ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುದ್ದಿಮನೆಯ ಸಂಖ್ಯೆಗಳು ಬಾಗಿಲು ಬಡಿಯುತ್ತವೆ..

ಸಾವಿನ ಸಂಖ್ಯೆಗಳು 

ದಾದಾಪೀರ್ ಜೈಮನ್ 

ಆರಡಿ ಮೂರಡಿ ಅಳತೆಯ ಪೀಜಿಯ ಕಾಟು
ಕಿಟಕಿಗಂಟಿಕೊಂಡು ನಿದ್ದೆ ಹೋಗಿದೆ
ಅದರ ಸರಳುಗಳಿಂದ ಗಾಳಿ ಬೆಳಕು
ಕತ್ತಲು ತೂರಿಕೊಂಡು ಬರುತ್ತವೆ
ಆಗಾಗ ಸುದ್ದಿ ಮಾಧ್ಯಮಗಳು
ದೇಶವಿದೇಶಗಳಲ್ಲಿ
ಸತ್ತವರ ಸೋಂಕಿತರ ಪರಿಷ್ಕರಣೆಗೊಂಡ
ಸಂಖ್ಯೆಗಳನ್ನು ಬಿಡುಗಡೆ ಮಾಡುತ್ತಿರುತ್ತವೆ

ನನಗೆ ಸಂಖ್ಯೆಗಳು ನೆನಪಿರುವುದಿಲ್ಲವೆಂಬ
ಅರಿವಿದ್ದರೂ ಪರೀಕ್ಷೆ ಬರೆಯಹೊರಟ ಮಗುವಿನ ಹಾಗೆ
ಬಾಯಿಪಾಠ ಮಾಡುತ್ತಲೇ ಇರುತ್ತೇನೆ
ಸಂಖ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ
ಹತಾಶೆ ಭಯ ಒಂಟಿತನ ಹೆಚ್ಚುವ ಹಾಗೆ
ಕವಿಯಾದ ನನಗೆ ಸಂಖ್ಯೆಗಳ ನಡುವೆ
ಅಲ್ಲಿ ಸಾವಿನ ಮುಂದೆ ಸೋತು ಶರಣಾಗುವ
ಜನರ ಮುಂಚಿನ ಭಾವ ಸುಳಿದುಬಿಡಲಿ;
ಕಿಂಚಿತ್ ಆಸೆಯನ್ನು ಸದಾ ಜೋಪಾನ ಮಾಡುತ್ತೇನೆ

ಸಂಖ್ಯೆಗಳು ಸಾವಿನಂತೆ ಸದಾ ನಿರಾಸೆ ಹುಟ್ಟಿಸುತ್ತವೆ
ಕ್ರಿಮಿಯೊಂದು ಕಾಲಿಂದ ತುಳಿದು ನೂಕುತ್ತಿರುವಾಗ
ಮಲಗಿದಲ್ಲೇ ಕುಸಿದು ಬೀಳುತ್ತೇನೆ
ಆರಡಿ ಮೂರಡಿಯ ಅಳತೆ ಸರಿಯಾಗಿದ್ದರೂ
ಕೆಳಗಡೆ ಮಣ್ಣು ಅಕ್ಕ ಪಕ್ಕ ಸುತ್ತ ಮುತ್ತ ಮಣ್ಣು
ಮೇಲೆ ನಿಂತ ಜೇಸಿಬಿಯ ಚೂಪಾದ ಕೈಗಳಲ್ಲೂ ಮಣ್ಣು
ತೂರಿದ ಮಣ್ಣು ಮೈಮೇಲೆ ಬೀಳುವ ಮುನ್ನ
ಕೈಬೆರಳ ತುದಿಯಲ್ಲಿದ್ದ ಭೀಕರ ಕನಸಿನೆದೆಗೆ ಒದ್ದು
ಕಣ್ಣು ತೆರೆದಾಗ ಹಣೆ ತುಂಬಾ ಬೆವರು
ಕಿಟಕಿಯಾಚೆಗೆ ಮರವಿನ್ನೂ ಹಸಿರಾಗಿದ್ದ ಕಂಡು
ದೀರ್ಘ ನಿಟ್ಟುಸಿರು

ಬಹುಷಃ ಆ ಉಸಿರಿನ ನಿಶ್ವಾಸದಲ್ಲೇ
ದ್ವೇಷದ ಗಡಿ ಮುಟ್ಟಿದ ಧರ್ಮದ ಕಿಡಿ
ಸಣ್ಣತನ ಹತಾಶೆ ಕೊಳಕು ರಾಜಕಾರಣ
ಮೂಗ ಹೊರಳೆಯಿಂದ ತೊಲಗಿ ನಿರಾಳವಾಗಿ
ಹೊಕ್ಕ ಉಸಿರಿನಲ್ಲಿ ಬದುಕುವ ಆಸೆ ಭರಪೂರ
ಶ್ವಾಸಕೋಶ ತುಂಬಿಕೊಳ್ಳುತ್ತದೆ
ಬೆಳಗಿನ ಅದೆ ಸಮಯ
ಸುದ್ದಿಮನೆಯ ಸಂಖ್ಯೆಗಳು ಬಾಗಿಲು ಬಡಿಯುತ್ತವೆ
ಬದುಕುವ ಆಸೆ ಮತ್ತು ಉಳಿಸುವ ಅನ್ನ
ಸದಾ ಎಲ್ಲರ ಪಾಲಿಗೊಂಚೂರು ಉಳಿದುಬಿಡಲೆಂದು
ಪ್ರಾರ್ಥಿಸುತ್ತ ಕೈತೊಳೆದು ಬಾಗಿಲು ತೆರೆಯುತ್ತೇನೆ

‍ಲೇಖಕರು avadhi

6 April, 2020

2 Comments

  1. ashfaq peerzade

    ಕನಸು ಕನವರಿಕೆಯ ವಾಸ್ತವ ಕವನ.

  2. T S SHRAVANA KUMARI

    ಉತ್ತಮ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading