ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ನಾ ದಿವಾಕರ‌

ಒಬ್ಬ ವ್ಯಕ್ತಿಯ ಬದುಕು ರೂಪಿಸುವಲ್ಲಿ ಬಾಲ್ಯ ಮತ್ತು ಯೌವ್ವನ ಮಹತ್ತರ ಪಾತ್ರ ವಹಿಸುತ್ತವೆ. ನಾವು ಬೆಳೆದ ಪರಿಸರ, ನಮ್ಮ ಸುತ್ತಲೂ ಇದ್ದ ಪ್ರಪಂಚ, ನಾವು ಒಡನಾಟ ಹೊಂದಿದ್ದ ಸಂಬಂಧಿಗಳು ಮತ್ತು ನಾವು ಓದಿದ ಶಾಲೆ, ಪಾಠ ಹೇಳಿದ ಗುರುಗಳು ಹೀಗೆ ಬಾಲ್ಯದ ಬದುಕು ಮನುಷ್ಯನ ಜೀವನದ ನೀಲ ನಕ್ಷೆಯನ್ನು ಅಮೂರ್ತ ನೆಲೆಯಲ್ಲಿ ಸಿದ್ಧಪಡಿಸಿಬಿಡುತ್ತದೆ. ಆಟೋಟಗಳ ನಡುವೆ, ಆಟ ಪಾಠಗಳ ನಡುವೆಯೇ ಬಾಲ್ಯ ಜೀವನವನ್ನು ಕಳೆದರೂ ಆ ಕಾಲಘಟ್ಟಗಳಲ್ಲಿ ನಡೆಯುವ ಒಂದೋ ಎರಡೋ ಘಟನೆಗಳು ಬದುಕಿನುದ್ದಕ್ಕೂ ಕಾಡುವ ಮಧುರ ಅಥವಾ ಕಹಿ ನೆನಪಾಗಿ ಉಳಿದು ಬಿಡುತ್ತದೆ. ಹುಟ್ಟು ಮತ್ತು ಸಾವು ಈ ಎರಡೂ ಪ್ರಕೃತಿ ಸಹಜ ಕ್ರಿಯೆಗಳು ಬಾಲ್ಯ ಜೀವನದ ಅಚ್ಚಳಿಯದ ನೆನಪಾಗಿ ಉಳಿಯುತ್ತದೆ.

ಮತ್ತೊಂದೆಡೆ ಬಾಲ್ಯದಿಂದ ಯೌವ್ವನಾವಸ್ಥೆಗೆ ಕಾಲಿಡುವ ಕಾಲಘಟ್ಟವೂ ವ್ಯಕ್ತಿಯ ಬದುಕಿಗೆ ಒಂದು ವಿಭಿನ್ನ, ಹೊಸ ಆಯಾಮವನ್ನು ನೀಡುತ್ತದೆ. ಬಾಲ್ಯದ ಅಮಾಯಕ ಮನಸು ಯೌವ್ವನದಲ್ಲಿ ಪಕ್ವತೆಯೆಡೆಗೆ ಸಾಗುವಾಗ ಸಂಭವಿಸುವ ಕೆಲವು ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. ಒಬ್ಬ ವ್ಯಕ್ತಿ ತನ್ನ ಸುತ್ತಲಿನನ ಸಮಾಜವನ್ನು ಅರ್ಥಮಾಡಿಕೊಳ್ಳುವುದು ಈ ಕಾಲಘಟ್ಟದಲ್ಲೇ ಸಾಧ್ಯ. ತನ್ನವರು, ತನ್ನ ಸುತ್ತಲಿನವರು ಮತ್ತು ತನ್ನವರಾಗಿದ್ದುಕೊಂಡೇ ಅನ್ಯರಾಗಿರುವವರು ಅನಾವರಣವಾಗುವುದೂ ಈ ಘಟ್ಟದಲ್ಲೇ. ಬದುಕಿನ ಏಳು ಬೀಳುಗಳು ಸಹಜ ಆದರೆ ಈ ಏಳು ಬೀಳುಗಳಿಂದ ಕಲಿಯುವ ಪಾಠ ಆತನ ಅಥವಾ ಆಕೆಯ ಭವಿಷ್ಯದ ಜೀವನಕ್ಕೆ ಸ್ಪಷ್ಟತೆಯನ್ನು ನೀಡುತ್ತದೆ.

ನಂತರದ ದಿನಗಳಲ್ಲಿ ನಡೆಯುವ ಘಟನೆಗಳು ನಾವೇ ಕಟ್ಟಿಕೊಳ್ಳುವ ಬದುಕಿನ ವಿಭಿನ್ನ ನೆಲೆಗಳು, ಆಯಾಮಗಳು. ಅಲ್ಲಿ ಉಂಟಾಗುವ ಯಾವುದೇ ವ್ಯತ್ಯಯಗಳು, ಪಲ್ಲಟಗಳು ಮೂಲತಃ ನಾವು ಕಳೆದು ಬಂದ ಬಾಲ್ಯ ಅಥವಾ ಯೌವ್ವನದ ಬುನಾದಿಯನ್ನೇ ಅವಲಂಬಿಸಿರುತ್ತದೆ. ಏಕೆಂದರೆ ಜೀವನ ಎನ್ನುವುದು ಮನುಷ್ಯನ ಮನಸ್ಥಿತಿಯ ಕಾಲಾನುಕ್ರಮದ ಅಭಿವ್ಯಕ್ತಿಯಷ್ಟೇ. ನೌಕರಿ, ಉದ್ಯಮ, ವ್ಯಾಪಾರ, ದಾಂಪತ್ಯ, ಕುಟುಂಬ, ಮಕ್ಕಳು, ಮೊಮ್ಮಕ್ಕಳು ಮತ್ತು ವೃದ್ಧಾಪ್ಯದ ಹೊಸ್ತಿಲು ಹೀಗೆ ಮೆಟ್ಟಿಲೇರುತ್ತಾ ಹೋಗುತ್ತಿದ್ದಂತೆಲ್ಲಾ, ಮತ್ತದೇ ಬಾಲ್ಯದ ಅಥವಾ ಯೌವ್ವನದ ದಿನಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

ಬದುಕಿನ ಪುಟಗಳು ತೆರೆದುಕೊಂಡಷ್ಟೇ ವೇಗವಾಗಿ ಮುಚ್ಚಿಕೊಳ್ಳುತ್ತೆ ಆದರೆ ಬಾಲ್ಯ ಮತ್ತು ಯೌವ್ವನದ ನೆನಪುಗಳು ನಿರಂತರವಾಗಿ ತೆರೆದುಕೊಳ್ಳುತ್ತಲೇ ಇರುತ್ತವೆ. ಈ ಪ್ರಕ್ರಿಯೆಯಲ್ಲೇ ನೆನಪುಗಳ ಮೆರವಣಿಗೆಯ ನಡುವೆ ವಾಸ್ತವ ಬದುಕಿನ ಕಷ್ಟ ಕಾರ್ಪಣ್ಯಗಳನ್ನು, ವ್ಯತ್ಯಯಗಳನ್ನು ಮರೆಯುತ್ತಾ ಹೋಗುತ್ತೇವೆ. ಮಕ್ಕಳ, ಮೊಮ್ಮಕ್ಕಳ ಬಾಲ್ಯ ನಮ್ಮದೇ ಬಾಲ್ಯವನ್ನು ನೆನಪಿಸುತ್ತವೆ. ಅವರ ಯೌವ್ವನದ ಹಪಹಪಿಗಳು ನಮ್ಮನ್ನು ಗತ ಯೌವ್ವನದ ದಿನಗಳಿಗೆ ಕರೆದೊಯ್ಯುತ್ತವೆ.

 ‘ನನ್ನ ಬದುಕು’ ಎಂದರೆ ಇಂದಿನ ಬದುಕು ಮತ್ತು ಅಂದಿನ ಜೀವನದ ಮಿಶ್ರಣವಾಗಿಯೇ ಕಾಣುತ್ತದೆ. ಜೀವನ ನಮಗೆ ಒದಗಿ ಬಂದದ್ದು ಅದನ್ನು ಬಾಲ್ಯ ಮತ್ತು ಯೌವ್ವನದಲ್ಲಿ ಕಾಣುತ್ತೇವೆ, ಬದುಕು ನಾವು ಕಟ್ಟಿಕೊಳ್ಳುವುದು ಅದನ್ನು ವೃದ್ಧಾಪ್ಯದ ಹಿರಿತನದಲ್ಲಿ ಕಾಣುತ್ತೇವೆ. ಈ ಚಿಂತನೆಗಳ ನಡುವೆಯೇ ಒಂದು ವಿಶಿಷ್ಟ ಆತ್ಮಕಥನವನ್ನು ಓದಿದ ಅನುಭವ ಉದಯ ಕುಮಾರ್ ಹಬ್ಬು ಅವರ ‘ಬೊಪ್ಪ ನನ್ನನ್ನು ಕ್ಷಮಿಸು’ ನೀಡುತ್ತದೆ.

ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಲೇಖಕ, ಕವಿ, ಸಾಹಿತಿ ಉದಯ ಕುಮಾರ್ ಹಬ್ಬು ಅವರ ‘ಬೊಪ್ಪ ನನ್ನನ್ನು ಕ್ಷಮಿಸು’ ಓದಿ ಮುಗಿಸಿದ ನಂತರ ಕನಿಷ್ಟ ಮೇಲೆ ಹೇಳಿರುವಷ್ಟು ಹೇಳಲೇಬೇಕೆನಿಸಿತು. ಸ್ವಗತದ ಶೈಲಿಯಲ್ಲೇ ತಮ್ಮ ಬಾಲ್ಯ ಮತ್ತು ಯೌವ್ವನದ ದಿನಗಳನ್ನು ಮೆಲುಕು ಹಾಕುತ್ತಾ ತಾವು ಬದುಕಿನಲ್ಲಿ ಕಂಡು ಅನುಸರಿಸಿದ  ಪ್ರಾಮಾಣಿಕತೆಯನ್ನೂ ತಮ್ಮ ಸ್ವಗತ ಕಥನದಲ್ಲೂ ಮುಂದುವರೆಸುವ ಶ್ರೀಯುತ ಹಬ್ಬು ಆತ್ಮಕಥೆಗೆ ಒಂದು ವಿಶಿಷ್ಟ ಆಯಾಮವನ್ನೇ ನೀಡಿದ್ದಾರೆ ಎನ್ನಬಹುದು.

ಅನುಭವಗಳ ಕಥನವೇ ಆತ್ಮಕಥೆ ಎನ್ನುವುದು ಸಾರ್ವತ್ರಿಕ ಸತ್ಯ ಆದರೆ ಆ ಅನುಭವಗಳ ಆಂತರ್ಯದಲ್ಲಿ ಅಡಗಿರಬಹುದಾದ ಅನುಭಾವದ ಕ್ಷಣಗಳು ನಮ್ಮೊಳಗೇ ತೆರೆದುಕೊಳ್ಳಬೇಕೆಂದರೆ ನಮ್ಮ ಆಲೋಚನೆ ಮತ್ತು ಬೌದ್ಧಿಕ ನೆಲೆ ಪಾರದರ್ಶಕವಾಗಿರಬೇಕಾಗುತ್ತದೆ. ಈ ಪಾರದರ್ಶಕತೆಯನ್ನು ‘ಬೊಪ್ಪ ನನ್ನನ್ನು ಕ್ಷಮಿಸು’ ಕೃತಿಯು ಕಟ್ಟಿಕೊಡುತ್ತದೆ.

ಮಧ್ಯಮ ವರ್ಗದ ಬದುಕು ಮತ್ತು ಬವಣೆ ಬಹುಶಃ ಒಂದು ಇಡೀ ಪೀಳಿಗೆಯಲ್ಲಿ ಒಂದೇ ರೀತಿಯದ್ದಾಗಿರುತ್ತದೆ ಎನಿಸುತ್ತದೆ. ಕೃತಿಕಾರ ಹಬ್ಬು ಅವರ ತಂದೆಯವರು ಕಾಲವಾದ ಸಂದರ್ಭ, ಮನೆಯಲ್ಲಿ ಒಂದು ಕಾಳು ಅಕ್ಕಿಯೂ ಇಲ್ಲದ ಪರಿಸ್ಥಿತಿ ನನ್ನನ್ನು ನೇರವಾಗಿ 1977ರ ನನ್ನ ತಂದೆಯವರು ಕಾಲವಾದ ಸಂದರ್ಭಕ್ಕೆ ಕರೆದೊಯ್ದುಬಿಟ್ಟಿತು. ಇದೇ ಪರಿಸ್ಥಿತಿಯನ್ನು ನಾನೂ ಅನುಭವಿಸಿದ್ದು ನೆನಪಾಯಿತು. ಹಾಗೆಯೇ ವಿದ್ಯಾಭ್ಯಾಸಕ್ಕಾಗಿ ಪಡುವ ಪರಿಶ್ರಮ, ಮತ್ತಾರದೋ ಮನೆಯಲ್ಲಿದ್ದು ಓದುವುದು, ಅಲ್ಲಿನ ಕಹಿ ಅನುಭವಗಳು ಮತ್ತು ಅಷ್ಟೇ ಆತ್ಮೀಯ ಸಂಬಂಧಗಳು ಇವೆಲ್ಲವೂ ಹಬ್ಬು ಅವರ ಕಥಾ ಹಂದರದಲ್ಲಿ ಹೃದಯಸ್ಪರ್ಶಿಯಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ. ತಮ್ಮ ತಾಯಿ ಮತ್ತೊಬ್ಬರ ಮನೆಯಲ್ಲಿರಬೇಕಾದ ಸಂದರ್ಭ ಅಲ್ಲಿ ಎದುರಿಸುವ ಮುಜುಗರದ ಸನ್ನಿವೇಶಗಳು ನನ್ನನ್ನು ಮತ್ತೊಮ್ಮೆ 1982ರ ಸಂದರ್ಭಕ್ಕೆ ಕರೆದೊಯ್ದಿತ್ತು.

ಹೀಗೆ ನನ್ನದೇ ಜೀವನದ ಕೆಲವು ಘಳಿಗೆಗಳನ್ನು ಮೆಲುಕು ಹಾಕುವಂತೆ ಮಾಡುತ್ತಾ ಸರಾಗವಾಗಿ ಓದಿಸಿಕೊಂಡು ಹೋದ ‘ಬೊಪ್ಪ’ ವಿಶೇಷ ಎನಿಸುವುದು ಆ ವಿಭಿನ್ನ ಸಂಸ್ಕೃತಿ ಮತ್ತು ಭಾಷೆಯ ನೆಲೆಯಲ್ಲಿ. ಹವ್ಯಕ ಭಾಷೆಯ ಸೊಬಗು, ಅಲ್ಲಿನ ಪರಿಸರದ ಸುಂದರ ವಿವರಣೆ ಮತ್ತು ಅಲ್ಲಿನ ಸಾಂಸ್ಕೃತಿಕ ಆಚರಣೆಗಳ ನಿರೂಪಣೆ ಇಡೀ ಕೃತಿಯನ್ನು ಮೇರು ಮಟ್ಟಕ್ಕೆ ಕೊಂಡೊಯ್ಯುತ್ತದೆ. ವಿಭಿನ್ನ ಸಂದರ್ಭಗಳಲ್ಲಿ ಹೇಳಲಾಗುವ ಹಾಡುಗಳು ಆ ನೆಲದ ಸಂಸ್ಕೃತಿಯನ್ನು ಕಟ್ಟಿಕೊಡುವಂತಿವೆ. ತಮ್ಮ ಬಾಲ್ಯದ ಸುಖ, ದುಃಖ, ವ್ಯಸನ ಮತ್ತು ಸಂಕಷ್ಟಗಳ ನಡುವೆಯೇ ಈ ಸಾಂಸ್ಕೃತಿಕ ನೆಲೆಗಳನ್ನು ಮತ್ತು ಅದರ ಹಿನ್ನೆಲೆಯನ್ನು ಬದುಕಿನ ಘಟನೆಗಳ ಮೂಲಕವೇ ಕಟ್ಟಿಕೊಡುವ ಮೂಲಕ ಲೇಖಕರು ಓದುಗರನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತಾರೆ.

ಎಳೆ ಮಗುವನ್ನು ತೊಟ್ಟಿಲಲ್ಲಿ ಹಾಕುವ ಸಂಭ್ರಮದ ನಡುವೆ ಹಾಡುವ ‘ಜೋಜೋಜೋ ಗುಂಡ ಪರಮ ಪ್ರಚಂಡ’ , ಸುಗ್ಗಿ ಕಾಲದಲ್ಲಿ ಹಾಡುವ ‘ನಡಿ ಹೋಗುವ ನಾಮೆಲ್ಲರೂ ಕೂಡಿ’, ಹಾಲಕ್ಕಿ ಒಕ್ಕಲಿಗರ ತಾರ್ಲೆ ‘ಬಾಗಿಲ್ಮುಂದಡ ತೊಲುಚೀ’ , ಕುಚ್ಚಲಕ್ಕಿ ಮಾಡುವ ಪ್ರಕ್ರಿಯೆಯ ನಡುವೆ ಹಾಡುವ ‘ಅಂಗಲ ಮೂಲೆಲಿ ಬತ್ತ ಮೆರು ಹೆಣ್ಣೆ ‘ ಈ ಕೆಲವು ಹಾಡುಗಳು ಒಂದು ಭಿನ್ನ ನೆಲ ಸಂಸ್ಕೃತಿಯನ್ನು ಪರಿಚಯಿಸುವುದರೊಂದಿಗೇ ಹವ್ಯಕ ಭಾಷೆಯ ಸೊಗಡನ್ನೂ ಉಣಬಡಿಸುತ್ತವೆ. ತಮ್ಮ ಬಾಲ್ಯ ಜೀವನದ ಪ್ರಸಂಗಗಳೊಂದಿಗೇ ಈ ಹಾಡುಗಳನ್ನು ಮೇಳೈಸುವ ಮೂಲಕ ಉದಯ ಕುಮಾರ್ ಹಬ್ಬು ಓದುಗರನ್ನೂ ದಶಕಗಳಷ್ಟು ಹಿಂದಕ್ಕೆ ಕರೆದೊಯ್ದುಬಿಡುತ್ತಾರೆ. ಅವರ ಕಥನ ಶೈಲಿ ಮತ್ತು ಭಾಷೆಯಲ್ಲಿ ಆ ಆಪ್ತತೆ ಮತ್ತು ಪಾರದರ್ಶಕತೆ ಇದೆ.

ಉತ್ತರ ಕನ್ನಡದ ದಟ್ಟ ಅಡವಿಗಳ ನಡುವೆ ಹರಡಿಕೊಂಡಿರುವ ಅಡಿಕೆ, ತೆಂಗು, ಯಾಲಕ್ಕಿ, ಮೆಣಸು ಬೆಳೆಗಳ ನಡುವೆಯೇ ಆ ಭಾಗದ ಸಾಂಸ್ಕೃತಿಕ ಕಥನಗಳನ್ನು ತೆರೆದಿಡುತ್ತಾ ಹೋಗುವ ಹಬ್ಬು ಅವರು ತಮ್ಮ ವ್ಯಾಂಸಗಕ್ಕಾಗಿ ಹುಟ್ಟಿದೂರಿನಿಂದ ದೂರದಲ್ಲಿ ನೆಲೆಸಿ, ಕೆಲವೊಮ್ಮೆ ಅಸ್ಥಿರತೆಯನ್ನೂ ಅನುಭವಿಸಿ, ಅನಿಶ್ಚಿತತೆಯ ನಡುವೆಯೇ ಮತ್ತೊಬ್ಬರ ಹಂಗಿನಲ್ಲಿ ಬಾಳುವ ಆಂತರ್ಯದ ವೇದನೆಯನ್ನೂ ನಿಸರ್ಗದ ಸೂಕ್ಷ್ಮಗಳಂತೆಯೇ ಓದುಗರ ಮುಂದೆ ತೆರೆದಿಡುತ್ತಾ ಹೋಗುತ್ತಾರೆ.

ಬಾಲ್ಯದ ಬದುಕು ಒಬ್ಬ ವ್ಯಕ್ತಿಯ ಬದುಕಿನಲ್ಲಿ ಹೇಗೆ ಸ್ವಾಭಿಮಾನ ಮತ್ತು ಸ್ವಂತಿಕೆಯನ್ನು ಗಟ್ಟಿಗೊಳಿಸುತ್ತದೆ ಎನ್ನಲು ಹಬ್ಬು ಅವರ ಜೀವನದ ಕೆಲವು ಘಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇಂತಹ ಕೆಲವು ಪ್ರಸಂಗಗಳಲ್ಲಿ ನನ್ನನ್ನೇ ಕಂಡುಕೊಳ್ಳುವಂತಾಗಿದ್ದು ಕಾಕತಾಳೀಯ ಎನಿಸಿದರೂ, ಅದು ಲೇಖಕರ ಸೃಜನಶೀಲತೆ ಮತ್ತು ಸಂವೇದನಾತ್ಮಕ ಬರಹದ ಪ್ರಭಾವವೂ ಹೌದು.

ನನ್ನಂತಹ ಬಯಲುಸೀಮೆಯವನಿಗೆ ಹವ್ಯಕ ಸಮುದಾಯದ ವಿಶೇಷ ಅಡುಗೆಗಳು, ಖಾದ್ಯಗಳು, ಅಲ್ಲಿ ಆಚರಿಸುವ ಹಬ್ಬ ಹರಿದಿನಗಳು ಮತ್ತು ಈ ಆಚರಣೆಗಳಲ್ಲಿ ಕಾಣಬಹುದಾದ ವೈಶಿಷ್ಟ್ಯಗಳು ಮನ ಸೆಳೆಯುತ್ತವೆ. ಹವ್ಯಕ ಸಮುದಾಯದೊಂದಿಗೆ ಬೆರೆತು ಜನಸಂಸ್ಕೃತಿಯ ಒಂದು ಭಾಗವಾಗಿಯೇ ಬದುಕು ಸವೆಸುವ ಸಿದ್ಧಿಗಳು, ಹಾಲಕ್ಕಿಗಳು, ಮುಸ್ಲಿಮರು ಮತ್ತು ಸೇರೆಗಾರರ ವಿಶಿಷ್ಟ ಸಂಸ್ಕೃತಿಗಳನ್ನೂ ಲೇಖಕರು ಪರಿಚಯಿಸುತ್ತಾರೆ. ಹೊರದೇಶದಿಂದ ವಲಸೆ ಬಂದು ಇಲ್ಲಿನವರೇ ಆಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಒಂದಾಗಿ ಬಾಳುವ ಸಿದ್ಧಿಗಳ ಜೀವನ ಪರಿಚಯವೂ ಈ ಕೃತಿಯ  ಮೂಲಕ ಆಗುತ್ತದೆ.

ಬಾಲ್ಯ ಜೀವನದಲ್ಲಿ ನಾವು ಸಹಜವಾಗಿ ಕಾಣುವ ಕೆಲವು ಆಚರಣೆಗಳು, ಮೇಲ್ಜಾತಿ ಕುಟುಂಬಗಳಲ್ಲಿ ಕಾಣುವ ಮಡಿ ಮೈಲಿಗೆ ಪೂಜೆ ಇತ್ಯಾದಿ, ನೈತಿಕತೆ ಮತ್ತು ಅನೈತಿಕತೆಯ ಜಿಜ್ಞಾಸೆ ಇವೆಲ್ಲವೂ ನಮಗೆ ಅರ್ಥವಾಗುವುದು ಯೌವ್ವನಕ್ಕೆ ಕಾಲಿರಿಸಿದ ನಂತರವೇ. ಯೌವ್ವನದ ಕಾಲಘಟ್ಟದಲ್ಲಿ ಇವುಗಳ ಮೂಲ ಮತ್ತು ಆಂತರ್ಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಅರಿತರೆ, ಅವುಗಳ ಔಚಿತ್ಯ ಮತ್ತು ಅನಪೇಕ್ಷಿತ ಗುಣಲಕ್ಷಣಗಳನ್ನೂ ಗ್ರಹಿಸಲು ಸಾಧ್ಯ.

ಈ ಎಲ್ಲ ಸೂಕ್ಷ್ಮ ಎಳೆಗಳನ್ನು ಹಬ್ಬು ಅವರ ಬಾಲ್ಯ ಕಥನದಲ್ಲಿ ಮತ್ತು ಯೌವ್ವನದ ದಿನಗಳ ಅನುಭವಗಳಲ್ಲಿ ಕಾಣಬಹುದು. ಇದು ಕೇವಲ ಅವರೊಬ್ಬರ ಬದುಕಿನ ಪ್ರಸಂಗಗಳಂತೆ ಕಾಣುವುದಿಲ್ಲ. ಒಂದು ಸಮಾಜದ ಆಂತರ್ಯದಲ್ಲಿ ಅಡಗಿರಬಹುದಾದ ಸೂಕ್ಷ್ಮಗಳನ್ನು ಪರಿಚಯಿಸುತ್ತವೆ. ಇದು ಉದಯ ಕುಮಾರ್ ಹಬ್ಬು ಅವರ ಸೃಜನಶೀಲ ಬರವಣಿಗೆಯ ಫಲ. ಕೃತಿ ಹೃದಯಸ್ಪರ್ಶಿಯಾಗಿ ಕಾಣುವುದೂ ಈ ಕಾರಣಕ್ಕೇ.

ಎಳೆಯ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, ಅನಿಶ್ಚಿತತೆಯ ದಿನಗಳನ್ನು ಎದುರಿಸುತ್ತಲೇ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆ ಮನುಷ್ಯನಲ್ಲಿ ಒಂದು ಹೊಸ ಚಿಂತನಾವಾಹಿನಿಯನ್ನೇ ಸೃಷ್ಟಿಸಿಬಿಡುತ್ತದೆ. ಇದು ನನ್ನ ಅನುಭವವೂ ಆಗಿದೆ. ಹಾಗಾಗಿಯೋ ಏನೋ ಈ ಕೃತಿ ನನ್ನ ಮನಸಿಗೆ ಬಹಳ ಹತ್ತಿರವಾದದ್ದು ಎನಿಸಿಬಿಡುತ್ತದೆ. ತಮ್ಮ ಸ್ವಗತವನ್ನು ವಿಸ್ತೃತ ಕಥಾನಕದ ಶೈಲಿಯಲ್ಲಿ ಹೇಳದೆ ನಡೆದ ಘಟನೆಗಳ ಮೂಲಕ ತುಂಡು ತುಂಡಾಗಿ ಹೇಳುತ್ತಾ ಹೋದರೂ ಕೊನೆಯ ಪುಟಕ್ಕೆ ಬಂದಾಗ ಲೇಖಕರ ಇಡೀ ಜೀವನ ಓದುಗರ ಕಣ್ಣೆದುರು ನಿಲ್ಲುತ್ತದೆ. ಒಂದು ಆತ್ಮಕಥನವನ್ನು ಈ ಶೈಲಿಯಲ್ಲೂ ಬರೆಯಬಹುದು ಎನಿಸಿದ್ದು ಅತಿಶಯೋಕ್ತಿಯಲ್ಲ.

ಅನುಭವ, ಅನುಭಾವಗಳ ಈ ಅಕ್ಷರ ಮೆರವಣಿಗೆಯುದ್ದಕ್ಕೂ ಹಬ್ಬು ಅವರ ‘ಬೊಪ್ಪ’ ನಮ್ಮನ್ನೂ ಕಾಡುತ್ತಲೇ ಹೋಗುತ್ತಾರೆ. ಇದು ಕೃತಿಗೆ ಮತ್ತಷ್ಟು ಮೆರುಗು ನೀಡುವ ಅಂಶ. ಒಂದು ವಿಶಿಷ್ಟ ಅನುಭವ ನೀಡುವ ಕೃತಿ ‘ಬೊಪ್ಪ ನನ್ನನ್ನು ಕ್ಷಮಿಸು’. ಮನದಾಳದಲ್ಲಿ ಹಾದು ಹೋದ ಒಂದು ಅಂಶವನ್ನು ಹೇಳಬೇಕೆಂದರೆ, ಒಂದು ವೇಳೆ ನನ್ನ ಆತ್ಮಕಥೆ ಬರೆದರೆ ಇದೇ ಶೈಲಿಯಲ್ಲಿ ಬರೆಯಬಹುದೇ ಎನಿಸಿದ್ದು ಸತ್ಯ. ತಮ್ಮ ಬದುಕಿನ ಬುನಾದಿಯ ದಿನಗಳನ್ನು ಹಂತಹಂತವಾಗಿ ಬಿಚ್ಚಿಡುತ್ತಲೇ ಇಡೀ ಜೀವನದ ಚಿತ್ರಣವನ್ನು ನೀಡುವ ಈ ವಿಶಿಷ್ಟ ಶೈಲಿಗೆ ಉದಯ ಕುಮಾರ್ ಹಬ್ಬು ಅವರನ್ನು ಅಭಿನಂದಿಸಲೇಬೇಕು. ‘ಬೊಪ್ಪ’ ಹೃದಯಕ್ಕೆ ಹತ್ತಿರವಾಗುವುದೂ ಈ ಕಾರಣಕ್ಕೇ ಎಂದು ಹೇಳಬೇಕಿಲ್ಲ.

‍ಲೇಖಕರು Avadhi

March 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: