ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೆಯ ಮೌನ…

ಸೌಜನ್ಯ ನಾಯಕ

ಅಮ್ಮ, ಉಪ್ಪಿಟ್ಟು ಬೇಕು
ಎಂದು ಆಕೆ ಕೇಳಿದಾಗಲೆಲ್ಲ
ನಿನ್ನದೆ ನೆನಪಾದರೂ
ಉಣ ಬಡಿಸುತ್ತೇನೆ ಖುಷಿಯಿಂದಲೇ
ಅವಳು ಇಷ್ಟಪಟ್ಟಿದೆಲ್ಲವನ್ನು

ಅಮ್ಮ, ನೀಲಿ ಬಣ್ಣದ್ದು ಬೇಕು
ಎಂದು ಒಂದೇ ಬಣ್ಣವ
ಒತ್ತೋತ್ತಿ ಹೇಳುವಾಗಲೂ
ಒತ್ತರಿಸಿ ಬರುವ ನಿನ್ನ
ನೆನಪನ್ನು ತಡೆದು
ಕೊಡಿಸುತ್ತೇನವಳಿಗೆ ಅದೇ ಬಣ್ಣದೆಲ್ಲವನು

ಅಮ್ಮ, ಬಾಳೆಹಣ್ಣು ಬೇಡ
ಎಂದಾಕೆ ತೋರುವ ಮುಖದ
ಭಾವನೆಗಳೆಲ್ಲವೂ ನಿನ್ನನ್ನೆ ಹೋಲುತ್ತವಾದರೂ
ದೂರವಿರಿಸುತ್ತೇನೆ ಒತ್ತಾಯ ಮಾಡಿ
ತಿನ್ನಿಸಲಾಗದೆ ಏನನ್ನು

ನಿನ್ನಂತಹುದೆ ಪಡಿಯಚ್ಚೊಂದು
ನನ್ನುದರದಲಿ ಮೂಡುತಿರುವಾಗಲೇ
ಅದಾವ ಸೆಳೆತಕೆ ಸಿಲುಕಿ
ದೂರ ತಳ್ಳಿದೆಯೋ ನೀ ನಮ್ಮ…

ಹಣೆಬರಹವನ್ನೆ ದೂಷಿಸಿ
ಕಲ್ಲಾಗಿಸಿಕೊಂಡ ಹೃದಯದೊಡನೆ
ಬದುಕ ನಡೆಸ ಹೊರಟವಳಿಗೆ
ನಿನ್ನ ಅಭಿರುಚಿಯ ಪಡಿಯಚ್ಚೆ
ಹಳೆತೆಲ್ಲವನು ಕೆದಕಿ
ಮತ್ತೆ ನೆನಪಿಸುತ್ತಿದ್ದಾಳೆ ನಿನ್ನನ್ನ…

ಆಕೆ ಇಷ್ಟಪಟ್ಟವುಗಳಲೆಲ್ಲ
ನೀನೆ ಅಡಗಿ ಕುಳಿತು
ಆಜ್ಞಾಪಿಸುತಿರುವಂತೆ ಭಾಸವಾದರೂ
ಇಲ್ಲವೆನ್ನಲಾಗದೆ ಕೊಡಿಸುತ್ತೇನೆ ನಾ
ಆಕೆ ಕೇಳಿದವುಗಳನ್ನೆಲ್ಲ…

ಆದರಿಂದಾಕೆ ನಿನ್ನ ಕುರಿತೆ
ಕೇಳುವ ಹಲವಾರು ಪ್ರಶ್ನೆಗಳಿಗೆ
ಉತ್ತರಿಸಲಾಗದೆ ಸೋತು
ಧರಿಸಿದ್ದೇನೆ ನಾ ಮೌನವನ್ನ…
ಅದೆಷ್ಟೋ ವರ್ಷಗಳ ಹಳೆಯ ಮೌನ
ಇಂದಿನ ಮೌನದೊಡನೆ ಬೆರೆತು
ಮತ್ತದೇ ನೆನಪಿಸುತ್ತಿದೆ ನಿನ್ನನ್ನ…

‍ಲೇಖಕರು Avadhi

5 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading