ಟಿ ಎಸ್ ಶ್ರವಣ ಕುಮಾರಿ ಓದಿದ ‘ಅಬ್ಬೆ’

ಪರಿಸರದ ಸುತ್ತ ಹೆಣೆದ ‘ಅಬ್ಬೆ

ಟಿ ಎಸ್ ಶ್ರವಣ ಕುಮಾರಿ

“ಅಬ್ಬೆ” ಶ್ರೀಯುತ ಶಶಿಧರ ಹಾಲಾಡಿಯವರ ಎರಡನೆಯ ಕಾದಂಬರಿ. ಕಾದಂಬರಿಯ ಹೆಸರನ್ನು ನೋಡಿದ ತಕ್ಷಣ ಇದೊಂದು ತಾಯಿಯ ಬಗೆಗಿನ ಸಾಂಸಾರಿಕ ಕತೆಯಿರಬಹುದು ಎನ್ನುವ ಕಲ್ಪನೆ ಬರುತ್ತದೆ. ಆದರೆ ಈ ಕಾದಂಬರಿಯ ʻಅಬ್ಬೆʼ ಯಾರೂ ನೋಡಿಲ್ಲದ, ಆದರೆ ಇದ್ದೇ ಇದೆ ಎಂದು ಜನರು ನಂಬುವ ಒಂದು ಪ್ರಕಾರದ ಜೇಡದ ದಂತಕತೆ. ಅದೆಷ್ಟು ವಿಷಮಯವೆಂದರೆ “ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟು ಸಮಯವಿಲ್ಲ” ಎನ್ನುವಷ್ಟು. ಈ ಮಾತು ಕಾದಂಬರಿಯುದ್ದಕ್ಕೂ ಅಲ್ಲಲ್ಲಿ ಬರುತ್ತದೆ. ಆದರೆ ಯಾವುದೇ ವ್ಯಕ್ತಿಯನ್ನು ಕಚ್ಚಿದ ಜೇಡವನ್ನು ಯಾರೂ ಕಂಡಿಲ್ಲ. ಸತ್ತ ಜಾಗದಲ್ಲಿ ಹರಿದಾಡುತ್ತಿದ್ದ ಯಾವುದೋ ಜೇಡವನ್ನು ಕಂಡು ಚಚ್ಚಿ ಕೊಂದಿದ್ದಾರೆ. ಹಾಗಾಗಿ ಜೇಡನ ಬಗ್ಗೆ ಒಬ್ಬೊಬ್ಬರದು ಒಂದೊಂದು ರೀತಿಯ ವರ್ಣನೆ. ಕಾಡು, ಹೊಲ, ತೋಟಗಳಲ್ಲಿ ಆಕಸ್ಮಿಕ ಸಾವಾದಾಗ ʻಅಬ್ಬೆ ಕಚ್ಚಿ ಸತ್ತರುʼ ಎನ್ನುವುದು ಒಂದು ನಿರ್ಧಾರಿತ ತೀರ್ಮಾನವಷ್ಟೇ. 

ಇಡೀ ಕತೆ ಕಲ್ಕೆರೆ ಎನ್ನುವ ಅರಸೀಕೆರೆ ತಾಲ್ಲೂಕಿನ ಒಂದು ಪುಟ್ಟ ಕಾಲ್ಪನಿಕ ಊರಿನಲ್ಲಿ ನಡೆಯುತ್ತದೆ. ಮೂರ‍್ನಾಲ್ಕು ಬೀದಿ, ಒಂದು ಕೆರೆ, ಒಂದಷ್ಟು ತೆಂಗಿನ ತೋಟಗಳು, ಒಂದೆರಡು ಹೋಟೆಲ್‌, ಬ್ಯಾಂಕು, ಸಣ್ಣಪುಟ್ಟ ಅಂಗಡಿಗಳು, ಸ್ಕೂಲು, ಆಸ್ಪತ್ರೆ ಒಂದಷ್ಟು ನಾಡಹೆಂಚಿನ, ಮಂಗಳೂರು ಹೆಂಚಿನ ಮನೆಗಳು… ಹೀಗೆ ಒಂದು ಚಿಕ್ಕ ವ್ಯವಸ್ಥೆಯ ಮತ್ತು ಕಾಡಿನ ಮರಗಳ, ವನ್ಯಪ್ರಾಣಿಗಳ ಕಳ್ಳ ಮಾರಾಟ, ಸರ್ಕಾರಕ್ಕೆ ದಗಾ ಹಾಕುವ ವ್ಯವಹಾರಗಳು ಎಲ್ಲವೂ ನಡೆಯುವ, ಎಲ್ಲೂ ಕಾಣಬಹುದಾದ ಸಣ್ಣ ಊರದು. ಕಥಾ ನಾಯಕ ಶಿವರಾಮ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದ ಮೊದಲ ಶಾಖೆಯಾಗಿ ದಕ್ಷಿಣ ಕನ್ನಡದ ಕುಂದಾಪುರದಿಂದ ಬಯಲು ಸೀಮೆಯ ಕಲ್ಕೆರೆಗೆ ಬರುತ್ತಾನೆ.

ಕಾದಂಬರಿಯಲ್ಲಿ ಬರುವ ಮುಕುಂದೂರು ಸ್ವಾಮಿಗಳು ಮತ್ತು ಬೆಳಗೆರೆ ಕೃಷ್ಣಶಾಸ್ತ್ರಿಗಳ ಸನ್ನಿವೇಶ ಹಾಗೂ ಬ್ಯಾಂಕ್‌ನಲ್ಲಿ ನಡೆಯುವ ಪೂಜಾರಿ ಸಾಲಮೇಳದಿಂದ ಇದು 90ರ ದಶಕದಲ್ಲಿ ನಡೆದಿರುವ ಕತೆ ಎಂದುಕೊಳ್ಳಬಹುದು. ಕೆಲವು ಶ್ರೀಮಂತರನ್ನು ಹೊರತುಪಡಿಸಿದರೆ ಮುಗ್ಧ ಅನಕ್ಷರಸ್ಥ ಹಾಗೂ ಬಡವರಿಂದ ತುಂಬಿರುವ ಊರು ಕಲ್ಕೆರೆ. ಗರುಡನ ಗಿರಿ ಹಾಗೂ ಹಿರೇಕಲ್ಲುಗುಡ್ಡ ಎನ್ನುವ ಎರಡು ಬೆಟ್ಟಗಳ ಸನಿಹದಲ್ಲೇ ಇದ್ದು, ಪರಿಸರ ಪ್ರೇಮಿಯಾದ ಶಿವರಾಮ ಸಹಜವಾಗಿಯೇ ಆ ಬೆಟ್ಟಗಳ ಬಗೆಗೆ ಆಕರ್ಷಿತನಾಗುತ್ತಾನೆ. ಅಲ್ಲಿನ ಹುಡುಗರ ಜೊತೆಗೆ ಕ್ರಿಕೆಟ್‌ ಆಡಿಕೊಂಡು, ಅವರಿಂದ, ಕೆಲವು ಹಳ್ಳಿಗರಿಂದ ಮತ್ತು ಬ್ಯಾಂಕಿನ ಹಂಗಾಮಿ ಪ್ಯೂನ್ ಭಾಸ್ಕರನಿಂದ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ತಿಳಿಯುತ್ತಾ, ಊರಿಗೆ ಹೊಸತಾಗಿ ಬಂದ ಕಾಲೇಜಿನ ಪ್ರಿನ್ಸಿಪಾಲ್‌ ಪರಿಸರ ಪ್ರೇಮಿ ಕಲ್ಲೂರಾಯರು, ಮನೆ ಓನರ್‌ ಶಾಂತಪ್ಪ ಹಾಗೂ ಪಟೇಲ್‌ ನರಸಿಂಹಯ್ಯನವರು ಎಲ್ಲರೊಂದಿಗೂ ಹಲವು ವಿಷಯಗಳನ್ನು ಚರ್ಚಿಸುತ್ತಾ ತನ್ನದೇ ವಲಯವನ್ನು ಸೃಷ್ಠಿಸಿಕೊಳ್ಳುತ್ತಾನೆ. ಮ್ಯಾನೇಜರೊಬ್ಬರನ್ನು ಬಿಟ್ಟರೆ ಬ್ಯಾಂಕಿನ ಮಿಕ್ಕೆಲ್ಲರೊಂದಿಗೂ ಸ್ನೇಹದಿಂದ ಇರುತ್ತಾನಾದರೂ, ಯಾರನ್ನೂ ತನ್ನ ಒಳ ಪರಿಧಿಯಲ್ಲಿ ಬಿಟ್ಟುಕೊಳ್ಳದ ವ್ಯಕ್ತಿತ್ವ ಅವನದ್ದು.

ಕತೆ ಎರಡು ಆಯಾಮಗಳಲ್ಲಿ ಸಾಗುತ್ತದೆ. ಒಂದು ಬ್ಯಾಂಕಿನಲ್ಲಿನ ಶಿವರಾಮ, ಮತ್ತೊಂದು ಪರಿಸರ ಪ್ರೇಮಿ ಶಿವರಾಮ. ಬ್ಯಾಂಕಿನ ಮ್ಯಾನೇಜರ್‌ ಮೊಸರಲ್ಲಿ ಕಲ್ಲು ಹುಡುಕುವ, ʻತಾನು ಕಳ್ಳ; ಪರರನ್ನು ನಂಬʼ ಎನ್ನುವಂತಹ ಹಾಗಿನ ವ್ಯಕ್ತಿತ್ವದವನು. ʻನೀನಿನ್ನೂ ಪ್ರೊಬೇಷನರಿ, ನಿನ್ನ ಕನ್ಫರ್ಮೇಷನ್‌ ನನ್ನ ಕೈಲಿದೆʼ ಎನ್ನುತ್ತಾ ಹಲವು ಇಕ್ಕಟ್ಟಿನ ಸಂದರ್ಭಗಳನ್ನು ಸೃಷ್ಟಿಸಿ, ಬೇಕೆಂದೇ ಅವನನ್ನು ಸಿಲುಕಿಸಲು ಯತ್ನಿಸುತ್ತಾ ಶಿವರಾಮನ ಮನಃಶ್ಯಾಂತಿಯೊಂದಿಗೆ ಶಿಕಾರಿಯಾಡುವ ಸ್ಯಾಡಿಸ್ಟ್‌ ಮನೋಭಾವದವನು. ಮಿಕ್ಕವರೊಂದಿಗೆ ಶಿವರಾಮನ ಸಂಬಂಧ ಯಾವುದೇ ವಿರೋಧವಿಲ್ಲದೇ ಸೌಹಾರ್ಧವಾಗಿಯೇ ಸಾಗುತ್ತಿರುತ್ತದೆ. ಪೂಜಾರಿ ಸಾಲಮೇಳದ ಸಂದರ್ಭದಲ್ಲಿ ಹಳ್ಳಿಯಲ್ಲಿ ಮತ್ತು ಬ್ಯಾಂಕಿನಲ್ಲಿ ನಡೆಯುವ ರಾಜಕೀಯ ಒಳಸುಳಿಗಳ ಅನಾವರಣವಾಗುತ್ತದೆ. 

ಗರುಡನ ಗಿರಿ ಹಾಗೂ ಹಿರೇಕಲ್ಲು ಗುಡ್ಡದ ಚಾರಣದ ಸನ್ನಿವೇಶಗಳು ಸುಂದರವಾಗಿ ಸೃಷ್ಟಿಯಾಗಿವೆ. ಪ್ರಕೃತಿಯ ವರ್ಣನೆ ಸೊಗಸಾಗಿದೆ. ಎಲ್ಲೂ ತೀರಾ ಅಲಂಕಾರಿಕ ವರ್ಣನೆಗಳಿಲ್ಲದೆ ಒಬ್ಬ ಸಾಮಾನ್ಯ ಓದುಗನಿಗೆ ದಕ್ಕುವಂತಹ ಅನುಭವಗಳಾಗಿ ನಿಲ್ಲುತ್ತವೆ. ಪುತ್ರಜಾಜಿ ಮರ, ಬ್ರಿಟಿಷರ ಬಂಗಲೆ, ಕರಡಿಯ ದರ್ಶನ, ಕೆಂಚಪ್ಪನ ಗುಡಿಸಲು, ಮುಕುಂದೂರು ಸ್ವಾಮಿಗಳು ಮತ್ತು ಬೆಳಗೆರೆ ಕೃಷ್ಣಶಾಸ್ತ್ರಿಗಳು (ಇವರ ಹೆಸರನ್ನು ಕಾದಂಬರಿಯಲ್ಲಿ ಹೇಳದಿದ್ದರೂ ಸಾಂದರ್ಭಿಕವಾಗಿ ಅವು ಅರ್ಥವಾಗುತ್ತದೆ) ಇವರ ಚಾರಣದ ಸಮಯದಲ್ಲಿ ಸಿಗುವುದು, ದೂರದಿಂದ ಕಾಣುವ ಅವರ ಆಶ್ರಮ ಎಲ್ಲವೂ ಸಹಜವಾಗಿ ಕಾದಂಬರಿಯಲ್ಲಿ ಬೆರೆತುಹೋಗಿ ಓದುಗರಿಗೆ ಇದು ಕಾಲ್ಪನಿಕವೆನಿಸದೆ ನೈಜ ಘಟನೆಯೆನಿಸುವಂತಿದೆ. ಹುಡುಗರೊಂದಿಗೆ ಹೋದ ಚಾರಣಕ್ಕೂ, ಕಲ್ಲೂರಾಯರೊಂದಿಗೆ ನಡೆಸಿದ ಚಾರಣಕ್ಕೂ ಇರುವ ವ್ಯತ್ಯಾಸ ಗಮನ ಸೆಳೆಯುತ್ತದೆ. ಸುಮ್ಮನೆ ಕುತೂಹಲದಿಂದ ಹೋಗುವ ಚಾರಣಕ್ಕೂ, ಒಬ್ಬ ಪರಿಸರ ವಿಜ್ಞಾನಿಯೊಂದಿಗೆ ಹೋದಾಗ ಗಮನಿಸುವ ಅಂಶಗಳಲ್ಲಿರುವ ಭಿನ್ನತೆ ಸ್ಪಷ್ಟವಾಗುತ್ತದೆ.

ಕತೆಗೆ ಪೂರಕವಾಗಿ ಬರುವ ಹಲವು ಪಾತ್ರಗಳಲ್ಲಿ ಭಾಸ್ಕರ, ಕೆಂಚಪ್ಪ, ಪ್ರೊ. ಕಲ್ಲೂರಾಯ ಇವರ ಪಾತ್ರಪೋಷಣೆ ಸೊಗಸಾಗಿದೆ. ವಿದ್ಯಾಭ್ಯಾಸ ವಂಚಿತನಾಗಿ ಎಂದೋ ಒಂದು ದಿನ ಸಿಗಬಹುದಾದ ಖಾಯಂ ಉದ್ಯೋಗದ ನಿರೀಕ್ಷೆಯಲ್ಲಿ ಎಲ್ಲರಿಗೂ ಎಲ್ಲ ರೀತಿಯ ಸೇವೆಗಳನ್ನೂ ಮಾಡಿಕೊಂಡಿರುವ ಅಮಾಯಕ ಭಾಸ್ಕರ. ಪೆಂಗೋಲಿನ್‌ನಂತಹ ವಿಶಿಷ್ಟ ವನ್ಯಪ್ರಾಣಿಗಳನ್ನು ಕಾಡಿನಲ್ಲಿ ಹಿಡಿದು ಅದನ್ನು ಗುಟ್ಟಾಗಿ ಮಾರುವ ಅಂತೆಯೇ ಕಲ್ಲೂರಾಯನಂತಹ ವಿಜ್ಞಾನಿಗಳಿಗೆ ಎಲೆಗಳ ಮಾದರಿಗಳನ್ನೂ ತಂದುಕೊಡುವ ಕೆಂಚಪ್ಪನಿಗೆ ಅವೆರಡರ ನಡುವಿನ ವ್ಯತ್ಯಾಸ ತಿಳಿಯದು. ಪರಿಸರದ ಪ್ರತಿಯೊಂದು ಜೀವಿಯ ಬಗ್ಗೆಯೂ ಅಪಾರ ಕಾಳಜಿಯಿರುವ ಪ್ರೊ. ಕಲ್ಲೂರಾಯ – ಇವರೆಲ್ಲರೂ ಕಾದಂಬರಿ ಓದಿದ ಮೇಲೂ ಮನದಲ್ಲಿ ಉಳಿದುಹೋಗುತ್ತಾರೆ. ಕಾದಂಬರಿಯಲ್ಲಿ ಬಹಳ ಪಾತ್ರಗಳಿಲ್ಲ; ಕತೆಗೆ ಪೂರಕವಾಗಿರುವಷ್ಟು ಪಾತ್ರಗಳನ್ನು ಮಾತ್ರಾ ಸೃಷ್ಟಿಸಿಕೊಂಡು ಅವುಗಳಿಗೆ ಅವಶ್ಯಕತೆಯಿರುವಷ್ಟನ್ನು ಮಾತ್ರಾ ಬೆಳೆಸಿದ್ದಾರೆ ಕಾದಂಬರಿಕಾರರು. 

ಇಡೀ ಕಾದಂಬರಿಯಲ್ಲಿ ಮುಖ್ಯ ಪಾತ್ರ ವಹಿಸುವುದು ಪರಿಸರವೇ. ಸೃಷ್ಟಿಯಲ್ಲಿ ಯಾವ ಜೀವಿಯೂ ನಗಣ್ಯವಲ್ಲ. ಎಲ್ಲವಕ್ಕೂ ಅದರದರದ್ದೇ ಪಾತ್ರವಿದೆ. ಸೃಷ್ಟಿಯ ಸಮತೋಲನವನ್ನು ಕಾಪಾಡಲು ಆಯಾ ಪರಿಸರದಲ್ಲಿ ಯಾವ ಯಾವ ಜೀವ ವೈವಿಧ್ಯ, ಸಸ್ಯ ವೈವಿಧ್ಯಗಳಿವೆಯೋ ಅವುಗಳ ನಾಶವಾಗಬಾರದು. ಒಂದು ಕೊಂಡಿ ಕಳಚಿದರೂ ಅದು ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ ಎನ್ನುವುದು ಇಡೀ ಕಾದಂಬರಿಯ ಆಶಯ. ಶ್ರೀಯುತ ಶಶಿಧರ ಹಾಲಾಡಿಯವರ ಬರೆಹಗಳನ್ನು ಓದುತ್ತಿರುವವರಿಗೆ ಅವರ ಪರಿಸರದ ಕಾಳಜಿ, ನಿಸರ್ಗ ಪ್ರೇಮ ಸುಪರಿಚಿತವೇ. ಮಲೆನಾಡಿನ ಪರಿಸರದಿಂದ ಬಂದವರಾದರೂ ಬಯಲುಸೀಮೆಯ ಆವರಣದಲ್ಲೂ ಅವರು ಅದೇ ಕುತೂಹಲ, ಆಪ್ತತೆ, ಆಸಕ್ತಿ ತೋರಿದ್ದಾರೆ ಅಂತೆಯೇ ಕಾದಂಬರಿಯ ಕಡೆಯಲ್ಲಿ ಕಥಾನಾಯಕ ಅಂಡಮಾನ್‌ಗೆ ಹೋಗುವ ಸಂದರ್ಭ ಬಂದಾಗಲೂ ಅವನು ಅದನ್ನು ಶಿಕ್ಷೆಯೆಂದುಕೊಳ್ಳದೆ, ಅಲ್ಲಿನ ಪರಿಸರವನ್ನು ಅಧ್ಯಯನ ಮಾಡುವ ಅವಕಾಶವೆಂದುಕೊಳ್ಳುವುದು ಇದಕ್ಕೆ ನಿದರ್ಶನವಾಗಿದೆ. ಆನೆಗೆರೆ ಕೆರೆಯಲ್ಲಿ ಆಹಾರವನ್ನು ಹುಡುಕುವ ಫ್ಲೆಮಿಂಗೋಗಳು, ಮರ ಕತ್ತರಿಸಿ ಗೂಡು ಸಮೇತ ಕೆಳಗೆ ಬಿದ್ದಾಗ ಅಳುವ ಕೊಕ್ಕರೆಗಳು, ಕೆಂಚಪ್ಪನ ಗುಡಿಸಲಲ್ಲಿ ಗೋಣಿಯಲ್ಲಿ ಬಂದಿತವಾಗಿರುವ ಪ್ರಾಣಿಗಳು, ಜನರು ಬಡಿದು ಕೊಂದ ಹಾವು, ಚೇಳುಗಳು, ಜೇಡಗಳು ಎಲ್ಲವೂ ಕಾದಂಬರಿಯ ಪಾತ್ರಗಳೇ ಆಗಿವೆ. ಅರಣ್ಯವನ್ನು ಪುನಃ ಬೆಳೆಸಲು ಬೇರೇನೂ ಮಾಡಬೇಕಿಲ್ಲ; ತಾನಾಗಿಯೇ ಹುಟ್ಟುತ್ತಿರುವ ಗಿಡಗಳನ್ನು ಮೇಕೆಗಳಿಂದ ಮೇಯಿಸದೆ ಹಾಗೇ ಬಿಟ್ಟರೆ ಪ್ರಕೃತಿ ಮರುಸೃಷ್ಟಿ ಮಾಡಿಕೊಳ್ಳುತ್ತದೆ ಎನ್ನುವ ನಿಸರ್ಗದ ಅದ್ಭುತ ಶಕ್ತಿಯ ಸಂದೇಶ ಕಾದಂಬರಿಯಲ್ಲಿದೆ.

ಒಂದು ಡಾಕ್ಯುಮೆಂಟರಿಯ ಮಾದರಿಯಲ್ಲಿ ನೀರಸವಾಗಬಹುದಾಗಿದ್ದ ಕಾದಂಬರಿ, ಹಾಲಾಡಿಯವರ ಲೇಖನಿಯಲ್ಲಿ ಸುಂದರವಾಗಿ ರೂಪತಾಳಿ, ಸರಾಗವಾಗಿ ಓದಿಸಿಕೊಳ್ಳುತ್ತದೆ. ವಸ್ತುವಿನ ಆಯ್ಕೆಯಲ್ಲಿ ಪೂಚಂತೆಯವರಂತೆ ಇವರೂ ಪರಿಸರವನ್ನೇ ಆಯ್ದುಕೊಂಡಿದ್ದರೂ, ನಿರೂಪಣೆಯ ವಿಧಾನ ವಿಭಿನ್ನವಾಗಿದೆ. ಸಾವಧಾನದಿಂದ ಪದಗಳನ್ನು ಹೆಕ್ಕಿ ಮಾಡಿದ ಸಮಾಧಾನದ ಸಹಜ ನಿರೂಪಣೆಯಾಗಿದೆ. “ಅಬ್ಬೆ” ನಿಜವಾಗಿ ಇದೆಯೋ, ಇಲ್ಲವೋ ತಿಳಿಯದು. ಮನುಷ್ಯನ ಪ್ರಾಣ ತೆಗೆಯುವಷ್ಟು ವಿಷಪೂರಿತವೋ ಅಲ್ಲವೋ ತಿಳಿಯದು. ಅದನ್ನು ಕಂಡವರಿಲ್ಲ; ಹಾಗೆಂದು ಅದು ಇಲ್ಲವೇ ಇಲ್ಲವೆಂದೂ ಹೇಳುವಂತಿಲ್ಲ. ಒಟ್ಟಿನಲ್ಲಿ ಒಂದು ನಿಗೂಢ ಲೋಕವನ್ನು ತೆರೆದಿಡುತ್ತಾ ಒಂದು ಒಳ್ಳೆಯ ಕಾದಂಬರಿಯನ್ನು ಓದಿದ ಅನುಭವ ನೀಡಿ ಮನಸ್ಸಿನಲ್ಲಿ ಉಳಿದುಹೋಗುತ್ತದೆ “ಅಬ್ಬೆ”. 

‍ಲೇಖಕರು Admin

November 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: