‘ರಿಲ್ಕ’ನ ಜೊತೆ ಬಂದಿದ್ದಾರೆ ಎಚ್ ಎಸ್ ಆರ್..

ಕನ್ನಡದ ಮಾನವನ್ನು ಎತ್ತರಿಸಿದ ನಮ್ಮೆಲ್ಲರ ಪ್ರೀತಿಯ ಎಚ್.ಎಸ್. ರಾಘವೇಂದ್ರ ರಾವ್ ಅವರು ಹೊಸ ಕೃತಿಯೊಂದಿಗೆ ಬಂದಿದ್ದಾರೆ.

ರಿಲ್ಕ್ ಕನ್ನಡಕ್ಕೆ ಅಪರಿಚಿತನೇನಲ್ಲ. ಕೆ ವಿ ತಿರುಮಲೇಶ್, ಓ ಎಲ್ ನಾಗಭೂಷಣಸ್ವಾಮಿ ಅವರು ಈಗಾಗಲೇ ರಿಲ್ಕ್ ಗೆ ಕನ್ನಡ ಕಲಿಸಿದ್ದಾರೆ.

ಈಗ ಎಚ್ ಎಸ್ ಆರ್ ಅವರೇ ಹೇಳುವಂತೆ ‘ಅವರ ಒಳಗನ್ನು ಬೆಳಗಿಸಿದ’ ರಿಲ್ಕ್ ನ ಕವಿತೆಗಳನ್ನು ನಮ್ಮ ಮುಂದೆ ಹಿಡಿದಿದ್ದಾರೆ. ‘ಅವನ ಬೆಂಕಿ-ಬೆಳಕುಗಳು ಓದುವ ನಿಮಗೂ ತಟ್ಟಲಿ. ಕನ್ನಡ ಈ ಕವಿಯನ್ನು ಒಳಗೊಳ್ಳಲಿ…’ ಎನ್ನುವ ಆಶಯದೊಂದಿಗೆ.

ಇಲ್ಲಿನ ಕವಿತೆಗಳಿಗೆ ಪೂರಕವಾಗಿ ಎಚ್ ಎಸ್ ಆರ್ ಸುಧೀರ್ಘ ಮುನ್ನುಡಿಯನ್ನು ಬರೆದಿದ್ದಾರೆ. ಈ ಮುನ್ನುಡಿ ಬಹುಷಃ ರಿಲ್ಕ್ ನಿಗೆ ಸಿಕ್ಕ ಬಹು ಮುಖ್ಯ ಭಾಷ್ಯ.

ಈ ಕೃತಿಯನ್ನು ಪಲ್ಲವ ಪ್ರಕಾಶನ ಪ್ರಕಟಿಸಿದೆ. ಪಲ್ಲವ ವೆಂಕಟೇಶ್ ಅವರ ಕಾವ್ಯ ಪ್ರೀತಿ ಮತ್ತೆ ಇದರಲ್ಲಿ ಮೆರೆದಿದೆ.

ಕೃತಿಯನ್ನು ಕೊಳ್ಳಲು- 94803 53507 ಸಂಪರ್ಕಿಸಿ  

“You are not a poet, but the very embodiment of poetry”

-Marina Tsvetaeva

ಸಂಗದ ನಡುವೆಯೇ ಉಳಿದುಬಿಡುವ ಒಂಟಿತನವು ಎಲ್ಲ ಕಾಲದಲ್ಲಿಯೂ ಕಾಡುವ ಪಿಡುಗು. ‘ಲೋಕದ ಕೇಂದ್ರವೂ ನಾನೇ, ಪರಿಧಿಯೂ ನಾನೇ ಉಳಿದುದೆಲ್ಲ ನನ್ನ ಹಂಬಲಗಳಿಗೆ ಅನ್ನ’ ಎಂದುಕೊಳ್ಳುವ ನಮ್ಮ ಕಾಲದಲ್ಲಿ  ಈ ಪಿಡುಗು ಇನ್ನಷ್ಟು ಉತ್ಕಟವಾಗುತ್ತದೆ. ಅನ್ನ ತಿಂದವರೇ ಬದುಕಲಾಗದ ಕಾಲದಲ್ಲಿ ಚಿನ್ನ ತಿಂದವರ ಗತಿಯೇನು? ಕಳೆದ ಹಲವು ವರ್ಷಗಳಿಂದ  ಈ ತುಂಬು, ಈ ಖಾಲಿ ನನ್ನನ್ನು ಹಿಂಬಾಲಿಸಿತ್ತು.

ಜೀವದ ಗೆಳೆಯರಾಗಿದ್ದ ರಾಜು ಮತ್ತು ನೇಹಿಗನಂತೆ ಇದ್ದ ತಮ್ಮ ಮೂರ್ತಿ, ಕಾಣದ ಕಡಲಿನಲ್ಲಿ ಕರಗಿಹೋದ ಮೇಲೆ ನನ್ನೊಳಗೆ ಯಾವುದೋ ಒಳಹಸಿವು ಉರಿಯತೊಡಗಿತು.

ಸಮಾಜವನ್ನು ಬದಲಿಸುವ ದಂದುಗದಲ್ಲಿ ಕ್ರಮೇಣ ತುಂಬಿಕೊಂಡ ಹುಸಿ, ಆತ್ಮವಂಚನೆ ಮತ್ತು ‘ಪಕ್ಷ’ಪಾತಗಳು ಅಂಥ ಕೆಲಸಗಳಿಂದಲೂ ನನ್ನನ್ನು ವಿಮುಖನಾಗಿ ಮಾಡಿದವು. ದೈವಭಕ್ತಿಯ ನೆರವು ಬೇಡದ ‘ಆಧ್ಯಾತ್ಮ’ಕ್ಕಾಗಿ ಮನಸ್ಸು ಹಾತೊರೆಯಿತು. ಗೆಳೆಯ ಕೆ.ವಿ. ನಾರಾಯಣ ದಶಕಗಳ ಹಿಂದೆಯೇ ಇಂಥದೊಂದು ‘ಪವಿತ್ರ’ದ ಬಗ್ಗೆ ಮಾತನಾಡಿದ್ದ. (Sanctity) ಮಲಿನದ ಮೆರವಣಿಗೆಯಲ್ಲಿ ಮಡಿಯನ್ನು ಹುಡುಕುವುದು ಹೇಗೆ? ಒಳಗು ಹೊರಗುಗಳು ಬೆಳಕಿಗಾಗಿ ಹಾತೊರೆಯುತ್ತಿದ್ದ ಆ ದಿನಗಳಲ್ಲಿ, ಐದಾರು ವರ್ಷಗಳ ಹಿಂದೆ ಸಿಕ್ಕವನು ಜರ್ಮನಿಯ ಈ ಕವಿ ರಿಲ್ಕ.

ಕವಿಯಾಗಿ ಇವನಿಗೆ ಹೆಗಲೆಣೆಯಾದ ನೆರೂಡ ಕೂಡ ಚಲಿಸದ ಸೀಮೆಗಳಲ್ಲಿ ಆದಿ-ಅಂತ್ಯಗಳನ್ನು ಕಂಡವನು ಈ ಜರ್ಮನ್ ಕವಿ. ಇವರಿಬ್ಬರೂ ನನ್ನನ್ನು ಕಾಡಿದರು, ನನ್ನಲ್ಲಿ ಕೂಡಿದರು. ಹೊಸ ಕಣ್ಣುಗಳಿಂದ ನೋಡಿದಾಗ, ಹಳೆಯ ಓದಿಗೆ ಹೊಸ ರೆಕ್ಕೆಗಳು ಮೂಡಿಬಂದವು. ನಮ್ಮ ಮಧುರಚೆನ್ನರು ಹಾಡಿದಂತೆ, “ಬಂತು ಬಂತೆಲೆ ಬಂತು ಬಂತು ಘನ ಸಿರಿ ಬಂತು, ಬಂತೆಂದರೂ ಇದ್ದುದಿದ್ದೆ ಇತ್ತು.” ಎನ್ನುವಂತಹ ಸನ್ನಿವೇಶ. ಸ್ವಲ್ಪ ಮಟ್ಟಿಗೆ ಜಿಡ್ಡು ಕೃಷ್ಣಮೂರ್ತಿಯವರ ಬರವಣಿಗೆಯಿಂದ ಸಾಧ್ಯವಾದ ಬಿಡುಗಡೆ ಮತ್ತು ಬಹುಮಟ್ಟಿಗೆ ಇವರಿಬ್ಬರ ಕವಿತೆಯಿಂದ ಗಾಯಗಳು ಮಾಯತೊಡಗಿದವು.

ಆದರೇನು? ಗಾಯಗೊಳ್ಳುವ ಛಾತಿ ಇಲ್ಲದಿದ್ದರೆ, ಸುಖದ ಸುಳಿವೂ ಸಿಗುವುದಿಲ್ಲ. ಬೆಳಕು ಬೇಕಾದವರಿಗೆ ಕತ್ತಲೆಯ ಅಂಜಿಕೆ ಇರಬಾರದು. ಆದರೂ ‘ರೂಢಿ’ಯ ಸಂಕೋಲೆಗಳಿಂದ ಬಿಡುಗಡೆ ಸುಲಭವಲ್ಲ. ಒಳಗು-ಹೊರಗುಗಳ ನಡುವೆ ಹರಿಗಡಿಯದ ಮೈತ್ರಿ ಎಂದಿಗೂ ಇರುವುದಿಲ್ಲ. ಒಂದರಿಂದ ಇನ್ನೊಂದು ನಲುಗದಂತೆ ನೋಡಿಕೊಳ್ಳುವುದು ಸುಲಭವಲ್ಲ. ಈ ಪಯಣದಲ್ಲಿ ನನಗೆ ಹಾದಿ ತೋರಿದ ರಿಲ್ಕನ ಬಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುವುದು ಈ ಬರವಣಿಗೆಯ ಉದ್ದೇಶ.

1875-1926ರ ಅವಧಿಯಲ್ಲಿ ಯೂರೋಪು ಆಯುಧಗಳನ್ನು ತಯಾರಿಸುತ್ತಿದ್ದ ಕಮ್ಮಾರನ ಕುಲುಮೆ. ರಾಷ್ಟ್ರೀಯತೆಯ ಹೆಸರಿನಲ್ಲಿ ನಡೆಯುತ್ತಿದ್ದ ಯುದ್ಧಗಳು ವ್ಯಾಪಾರಿಗಳ ಆಡುಂಬೊಲವಾಗಿದ್ದ ಕಾಲ ಅದು. ಈ ಸಂತೆಗದ್ದಲದಲ್ಲಿ, ದೇಶದೇಶಗಳ ಗಡಿಗೆರೆಗಳನ್ನು ದಾಟಿ ಜರ್ಮನಿ, ಇಟಲಿ, ರಷ್ಯಾ, ಸ್ವಿಟ್ಸರ್ಲೆಂಡ್ ಮುಂತಾದ ಹತ್ತು ಹಲವು ಕಡೆ ತಿರುಗುಳಿಯಂತೆ ಬದುಕಿದ್ದ ರಿಲ್ಕ, ಇದೆಲ್ಲವನ್ನೂ ದಾಟಿ ಜೀವನದ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕಿದವನು. ಸರಿಸುಮಾರು ಅವನಿಗೆ ಸಮಕಾಲೀನರಾಗಿದ್ದ ಟಾಲ್ ಸ್ಟಾಯ್, ದಾಸ್ತೋವಸ್ಕಿ, ಬಾದಿಲೇರ್, ನೀಷೆ ಮುಂತಾದವರು ದೇವರು ಎಂಬ ಪರಿಕಲ್ಪನೆಯ ಸಂಗಡ ನಡೆಸಿದ ಗುದುಮುರಿಗೆಗಳು, ಕಂಡ/ಕಾಣದ ನಿಲುಗಡೆಗಳು ನಮ್ಮನ್ನು ತಲ್ಲಣಗೊಳಿಸುತ್ತವೆ. ಕ್ರಿಶ್ಚಿಯಾನಿಟಿಯನ್ನು ‘ಕಟಕಟೆ’ಯಲ್ಲಿಟ್ಟು ಪರಿಶೀಲನೆ ನಡೆಸಿದ ಈ ಬಗೆಗಳು ಮನುಷ್ಯನ ಆಧ್ಯಾತ್ಮಿಕ, ವೈಚಾರಿಕ ಇತಿಹಾಸದ ರೋಚಕ ಅಧ್ಯಾಯಗಳು. ಇವರಲ್ಲಿ ಈಗ ನನ್ನ ಗಮನದ ಕೇಂದ್ರ ರಿಲ್ಕ.

ರಿಲ್ಕನು ಮೊದಲು ಕವಿ, ಕೊನೆಗೂ ಕವಿ. ಹೊರಗೆ ಕಂಡುದನ್ನು ಕವಿತೆಯಾಗಿ ಕಟ್ಟಿಕೊಡುವ ಹಾದಿ ಅವನದಲ್ಲ. ಅವನಿಗೆ ಕವಿತೆಯೇ ಗುರಿ, ಅದೇ ಹಾದಿ. ಆದರೆ, ಮನುಷ್ಯನ ಅಸ್ತಿತ್ವದ ಅರ್ಥವನ್ನು, ಸಂಬಂಧಗಳಲ್ಲಿ ಅಂತೆಯೇ ಒಂಟಿತನದಲ್ಲಿ ಹುಡುಕುವ ಹವಣಿಕೆ ಅವನದು. ತಾರುಣ್ಯದಲ್ಲಿ ತನ್ನ ದೇಶದ ಪ್ರಕ್ಷುಬ್ಧ ನಗರಗಳಿಂದ ಹೊರಟು, ರಷ್ಯಾ ದೇಶದ ಘನನೀರವ ಬಯಲುಗಳಲ್ಲಿ ತಂಗುದಾಣವನ್ನು ಕಂಡುಕೊಳ್ಳುತ್ತಾನೆ. ಆ ಅನುಭವದ ಬಗ್ಗೆ ಅವನು ಬರೆದ ಕವಿತೆಗಳನ್ನು ‘ಲೆಟರ್ಸ್ ಟು ಗಾಡ್’ ಎಂದು ಕರೆಯುತ್ತಾನೆ. ಕಾಲ ಕಳೆದಂತೆ ಬದುಕು ಒಡ್ಡುವ ಸವಾಲುಗಳನ್ನು ಎದುರಿಸಲು ಧರ್ಮಗಳು ಬಳಸುವ ಉಪಕರಣಗಳು ಮೊಂಡು ಎನಿಸುತ್ತವೆ. ಮನುಷ್ಯಸಂಬಂಧಗಳು ಹಿಡಿಯುವ ದುರಂತಪಥಗಳ ಅನೂಹ್ಯತೆ ಮತ್ತು ಅಸಹಾಯತೆಗಳು ಅವನನ್ನು ಕಾಡತೊಡಗುತ್ತವೆ.

ಮುಖ್ಯವಾದ ಮಾತೆಂದರೆ, ಮನುಷ್ಯನಿಗೆ ಸಂಬಂಧಿಸಿದ ಪ್ರಶ್ನೆಗಳು ಕೇವಲ ಸಾಮಾಜಿಕವಾಗಲೀ ಸಾಮುದಾಯಿಕವಾಗಲೀ ಅಲ್ಲವೆಂಬ ಸತ್ಯವನ್ನು ಅವನು ಬಹು ಬೇಗ ಮನಗಾಣುತ್ತಾನೆ. ಸಾಮಾಜಿಕ ಸಮಸ್ಯೆಗಳ ಪರಿಹಾರವು ಮನುಷ್ಯನನ್ನು ಬಂಧಮುಕ್ತನಾಗಿ ಮಾಡಲಾರವು. ಏಕೆಂದರೆ ಆ ಬಂಧನದ ಕಾರಣವು ಅವನೊಳಗಡೆಯೇ ಇದೆ, ಲೋಕಸ್ವರೂಪದಲ್ಲಿಯೇ ಇದೆ. ಅಷ್ಟೇ ಮುಖ್ಯವಾಗಿ ನಮ್ಮ ಒಳಮನದ ಓವರಿಗಳಲ್ಲಿ ಅಡಗಿ ಕುಳಿತು ನಮ್ಮನ್ನು ನಿಯಂತ್ರಿಸುವ ನಿಗೂಢ ಶಕ್ತಿಗಳಲ್ಲಿಯೇ ಇವೆ. ಈ ಸಮಸ್ಯೆಗಳ ಅರ್ಥ ಮತ್ತು ಅವುಗಳನ್ನು ಬಿಡಿಸಿಕೊಳ್ಳುವ ಹಾದಿಗಳನ್ನು ಕಂಡುಕೊಳ್ಳಬೇಕೆಂಬ ತಾತ್ವಿಕ ಕುತೂಹಲವು ರಿಲ್ಕನನ್ನು ಕಾಡಿದೆ.

ಭಾರತೀಯ ತತ್ವಶಾಸ್ತ್ರ ಅಥವಾ ಧರ್ಮಕ್ಕೆ ಅಂಟಿಕೊಂಡಂತೆ ರೂಪಿತವಾದ ಹಲವು ತಾತ್ವಿಕತೆಗಳು ಇಂಥ ಪ್ರಶ್ನೆಗಳಿಗೆ ಖಚಿತವಾದ ಉತ್ತರಗಳನ್ನು ಕಂಡುಕೊಂಡಂತೆ ಬೀಗುತ್ತವೆ; ಬಹಳ ಸರಳವಾದ ನಂಬಲಾಗದ ಪರಿಹಾರಗಳನ್ನು ನೀಡುತ್ತವೆ. ನಂಬಿಕೆ, ಆಸ್ತಿಕತೆ, ಅನ್ಯ-ಲೋಕ ಮುಂತಾದ ಸಂಗತಿಗಳನ್ನು ಅವಲಂಬಿಸುವ ಇಂಥ ತಾತ್ವಿಕತೆಗಳು ಆಧುನಿಕ ಮನಸ್ಸುಗಳನ್ನು ಬಹಳ ದೂರ ಕರೆದೊಯ್ಯಲಾರವು. ಪಾಶ್ಚಾತ್ಯ ದೇಶಗಳ ಧಾರ್ಮಿಕ-ತಾತ್ವಿಕತೆಯೂ ಇದಕ್ಕಿಂತ ಭಿನ್ನವಲ್ಲ. ಆದರೆ, ರಿಲ್ಕ ಇಂತಹ ಯಾವುದೇ ಕಣ್ಕಟ್ಟುಗಳನ್ನು ಒಪ್ಪಿಕೊಳ್ಳುವುದಿಲ್ಲ. ತನ್ನ ಆಚೆಗೆ ಇರುವ ಯಾವುದೇ ಅವಲಂಬನವನ್ನೂ ಅವನು ನಂಬುವುದೂ ಇಲ್ಲ ನಿರೀಕ್ಷಿಸುವುದೂ ಇಲ್ಲ. ತನ್ನ ಆಕ್ರಂದನವನ್ನು ಯಾರೂ ಯಾರೂ ಕೇಳುವುದಿಲ್ಲ, ‘ದೇವರೂ ಕೇಳುವುದಿಲ್ಲ-ದೇವದೂತರೂ ಕೇಳುವುದಿಲ್ಲ’. ಎಂದು ಅವನು ಘೋಷಿಸುತ್ತಾನೆ. ಸಿದ್ಧ ಉತ್ತರಗಳಿಲ್ಲದಾಗ ಪ್ರತಿಯೊಂದು ಹೊಸ ಹುಟ್ಟೂ ಹೊಸ ಹುಡುಕಾಟದಿಂದಲೇ ಮೊದಲಾಗುತ್ತದೆ.

ಹಾಗೆಂದು ರಿಲ್ಕ ಪರಿಹಾರಗಳನ್ನು ಕಂಡುಕೊಳ್ಳಲಿಲ್ಲವೆಂದು ಹೇಳುವುದು ಕಷ್ಟ. ಅವನ ಕವಿತೆಗಳ ಹಾಗೂ ಜೀವನದ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ಈ ಸಂಗತಿಯು ಗೊತ್ತಾಗುತ್ತದೆ. ರಷ್ಯಾ ದೇಶದ ‘ಹಿಮತುಂಬಿದ ಏಕಾಂತಗಳಲ್ಲಿ’ ದೇವರೊಡನೆ ಸಂವಾದ ನಡೆಸಿದ ಕಿರುಹರೆಯದ ತರುಣನಿಗೂ ದ್ಯೂನೋ ಎಲಿಜಿಗಳನ್ನು ಬರೆದ ನಡು ವಯಸ್ಸಿನ ಜಿಜ್ಞಾಸುವಿಗೂ ನಡುವೆ ಸುದೀರ್ಘ ಪಯಣದ ಅಂತರವಿದೆ. ಅದು ಮುಗ್ಧವಾದ ನಂಬಿಕೆಯಿಂದ ಅನುಮಾನಗಳ ಕಡೆಗೆ ಅಲ್ಲಿಂದ ಮತ್ತೆ ನಂಬಬಹುದಾದ ಮೌಲ್ಯಗಳ ಕಡೆಗೆ ನಡೆಸಿದ ಪಯಣ. ಅದು ಮುಗಿಯದ ಪಯಣವೂ ಹೌದು. ಏಕೆಂದರೆ ಐವತ್ತೊಂದು ಸಾಯುವ ವಯಸ್ಸಲ್ಲ. ಅದು ಭ್ರಮನಿರಸನಗಳ ವಯಸ್ಸು. ಆದರೆ ಅವನು ಪಡೆದುಕೊಂಡ ತಿಳಿವಳಿಕೆಯು ಲೋಕಾನುಭವ ಮತ್ತು ಧ್ಯಾನಗಳ ಸಂಯೋಜನೆಯಿಂದ ಮೂಡಿತ್ತು. ಆದರೆ, ಅದು ಮೈಪಡೆದುಕೊಂಡ ಮಾಧ್ಯಮ ಮಾತ್ರ ಕವಿತೆಯೇ. ಪ್ರಣಯ, ಹೆಣ್ಣಿನ ಬದುಕನ್ನು ಆವರಿಸಿಬಿಡುವ ದುರಂತಗಳು ಮತ್ತು ಅವಳು ಅವುಗಳನ್ನು ಎದುರಿಸುವ ಧೀರ ಬಗೆಗಳು, ಬಾಲ್ಯದ ಮುಗ್ಧತೆಯನ್ನು ಶಿಕ್ಷಣ ಹಾಗೂ ನಾಗರಿಕತೆಗಳು ನಾಶಮಾಡುವ ಬಗೆಗಳು, ನುಡಿಗೊಡಲಾಗದ ಸಂಬಂಧ ಸೂಕ್ಷ್ಮಗಳು, ಹಣ ಮತ್ತು ವ್ಯಾಪಾರಗಳೇ ಕೇಂದ್ರವಾದ ಯೂರೋಪಿನ ‘ಮೇನ್ ಸ್ಟ್ರೀಮ್’ ಬದುಕು ಇವೆಲ್ಲವೂ ಅವನ ಅಂತರಂಗದಲ್ಲಿ ಕರಗಿಹೋಗುತ್ತವೆ. ಕವಿಯ, ಕಲಾವಿದನ ಬದುಕಿನ ಬಗೆಗೂ ಇಂತ ‘ಮೆಟೀರಿಯಲಿಸ್ಟ್’ ಆದ ಜೀವನಕ್ರಮಕ್ಕೂ ಇರುವ ಸಂಘರ್ಷವನ್ನು ಅವನು ಮನಗಾಣುತ್ತಾನೆ. ಸ್ವತಃ ತನ್ನ ಬದುಕು ಹಲವು ಸಂಬಂಧಗಳ, ‘ಪೇಟ್ರನ್-ಪ್ರೇಯಸಿಯರ’ ನಡುವೆ ತರಗೆಲೆಯಂತೆ ಹಾರುತ್ತಿದ್ದರೂ ಕವಿತೆಯ ಬಗೆಗಿನ ಬದ್ಧತೆಯನ್ನು ಉಳಿಸಿಕೊಳ್ಳುತ್ತಾನೆ. ತನ್ನ ಕಾಲದ ಹಲವು ಸಂತರಂತೆ ಏಸುಕ್ರಿಸ್ತನಿಗೂ ‘ಕ್ರಿಶ್ಚಿಯಾನಿಟಿ’ಗೂ ಇರುವ ಅಂತರವನ್ನು ಅವನು ಗುರುತಿಸುತ್ತಾನೆ. ಹಾಗೆಯೇ ಕಲೆ ಮತ್ತು ಸಂಸ್ಕೃತಿಗಳನ್ನು ಅವುಗಳಿಗೆ ಚೌಕಟ್ಟುಗಳಾಗಿರುವ ಧರ್ಮ ಮತ್ತು ರಾಜಕಾರಣಗಳಿಂದ ಬೇರ್ಪಡಿಸಿ ನೋಡುವುದೂ ಅವನಿಗೆ ಸಾಧ್ಯವಾಗುತ್ತದೆ.

ಕವಿತೆಗಿಂತ ಭಿನ್ನವಾದ ಇತರ ಕಲೆಗಳ ಜೊತೆಗೆ, ಬಹಳ ನಿಕಟವಾದ ಸಂಬಂಧವನ್ನು ಪಡೆಯಲು ಅವನಿಗೆ ಸಾಧ್ಯವಾಯಿತು. ಈ ಸಂಬಂಧವು ಕೇವಲ ಓದು ಮತ್ತು ಮ್ಯೂಸಿಯಂ/ಆರ್ಟ್ ಗ್ಯಾಲರಿಗಳಿಂದ ಬಂದುದಲ್ಲ. ಬದಲಾಗಿ ಅವನಿಗೆ ಮಹಾನ್ ಕಲಾವಿದರಾದ ಸಂಗಡ ಕೆಲಸ ಮಾಡುವ ಅವಕಾಶ ಸಿಕ್ಕಿತು. ಯೂರೋಪಿನ ಬಹು ದೊಡ್ಡ ಶಿಲ್ಪಿಯಾದ ಅಗಸ್ತೆ ರೋದಾನ್ ನ ಕಾರ್ಯದರ್ಶಿಯಾಗಿ ಕೆಲಸಮಾಡುವ ಅವಕಾಶ ರಿಲ್ಕನಿಗೆ ಸಿಕ್ಕಿತ್ತು. (1905-1906) ಅದಕ್ಕೆ ಮೂರು ವರ್ಷಗಳ ಹಿಂದೆ, ಅವನು ಕಲಾವಿಮರ್ಶಕನಾಗಿ ರೋದಾನ್ ಬಗ್ಗೆ ಒಂದು ಪುಟ್ಟ ಪುಸ್ತಕವನ್ನೇ ಬರೆಯುತ್ತಾನೆ. ರೋದಾನ್, ರಿಲ್ಕನ ಕವಿತೆಯ ದಿಕ್ಕನ್ನು ಬದಲಿಸುತ್ತಾನೆ. ಆತ್ಮಕೇಂದ್ರಿತವಾದ ಬರವಣಿಗೆಯ ರೂಪುರೇಷೆಗಳನ್ನು ಕಳೆದುಕೊಳ್ಳದೆ, ಲೋಕವನ್ನೂ ಗ್ರಹಿಕೆಯೊಳಗೆ ತಂದುಕೊಳ್ಳುವ ಬಗೆಗಳನ್ನು ಅವನು ಕಲಿಸುತ್ತಾನೆ. ಪ್ರಾಣಿಸಂಗ್ರಹಾಲಯಕ್ಕೆ ಹೋಗಿ, ಅಲ್ಲಿನ ಸೆರೆಯಾಳುಗಳನ್ನು ಗಮನವಿಟ್ಟು ನೋಡಿ ಅವುಗಳ ಬಗ್ಗೆ ಬರೆಯಬೇಕೆಂಬ ರೋದಾನ್ ಸೂಚನೆಯು ರಿಲ್ಕನು ಬರೆದ ‘ವಸ್ತು-ಕವಿತೆ’ಗಳ ಸರಣಿಗೆ ಕಾರಣವಾಗುತ್ತದೆ. ಪ್ರಸಿದ್ಧವಾದ ‘Panther’ ಆ ಸರಣಿಯ ಮೊದಲ ಕವಿತೆ. ಈ ಬಗೆಯ ಕವಿತೆಗಳು ಮುಗ್ಧತೆಯಿಂದ ತಿಳಿವಳಿಕೆಯ ಕಡೆಗೆ, ಭಾವುಕತೆಯಿಂದ ಭಾವನೆಗಳ ಕಡೆಗೆ, ಗೊಣಗಾಟಗಳಿಂದ ಹುಡುಕಾಟದ ಕಡೆಗೆ ನಡೆಸುವ ಪಯಣವೂ ಹೌದು. ಅಷ್ಟೇ ಅಲ್ಲ,  ಇಂಥ ಅನುಭವಗಳಿಂದ ಅವನು ಕಲಿತ ಪಾಠಗಳು ಅವನ ಸಂಗಡ ಉಳಿದು ಅವನ ಕವಿತೆಯನ್ನು ರೂಪಿಸಿವೆ.  ಹಾಗೆಯೇ ಅವನಿಗೆ ಬಹಳ ಆತ್ಮೀಯರಾಗಿದ್ದ ಇಬ್ಬರು ಕಲಾವಿದೆಯರು ಅವನ ಬದುಕು ಮತ್ತು ಕಾವ್ಯದ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತಾರೆ. ಅವರ ಮೂಲಕ ಕಲಾವಿದ ಸೆಜಾನ್ ಪ್ರಭಾವವೂ ಆಗುತ್ತದೆ. ಬೇರೊಂದು ಹಂತದಲ್ಲಿ ಮತ್ತೊಬ್ಬ ಹೆಸರಾಂತ ಕಲಾವಿದನಾದ ಪಾಲ್ ಕ್ಲೀ ಅವರ ಕಲಾಕೃತಿಗಳನ್ನೂ ರಿಲ್ಕ ಅಬ್ಯಾಸ ಮಾಡುತ್ತಾನೆ. ಹಾಗೆಯೇ ಅವನ ಏಳನೆಯ ದ್ಯೂನೋ ಎಲಿಜಿಯು ಪಿಕಾಸೋನ ‘ದಿ ಫ್ಯಾಮಿಲಿ ಆಫ್ ಆಕ್ರೋಬಾಟ್ಸ್’ ಇಂದ ಪ್ರಭಾವಿತವಾಗಿದೆ. ಆದರೆ ‘ವಸ್ತು-ಕವಿತೆ’ಗಳು ಕೂಡ ಅವನಿಗೆ ಸಮಾಧಾನ ನೀಡಲಿಲ್ಲ. ಏಕೆಂದರೆ ತನ್ನ ವೈಯಕ್ತಿಕತೆಯನ್ನು ತೊಡಗಿಸಿಕೊಳ್ಳದೆ, ಭಾವಗೀತಾತ್ಮಕವಾದ ಕಥನದಲ್ಲಿ ತೊಡಗಿಕೊಳ್ಳುವುದು ಅವನಿಗೆ ಸಾಧ್ಯವಿರಲಿಲ್ಲ. ಆದ್ದರಿಂದ ಅವನು ದ್ಯೂನೋ ಎಲಿಜಿಗಳನ್ನು ಬರೆಯುವುದು ಅನಿವಾರ್ಯವಾಯಿತು. ಅಲ್ಲಿ ಕಾಣುವವನು ಮತ್ತು ಕಾಣುವ ಲೋಕ ಎರಡೂ ತೀವ್ರವಾದ ಭಾವಸಂಬಂಧವನ್ನು ಹೊಂದಿವೆ. ಆ ಲೋಕದಲ್ಲಿ ಬರುವ ಎಲ್ಲ ವಸ್ತುಗಳೂ ಮನುಕುಲದ ಅಂತರಂಗದ ಅಳಲುಗಳಿಗೆ ಒಡ್ಡಿದ ರೂಪಕಗಳು. ಇಲ್ಲಿ ಅವನು ಆ ವಸ್ತುಗಳ ಬಗ್ಗೆ ಹೇಳುತ್ತಿಲ್ಲ, ಅವುಗಳ ಮೂಲಕ ಬೇರೆ ಏನನ್ನೋ ಹೇಳುತ್ತಿದ್ದಾನೆ. ಆದರೆ, ವಿಷಾದ, ಭಯ ಮತ್ತು ದಿಗ್ಭ್ರಮೆಗಳು ಈ ಕವಿತೆಗಳ ಚಾಲಕಶಕ್ತಿಗಳು. ಈ ರುದ್ರರಮಣೀಯವಾದ ಕವಿತೆಗಳು ಅವನ ಅನುಭಾವ ಜೀವನದ ಕಾಳರಾತ್ರಿಗಳು. ಆದರೆ, ಅವನು ಇಲ್ಲಿಗೆ ನಿಲ್ಲುವುದಿಲ್ಲ. ಕವಿತೆಯ ಸಂಜೀವನ ಶಕ್ತಿಯಲ್ಲಿ ಅವನಿಗಿರುವ ನಂಬಿಕೆಯು ಒಂಬತ್ತನೆಯ ಎಲಿಜಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇವೆಲ್ಲ ಅಳಲುಗಳನ್ನು ‘ಹೆಸರಿಟ್ಟು ವಿವರಿಸಲೆಂದೇ’ ಮನುಷ್ಯನ ಜೀವನದ ಸಾರ್ಥಕತೆಯಿದೆಯೆಂದು ಅವನು ಘೋಷಿಸುತ್ತಾನೆ. ಬೇಂದ್ರೆಯವರು ಹೇಳಿದಂತೆ ಇಂದಿನ ಅದ್ಭುತವಾದ ‘ತಾಜಮಹಲ’ ನಾಳೆ ಕಥೆಯಾಗಬಹುದು. ಆದರೆ, “ಆ ಕಥಾ ಕಲ್ಪವೃಕ್ಷದ ಗೊನೆಗೆ ಬಿಟ್ಟಾವು ಸಾವಿರ ಸಾವಿರದ ಕವನ’. ರಿಲ್ಕನ ಅಂಥ ನಂಬಿಕೆಗೆ ಸಾಕ್ಷಿಯೆನ್ನುವಂತೆ,ಅವನು ‘ಆರ್ಫಿಯಸ್ ಸಾನೆಟ್’ಗಳನ್ನು ಬರೆಯುತ್ತಾನೆ. ಅವುಗಳಲ್ಲಿ ಕೆಲವು, ಗ್ರೀಕ್ ಪುರಾಣಗಳ ಪ್ರಕಾರ, ಕಾವ್ಯದ ಅಧಿದೇವತೆಯಾದ ಆರ್ಫಿಯಸನ, ಶಕ್ತಿಯನ್ನು ಆರಾಧಿಸುವ ಕವಿತೆಗಳು. ಅವು ಲೋಕದಲ್ಲಿ ವಿಷಾದಮಯವಾದ ಸಂಗತಿಗಳಿರುವಂತೆಯೇ ಸೆಲೆಬ್ರೇಟ್ ಮಾಡಬಹುದಾದ ಸಂಗತಿಗಳೂ ಇವೆಯೆಂದು ನಂಬುತ್ತವೆ ಮತ್ತು ತುಂಬುಸಂಭ್ರಮದಿಂದ ಹಾಗೆ ಮಾಡುತ್ತವೆ. ಇವುಗಳಲ್ಲಿ ಕಾವ್ಯವಸ್ತು, ಕವಿತೆಯ ಆಕೃತಿ ಮತ್ತು ಕವಿಯ ದರ್ಶನಗಳು, ಬಿಡಿಸಿ ನೋಡಲಾಗದಂತೆ ಸೇರಿ ಹೋಗುತ್ತವೆ. ಆಗ ಸಂಕೋಚ, ಆತಂಕ ಮತ್ತು ಹಿಂಜರಿಕೆಗಳಿಂದ ಕೂಡಿದ ಅವನ ವ್ಯಕ್ತಿತ್ವವು ಮರೆಯಾಗುತ್ತಾನೆ. ಅವನು ತನ್ನನ್ನು ಮೀರಿದ ಯಾವುದೋ ಶಕ್ತಿಗೆ ಎಡೆಮಾಡಿಕೊಟ್ಟು ತಾನು ಕೇವಲ ಕೊಳಲಾಗುತ್ತಾನೆ. ಕೊಳಲು ನೋಡಿಸುವವನು ದೇವರಲ್ಲ. ಅವನು ಆರ್ಫಿಯಸ್ ಎಂಬ ಎಲ್ಲ ಕವಿಗಳ ಪ್ರಾಣಶಕ್ತಿ. ಅವನಿಗೆ ಹುಟ್ಟುಸಾವುಗಳಿಲ್ಲ. ಇಂದು ಕನ್ನಡದಲ್ಲಿ ಬರೆಯುತ್ತಿರುವ ಕವಿ-ಕವಯತ್ರಿಯರಲ್ಲೂ ಅವನ ‘ಸನ್ನಿಧಿ’ ಇರುತ್ತದೆ. ಈ ಸಾನೆಟ್ಟುಗಳನ್ನು ಬರೆದ ಬಳಿಕ ರಿಲ್ಕ ಕಟ್ಟು ಕಳಚಿದ ಕವಿ. ಆದ್ದರಿಂದ ರಿಲ್ಕನ ಕವಿತೆಯ ವಿಕಸನದ ಜೊತೆಜೊತೆಯಲ್ಲಿಯೇ ಅವನ ಕಾವ್ಯಮೀಮಾಂಸೆಯೂ ಅರಳುತ್ತದೆ. ಅದರ ಸಮಗ್ರ ಅಧ್ಯಯನಕ್ಕೆ ಈ ಮುನ್ನುಡಿಯಲ್ಲಿ ಎಡೆಯಿಲ್ಲ.

ನಾನು ಆಗಲೇ ಹೇಳಿದಂತೆ, ರಿಲ್ಕ ತತ್ವಶಾಸ್ತ್ರಜ್ಞನಲ್ಲ. ಅವನು ನೂರಕ್ಕೆ ನೂರರಷ್ಟು ಕವಿ. ಒಂದು ಕಾದಂಬರಿ ಮತ್ತು ಕೆಲವು ಗದ್ಯಬರೆಹಗಳನ್ನು ರಚಿಸಿದರೂ ಅವನು ಕವಿಯೇ ಸರಿ. ಆದ್ದರಿಂದಲೇ ಅವನ ತಾತ್ವಿಕ ಹುಡುಕಾಟವು ರೂಪಕ ಮತ್ತು ಪ್ರತಿಮೆಗಳ ಲೋಕದಲ್ಲಿಯೇ ನಡೆಯಬೇಕು. ಅಲ್ಲಿಯೂ ಹೊರಗಿನಿಂದ ಕಡ ತರದ ಸ್ವಂತ ಲೋಕವನ್ನೇ ಕಟ್ಟಿಕೊಳ್ಳಬೇಕು. ಪ್ರತಿಯೊಂದು ಕವಿತೆಗೂ ತನ್ನದೇ ಆದ ‘ಅಟಾನಮಸ್’ ಅಸ್ತಿತ್ವ ಇರುವಂತೆಯೇ ಅವುಗಳ ನಡುವೆ ಪರಸ್ಪರ ಸಂಬಂಧಗಳ ಜಾಲವೂ ಇರಬೇಕು. ಈ ಕಾರಣದಿಂದ ಅವನ ಬಿಡಿಕವಿತೆಗಳು ಭಾವಗೀತೆಗಳಂತೆ ತೋರಿದರೂ ಅವನ ಸಮಗ್ರ ಕಾವ್ಯವು ಈ ಭಾವಗೀತೆಗಳನ್ನೇ ಇಟ್ಟಿಗೆಗಳಂತೆ ಬಳಸಿಕೊಂಡು ಕಟ್ಟಿರುವ ಮಹಾಕಾವ್ಯ. ಕಾವ್ಯವಾಗಿರುವುದರಿಂದ ಅಲ್ಲಿ ತರ್ಕದ ರಾಜ್ಯಭಾರವಿಲ್ಲ, ಅತಿ ಬೌದ್ಧಿಕತೆಯ ಭಾರವೂ ಇಲ್ಲ. ಅವನದು ಅರ್ಥನಿರ್ಮಿತಿಯಲ್ಲಿ ಆಸಕ್ತವಾದ ಭಾಷೆಯಲ್ಲ. ಬದಲಾಗಿ ಅದು ಭಾವನಿರ್ಮಿತಿಯಲ್ಲಿ ಆಸಕ್ತವಾಗಿದೆ. ಹೋಲಿಕ ಕೊಡಬಹುದಾದರೆ, ಅವನು ಅಲ್ಲಮ-ಬಸವರಿಗಿಂತ ಮಹಾದೇವಿಯಕ್ಕನಿಗೆ ಹತ್ತಿರ. ಬೇಂದ್ರೆಯವರಿಗಿಂತ ಮಧುರಚೆನ್ನರಿಗೆ ಹತ್ತಿರ. ಆದರೆ ಅವರೆಲ್ಲ ಕಂಡುಕೊಂಡ ಆಧ್ಯಾತ್ಮದ ಊರುಗೋಲುಗಳ ಆಸರೆ ಅವನಿಗೆ ಇರಲಿಲ್ಲ. ಅಂತೆಯೇ ಅವನು ಗ್ರೀಕ್ ಮಿಥಕಗಳು, ಪುರಾಣ ಕಥೆಗಳು, ಕ್ರಿಶ್ಚಿಯಾನಿಟಿಯು ಕಟ್ಟಿಕೊಟ್ಟಿರುವ ದೃಷ್ಟಾಂತಗಳು, ಇಡೀ ಯೂರೋಪುಖಂಡದ ನೆಲಹರಹಿನಲ್ಲಿ ಹರಡಿಕೊಂಡಿರುವ ಚಿತ್ರ, ಶಿಲ್ಪ, ವಾಸ್ತು, ಸಂಗೀತಗಳು ಎಲ್ಲವನ್ನೂ ಬಳಸಿಕೊಂಡರೂ ಅವನ ಹುಡುಕಾಟವು ಕಾಲದೇಶಗಳ ಗಡಿಗೆರೆಯನ್ನು ದಾಟುತ್ತದೆ. ಆ ಸಂಗತಿಗಳು ಅವನಿಗೆ ಸಾಂಕೇತಿಕವಾದರೂ ಗೌಣವಾದ ವಿವರಗಳೇ ಹೊರತು ಸರ್ವಸ್ವವಲ್ಲ. ಪ್ರಾಚೀನವೇ ಇರಲಿ, ಸಮಕಾಲೀನವೇ ಇರಲಿ ಹೊರಲೋಕದ ಸಂಗತಿಗಳು ಅವನೇ ಕಟ್ಟಿಕೊಡುವ ಲೋಕದಲ್ಲಿ ಕರಗಿಹೋಗಿ ಬೇರೇನೋ ಆಯಾಮಗಳನ್ನು ಪಡೆದುಕೊಳ್ಳುತ್ತವೆ. ಸಾಮಾಜಿಕವಾದ ಸಂಗತಿಗಳನ್ನು ಕೂಡ ಅವನು ಗ್ರಹಿಸುವುದು ಮಾನುಷಿಕವಾದ ನೆಲೆಯಲ್ಲಿಯೇ.              ‘ಮಾನವನ ಪಾಡು’ ರಿಲ್ಕನ ಸ್ವಂತದ ಶೋಧನೆಯೂ ಆಗಿಬಿಡುತ್ತದೆ. ಅವನ ಕವಿತೆಯು, ತಲ್ಲಣಗಳಲ್ಲಿ ಮೊದಲಾಗಿ ‘ವಿಶಿಷ್ಟವಾದ’ ದರ್ಶನದಲ್ಲಿ ಮುಗಿಯುತ್ತದೆ. ಜರೆಯ ಪರಿಣಾಮವಾದ ‘ನರೆ ತೆರೆಗಳು’ ಆವರಿಸುವ ಮೊದಲೇ ಅವನು ಮರಣಕ್ಕೆ ಪಕ್ಕಾಗುತ್ತಾನೆ.

ರಿಲ್ಕ್ ತನಗಿಂತ ಕೊಂಚ ಹಿರಿಯನಾದ ವಿಲಿಯಂ ಬ್ಲೇಕನ ಹಾಗೆಯೇ ಮನುಷ್ಯಕೇಂದ್ರಿತವಾದ ದರ್ಶನವನ್ನು ಮೀರಿ, ಲೋಕವನ್ನು ಅನುಭವಿಸಿದವನು, ‘ಅನುಭಾವಿ’ಸಿದವನು. ಪ್ರಾಣಿ-ಪಕ್ಷಿಗಳಲ್ಲಿ, ಗಿಡ-ಮರ-ಹೂಗಳಲ್ಲಿ ಜೀವವನ್ನು ಆರೋಪಿಸಿ ಅವುಗಳ ಜೀವನಪಥದೊಳಗೆ ನಮಗೂ ಮೌಲಿಕವಾದ ‘ಕ್ಲೂ’ಗಳನ್ನು ಕಂಡುಕೊಂಡವನು. ಆದರೆ, ಅದು ಪ್ರಕೃತಿಯ ಆರಾಧನೆಯಲ್ಲ. ಬದಲಾಗಿ ಅವನದು ಮನುಷ್ಯನನ್ನು ನಿಸರ್ಗದ ಭಾಗವಾದರೂ ಅದನ್ನು ನಾಶಮಾಡುವ ಶಕ್ತಿಯಾಗಿ ಕಾಣುತ್ತಾನೆ. ‘ತೆಗೆ ಜಡವೆಂಬುದೆ ಬರಿ ಸುಳ್ಳು ಚೇತನವೆಲ್ಲೆಲ್ಲು’ ಎಂದು ಹೊರಟ ಕುವೆಂಪು ಕಂಡುಕೊಂಡ ತೃಪ್ತಿ ಮತ್ತು ಸಮಾಧಾನಗಳನ್ನು ರಿಲ್ಕ ಹುಡುಕಲೂ ಇಲ್ಲ. ಪಡೆಯಲೂ ಇಲ್ಲ. ಅವನು ‘ಆಧುನಿಕ’ ಮಟೀರಿಯಲಿಸ್ಟ್ ನಾಗರಿಕತೆಯ ದುರಂತದ ಬೇರುಗಳನ್ನು ಕಂಡುಕೊಳ್ಳುವ ಬಗೆಗಳನ್ನು ಹತ್ತನೆಯ ಒಂಬತ್ತು ಮತ್ತು ಹತ್ತನೆಯ ದ್ಯೂನೋ ಎಲಿಜಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಒಂದು ಕವಿತೆಯಲ್ಲಿ, ಚಿನ್ನದ ಅದಿರು ಮತ್ತೆ ಗಣಿಯೊಳಗೆ ಸೇರಿಕೊಳ್ಳಬಯಸುತ್ತದೆ. ಮೊಗಳ್ಳಿ ಗಣೇಶ ಅವರ ‘ಬುಗುರಿ’ ಕತೆಯಲ್ಲಿ ಚೆಲುವ ತಾಯೊಡಲಿನಲ್ಲಿ ಮತ್ತೆ ಸೇರಿಕೊಳ್ಳುವ ಹಂಬಲವನ್ನು ವ್ಯಕ್ತಪಡಿಸಿದಂತೆ. ಹೀಗೆ ರಿಲ್ಕ ಏಕಕಾಲದಲ್ಲಿ ಸಾಮಾಜಿಕ-ರಾಜಕೀಯ-ವೈಯಕ್ತಿಕ ದುರಂತಗಳನ್ನು ಉಂಡವನು, ಕಂಡವನು ಮತ್ತು ಕಂಡರಿಸದವನು.

ತನ್ನತನದ ಅರಿವು’ ಮತ್ತು ‘ಅದರ ಮುರಿಯುವಿಕೆ’ಗಳು ರಿಲ್ಕನ ಕವಿತೆಯ ಮುಖ್ಯ ಆಯಾಮಗಳು. ವಸ್ತುಗಳನ್ನು ತನಗೆ ಕಾಣುವಂತೆ ಅಲ್ಲ, ಅವು ಇರುವಂತೆ ಗ್ರಹಿಸಬೇಕೆಂದು ತನ್ನ ಗುರುವಾದ ಮಹಾಶಿಲ್ಪಿ ರಾಡಿನ್ ಕೊಟ್ಟ ಸೂಚನೆ ಅವನ ಗ್ರಹಿಕೆಯ ವಿಧಾನವನ್ನು ಬದಲಿಸಿತು. ಅವನು ಝೆನ್ ಗುರುಗಳು ಹೇಳುವ ಖಾಲಿಪಾತ್ರೆಯಾದ. ‘ಪ್ಯಾಂಥರ್’, ‘ಹಂಸ’, ಕುರುಡಿಯಾಗುತ್ತಿರುವ ಹೆಂಗಸು’, ‘ಸರ್ಕಸ್ ಕಲಾವಿದರು’ ಎಲ್ಲವೂ ಎಲ್ಲರೂ ಅವನೊಳಗೆ ನೆಲೆಸಿ ಕವಿತೆಯಾಗಿ ಮೈಪಡೆದವು. ಸಾವಿನ ಪ್ರಜ್ಞೆಯಿಲ್ಲದ ಮರಗಗಿಡಗಳು, ಪ್ರಾಣಿಪಕ್ಷಿಗಳು ಮತ್ತು ಆ ಭಯದಿಂದಲೇ ದಿಕ್ಕೆಟ್ಟ ಮನುಷ್ಯರನ್ನು ಹೋಲಿಸಿ ನೋಡಲು ಅವನಿಗೆ ಸಾಧ್ಯವಾಯಿತು. ಮನುಷ್ಯರು ಎಲ್ಲದರಲ್ಲಿಯೂ ಹಿಂದೆ ಉಳಿದವರು ಮತ್ತು ವಿಕಲಾಂಗರು ಎಂಬ ಸತ್ಯವನ್ನು ಅವನು   ಮನಗಂಡ. ಹಾಗೆಯೇ ಮನುಷ್ಯರ ಅದರಲ್ಲೂ ಗಂಡಸರ ಸ್ವಾರ್ಥ, ಮಹತ್ವಾಕಾಂಕ್ಷೆ ಮತ್ತು ಹಿಂಸ್ರಕ ಪ್ರವೃತ್ತಿಗಳನ್ನು ಕಂಡುಕೊಳ್ಳುವುದು ಅವನಿಗೆ ಸಾಧ್ಯವಾಗಿತ್ತು. ಅದು ಅವನ ಸ್ವಾನುಭವ ಮಾತ್ರವಲ್ಲ, ಯುದ್ಧಗಳಿಂದ ಕಂಗಾಲಾದ ಇಡೀ ಯೂರೋಪಿನ ಅನುಭವವೂ ಆಗಿತ್ತು. ಈ ನೆಲೆಯಲ್ಲಿ ಅವನ ಕವಿತೆಯ ಒಂದು ನೆಲೆಯು ಕಾಲಕ್ಕೆ ಹಿಡಿದ ಕನ್ನಡಿಯೂ ಹೌದು. ಆದರೆ ಮನುಷ್ಯ ಸಮುದಾಯದಲ್ಲಿ ಅವನು ಎರಡು ಅಪವಾದಗಳನ್ನು ಮತ್ತೆ ಮತ್ತೆ ಹೆಸರಿಸುತ್ತಾನೆ. ಚಿಕ್ಕ ವಯಸ್ಸಿನಲ್ಲಿಯೇ ಸಾಯುವ ಮಕ್ಕಳು ಮತ್ತು ಪ್ರೇಮದ ತಂದ್ರಿಯಲ್ಲಿರುವ ಹೆಣ್ಣುಮಕ್ಕಳು. ಇವರನ್ನು ಮಾತ್ರ ಅವನು ಒಳ್ಳೆಯತನ, ಮುಗ್ಧತೆ ಮತ್ತು ತ್ಯಾಗಗಳ ಮಾದರಿಗಳಂತೆ ನೋಡುತ್ತಾನೆ. ಹುಡುಗನು ಗಂಡಾಗಿ ಬೆಳೆಯುವ ಪ್ರಕ್ರಿಯೆಯನ್ನೇ ಅವನು ಅ-ಮಾನವೀಕರಣವೆಂದು ತಿಳಿಯುತ್ತಾನೆ. ಪ್ರೇಮದ ತೆಕ್ಕೆಗೆ ಸಿಲುಕದ ಹೆಣ್ಣಿಗೆ ಕೂಡ ಇದರಿಂದ ಬಿಡುಗಡೆಯಿಲ್ಲ. ಅವಳು ಮಾತ್ರ ಮಾನುಷಿಕವಾದ ಮಿತಿಗಳನ್ನು, ಹಮ್ಮುಬಿಮ್ಮುಗಳನ್ನು ಮೀರುತ್ತಾಳೆ. ಅವನ ತಾತ್ವಿಕತೆಯನ್ನು ಸಮಗ್ರವಾಗಿ ತಿಳಿಯಬೇಕಾದರೆ, ‘ದ್ಯೂನೋ ಎಲಿಜಿಗಳು’ ಮತ್ತು ಆರ್ಫಿಯಸ್ ಸಾನೆಟ್ಟುಗಳನ್ನು ಒಟ್ಟಾಗಿ ಓದಬೇಕಾಗುತ್ತದೆ.

ಅನುವಾದಕ್ಕಾಗಿ ಯಾವುದೇ ಕೃತಿಯನ್ನು ಆರಿಸಿಕೊಳ್ಳುವಾಗ, ನಾನು ಕೇಳಿಕೊಳ್ಳುವ ಪ್ರಶ್ನೆ, ಅದರಿಂದ ಕರ್ನಾಟಕದ ಸಮುದಾಯಗಳಿಗೆ, ಕನ್ನಡ ಸಂಸ್ಕೃತಿಗೆ ಮತ್ತು ಕನ್ನಡ ಕಾವ್ಯದ ಸ್ಥಿತಿ-ಗತಿಗಳಿಗೆ ಏನು ಪ್ರಯೋಜನ ಎನ್ನುವುದು.

ಅನುವಾದ ಮಾಡಿದ ಕೂಡಲೇ ಆ ಪ್ರಯೋಜನಗಳು ದೊರಕಿ ಬಿಡುವುದಿಲ್ಲ. ಸಾಮಾನ್ಯವಾಗಿ ಅದು ಎದುರೀಜಿನ ಕೆಲಸ. ಓದಲೆಂದು ಒಲಿಸಿಕೊಳ್ಳುವ, ಒಲುಮೆಯಿಂದ ಓದುವಂತೆ ಮಾಡುವ ಕಡುಕಷ್ಟದ ಕೆಲಸ. ಹಾಗೆಂದು ಪ್ರಯತ್ನಿಸದೆ ಇರುವುದು ಅಪರಾಧ. ಯಾವುದೇ ಅನುವಾದವು ಆ ಭಾಷೆಯ ಆ ಕಾಲದ ಕವಿತೆಗೆ ಪೂರಕವಾಗಿರಬೇಕು. ಆದರೆ ಅದಕ್ಕಿಂತ ಭಿನ್ನವಾಗಿದ್ದು ಅದರ ಕೊರತೆಗಳನ್ನು ತುಂಬಿಕೊಡುತ್ತಿರಬೇಕು. ಆಗ ಪೂರಕವಾದುದು ಪ್ರೇರಕವೂ ಆಗುತ್ತದೆ.

ಆ ದೃಷ್ಟಿಯಲ್ಲಿ ರಿಲ್ಕನ ಕವಿತೆ ಖಂಡಿತವಾಗಿಯೂ ಹೊಸ ನೀರು. ಅದು ನಾವು ನಮ್ಮ ಬಗ್ಗೆ, ಮನುಷ್ಯರ ಬಗ್ಗೆ, ಸಂಬಂಧಗಳ ಬಗ್ಗೆ, ಜೀವನದ ಬಗ್ಗೆ ಮೂಲಭೂತವಾದ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡುತ್ತದೆ. ಎಷ್ಟೇ ಮುಖ್ಯವಾದರೂ ಕನ್ನಡ ಕಾವ್ಯವನ್ನು ‘ಲೀನಿಯರ್’ ಆಗಿಸಿರುವ ‘ಸಾಮಾಜಿಕ ಕಳಕಳಿಗಳ ಕನ್ನಡಕವನ್ನು ಕೊಂಚ ಕಾಲ ಬದಿಗಿಟ್ಟು ಲೋಕವನ್ನು ಹಾಗೆಯೇ ಸ್ವಂತವನ್ನು ಬೇರೆ ಬಗೆಗಳಲ್ಲಿ ನೋಡುವಂತೆ ಮಾಡುತ್ತದೆ. ಮನುಷ್ಯನ ನೋವು, ಯಾತನೆ ಮತ್ತು ಶೋಷಣೆಗಳನ್ನು ಅಲ್ಲಗಳೆಯದೆ, ಅದರ ‘ಫಿಲಸಾಫಿಕಲ್’ ಮತ್ತು ‘ಸೈಕಲಾಜಿಕಲ್’ ಆದ ನೆಲೆಗಳಿಗೆ ಒತ್ತು ಕೊಡುತ್ತದೆ. ಚರಿತ್ರೆ ಮತ್ತು ಸಮಾಜಗಳ ಹಾಡು-ಪಾಡುಗಳ ಕಾರಣ ಮೀಮಾಂಸೆಯನ್ನು ಮಾಡುತ್ತದೆ. ಹಾಗೆ ಮಾಡುವುದರಿಂದಲೇ ಈಚೆಗೆ ಕಳೆದು ಹೋಗುತ್ತಿರುವ ಬೇಂದ್ರೆ, ಮಧುರ ಚೆನ್ನ, ಗಂಗಾಧರ ಚಿತ್ತಾಲ, ನರಸಿಂಹಸ್ವಾಮಿ ಮುಂತಾದವರ ಕವಿತೆಯನ್ನು ಮತ್ತೆ ನೆನಪಿಗೆ ತರುತ್ತದೆ. ಅಷ್ಟೇಕೆ, ನಾವು ಅಷ್ಟಾಗಿ ಗಮನಿಸದಿರುವ ಕುವೆಂಪು ಅವರ ಕಾವ್ಯದ ಕೆಲವು ನೆಲೆಗಳನ್ನೂ ಮರಳಿಸುತ್ತದೆ. ಹಾಗೆನೋಡಿದರೆ, ‘ಪಕ್ಷಿಕಾಶಿ’, ‘ಅಗ್ನಿಹಂಸ’ ಮುಂತಾದ ಸಂಕಲನಗಳ ಬಗ್ಗೆ ಕನ್ನಡ ವಿಮರ್ಶೆಯು ಮಾತನಾಡಿ ದಶಕಗಳೇ ಕಳೆದವು. ಈ ರೀತಿಯ ಚಿಂತನೆಯು ಖಂಡಿತವಾಗಿಯೂ ಸ್ವ-ಕೇಂದ್ರಿತವಾದ ‘ಆಧುನಿಕೋತ್ತರ ಚಿಂತನೆ’ಗಿಂತ ಭಿನ್ನವಾದುದು. ಸ್ವಾರ್ಥಮೂಲವಾದ ತನ್ನನ್ನು, ಅಂತೆಯೇ ಸ್ಥೂಲವಾದ ‘ಸಾಮಾಜಿಕತೆ’ಯನ್ನು ಮೀರಿದ ನಿಲುವು ಒಂದಿದೆ. ಅದು ‘ಧಾರ್ಮಿಕ’ವಲ್ಲದ ಆಧ್ಯಾತ್ಮಿಕತೆ. ಕನ್ನಡದ ಕೆಲವು ಲೇಖಕರಿಗೆ ಮಾತ್ರ ಸಾಧ್ಯವಾಗಿದೆ. ಅವರು ಕೂಡ ತಮ್ಮ ಸಮಗ್ರ ಕಾವ್ಯವನ್ನು ಅದರ ಶೋಧನೆಗಾಗಿ ಮೀಸಲಿಟ್ಟಿಲ್ಲ.

ರಿಲ್ಕ ಹಾಗೆ ಬರೆದು ಹಾಗೆ ಬದುಕಿದವನು. ಅವನು ತನಗಿಂತ ಕೊಂಚ ಕಿರಿಯನಾದ ಕಾಫ್ಕಾನ ಹಾಗೆ ದಿಗ್ಭ್ರಾಂತನಾಗಲಿಲ್ಲ. ತನಗಿಂತ ಕೊಂಚ ಹಿರಿಯನಾದ ಬಾದೆಲೇರ್. ರಿಂಬೋ ಹಾಗೆ ‘ಲೋಲುಪನೂ ಆಗಲಿಲ್ಲ. ಬದಲಾಗಿ, ತನ್ನದೇ ಆದ ಲೋಕವನ್ನು ಕಟ್ಟಿಕೊಂಡ. ಅದು ಪುರಾಣಗಳ ಮುರುನಿರೂಪಣೆಯಲ್ಲ. ಬದಲಾಗಿ ಅದು ‘ಮಿಥಕ’ಗಳ, ಪುರಾಣಗಳ ಸೃಷ್ಟಿ. ಅದು ಇಡೀ ಜೀವಜಾಲವನ್ನೇ ಒಳಗೊಂಡ, ಕಾಲದಿಂದ ಮೂಡಿಬಂದರೂ ಕಾಲವನ್ನು ಮೀರಬಲ್ಲ ಲೋಕ. ಇಂಥದೊಂದು ಕಿರುಲೋಕ ದೇವನೂರರ ‘ಕುಸುಮಬಾಲೆ’ಯಲ್ಲಿ ಮಿಂಚಿ ಮಾಯವಾಯಿತು. ಮಧುರಚೆನ್ನರ ಕೆಲವು ಕವಿತೆಗಳಲ್ಲಿ ಬಂದುಹೋಯಿತು. ಉಳಿದಂತೆ ಅದರ ಸಾಧ್ಯತೆಗಳು ನಮ್ಮ ಭಾಷೆಯಲ್ಲಿ ತೆರೆದುಕೊಂಡಿಲ್ಲ. ನನ್ನ ಕಾಲದ ಕನ್ನಡಕ್ಕೆ ಇದರ ಅಗತ್ಯವಿದೆಯೆಂದು ನನಗೆ ತೋರುತ್ತಿದೆ. ಅಂಥ ಕವಿತೆಯಲ್ಲಿ ಕಥೆ, ಕಥನ, ನಿಗೂಢತೆ, ಭಾವಗೀತೆ ಮತ್ತು ಗೀತಗಳು ಸಂದುಗಡಿಯದಂತೆ ಬೆರೆತಿರುತ್ತವೆ. ಅಂಥ ಸಾಧನೆಯ ಒಂದು ಮಾದರಿಯಾಗಿ ರಿಲ್ಕನ  ಕವಿತೆಗಳನ್ನು ಓದಿ ಒಳಗೊಳ್ಳಬೇಕೆಂದು ನನ್ನ ಹಂಬಲ. ಕಾವ್ಯಾಸಕ್ತರು ಮಾತ್ರವಲ್ಲ, ಕವಿಗಳು ಇದನ್ನು ಓದಬೇಕು. ಅವರ ಅಂತರಂಗದ ಆಳಗಳಲ್ಲಿ ಅದು ತಲ್ಲಣಗಳನ್ನು ಹುಟ್ಟಿಸಬೇಕು. ನನ್ನ ಕನ್ನಡದ ಕೊರತೆಗಳನ್ನು ಮೀರಿ ಇಂಗ್ಲಿಷ್, ಜರ್ಮನ್ ಆವೃತ್ತಿಗಳ ಕಡೆಗೆ ಅವರ ಗಮನ ಹರಿದರೆ, ಇನ್ನೂ ಚೆನ್ನ. ನಾನು ಅನುವಾದಿಸಿರುವ ಕವಿತೆಗಳಾಚೆಗೂ ಅವನ ನೂರಾರು ಕವಿತೆಗಳಿವೆ. ಅದರ ಬಗ್ಗೆ ಬಂದ ಬರಹಗಳು ಪುಸ್ತಕಭಂಡಾರಗಳನ್ನೇ ತುಂಬಿವೆ. ಅವನು ತ್ರಿವಿಕ್ರಮ, ನಾನು ವಾಮನ. ಈ ಮುನ್ನುಡಿಯಲ್ಲಿ ನಾನು ಬಿಡಿ ಕವಿತೆಗಳನ್ನು ಹೆಸರಿಸುವ, ವಿವರಿಸುವ ಗೊಡವೆಗೆ ಹೋಗಿಲ್ಲ. ಅವು ಕವಿತೆ ಮತ್ತು ಓದುಗರ ನಡುವಿನ ಸಂವಾದಕ್ಕೆ ಅಡ್ಡ ಬರಬಾರದೆನ್ನುವ ಹಂಬಲ ನನ್ನದು.

ಇನ್ನು ನನ್ನ ಅನುವಾದದ ಬಗ್ಗೆ ಕೆಲವು ಮಾತುಗಳು. ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಧ್ವನಿವಿನ್ಯಾಸಗಳಲ್ಲಿ ಹಾಗೂ ವಾಕ್ಯರಚನೆಯಲ್ಲಿ. ನನಗೆ ಜರ್ಮನ್ ಬರುವುದಿಲ್ಲ. ಆದರೂ ಅನುವಾದಿಸಿರುವ ಬಹುಪಾಲು ಕವಿತೆಗಳನ್ನು ಆ ಭಾಷೆಯಲ್ಲಿ ಕೇಳಿಸಿಕೊಂಡಿದ್ದೇನೆ. ಅದರ ಲಯವಿನ್ಯಾಸಗಳನ್ನು ವಿಶಿಷ್ಟತೆಗಳನ್ನು ಹಿಡಿಯಲು ಪ್ರಯತ್ನಿಸಿದ್ದೇನೆ. ಅರ್ಥದ ನೆಲೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಅವಲಂಬಿಸಿದ್ದೇನೆ. ನನ್ನ ಅದೃಷ್ಟಕ್ಕೆ  ರಿಲ್ಕನ ಕವಿತೆಗಳನ್ನು ಹಲವರು ಇಂಗ್ಲಿಷ್ ಗೆ ತಂದಿದ್ದಾರೆ. ಪ್ರತಿಯೊಂದು ಕವಿತೆಗೂ ಹತ್ತು ಹಲವು ಅವತಾರಗಳು. ಬೇರೆ ಬೇರೆ ಕಾಲದೇಶಗಳಲ್ಲಿ, ವಿಭಿನ್ನ ಮನೋಧರ್ಮ ಮತ್ತು ಆದ್ಯತೆಗಳಿರುವ ಅನುವಾದಕರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅಕ್ಷರಶಃ ಅನುವಾದಗಳೂ ಇವೆ, ದರ್ಶನಗಳೂ ಇವೆ. ನನ್ನದೂ ಸೇರಿದಂತೆ ಪ್ರತಿಯೊಂದು ಅನುವಾದವೂ ಒಂದು ವ್ಯಾಖ್ಯಾನ. ಕನ್ನಡದಲ್ಲಿ ಇಂಥ ಹಲವು ವ್ಯಾಖ್ಯಾನಗಳು ಬರಲೆಂದು ನಾನು ಆಶಿಸುತ್ತೇನೆ. ಒಂದೇ ಕವಿತೆಯ ಬೇರೆ ಬೇರೆ ಅನುವಾದಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳು ನನ್ನ ಅರ್ಥಗ್ರಹಿಕೆಗೆ ನೆರವಾಗಿವೆ. ಕೊನೆಗೂ ಅವುಗಳನ್ನು ಕನ್ನಡ ಕವಿತೆಯ ಪರಂಪರೆ ಮತ್ತು ವರ್ತಮಾನಗಳ ನಡುವೆ ಕೂಡಿಸುವುದು ನನ್ನ ಗುರಿಯಾಗಿತ್ತು. ಸಾಮಾನ್ಯವಾಗಿ ಇಲ್ಲಿರುವುದು ಭಾವಲಯ. ನನ್ನ ಬುದ್ಧಿಗೆ ಅಲ್ಲ, ಎದೆಬಡಿತಗಳಿಗೆ ದಕ್ಕಿದ ಲಯಗಳನ್ನು ಅರಸಿಕೊಂಡಿದ್ದೇನೆ.

ಸ್ವತಃ ಕವಿಯಲ್ಲದ ನಾನು ನನ್ನ ಶೈಲಿಯನ್ನು ಇದರ ಮೇಲೆ ಹೊರಿಸಿಲ್ಲ. ನಿಯತಲಯದ ಬಂಧಗಳಿಗೆ ಒಗ್ಗಿಕೊಳ್ಳದ ರಿಲ್ಕನ ಕವಿತೆಯು ‘ಎವೊಕೇಟಿವ್’ (ಉದ್ದೀಪಕ) ಆಗುವುದರಿಂದಲೇ, ನಿಗೂಢದಿಂದ ಕೇಳಿಸಿಕೊಂಡ ಪಿಸುಮಾತುಗಳನ್ನು ದಾಖಲೆ ಮಾಡುವುದರಿಂದಲೇ ಕವಿತೆಯಾಗಿವೆ. ನಾನು ಕೂಡ ಇದೇ ಕವಿತೆಗಳನ್ನು ಮತ್ತೊಮ್ಮೆ ಹೀಗೆಯೇ ಅನುವಾದ ಮಾಡಲಾರೆನೇನೋ. ಅಷ್ಟೇಕೆ. ಆ ತಂದ್ರಿಯಿಂದ ಹೊರಬಂದ ಬಳಿಕ, ಒಂದೇ ಒಂದು ಕವಿತೆಯನ್ನು, ಒಂದು ಸಾಲನ್ನು ಅನುವಾದಿಸಲು ಅನುವಾದಿಸಲು ಆಗುತ್ತಿಲ್ಲ. ನನ್ನನ್ನು ತಲ್ಲಣಿಸಿದ ಕೆಲವಾದರೂ ಕವಿತೆಗಳನ್ನು ‘ಅಬ್ಬಾ, ಇದು ನನಗೆ ನಿಲುಕುವುದಿಲ್ಲ.’ ಎಂದು ಬಿಟ್ಟುಕೊಟ್ಟಿದ್ದೇನೆ. ರಿಲ್ಕನೇ ಒಂದು ಸಾನೆಟ್ಟಿನಲ್ಲಿ ಹೇಳುವಂತೆ, ನನ್ನ ಭಾಷೆಯ ಮುರುಕು ಗುಡಿಸಿಲಿನಲ್ಲಿ ಅವನ ಕವಿತೆಯು ಬಿಜಮಾಡಿದೆ. ಕವಿತೆಯೆಂಬ ದೇವತೆಗೆ ಶರಣುಮಾಡಿ. ಗುಡಿಸಿಲಿನ ಓರೆಕೋರೆಗಳನ್ನು ಕ್ಷಮಿಸಿ.

ಈ ಸಂಕಲನದ ಗಾತ್ರವು ಜಾಸ್ತಿಯಾಗಬಾರದೆಂದು ‘ದ್ಯೂನೋ ಎಲಿಜಿಗಳು’ ಮತ್ತು “ಆರ್ಫಿಯಸ್ ಸಾನೆಟ್’ಗಳನ್ನು ಇದರ ಸಹಸಂಪುಟವಾಗಿ ನೀಡುತ್ತೇನೆ. ಆದರೆ ಇವೆರಡನ್ನೂ ಒಟ್ಟಿಗೆ ಓದಬೇಕೆಂದು ನನ್ನ ಬಿನ್ನಹ. ಇವೆರಡರ ನಡುವೆ ಅವಿನಾಸಂಬಂಧವಿದೆ. ಕವಿತೆಗಳನ್ನು ಅವುಗಳ ರಚನೆ ಮತ್ತು ಪ್ರಕಟಣೆಗಳ ಅನುಕ್ರಮದಲ್ಲಿಯೇ ಜೋಡಿಸಿದ್ದೇನೆ. ಆ ಇನ್ನೊಂದು ಸಂಪುಟದ ಮುನ್ನುಡಿಯು ಇದಕ್ಕೆ ಪೂರಕವಾಗಿರುತ್ತದೆ.

ಹಿರಿಯರಾದ ಅನಂತಮೂರ್ತಿಯವರೂ ಸೇರಿದಂತೆ ಕೆಲವರು ರಿಲ್ಕನ ಕೆಲವು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಓ.ಎಲ್. ನಾಗಭೂಷಣಸ್ವಾಮಿ, ಅಬ್ದುಲ್ ರಶೀದ್ ಅವರ ಅನುವಾದಗಳು ತಕ್ಷಣ ನೆನಪಿಗೆ ಬರುತ್ತಿವೆ. ಕೆ.ವಿ ತಿರುಮಲೇಶ್ ಅವರು ರಿಲ್ಕನ ಮಹಾನ್ ಕಾದಂಬರಿಯನ್ನು ಅನುವಾದಿಸಿದರೆ, ಓ.ಎಲ್.ಎನ್. ಅವರು ‘ಯುವಕವಿಗೆ ಪತ್ರಗಳು’ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ. ಇವರೆಲ್ಲರ ಬರಹಗಳು ನನಗೆ ನೆರವಾಗಿವೆ.

ಈ ಕವಿತೆಗಳಿಗೆ ನನ್ನ ಅಂತರಂಗದ ಗೆಳೆಯರು, ಹಿರಿಯರು ಕೇಳಿಸಿಕೊಂಡಿದ್ದಾರೆ. ಅವರ ಮೆಚ್ಚಿಗೆ, ಪ್ರೀತಿ ಮತ್ತು ತಿದ್ದುಪಡಿ-ಟೀಕೆ-ಟಿಪ್ಪಣಿಗಳು ನನ್ನನ್ನು, ಈ ಕವಿತೆಗಳನ್ನು ಅರಳಿಸಿವೆ. ಅವರಲ್ಲಿ ಹಲವರು ಸ್ವತಃ ಕವಿಗಳಾಗಿರುವುದು ನನ್ನ ಭಾಗ್ಯ. ಓ.ಎಲ್. ಎನ್., ಆನಂದ ಝುಂಜರವಾಡ, ಕೆ.ಸತ್ಯನಾರಾಯಣ, ಎಚ್.ಎಸ್. ವೆಂಕಟೇಶಮೂರ್ತಿ, ಜಿ.ಪಿ. ಬಸವರಾಜು, ತೇಜಶ್ರೀ, ಸಂದೀಪ ನಾಯಕ, ಸೂರ್ಯಪ್ರಕಾಶ ಪಂಡಿತ್ ಇವರೆಲ್ಲರೂ ಬೇರೆ ಬೇರೆ  ಇದರ ಸೃಷ್ಟಿಗೆ ಎರೆಮಣ್ಣಿನ ನೆಲದಂತೆ ನೆರವಾಗಿದ್ದಾರೆ. ಮೈಸೂರಿನ ಕವಿ-ಮನುಷ್ಯ-ಚಿಂತಕ ರಾಮು ನಾನು ತಲುಪಬಯಸುವ, ತಲುಪಲಾರದ ಮುಗ್ಧ ಎತ್ತರ. ಅವರು ಈ ಕವಿತೆಗಳನ್ನು ಮೆಚ್ಚಿರುವುದು ಹಾಗೂ ಅವರ ಆಪ್ತರಾದ ಮಿತಭಾಷಿ ದೇವನೂರ ಮಹಾದೇವ ಅವರು ಇಲ್ಲಿನ ಕೆಲವು ಕವಿತೆಗಳನ್ನು ಓದಿ ಫೋನ್ ಮಾಡಿದ್ದು ಮನಸ್ಸಿನಲ್ಲಿ ಉಳಿದಿದೆ.

ಗೆಳೆಯರಾದ ಶ್ರೀ ಎಂ.ವಿ. ವೆಂಕಟೇಶ ಮೂರ್ತಿಯವರು ಕೆಲವು ಅನುವಾದಗಳನ್ನು ದೊರಕಿಸಿಕೊಟ್ಟಿದ್ದಾರೆ. ಹಿರಿಯರಾದ ಡಾ. ಸುಮತೀಂದ್ರ ನಾಡಿಗರ ಕೆಲವು ಪುಸ್ತಕಗಳನ್ನು ಬಳಸಿಕೊಂಡಿದ್ದೇನೆ. ಬೇರೆ ಕೆಲವು ಪುಸ್ತಕಗಳನ್ನು ನನ್ನ ಮಗ ಮನು ಅಮೆರಿಕಾದಲ್ಲಿ ದೊರಕಿಸಿಕೊಟ್ಟಿದ್ದಾನೆ. ನನ್ನ ಸೊಸೆ ರುಚಿಕಾಗೆ ಆಪ್ತರಾದ Tommy ಜರ್ಮನ್ ಉಚ್ಚಾರಣೆಗೆ ಸಂಬಂಧಿಸಿದ ಕೆಲವು ತೊಡಕುಗಳನ್ನು ಬಿಡಿಸಿಕೊಟ್ಟಿದ್ದಾರೆ. ಇಂಟರ್ನೆಟ್ ಇಲ್ಲದೆ ಈ ಕೆಲಸವನ್ನು ಮಾಡುವುದು ಕಷ್ಟವಾಗುತ್ತಿತ್ತು. ನನ್ನವಳಾದ ನಿರು ನನ್ನೊಂದಿಗಿದ್ದು ನನ್ನನ್ನು ಕಾಪಾಡಿದ್ದಾಳೆ. ಈ ಎಲ್ಲರಿಗೂ ನಾನು ಹೇಳುವುದಿಷ್ಟೆ: ‘ನಾನು ನಿಮ್ಮವನೆಂಬ ಹೆಮ್ಮೆಯ ಋಣವು ಮಾತ್ರ ನನ್ನದು.”

ನನ್ನ ಒಳಗನ್ನು ಬೆಳೆಸಿರುವ ರಿಲ್ಕ ಇಲ್ಲದಿದ್ದರೆ ಇದೆಲ್ಲ ಇರುತ್ತಿರಲಿಲ್ಲ. ಅವನ ಬೆಂಕಿ-ಬೆಳಕುಗಳು ಓದುವ ನಿಮಗೂ ತಟ್ಟಲಿ. ಕನ್ನಡ ಈ ಕವಿಯನ್ನು ಒಳಗೊಳ್ಳಲಿ.

 

‍ಲೇಖಕರು avadhi

May 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಮಾಹಿತಿಪೂರ್ಣ ಬರಹ, ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: