ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮಿತಾ ಶೆಣೈ ಕವಿತೆ- ಪೂರ್ಣವಿರಾಮ…

ಸ್ಮಿತಾ ಶೆಣೈ

ಹಳೆಯದೆಲ್ಲವ ಮರೆ ಎಂದಾಗ
ನಿಜಕ್ಕೂ ಮರೆತಿದ್ದೆ
ಮತ್ತೆ ಆ ಗಾಯಗಳ ಮೇಲೆ
ಬೆರಳಾಡಿಸಿದ ತನಕ

ಸಿಹಿ ಎಂದೇ ನಂಬಿದ್ದೆ
ಕುಡಿದ ವಿಶದ ತೇಗು
ಆಗಾಗ ಬಂದು
ಬಾಯಿ ಕಹಿಯಾಗುವ ತನಕ

ಬಿಗುವೆಂದೇ ತಿಳಿದಿದ್ದೆ ಸಂಬಂಧಗಳ ಕೊಂಡಿಗಳು
ನಿರೀಕ್ಷೆಗಳ ಭಾರಕ್ಕೆ ಹರಿದು
ಛಿದ್ರವಾಗುವ ತನಕ

ಗುನುಗುಗಳ ಹಿನ್ನೆಲೆಯ ಮೇಜವಾನಿಯ ಬದುಕಿತ್ತು
ಕಣ್ಣು ಮಿಟುಕಿಸುವುದರಲ್ಲಿ
ಎಲ್ಲ ಮುಗಿದು ಧೂಳೇಳುವ ತನಕ

ಅಲೆಗಳು ಅಲೆದಲೆದು ಬಂದು
ದಡದ ಮೈದಡವುತಲೇ ಇದ್ದವು
ಉಕ್ಕೆದ್ದು ವಿಕಾರ ಹದ್ದುಮೀರಿ
ಸೋರಿ ಸುನಾಮಿಯಾಗುವ ತನಕ

ಬಣ್ಣಗಳಿಗೇನು ಕಮ್ಮಿ ಇತ್ತು
ಕಾಮನ ಬಿಲ್ಲಿನಲಿ
ಹನಿಮಳೆ ರುದ್ರನರ್ತನದ
ಅತಿವೃಷ್ಟಿಯಾಗುವ ತನಕ

ನಿನ್ನ ನಗೆಗೊಂದು ನಡೆಗೊಂದು
ನೋಟಕೊಂದು ಆಟಕೊಂದು
ಅರ್ಥ ಊಹಿಸುತಲೇ ಇದ್ದೆ
ನನ್ನ ಭಾವನೆಗಳನ್ನು ಸುಟ್ಟು ನೀನು ಮೈಕಾಯಿಸಿಕೊಳ್ಳುವ ತನಕ

‍ಲೇಖಕರು avadhi

26 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading