ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಧಾ ಆಡುಕಳ ನೆನಪು- ಆಯಿ ಮತ್ತು ಸಿನೆಮಾ…

ಸುಧಾ ಆಡುಕಳ

ಪೇಟೆಗೆ ಚೂರು ಹತ್ತಿರವಿರುವ ಊರಿನಲ್ಲಿ ಬೆಳೆದ ಆಯಿಗೆ ಸಿನೆಮಾ ನೋಡುವುದೆಂದರೆ ಇನ್ನಿಲ್ಲದಂತ ಉತ್ಸಾಹ. ಆದರೆ ಹುಡುಗಿಯರು ಬಯಸಿದಾಗಲೆಲ್ಲ ಸಿನೆಮಾ ನೋಡಲಾಗದ ಕಾಲವದು. ಎಲ್ಲೋ ಮನೆಗೆ ನೆಂಟರು ಬಂದಾಗಲೋ, ಅಕ್ಕತಂಗಿಯರೆಲ್ಲ ಸೇರಿದಾಗಲೋ ಸಿನೆಮಾಕ್ಕೆ ಹೋಗುತ್ತಿದ್ದರಷ್ಟೆ. ಹಾಗೆ ನೋಡಿದ ಸಿನೆಮಾಗಳ ಸಂಭಾಷಣೆಗಳನ್ನು, ಹಾಡುಗಳನ್ನು ಎಷ್ಟೋ ವರ್ಷಗಳವರೆಗೆ ಆಯಿ ಬಾಯಿಪಾಠ ಹೇಳುತ್ತಿದ್ದಳು.

ಮದುವೆಯಾಗಿ ಕಾಡಿನಂಚಿನ ಹಳ್ಳಿಯನ್ನು ಸೇರಿದ ಮೇಲೆ ಆಯಿಗೆ ಸಿನೆಮಾಗಳನ್ನು ನೋಡುವ ಅವಕಾಶಗಳು ಇನ್ನಷ್ಟು ಕಡಿಮೆಯಾದವು. ದೂರದ ಸಿನೆಮಾ ಮಂದಿರಗಳಿಗೆ ಹೋಗಲಾರದ ಕಾರಣವು ಒಂದಾದರೆ, ಸಿನೆಮಾದ ಬಗ್ಗೆ ಅಪ್ಪನಿಗಿದ್ದ ಅನಾಸಕ್ತಿಯೂ ಇನ್ನೊಂದು ಕಾರಣವಾಗಿತ್ತು.

ಯಕ್ಷಗಾನದ ಅಪ್ಪಟ ಪ್ರೇಮಿಯಾಗಿದ್ದ ಅಪ್ಪನಿಗೆ ಸಿನೆಮಾ ಎಂದರೆ ಏನೆಂದೇ ಗೊತ್ತಿರಲಿಲ್ಲವಂತೆ. ಮದುವೆಯಾದ ಹೊಸದರಲ್ಲಿ ನಾದಿನಿಯರ ಒತ್ತಾಯಕ್ಕೆ ಕಟ್ಟುಬಿದ್ದು ಆಯಿಯೊಂದಿಗೆ ಅಪ್ಪ ಸಿನೆಮಾ ನೋಡಲು ಹೋದರಂತೆ. ರಾಜಕುಮಾರ ನಟಿಸಿದ ‘ನನ್ನ ನೀನು ಗೆಲ್ಲಲಾರೆ’ ಸಿನೆಮಾವದು. ಸದಾ ಬಾಯಲ್ಲಿ ವೀಳ್ಯವನ್ನು ತುಂಬಿಕೊಂಡೇ ಇರುವ ಅಪ್ಪ, ಸಿನೆಮಾ ಥಿಯೇಟರ್‌ನಲ್ಲಿ ಪಿಚಕ್ಕೆಂದು ಉಗಿದು, ಸುತ್ತಲಿನವರೆಲ್ಲ ಮುಖ ಸಿಂಡರಿಸಿ, ಇನ್ನೆಲ್ಲಾದರೂ ಮ್ಯಾನೇಜರ್ ನೋಡುವನೇನೋ ಎಂದು ಅಕ್ಕತಂಗಿಯರೆಲ್ಲ ಆತಂಕಕ್ಕೊಳಗಾಗಿದ್ದರಂತೆ.

ಹಾಗೂ, ಹೀಗೂ ಮಧ್ಯಂತರದವರೆಗೆ ಸಿನೆಮಾ ನೋಡಿದ ಅಪ್ಪ, ಆಗ ಹೊರಗೆ ಬಂದವರು ಒಳಗೆ ಬರಲೇ ಇಲ್ಲವಂತೆ. ಅಪ್ಪ ಮನೆಯೆದುರು ಎಗ್ಗಿಲ್ಲದೇ ವೀಳ್ಯ ಉಗಿದಾಗಲೆಲ್ಲ ಆಯಿ, “ಸಿನೆಮಾ ಥಿಯೇಟರನ್ನೂ ಬಿಟ್ಟಿಲ್ಲ ನಿಮ್ಮಪ್ಪ” ಎಂದು ಪುಕಾರು ತೆಗೆದರೆ, ಅಪ್ಪ, “ಅದೆಂಥದ್ದದು ಸಿನೆಮಾ? ಹೆಂಗಸರು ಇದ್ದದ್ದನ್ನೆಲ್ಲ ಬಿಚ್ಚಿಕೊಂಡು ಕುಣಿಯುವುದು. ಹಪ್ ಕೊಳಕು” ಎಂದು ಫರ್ಮಾನು ಹೊರಡಿಸುತ್ತಿದ್ದರು.

ಇಷ್ಟಾದರೂ ಆಯಿಯ ಸಿನೆಮಾ ಪ್ರೀತಿ ಕೊನೆಯವರೆಗೂ ಆರಿರಲಿಲ್ಲ. ಅಪರೂಪಕ್ಕೊಮ್ಮೆ ತವರಿಗೆ ಹೋದಾಗ, ಪರ್ಸಿನಲ್ಲಿರುವ ಕಾಸನ್ನೆಲ್ಲ ಎಣಿಸಿಕೊಂಡು, ಜತೆಗಿರುವವರನ್ನೆಲ್ಲ ಕರೆದುಕೊಂಡು ಸಿನೆಮಾ ಮಂದಿರಕ್ಕೆ ಲಗ್ಗೆಯಿಡುತ್ತಿದ್ದಳು. ನಾವೂ ಬರುತ್ತೇವೆಂದು ದುಂಬಾಲು ಬೀಳುತ್ತಿದ್ದ ಮಕ್ಕಳ ಸೈನ್ಯವನ್ನು ಬಿಟ್ಟು ಹೋಗುವಂತಿಲ್ಲವಾದರೂ, ಅವರೆಲ್ಲರಿಗೆ ಟಿಕೇಟ್ ತೆಗೆಯುವಷ್ಟು ಶ್ರೀಮಂತಿಕೆ ಅಮ್ಮನಲ್ಲಿ ಇರಲಿಲ್ಲ. ಅದಕ್ಕೆಂದು ಹೆಂಗಸರೆಲ್ಲ ಸೇರಿ ಒಂದು ಉಪಾಯವನ್ನು ಕಂಡುಕೊಂಡಿದ್ದರು.

ಹೇಗೂ ಕೈಗೂಸಿಗೆ ಟಿಕೇಟು ತೆಗೆಯಬೇಕೆಂದಿಲ್ಲವೆಂದು ನಿಯಮವಿತ್ತಲ್ಲ, ಥಿಯೇಟರ್‌ನ ಒಳಗೆ ಹೋಗುವಾಗ ಒಬ್ಬೊಬ್ಬರು ಒಂದೊಂದು ಮಕ್ಕಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಇದಕ್ಕೆ ಆಕ್ಷೇಪಿಸುವ ಗೇಟ್ ಕೀಪರ್‌ನೊಂದಿಗೆ ದನಿಯೇರಿಸಿ ಜಗಳಾಡಿ ಗೆಲ್ಲುತ್ತಿದ್ದರು. ಎತ್ತಿಕೊಂಡಾಗ ಕಾಲು ನೆಲಕ್ಕೆ ತಾಗುವಷ್ಟು ದೊಡ್ಡವರಾಗಿದ್ದ ನಮಗೆಲ್ಲ ಆಗ ತೀರ ಮುಜುಗರವಾಗುತ್ತಿತ್ತಾದರೂ, ಸಿನೆಮಾದ ಮಾಯೆ ಎಲ್ಲವನ್ನೂ ಮರೆಸಿಬಿಡುತ್ತಿತ್ತು.

ಟಿ.ವಿ.ಯೆಂಬ ಪೆಟ್ಟಿಗೆ ಹಳ್ಳಿಗಳಿಗೂ ಕಾಲಿಡುತ್ತಿದ್ದ ಕಾಲವದು. ಅದನ್ನು ಕೊಳ್ಳುವ ಸಾಮರ್ಥ್ಯವಿಲ್ಲದಿದ್ದರೂ ಮನೆಯಲ್ಲಿ ಏನಾದರೂ ಕಾರ್ಯಕ್ರಮವಿರುವಾಗ ಬಾಡಿಗೆ ಟಿ.ವಿ. ಮತ್ತು ಕ್ಯಾಸೆಟ್‌ಗಳನ್ನು ತಂದು ಸಿನೆಮಾ ತೋರಿಸುವ ಶೋಕಿ ಹಳ್ಳಿಗಳಲ್ಲಿ ಆರಂಭವಾಗಿತ್ತು. ಹಗಲೆಲ್ಲ ದುಡಿದು ಹೈರಾಣಾಗುವ ಅಮ್ಮ ರಾತ್ರಿ ಎಂದಿಗೂ ಯಾವ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಹೋಗುತ್ತಿರಲಿಲ್ಲವಾದರೂ, ಎಲ್ಲಿಯಾದರೂ ಸಿನೆಮಾ ತೋರಿಸುತ್ತಾರೆಂದರೆ ಅದೆಷ್ಟು ದೂರವಾದರೂ ಹೋಗುತ್ತಿದ್ದಳು.

ಹಳ್ಳ, ಕೊಳ್ಳಗಳನ್ನು ದಾಟಿ, ಗದ್ದೆಬಯಲನ್ನು ಹಾದು ಅಷ್ಟು ದೂರ ಹೋದರೂ ಕೆಲವೊಮ್ಮೆ ಸಿನೆಮಾ ನೋಡಲಾಗುತ್ತಿರಲಿಲ್ಲ. ಅಂಗಡಿಯವರು ನೀಡುವ ಕ್ಯಾಸೆಟ್‌ಗಳ ದೋಷದಿಂದ ಸಿನೆಮಾ ಟಿ.ವಿ.ಯಲ್ಲಿ ಬರುತ್ತಿರಲಿಲ್ಲ. ಟಿ. ವಿ. ಪರದೆಯ ಮೇಲೆ ಚುರುಮುರಿಯಂತಹ ಚಿತ್ರಗಳು ಕುಣಿಯುತ್ತಿದ್ದವು. ಕಾದು, ಕಾದು ಬೇಸತ್ತು ನಿರಾಸೆಯಿಂದ ಮರಳುವುದೂ ಇತ್ತು. ಕೆಲವೊಮ್ಮೆ ಸಿನೆಮಾದ ಒಂದು ಭಾಗ ಸರಿಯಾಗಿ ಪ್ರದರ್ಶನಗೊಂಡು, ಇನ್ನೊಂದು ಭಾಗ ಹಾಳಾಗಿ ಅರ್ಧ ಸಿನೆಮಾ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಆಗ ಆಯಿಗೆ ತೀವ್ರವಾದ ನಿರಾಸೆಯಾಗುತ್ತಿತ್ತು.

ಮುಂದಿನ ಕಥೆ ಏನಾಯಿತೇನೊ ಎಂದು ಕೊರಗುವುದು ಮಾತ್ರವಲ್ಲ, ಹೀಗೆಲ್ಲ ಆಗಬಹುದೇನೋ ಎಂದು ತನ್ನದೇ ಊಹೆಯನ್ನು ಹರಿಬಿಟ್ಟು ನಮಗೆಲ್ಲ ಕಥೆ ಹೇಳುತ್ತಿದ್ದಳು. ಪೇಟೆಯಿಂದ ಬರುವ ಕೆಲವೊಂದು ಬಂಧುಗಳಲ್ಲಿ ಆ ಸಿನೆಮಾ ನೋಡಿದ್ದೀರಾ ಎಂದು ಕೇಳಿ, ಕಥೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆಯಿಯ ಓರಗೆಯವರೆಲ್ಲ ಭಕ್ತಿಪ್ರಧಾನವಾದ ಚಿತ್ರಗಳನ್ನು ಇಷ್ಟಪಟ್ಟರೆ, ಆಯಿಗೆ ಮಾತ್ರ ಸಾಮಾಜಿಕ ಚಿತ್ರಗಳು ಬಹಳ ಇಷ್ಟವಾಗುತ್ತಿದ್ದವು. ಗುಣ ನೋಡಿ ಹೆಣ್ಣು ಕೊಡು, ಸೊಸೆ ತಂದ ಸೌಭಾಗ್ಯ, ಬಿಡುಗಡೆಯ ಬೇಡಿ, ಅತ್ತೆಗೆ ತಕ್ಕ ಸೊಸೆ… ಹೀಗೆ ಆಯಿ ನೋಡಿ ನಮ್ಮೊಂದಿಗೆ ಚರ್ಚಿಸಿದ್ದ ಅನೇಕ ಚಿತ್ರಗಳು ಈಗಲೂ ನೆನಪಾಗಿ ಉಳಿದಿವೆ.

ಆಯಿ ಕಾಲವಾದ ಅದೆಷ್ಟೋ ಕಾಲದ ನಂತರ ಪೇಟೆ ಸೇರಿದ ಅಪ್ಪ ಡಾ|ರಾಜಕುಮಾರ ನಟಿಸಿದ ಚಿತ್ರಗಳ ಮಹಾನ್ ಅಭಿಮಾನಿಯಾಗಿ ದಿನಕ್ಕೆ ಎರಡರಿಂದ ಮೂರು ಸಿನೆಮಾಗಳನ್ನು ನೋಡುತ್ತಿದ್ದ. ಹೆಚ್ಚಾಗಿ ಬಜಾರಿ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ನಮ್ಮ ಕಾಲದ ಹಿರೋಯಿನ್ ಮಾಲಾಶ್ರೀ ಕೂಡ ಅಪ್ಪನಿಗೆ ಬಹಳ ಇಷ್ಟವಾಗುತ್ತಿದ್ದಳು. ಅಪ್ಪನ ಈ ಪಾಟಿ ಸಿನೆಮಾ ಪ್ರೀತಿ ಬಹುಶಃ ಆಯಿಗೆ ಇಷ್ಟವಾಗುತ್ತಿತ್ತಾದರೂ, ಅಪ್ಪನ ಮಾಲಾಶ್ರೀಯ ಆರಾಧನೆಯ ಬಗ್ಗೆ ಮಾತ್ರ ಮೂಗುಮುರಿಯುತ್ತಿದ್ದಳೇನೋ ಎಂದು ಈಗಲೂ ಅನಿಸುವುದು.

‍ಲೇಖಕರು Admin

15 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading