ರಂಜನಿ ಪ್ರಭು ಕವಿತೆ- ಸಿದ್ಧಾರ್ಥನಿಗೆ ತಲುಪದ ಯಶೋಧರೆಯ ಪತ್ರ…

ರಂಜನಿ ಪ್ರಭು

ಸಖನೇ..ಆತ್ಮಸಖನೇ
ನನ್ನೊಳಗಿನ ತುಮುಲಗಳ ಜೀವಕಣಗಳ ತಳಮಳಗಳ
ಹೇಗೆ ಅರ್ಥಮಾಡಿಸಲಿ ನಿನಗೆ??
ಇತ್ತೀಚೆಗೆ ಅದೇನೋ ಒಂದು ಅಂತರ
ಪಕ್ಕವಿದ್ದರೂ ಇರದ ಹಾಗೆ
ಪ್ರತಿ ಇರುಳಲೂ ಮಗ್ಗುಲು ತಿರುಗಿ ಹಂಸತಲ್ಪದ ಆಕಡೆ ಮಲಗಿದ ನೀನು
ಈಕಡೆ ತಿರುಗೀಯೆಂದು
ಕಾಯುತ್ತಾ ಕಾಯುತ್ತಾ ಕಣ್ಣೆವೆಗಳು ಮುಚ್ಚಿಕೊಳ್ಳುತ್ತವೆ
ಪ್ರತೀ ಹಗಲಲೂ ಹೊಸದಿನವೊಂದು
ಅರಳಬಹುದೆಂದು
ಹೊಸಹುರುಪನು
ನಟಿಸುತ್ತೇನೆ ನಾನು
ಕಪಿಲವಸ್ತುವಿನ
ಅರಮನೆಯಲ್ಲಿ
ಎಲ್ಲವೂ ಮೊದಲಿನಂತಿದೆ
ನಿನ್ನೊಬ್ಬನ ಹೊರತು
ನನ್ನೆದೆಗೆ ತಾಕಿದ ಮಹಾವಿಪತ್ತಿನ ಸೆಳಕು
ಇನ್ಯಾರಿಗೂ ತಾಕಿದಂತಿಲ್ಲ

ಮಹಾ ಅದು ಎಷ್ಟುವರುಷವಾಯಿತು
ನಾನುನೀನೂ ಜೊತೆಯಾಗಿ?
ಅಂದು ನಿನ್ನ ಅರಮನೆಯ ಉದ್ಯಾನದ ಔತಣದಲಿ
ಎದುರಾದಾಗ
ಅದಾವುದೊ ಜನುಮದ ನಂಟು ಬೆಸಗೊಂಡ ಭಾವ..
ಪ್ರಣಯದ ಉಯ್ಯಾಲೆಯಲಿ ತೂಗಿಕೊಂಡದ್ದೊಂದು ವರುಷ
ನಂತರ ಬಸುರಿನ ಬಯಕೆಬೇನೆ
ಹೂಹೊತ್ತ ಬಳ್ಳಿಯಂತೆ
ನಾನು..ಸದಾ ನನ್ನ ಉಪಚಾರದಲಿ ನೀನು
ಆಯಾಸದಲಿ ನಿನ್ನೆದೆಗೆ
ಒರಗಿ ಕಳೆದದ್ದು ಮತ್ತೊಂದು ವರುಷ
ರಾಹುಲ ಈಗಿನ್ನೂ ತೊಟ್ಟಿಲ ಕೂಸು
ಅವನ ಜನನದಲಿ ನೀಪಟ್ಟ ಸಂತಸಕೆ ಮೇರೆಯುಂಟೇ
ನಾನೋ ನನ್ನನ್ನೂಮರೆತು
ಅಮ್ಮನಾದೆ..
ಹಗಲಾದೊಡನೆ
ಉದಯಸೂರ್ಯ
ನಿನಗೆ ರಾಹುಲ
ಇರುಳಾದರೆ ನಗುವ ಚಂದ್ರ..
ಮಾಸಗಳು ಹಾರಿದ್ದು
ತಿಳಿಯಲೇ ಇಲ್ಲ
ದಿನಾ ದೇವರಿಗೆ
ವಂದಿಸುತ್ತಿದ್ದೆ
ನನಗಿನ್ನೇನೂ ಬೇಡ
ಹೀಗೇ ಇರಲಿ ಬದುಕು
ತವರೆಂಬೋ ತವರನ್ನೇ
ಮರೆತುಬಿಟ್ಟೆನಲ್ಲ
ದೊರೆ ನೀ ಬರುವ ಮುಂಚಿನ ಬದುಕು ಅದಾವುದೋ ಜನುಮದ ನೆರಳಿನಂತೆ.
ಎದ್ದು ಬರಲಾಗದಷ್ಟು
ಮುಳುಗಿದ್ದೇನೆ…

ಕಾಮಕಸ್ತೂರಿಯ ತೆನೆಯನು ತೆಕ್ಕೆಯಲಿ ಅಪ್ಪಿ ಅದೆಷ್ಟು ಬಾರಿ
ಮುಡಿಸಿದ್ದೆ.
ಪ್ರತಿ ಮಿಲನದಲೂ
ನಿನ್ನ ತೆಕ್ಕೆಯಲಿ ಮಿದುಮಣ್ಣು ನಾನು
ಸಗ್ಗದ ಸೀಮೆಗೇ ಲಗ್ಗೆಯಿಟ್ಟಿದ್ದೇವೆ
ನೀಮಿಡಿದ ನನ್ನ ದೇಹದ
ವೀಣೆಯಲಿ
ಈಗಲೂ ಕೇಳುತಿವೆ
ಆಮಧುರ ಸ್ವರಗಳು

ನಿನ್ನ ದೇಹಕ್ಕೊಗ್ಗದ ಸಂಗಸುಖ ನನಗೂ ಬೇಡ ಬಿಡು..
ಕಾಮಿನಿಯೇನಲ್ಲ ನಿನ್ನ ಹೆಣ್ಣು..ವಿರಾಗಿಯಂತೂ ಅಲ್ಲವೇಅಲ್ಲ
ಆದರೆ ನನ್ನ ಪ್ರೀತಿ ಸುಖ ಬದುಕು ಎಲ್ಲವೂ ಸ್ಪರ್ಶಮೂಲ ನಲ್ಲಾ..
ಪ್ರತಿಕ್ಷಣವೂ ಅನುಭವಿಸುತಿರುವ ಈ ಮೂಕವಿರಹವ ಹೇಗೆ ಅರ್ಥಮಾಡಿಸಲಿ ನಿನಗೆ?
ಹಸಿವಿಲ್ಲದವಗೆ ಹಸಿದವನ ಭಾಧೆ ಅರಿವಾಗದು
ಉಸಿರುಗಟ್ಟುವ ಉಬ್ಬಸ ಬಯಲಲ್ಲಿ ನಿಂತವನಿಗೆ ಹೇಗೆ ತಿಳಿದೀತು?
ಕಡುಬೇಸಿಗೆಯಲಿ
ವೈಶಾಖದ ಹನಿಗಳಿಗೆ
ಕಾಯುವ ಮಣ್ಣಿನೊಡಲ ಹಾಗೆ
ಸ್ವಾತಿಮಳೆಗೆ ಕಾಯುವ
ಕಡಲ ಚಿಪ್ಪಿನಹಾಗೆ
ನಿನ್ನ ಬೆಚ್ಚನೆಯಸ್ಪರ್ಶಕ್ಕೆ
ಮುಚ್ಚಟೆಯ ಮುದ್ದಿಗೆ
ಮೈಬೆಸೆವ ಆಲಿಂಗನಕ್ಕೆ
ಕಾಯುತ್ತಾ ಇರುತ್ತವೆ
ನನ್ನೊಳಗಿನ ಜೀವಕಣಗಳು

ದಿನದಿನ ಕಳೆದಂತೆ
ದಿಗಿಲಾಗುತಿದೆ ನನಗೆ
ತಾಯಿ ಗೌತಮಿ ನಿನಗಿಷ್ಟವೆಂದು ತಂದಿಟ್ಟ ಸಿಹಿ ನಿನಗೆ ಕಾಣಲೇ ಇಲ್ಲ
ತೊಟ್ಟಿಲಬಳಿ ನೀ ನಿಂತಾಗ ರಾಹುಲ ಅಳುತ್ತಲೇ ಇದ್ದಾನೆ
ತೊಟ್ಟಿಲ ಹಗ್ಗ ಹಿಡಿದು
ಹಾಗೇ ನಿಂತಿದ್ದೆ ನೀನು
ನಾನು ಮೋಹದ ಮಲ್ಲಿಗೆಯ ಮುಡಿದು
ನಿನ್ನೆದುರು ಕುಳಿತು ಮಾತಾಡುತ್ತಾ “ಅದು ಹಾಗೇ ಅಲ್ಲವೇ?” ಎಂದರೆ ಯಾವುದುಹೇಗೆ ಎಂದು ನನ್ನನ್ನೇ ಪ್ರಶ್ನಿಸಿದೆ

ಜೀವ ಸಾವಾಗುವುದು
ಪ್ರೇಮ ವಿರಾಗವಾಗುವುದು
ಎರಡಕ್ಕು ಒಂದು ಕ್ಷಣ ಸಾಕು ಅಲ್ಲವೇ ಸಖ?

ತೊರೆದವರು ಬಿಡುಗಡೆ ಪಡೆಯುತ್ತಾರೆ
ಹಿಂದೆ ಉಳಿದವರ ಗತಿ?
ಇನ್ನೇನು ತೊಟ್ಟು ಕಳಚಿದ ತರಗೆಲೆಯ ಹಾಗೆ ನಡುಗುತಿದೆ ಹೃದಯ
ಯಾರಲ್ಲಿ ಹೇಳಲಿ ಹೇಳು ಕೇಳಬೇಕಾದ ಕಿವಿ ಮುಚ್ಚಿಹೋಗಿರುವಾಗ

‍ಲೇಖಕರು avadhi

April 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: