ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ಅವರು ಹಣದ ಬೆಲೆ ತಿಳಿಸಿಕೊಟ್ಟರು..

ಒಂದು ದಿನ, ಪೊಲೀಸರು ದಿಢೀರನೆ ನಮ್ಮ ಕಛೇರಿಗೆ ಬಂದರು. ಅವರು ಬರುವ ರಭಸ ನೋಡಿ ನನಗೆ ಭಯ ಮತ್ತು ಆತಂಕ. ಬಂದವರೇ “ಯಾರ‍್ರೀ ಕೃಷ್ಣಮೂರ್ತಿ” ಅಂದ್ರು. ನಾನು ಇನ್ನಷ್ಟು ಭಯಭೀತನಾಗಿ ಮೆಲುದನಿಯಲ್ಲಿ, “ನಾನೇ….ಸರ್ ಯಾಕೆ ” ಅಂದೆ….”ಸಾಹೇಬರು ಬಂದಿದ್ದಾರೆ, ಹೊರಗೆ ಕಾರಲ್ಲಿ ಕೂತಿದ್ದಾರೆ, ಕರೀತಾ ಇದ್ದಾರೆ ಬನ್ರಿ” ಅಂದ್ರು. ಹೊರಗೆ ಹೋಗಿ ನೋಡಿದರೆ ಎಂ.ವಿ. ರಾಜಶೇಖರನ್ ಸರ್.

ಮನಸ್ಸು ಹಗುರವಾಯ್ತು. ಎಂ.ವಿ.ಆರ್. ಹತ್ತಿರಕ್ಕೆ ಕರೆದು, “ಕಿಟ್ಟಿ ನನ್ನ ಲೆಟರ್ ಹೆಡ್ ಖಾಲಿ ಆಗಿದೆ, ಅರ್ಜೆಂಟ್ ಆಗಿ ಪ್ರಿಂಟ್ ಮಾಡಿ ಕೊಡು” ಎಂದು ಹಳೆಯ ಒಂದು ಸ್ಯಾಂಪಲ್ ಕೊಟ್ಟು ಹೋದರು (ಆ ಸ್ಯಾಂಪಲ್ ಅಷ್ಟು ಚೆನ್ನಾಗಿ ಇರಲಿಲ್ಲ, ತೆಳ್ಳನೆಯ ಕಾಗದ ಮತ್ತು ಸಿಂಗಲ್ ಕಲರ್ ನಲ್ಲಿ ಮುದ್ರಣವಾಗಿತ್ತು)… ನಾವು ಡಿ.ಟಿ.ಪಿ. ಎಲ್ಲಾ ಮಾಡಿ, ಕರೆಕ್ಷನ್ ನೋಡಿ ಪ್ರಿಂಟ್‌ಗೆ ರೆಡಿ ಮಾಡಿದೆವು… ಕೇಂದ್ರ ಸಚಿವರ ಲೆಟರ್ ಹೆಡ್ ಸ್ವಲ್ಪ ಚೆನ್ನಾಗಿ ಇರಲಿ ಅಂತ ಸ್ಪೆಷಲ್ ಆಗಿರುವ,ತುಸು ದಪ್ಪನೆ ಕಾಗದ ಹಾಕಿ ನಾಲ್ಕು ಬಣ್ಣದಲ್ಲಿ ಮುದ್ರಿಸಿ, ರೆಡಿ ಮಾಡಿಕೊಂಡು ಅವರ ಮನೆಗೆ ತೆಗೆದುಕೊಂಡು ಹೋದೆ…

ಅವರು ಓಪನ್ ಮಾಡಿದರು, ಕಾಗದ ದಪ್ಪ ಮತ್ತು ನಾಲ್ಕು ಬಣ್ಣದಲ್ಲಿ ಪ್ರಿಂಟ್ ಆಗಿರೋದು ನೋಡಿ, ಅವರಿಗೆ ಕೋಪ ಬಂದು, ಬೈಯಲು ಆರಂಭಿಸಿದರು. “ನಿಮಗೆ ಬುದ್ಧಿ ಇದೆಯಾ ಕಿಟ್ಟಿ. ಇದೇನು ಇಷ್ಟು ದಪ್ಪ ಕಾಗದ ಹಾಕಿ ಪ್ರಿಂಟ್ ಮಾಡಿದಿರಾ… ದಿನಕ್ಕೆ 40-50 ಕಾಗದ ಬರೆದು ಪೋಸ್ಟ್ ಮಾಡುತ್ತೇವೆ, ಪೋಸ್ಟ್ ಚಾರ್ಜ್ ಎಷ್ಟು ಜಾಸ್ತಿಯಾಗುತ್ತೆ. ನಾವು ಬೇರೆಯವರಿಗೆ ವಿಷಯ ಮುಟ್ಟಿಸಲು ಪತ್ರ ಬರೆಯುವುದು. ನಮ್ಮ ಸ್ಟೇಟಸ್ ತೋರಿಸಲು ಅಲ್ಲ…” ಎಂದು ಗದರಿದರು. ನಾನು “ತಪ್ಪಾಯ್ತು ಸರ್, ಮುಂದೆ ತೆಳು ಕಾಗದದಲ್ಲಿ ಪ್ರಿಂಟ್ ಮಾಡಿ ಕೊಡ್ತೀನಿ” ಎಂದು ಕ್ಷಮೆ ಕೇಳಿ ಹೊರಬಂದೆ….

ಇದಾದ ಕೆಲವು ತಿಂಗಳುಗಳ ನಂತರ ಅವರ ಮನೆ ಗೃಹಪ್ರವೇಶದ ಆಹ್ವಾನ ಪತ್ರಿಕೆ ಮಾಡಿಸಲು ಮುದ್ರಣಾಲಯಕ್ಕೆ ಬಂದರು.

ಮೊದಲು ಮ್ಯಾಟರ್ ಎಲ್ಲಾ ಡಿ.ಟಿ.ಪಿ. ಮಾಡಿಸಿ ಓಕೆ ಮಾಡಿ ತೆಳು ಕಾಗದದ ಮೇಲೆ ಒಂದು ಬಣ್ಣದಲ್ಲಿ ಪ್ರಿಂಟ್ ಮಾಡಿ ಎಂದು ಸ್ಯಾಂಪಲ್ ತೆಗೆಸಿ ನೋಡಿ, ಮುದ್ರಿಸಿ ಅಂತ ಹೇಳಿ ಹೋದರು. ಅದರಂತೆಯೇ ಪ್ರಿಂಟ್ ಮಾಡಿ ಕೊಟ್ಟೆವು… ಗೃಹಪ್ರವೇಶ ಮುಗಿದ 4-5 ತಿಂಗಳುಗಳ ಬಳಿಕ ಒಂದು ದಿನ ದಿಢೀರನೆ ಮುದ್ರಣಾಲಯಕ್ಕೆ ಬಂದ ಎಂ.ವಿ.ಆರ್. ಅವರು “ಕಿಟ್ಟಿ ಅವರೇ ನಿಮ್ಮ ಕಛೇರಿ ಲೆಕ್ಕಪತ್ರ ನೋಡಿಕೊಳ್ಳೋರು ಯಾರು ಅವರನ್ನು ಕರೀರಿ, ನಾನು ಅವರ ಜೊತೆ ಮಾತನಾಡಬೇಕು” ಎಂದು ಸಿಟ್ಟಿನಿಂದ ಕೇಳಿದರು.

ನಾನು ಗಾಬರಿಯಿಂದ “ಯಾಕೆ ಸರ್ ಏನಾಯ್ತು” ಎಂದೆ… ಅವರು “ನಮ್ಮ ಗೃಹಪ್ರವೇಶದ ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿ ಕೊಟ್ಟಿದ್ರಲ್ಲಾ, ಅದರ ಬಿಲ್ ಕೊಟ್ಟೇ ಇಲ್ಲ. ಹೀಗೆ ಆದರೆ ಹೇಗೆ ? ನೀವು ದಿನಾ ಎಷ್ಟು ಜನರ ಬಿಲ್‌ಗಳನ್ನು ಬಿಟ್ಟು ಬಿಡ್ತೀರೋ ಏನೋ…” ಎಂದರು. ಸರ್ ಅದು ತೆಳು ಕಾಗದದ (ವ್ಯರ್ಥ ಕಾಗದ) ಮೇಲೆ ಒಂದು ಬದಿಯಲ್ಲಿ ಪ್ರಿಂಟ್ ಮಾಡಿಸಿದ್ದು.. ಅದಕ್ಕೆ ಬರೀ 500 ರೂಪಾಯಿಗಳು ಆಗುತ್ತೆ. ಅದಕ್ಕೇ ಕೇಳಲಿಲ್ಲ ಅಂದೆ. ತಕ್ಷಣ ಅವರಿಗೆ ಇನ್ನೂ ಕೋಪ ಜಾಸ್ತಿ ಆಯ್ತು.. “ಏನ್ರಿ ಬರೀ 500 ಅಂತೀರಾ”, ಎಂದು ಅಲ್ಲೇ ಕುಳಿತು ಕೆಲಸ ಮಾಡುತ್ತಿದ್ದವರ ಕಡೆ ಕೈ ತೋರಿಸಿ, ಆ 500 ರೂಪಾಯಿಗಳಿಂದ ಅವರ ಒಂದು ದಿನದ ಸಂಬಳ ಕೊಡಬಹುದು ಅಲ್ವಾ.. ಹಾಗೆಲ್ಲಾ ಹಣದ ಬಗ್ಗೆ ಅಷ್ಟೇ ಅನ್ನುವ ಮನೋಭಾವ ಬೆಳೆಸಿಕೋಬೇಡಿ, “ಹನಿ ಹನಿಗೂಡಿದರೆ ಹಳ್ಳ” ಎಂದು, ಅವರ ತಾತ ಅವರಿಗೆ ಹೇಳಿದ ಒಂದು ಕಥೆಯನ್ನು ಹೇಳಿ, 500 ರೂಪಾಯಿಗಳನ್ನು ಕೊಟ್ಟು ಬಿಲ್ ತೆಗೆದುಕೊಂಡು, ಮುಂದೆ ಹೀಗೆ ಯಾರಿಗೂ ಮಾಡಬೇಡಿ ಎಂದು ಹೇಳಿ ಹೊರಟುಹೋದರು.

ಕರ್ನಾಟಕ ರಾಜ್ಯ ಸರ್ಕಾರದ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಮಂತ್ರಿಯಾಗಿದ್ದರೂ ಎಂ.ವಿ. ರಾಜಶೇಖರನ್ ತಾವು ತೊಡುತ್ತಿದ್ದ ಖಾದಿ ಮತ್ತು ಅದರ ಹಿಂದೆ ಇದ್ದ ಗಾಂಧೀ ತತ್ವ ಮತ್ತು ಸರಳವಾಗಿ ಜೀವಿಸುವುದನ್ನು ಆತ್ಮಸಂತೋಷದಿಂದ ಅನುಸರಿಸಿದರು. ದೊಡ್ಡ ಪದವಿಗಳನ್ನು ಅರ್ಹತೆ ಮತ್ತು ಸಾಮರ್ಥ್ಯದಿಂದಲೇ ಪಡೆದರೂ ಅಲ್ಲಿ ಎಂದೂ ಪ್ರತಿಷ್ಠೆ, ಧಿಮಾಕುಗಳನ್ನು ತೋರಲಿಲ್ಲ. ರಾಜಕೀಯ ಅಧಿಕಾರ ಇರುವುದು ಜನರ ಸೇವೆಗಾಗಿ ಎಂದು ನಂಬಿ ನಡೆದ ಎಂ.ವಿ.ಆರ್. ಅಂಥವರು ಮರೆಯಾಗುತ್ತಿರುವ ವಿರಳ ಮಂದಿಯಲ್ಲಿ ಒಬ್ಬರು.

ಮುಂದೆ ಇಂತಹ “ಗಾಂಧೀವಾದಿ” ಜೊತೆ ದೊಡ್ಡ ದೊಡ್ಡ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ…

‍ಲೇಖಕರು avadhi

April 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Kum. Veerabhadrappa

    ಮುದ್ರಕನ ಡೈರಿ ಅಂಕಣ – ಪುಸ್ತಕೋಧ್ಯಮದ ಪುಷ್ಪರಗಳೆಯಂಥ ಕೃಷ್ಣಮೂರ್ತಿಯವರ ಗದ್ಯರಸಾಯನಮಲ್ತೆ ಸ್ವ್ಯಾನ್ ಮುದ್ರಣಾಲಯಂ! ದೊಡ್ಡಮನಸ್ಸಿನ ಫಲಾನುಭವಿಗಳ ಉದಾತ್ತ ಚೆಹರೆಗಳನ್ನು ಅನಾವರಣಗೊಳಿಸುವ ಈ ಅಂಕಣಕ್ಕೆ ರೆಡ್ ಕಾರ್ಪೆಟ್ ಸ್ವಾಗತ
    * ಕುಂವೀ

    ಪ್ರತಿಕ್ರಿಯೆ
  2. B.L. Venu

    ದೊಡ್ಡವರು ದೊಡ್ಡವರೇ.ಇಂಥವರ ಸಂಖ್ಯೆ ಇಲ್ಲವೇ ಇಲ್ಲವೇನೋ ಈಗ.ಇನ್ನು‌ನಿಮ್ಮ ಮುದ್ರಣ ವಿನ್ಯಾಸ ವಿಶ್ವಾಸದ ಬಗ್ಗೆ ಎರಡು ಮಾತಿಲ್ಲ ಬಿಡಿ

    ಪ್ರತಿಕ್ರಿಯೆ
  3. C S Jogesh

    I appreciate your honesty in sharing the experience with an outstanding political icon. May god bless you Kitty.

    ಪ್ರತಿಕ್ರಿಯೆ
  4. Jayalaxmi Patil

    ಎಷ್ಟೊಳ್ಳೆ ಮನಸು ಮತ್ತು ನಿಲುವು ಅವರದು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: