟಿಕೊಡುವ ಅವರ ಬರಹ ವಿಶಿಷ್ಟ.
    ಥ್ಯಾಂಕ್ಯೂ ಶ್ರೀದೇವಿಯವರೆ.ನಿಮ್ಮ ಬರವಣಿಗೆಗೆ ನನ್ನ ಸಲಾಮ್.. ನಿಮ್ಮ ಸಮಾಜಪರ ಸಂವೇದನಾಶೀಲ ಸೂಕ್ಷ್ಮ ಮನ,ಗ್ರಹಿಕೆ ಮತ್ತು ಅಭಿವ್ಯಕ್ತಿಗೆ ನಮನಗಳು.
    ನಿಲ್ಲಿಸಬೇಡಿ ಅಂಕಣ ಬರಹನಾ,ಹೊಸ ರೀತಿಯಲ್ಲಿ ಮತ್ತೆ ಪುನಶ್ಚೇತನ ದೊಂದಿಗೆ ಬನ್ನಿ..ಪ್ಲೀಸ್..
    ಥ್ಯಾಂಕ್ಯೂ ಅವಧಿ ತಾಣದವರಿಗೆ.ಇಂತಹ ಅಂಕಣದ ಬೆನ್ನಿಗಿದ್ದದ್ದಕ್ಕೆ.
    ಮತ್ತೆ ಶ್ರೀದೇವಿ ಅವರಿಂದ ಪುಸ್ತಕ ಪರಿಚಯದ ಅಂಕಣವೇ ಬರಲಿ.ಏಕೆಂದರೆ ಅವರ ಅಂಕಣ ಓದಿ ಪುಸ್ತಕ ಕೊಂಡು ಓದುತ್ತಿರುವ ಅವರ ಅಭಿಮಾನಿಗಳಲ್ಲಿ ನಾನೂ ಒಬ್ಬಳು.ಓದಿಸುವ ಸಂಸ್ಕೃತಿಯ ಬೆಳಕ ಹಚ್ಚಿದ ಶ್ರೀದೇವಿ ಅವರಿಗೆ ಮತ್ತೊಮ್ಮೆ ಧನ್ಯವಾದಗಳು.

    ಪ್ರತಿಕ್ರಿಯೆ
  11. Jogi

    ಶ್ರೀದೇವಿ ಹಲವಾರು ಪುಸ್ತಕಗಳನ್ನು ನಮಗೆ ಪರಿಚಯ ಮಾಡಿಕೊಟ್ಟಿದ್ದರು. ಅವರ ಬರಹಗಳನ್ನು ಓದಿ ಅನೇಕ ಪುಸ್ತಕಗಳನ್ನು ನಾನು ಓದುವಂತಾಯಿತು. ಅಂಕಣ ನಿಂತರೆ ಏನಂತೆ, ಓದಿದ ಒಳ್ಳೆಯ ಪುಸ್ತಕದ ಬಗ್ಗೆ ಆಗಾಗ ಆಗಾಗ ಬರೆಯುತ್ತಾ ಇರಿ.

    ಪ್ರತಿಕ್ರಿಯೆ
  12. Lalitha Siddabasavaiah

    ಶ್ರೀ , ಮತ್ತೆ ವಿರಾಮಾಶ್ರಮಕ್ಕೆ ಹೋಗಬೇಡಿ. ಜೋಗಿಯವರು ಅಂದಂತೆ ಅಂಕಣ ನಿಂತರೇನು , ನಿಮಗೆ ಇಷ್ಟವಾದ ಬುಕ್ಕಿನ ಬಗ್ಗೆ ಬರೆಯಿರಿ. ಪ್ರಕಟವಾಗುವ ಹೊಸಹೊಸ ಪುಸ್ತಕಗಳಲ್ಲಿ ಓದುವುದು ಒಪ್ಪಾಲದರೆ ನೂರ್ಪಾಲು ಬಾಕಿ ಇರುತ್ತದೆ. ಇಂತಹ ಅಂಕಣಗಳಲ್ಲಿ ಒಂದಿಷ್ಟಾದರು ವಿಷಯ ತಲೆಗೆ ಹೋಗುತ್ತದೆ. ಬರೆಯುತ್ತಿರಿ. ಮೋಹನ್ ಅವರಂತೂ ಪುಸ್ತಕ ಪಕ್ಷಪಾತಿ. ಹೇಗೋ ಇಲ್ಲಿ ಹಾಕಿಯೇ ಹಾಕ್ತಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: