ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೆ ಖುರ್ಚಿಗೊಂದು ಕವಿತೆ

ದಾದಾಪೀರ್ ಜೈಮನ್ 

‘ಸೂಫಿ…
ಈ ಡೇಟಿಂಗ್ ತಾಣಗಳಲ್ಲಿ ಶುರುವಾಗುವ
ಪ್ರೇಮಗಳು ನಿಜವಾಗಿರುತ್ತವೆಯೆ?’
ಅಂದು ಸುಮ್ಮನೆ ಮನೆಗೆ ಮರಳಬೇಕಾದ
ನಾನು ‘ಗ್ರೈಂಡರ’ನು ತೆರೆದಾಗ
ಪರಸ್ಪರ ಇಬ್ಬರ ವಿರಹಕ್ಕುತ್ತರವಾಗಿ
ಕೂಡಿ, ಕಾಮಿಸಿ, ಕಳೆದು ಹೋದ ನಾವು
ತರುವಾಯದ ಯಾವ ಹೊತ್ತಲ್ಲಿ
ಸಂಬಂಧಕ್ಕೆ ಪರಸ್ಪರ ಪ್ರೀತಿ

ಎಂದು ಹೆಸರಿಟ್ಟುಕೊಂಡೆವೆಂಬುದಕೆ
ಮರೆವು ಅಮರಿಕೊಂಡುಬಿಟ್ಟಿದೆ…

ನಿನ್ನ ಬಗ್ಗೆ ನಾನು  ಕೃತಜ್ಞನಾಗಿರಬೇಕು; ಗೊತ್ತಿದೆ
ಡ್ರಗ್ ರಿಹ್ಯಾಬಿನ ಬಾಗಿಲ ತಟ್ಟುವುದ ತಡೆದವನು
ಖಿನ್ನನಾಗಿ ಕಳೆದುಹೋದಾಗ ಕುಶಾಲು ಕೇಳಿದವನು
ಎಲ್ಲ ಪ್ರೇಮಿಗಳಂತೆಯೇ
ರೆಸ್ಟುರಾ- ಮಲ್ಟಿಪ್ಲೆಕ್ಸುಗಳಿಗೆ ಸುತ್ತಿಸಿದವನು
ಕಿನಾರೆಯಾಗಿ ಕಾದವನು
ಅಂತೆಯೇ
ಭಾರತೀಯ ಮದುವೆಗಳ ದಂಪತಿಗಳಂತೆ
ಸರ್ವವನೂ ಸಹಿಸಿ ಸಲಹುವ ಸಂಗಾತಿಗೆ;
‘ಮದುವೆ ಮೆಟೀರಿಯಲ್ಲೆಂದು ಹಣೆಪಟ್ಟಿ ಹಚ್ಚಲು
ಹವಣಿಸಿದವನು
ನಿನ್ನ ಅಚ್ಚಿಗಿಳಿಯದೆ ಉಳಿದಾಗ
ಗುಡಿಸೆದ್ದ ನಿನ್ನಲ್ಲೂ
ಶಾಖಕ್ಕೆ ಆವಿಯಾಗುವ ಅಲೆಮಾರಿಯ
ಸಾಮ್ಯಗಳಿರುವುದು ನಿನಗೂ ಗೊತ್ತಿದೆ

ನನಗೆ ಸೋತವನು ನನ್ನ ಮೇಲೆ ಸೋತು
ದೂರವಾಗಿ ಹೋದ ನೀನು
ವಿದಾಯಗಳಲ್ಲಿ ನಂಬಿಕೆ ಬರಿಸುತ್ತಿರುವುದಕೆ
ಬೇಸರವಿದ್ದರೂ
ನಿನ್ನ ನೆನಪಾಗುತ್ತದೆ ಎಂಬುದು
ನಿಜವೆಂದು ನಿಡುಸುಯ್ಯುತ್ತೇನೆ
ಕೈಕೈ ಹಿಡಿದು ಓಡಾಡಿದ ಬೀದಿಗಳಲ್ಲೀಗ
ಒಬ್ಬಂಟಿ ನಡೆದು ನೆನಪುಗಳ ಜೀವಿಸಿ
ನಿನ್ನಷ್ಟೇ ಕಾಳಜಿಯಿರುವ ಆಕೃತಿಗಾಗಿ
ಕಾಯುತ್ತೇನೆ
ಮತ್ತೆ
ಡೇಟಿಂಗ್ ತಾಣಗಳಲ್ಲಿ ತಡಕಾಡುತ್ತೇನೆ

[NOTE : ಗ್ರೈಂಡರ್ : Queer dating app]

‍ಲೇಖಕರು avadhi

25 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading