ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮ್ಮನೇ ಹೋಗುತಿದೆ ಮುಗಿಲು ಬಾನಲ್ಲಿ..

ಚಂದ್ರಿಕಾ ಹೆಗಡೆ

**

ಸುಮ್ಮನೇ ಹೋಗುತಿದೆ ಮುಗಿಲು ಬಾನಲ್ಲಿ

ಬರದ ಚಿತ್ರಗಳನ್ನು ಬರೆಯುತ್ತಾ

ಮನ ಬಿಚ್ಚಿ ಮಾತಾಡದೇ

ಮೈ ಕೊಡವಿ ಹನಿಯಾಗದೇ

ದುಗುಡಗಳ ಒಳಗೇ ಬಚ್ಚಿಟ್ಟುಕೊಂಡಂತೆ

ಹೇಳದೇ ಕೇಳದೇ

ತಿರುಗಿ ನೋಡದೇ

ಯಾವ ಮುನಿಸೋ

ಯಾರ ಮೇಲಿನ ಸಿಟ್ಟೋ

ತಪ್ಪಾರದೋ ತಿಳಿಯದೇ

ಸಂಧಾನಕ್ಕೆ ಕರೆದರೂ ಒಲ್ಲದೆ

ಯಾರ ಮಾತಿಗೂ ಕಿವಿಗೊಡದೆ

ಗಂಟು ಮೂಟೆಗಳ ಕಟ್ಟಿ ಗುಳೇ ಹೊರಟಂತೆ

ಬಿರಿದು ಬಾಯಾರಿದ ಭೂಮಿಯ ದನಿ

ಕೇಳಿಯೂ ಕೇಳದಂತೆ

ಹೇಳಲು ಇನ್ನೇನೂ ಉಳಿದಿಲ್ಲವೆಂದು

ಸಂಬಂಧಗಳ ಕಡಿದುಕೊಂಡಂತೆ

ಹೋಗುವ ಮೊದಲು

ಒಂದೇ ಒಂದು ಸಲ, ನೆಲದ

ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದರೆ

ಕರಗಿ ನೀರಾಗಿ ಸುರಿಯುತ್ತಿತ್ತೋ ಏನೋ

ಮುಖ ನೋಡಲೂ ಇಷ್ಟವಿಲ್ಲದಂತೆ

ಎದ್ದು ಹೊರಟೇ ಬಿಟ್ಟಿದೆ

ಯಾಕೋ ಮುಗಿಲಿನೆದೆ ಕಲ್ಲಾಗಿದೆ

ನೆಲದ

ಕಣ್ಣೀರೂ ಬತ್ತಿ ಹೋಗಿದೆ.  

‍ಲೇಖಕರು Admin MM

11 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading