ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹರೆಯವೆಂದರೆ…' – ರಶ್ಮಿ ಕಾಸರಗೋಡು ಕವಿತೆ

ರಶ್ಮಿ ಕಾಸರಗೋಡು

ಎಳೆಚಿಗುರು ಸದ್ದಿಲ್ಲದೆ ಬಿರಿದಿದೆ
ಹೃದಯ ಹೂ ಪಕಳೆ ಬಿಚ್ಚಲು
ಹಂಬಲಿಸುವಾಗ
ಬಣ್ಣದ ಹಾತೆಗಳು
ಗುಂಯಿಗುಡುವ ಸದ್ದಿನೊಂದಿಗೆ
ಕನಸುಗಳ ಗೋಪುರವೇರುತಿವೆ
ಕಾಲದ ಜೋಕಾಲಿಯಲಿ
ಜೀಕಿದ ಪೆಂಡುಲಂ
ಒಂದು ಬಿಂದುವಿನಲಿ ಸ್ತಬ್ಧ
ತೊಟ್ಟ ಲಂಗದಲಿ ರಕ್ತದ ಕಲೆ
ತಿಂಗಳ ಸ್ನಾನದ ಶುರುವಾತು
ದೊಡ್ಡವಳಾಗಿದ್ದೀನಿ!
 
ತುಂಬು ಕೆನ್ನೆ, ಕಣ್ಣಲ್ಲಿ ಹೊಸ ಹೊಳಪು
ಕಾಲಗಲಿಸಿ ಕೂರಬೇಡ
ಪುಟ್ಟ ಲಂಗ, ಬಿಗಿ ರವಿಕೆ
ಚೂಡಿದಾರಕ್ಕೂ ಬೇಕೊಂದು ದುಪ್ಪಟ್ಟಾ
ಕುಂಟಾಬಿಲ್ಲೆ, ಲಗೋರಿ ಬೇಡವೇ ಬೇಡ
ದೂರವೇ ಇರು ಓರಗೆಯ ಹುಡುಗನಿಂದ
 
ಕಾಗೆ ಮುಟ್ಟಿದೆಯಂತೆ
ಒಣ ಹುಲ್ಲು ಚಾಪೆಯಲಿ ಮುದುಡಿ ಕುಳಿತಾಗ
ಆ ಪಾತ್ರೆಗಳನ್ನೆತ್ತಿ ಬಿಸಾಡಬೇಕು
ನಾನು ಹೆಣ್ಣು
ನನಗ್ಯಾಕೆ ಕಟ್ಟುಪಾಡು?
ಸ್ವಾತಂತ್ರ್ಯದ ದನಿಯೆತ್ತಲು
ತುಡಿಯುತಿದೆ ಮನಸು
 
ನನ್ನಾತ್ಮ ಬಲವನ್ನು ನುಚ್ಚು ನೂರು ಮಾಡಲೆಂದು
ಪೈಪೋಟಿಯಿಂದ ಮೂಡುವ ಮೊಡವೆ
ಮಾತ್ರವಾಗಿತ್ತು ಆಗ ನನ್ನ ಶತ್ರು
ರಕ್ತ ಚಂದನವನ್ನು ಅರೆದು, ಅರಶಿನವನ್ನೂ
ಮೆತ್ತಿ ಬಣ್ಣದ ವೇಷವಾದ ಗಳಿಗೆ
 
ಅಮ್ಮನಂತೆಯೇ ನಾನಾಗುತ್ತಿದ್ದೇನೆ
ಹುಡುಗಿಯೊಳಗಿನ ಹೆಂಗಸು
ಅವಳ ಚಿತ್ರಗಳೊಂದಿಗೆ ತುಡಿತಗಳ
ಹೋಲಿಕೆಯೂ ಜಾಸ್ತಿಯಾಗುತ್ತಿದೆ
 
ನನ್ನ ಏಕಾಂತದಲಿ ಸಿಟ್ಟಿನ ಪ್ರಸವ ವೇದನೆ
ಪ್ರೀತಿ ಬೇಕಿದೆ ಈಗ
ಆ ಅನುಭೂತಿಯ ಸುಖವೂ
ಕಣ್ಣಲ್ಲಿ ಅವನನ್ನು ಆಕರ್ಷಿಸುವ
ಶಕ್ತಿಯಿದೆ…ಒಲವ
ಅರ್ಪಣೆಯ ಕಾತರವೂ
 
ನಾಲ್ಕು ಗೋಡೆಗಳಿಂದಾಚೆ
ನಾ ಸ್ವರ್ಗ ನಿರ್ಮಿಸಬಲ್ಲೆ
ಒಂಟಿಯಾಗಿ ಕನಸ ಪೋಣಿಸುವ
 
ನಂಬಿಕೆಗಳು ಹಲವು
ತಿದ್ದಲೇ ಬೇಕಾಯಿತು
ಚಿಟ್ಟೆಗಳು ರೆಕ್ಕೆ ಕಿತ್ತೆಸೆದು
ಹುಳವಾಗಿ ಹರಿದಾಡುತಿವೆ
 
ಮುಳ್ಳುಬೇಲಿಯ ಹೊಕ್ಕು ಅವಿತೆ
ಎದ್ದು ಹೊರನಡೆದಾಗ ಪ್ರತಿ
ದಳಗಳಿಗೂ ಚೌಕಾಶಿ
 
ಹರೆಯವೆಂದರೆ ನದಿಯ ಉಗಮ
ಸಾಗರದ ನಡುರೇಖೆ
ಅಲ್ಲ ಅಳಿವೆ ಬಾಗಿಲು
ಪುಟ್ಟ ಕಿಂಡಿಯಲಿ
ಕಾಣುವುದೆಲ್ಲವೂ ಸತ್ಯ
ಎಂದು ತಪ್ಪಾಗಿ ಅರಿತ
ಅದೃಶ್ಯ ಪಂಜರದ ಗಿಣಿ
 

‍ಲೇಖಕರು G

17 March, 2015

6 Comments

  1. sangeetha raviraj

    Arthagarbhita kavite. Eshtavaytu

  2. bidaloti ranganath

    Bidugadeya thanti mele nadedide kavitea

  3. Anonymous

    ಚೆನ್ನಾಗಿದೆ.

  4. mmshaik

    very nice..

  5. Sushma Moodbidri

    ಆಹಾ,,!
    ಮತ್ತೆ ಮತ್ತೆ ಓದಿದೆ ಚಂದದ ಕವಿತೆ 🙂

  6. suresh rajamane, rannabelagali

    NIce ri.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading