ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಪೂರ್ತಿ ಗಿರೀಶ್ ಹೊಸ ಕವಿತೆ- ಕನಸಿನ ಕಣ್ಣು

ಸ್ಪೂರ್ತಿ ಗಿರೀಶ್

೧.
ರಕ್ತ ಹೆಪ್ಪುಗಟ್ಟಿದ
ಖಾಲಿರಸ್ತೆಯಲಿ
ಇರುವೆ ಸೈನ್ಯದ ಗಸ್ತು

೨.
ಸಂಜೆ ಐದರ
ಗಡಿಯಾರದ ಮುಳ್ಳು
ಮುರಿದು
ಇರುಳು ಕಳೆಯದ ಹೆಣಭಾರ

೩.
ಮಳೆ ಸುರಿದು ನದಿ ಹರಿದು
ಅವನ ಮಕ್ಕಳು ನನ್ನ ಮಕ್ಕಳು
ಗಂಜಿಕೇಂದ್ರದಲ್ಲಿ
ಕಾಗದದ ದೋಣಿ ಆಟವಾಡಿಕೊಂಡವು

೪.
ಮುರಿದ ಕೀಲು ಕಳಚಿದ ನೊಗ
ಸವೆದ ಗಾಲಿ
ಪಯಣ ಮಲಗಿದೆ

೫.
ಮರಳಲ್ಲಿ ಬರೆದ ನದಿಯ ಹೆಸರನು
ಕಡಲು ಅಳಿಸಿ ಹಾಕಿದೆ

೬.
ನೀನು
ನೆನಪಿಗೆಂದು ಕೊಟ್ಟಿದ್ದ
ಉಂಗುರವನ್ನು
ಒಣಮೀನು ನುಂಗಿದೆ

೭.
ಅವನ ಊರಿನಲ್ಲಿ ನಿಲ್ಲದ ಮಳೆ
ಕಳಿಸಿದ ತಾರು
ಅಂಗಳ ತಲುಪದೆ ಮರಳಿದೆ

೮.
ಎಂಥ ಪಳಗಿದ ಮೀನು
ನೀನು
ಗಾಳವನ್ನು ನುಂಗಿದೆ

೯.
ಮರಳು
ಕೈ ಕಟ್ಟಿ ದಡದಲ್ಲಿ
ಬಿಮ್ಮಗೆ ನಿಂತರು
ಕಾಲುಗಳ ಕಡಲತ್ತ ಎಸೆದಿದೆ

೧೦.

ರಾತ್ರಿ
ಎವೆಗಳಲ್ಲಿ
ತುಂಬಿಕೊಂಡಿದೆ ಬೆಳದಿಂಗಳು

ಸಂಜೆ
ಎಲೆಹೊಡೆದ ಬಿದಿರು ತೂಗುತ್ತಿದೆ
ಗಾಳಿ
ಹಾಡುವ ಝಲಕಿಗೆ ಪುಳಕಗೊಂಡು

ಬೆಳಗು
ನೀನು
ಉದಯಿಸಲು
ಲೋಕ ಹೊರಳಿದೆ
ಜೀವತಳೆದು

೧೧.
ಈಗಷ್ಟೇ
ಅರಳಿ ಮೆಲ್ಲಗೆ ನಗುವ ಹೂವೆ
ಇದ್ದಲ್ಲಿಯೇ ಕಣ್ಣ ಹೊರಳಿಸಿ
ದಾರಿಹೋಕ ನನ್ನ ಸೆಳೆದುಕೊಂಡೆ

ನನ್ನ ಪುಟ್ಟ ರೆಕ್ಕೆಗಳು
ನಿನ್ನ
ಮಧುರ ಸ್ಪರ್ಶಕ್ಕೆ ಅಲೆದಲೆದು
ದೇಹದಿಂದ ಹೊರಗೆ ಜಿಗಿದಂತೆ
ಅಂಕೆ ಮೀರುತ್ತಿವೆ

ರಕ್ತ ಮಾಂಸದ ದೇಹದುದ್ದಗಲಕ್ಕೂ
ನಿನ್ನ ಇರಿಸಿಕೊಂಡು ಉಸಿರಾಡುವುದು
ಸಂಜೆ, ಬೆಳಗು
ಕಡುಗಪ್ಪಿನ ಕತ್ತಲನು
ದಾಟುವುದು ದುರಭ್ಯಾಸವೀಗ

ಹಾರು ಹೂವೆ
ಗಾಳಿಯಲಿ ತೇಲು
ಅಲೆ ಅಲೆಯುತಾ ಹಗುರಾಗು
ನನ್ನ ರೆಕ್ಕೆಗಳಿಗೂ ಮೆತ್ತು ಬಾ
ನಿನ್ನ ಮಧುರ ಪಕಳೆಯ ರಂಗನು
ಸೇರುವಾ ಬಾ
ಕನಸ್ಸಿನ ಕಣ್ಣು

‍ಲೇಖಕರು Admin

16 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading