ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಜನ್ಯ ನಾಯಕ ಕವಿತೆ- ಹೊಸ ಬಯಕೆಯ ಬೆನ್ನಟ್ಟುವಾಸೆ..

ಸೌಜನ್ಯ ನಾಯಕ

ಅದೆಷ್ಟು ಭಾವನೆಗಳಿವೆ
ನಶಿಸಿ ಹೋಗುವ ಬದುಕಿನಲಿ
ಅದೆಂಥಹ ಕನಸುಗಳಿವೆ
ರೆಪ್ಪೆಯಲಡಗಿದ ಕತ್ತಲಲಿ…

ಅದೆಲ್ಲಿಂದೆಲ್ಲಿಯ ಸಂಬಂಧವೋ
ಈ ಭಾವನೆಗೂ ಕನಸಿಗೂ
ಕಷ್ಟವಾದಂತಿದೆ ಉಲ್ಲೇಖಿಸುವುದಕೆ
ಎಲ್ಲ ತರ್ಕಿಸುವ ಮನಸಿಗೂ…

ಭಾವನೆಗಳೊಡನೆ ಭಾವ ಬೆಸೆದು
ಬೆಳೆಯುವುದು ಬಯಕೆ
ಬಯಕೆಯ ನೆಪವೊಡ್ಡಿ
ಕನಸ ಪೊಣಿಸುವಾಸೆ ಮನಕೆ…

ರೆಪ್ಪೆಯಡಗಿನ ಕತ್ತಲ ದಾಟಿ
ಬಣ್ಣ ಬಳಿಯುವಾಸೆ ಕನಸಿಗೆ
ಕನಸು ಸಾಲದೆಂಬಂತೆ
ಹೊಸ ಬಯಕೆಯ ಬೆನ್ನಟ್ಟುವಾಸೆ
ಮನಸಿಗೆ…

ಅದಾವ ಚಿತ್ರ ಮೂಡಿತೊ
ಕನಸೆಂಬ ಪಟದಲಿ ತಿಳಿಯಲಿಲ್ಲ
ಸುಳಿದ ಬೆಳಕೊಂದು ಕಣ್ತೆರಿಸಿ
ದೋಚಿತು ಕಂಡ ಕನಸನೆಲ್ಲ…

ಸ್ವತಃ ಕನಸುಗಳ ಮಾಲಿಕನೇ ಬೆನ್ನತ್ತಿದರೂ
ಕಾಣೆಯಾದ ಕನಸುಗಳು ಸಿಗಲಿಲ್ಲ
ಭಾವನೆಗಳು ಬೇಸರಿಸಿದವೂ
ಕನಸಿಲ್ಲದ ಕತ್ತಲೆಯಲಿ ಬದುಕು ಸಾಧ್ಯವಿಲ್ಲ…

ಭಾವನೆಗಳೊ ಬಯಕೆಯೊ
ಕನಸುಗಳೊ ಕತ್ತಲೆಯೊ
ಸಂತೈಸಲಾಗದೆ ಸೋತೆ ನಾ ಇವುಗಳ
ಆದರೂ ನೀಡಿರುವೆ ಭಾಷೆ ಹುಡುಕುವುದಾಗಿ
ಕಳುವಾದ ಕನಸುಗಳ…

‍ಲೇಖಕರು nalike

13 August, 2020

2 Comments

  1. T S SHRAVANA KUMARI

    ಇಷ್ಟವಾಯಿತು

    • Soujanya

      ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading