ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯಶ್ರೀ ಎ ಎಸ್ ಕವಿತೆ – ಕತ್ತಲೆಯ ಸಂತೆಯಲ್ಲಿ!

ಸೌಮ್ಯಶ್ರೀ ಎ ಎಸ್

ಕತ್ತಲೆಯ ಸಂತೆಯಲ್ಲಿ ಬೆಳಕು
ಬಿಕರಿಯಾಗುತ್ತಿದೆಂದು ಗಾಳಿ
ಉಸುರಿದ ಪಿಸುಮಾತಿನ
ಮಂಪರಿಗೆ ಮರುಳಾಗಿ ಕಡುಕತ್ತಲೆಯಲ್ಲಿ
ಕಣ್ಣುಗಳು ತಡಕಾಡಿದ್ದು ಬೆಳಕನಷ್ಟೇ ಕತ್ತಲೆಯನ್ನಲ್ಲ!

ಕತ್ತಲ ಹಾದಿಯಲ್ಲಿ ಕರಿನೆರಳಿನ
ಮಂಪರು ಮನಸಿಗೆ
ಅಳಿಸಿ ಹೋದವೆಂದುಕೊಂಡ ಚಿತ್ರಗಳು
ಕಣ್ಣಿನ ಪರದೆಯ ಮುಂದೆ ಕಪ್ಪು ಕಪ್ಪಾಗಿ
ಅಲೆಯುತಿವೆ!

ಬೆಳಕಿನ ಸಾಂಗತ್ಯಕ್ಕೇಕೆ ಕಣ್ಣುಗಳು
ಹಪಹಪಿಸುತ್ತಿವೆ
ಸಿಗದಿದ್ದಕೆ ಕೈ ಚಾಚಿ ಮತ್ತೆ ಮತ್ತೆ
ಪರಿತಪಿಸುತ್ತಿದೆ
ಆದರೂ ಈ ಇರುಳು ಸರಿದು
ಬೆಳಕುಅರಳುವುದೆಂಬ
ಹುಚ್ಚು ಭ್ರಮೆಯಾಕೆ ಮನಸಿಗೆ!

ಕಡು ಕತ್ತಲನುಂಡ ಕಣ್ಣುಗಳು
ಮಿಣುಕು ದೀಪದ ಆಸೆ ಹೊತ್ತು
ನಭದತ್ತ ಮುಖಮಾಡಿ
ಆಸೆಗಣ್ಣುಗಳಿಂದ ಮೂಡುವ
ಬೆಳಕಿನ ರಂಗೋಲಿಯ ಕಣ್ಣ್
ತುಂಬಿಸಿಕೊಳ್ಳುವ ಬಯಕೆಯ
ಕನವರಿಕೆಯಲ್ಲಿ ಬಿಕ್ಕುತಿವೆ!

ಬೆಳಕಿನ ಸುಳಿಗಾಳಿ ಸುಳಿದು
ಕತ್ತಲು ಕರಗಿ ಬೆಳಕು ಅಪ್ಪುವುದೆಂದು
ಕತ್ತಲೆಯ ಗಣಿಯಿಂದ ಅಗೆದು ಮೊಗೆದರೆ
ಕಣ್ಣುಗಳು ಉಣ್ಣುವುದು ಕತ್ತಲೆಯನ್ನಷ್ಟೇ
ಬೆಳಕನ್ನಲ್ಲ!

‍ಲೇಖಕರು Admin

24 November, 2022

1 Comment

  1. prathibha nandakumar

    ತುಂಬ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading