ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಜಾತ ಹೆಬ್ಬಾಳದ ಕವಿತೆ- ಗೆಲುವು ನಿನ್ನದೇ ಇರಲಿ…

ಸುಜಾತ ಹೆಬ್ಬಾಳದ

ದೇಹದೊಳಗಿನ ಹವಾಮಾನ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿರುವುದು
ಖಚಿತ
ಬುದ್ಧಿ ಮನಸಿನ ಸಂಧಾನ
ಪ್ರಯತ್ನವೆಲ್ಲ ಆಯಿತು ವ್ಯರ್ಥ
ಅವಸರಿಸಿ ಹಾಕಿದ ಇರುವೆಯೂ  ತೂರಲಾಗದ ನಳಿಕೆಯಿಂದ
ಹರಿವ ಔಷಧ
ಒಳಗಿಳಿದಂತೆ ಯಮಯಾತನೆ
ಮುಚ್ಚಿದ ಕಣ್ಣ ಪರದೆಯಲ್ಲಿ ನಡೆದಿದೆ
ಭ್ರಮೆ ಆತಂಕ ಇತ್ಯಾದಿಗಳ ಮೂಕಿ ಚಿತ್ರ
ಇದರಲ್ಲಿ ಅಂಜಿಕೆಯದ್ದೇ ಮುಖ್ಯ ಪಾತ್ರ
ಎದೆಯೊಳಗಿನ ಹೆದರಿಕೆಯ ಡಮರುಗ
ಹೊರಬರುತ್ತ ಕ್ಷೀಣ ನರಳುವಿಕೆ
ಸಿದ್ಧಗೊಳ್ಳುತ್ತಿದೆ ಕರಾಳ ರಾತ್ರಿಗೆ
ರಂಗಸಜ್ಜಿಕೆ

ಆದರೆಲ್ಲೊ ಮಂದಗತಿಯಲ್ಲಿ ಅನುರಣಿಸುತ್ತಿದೆ ಮಂಪರಿನಲ್ಲೂ
ದೃಢ ಇಚ್ಛೆಯ ಗಾನ
ಓ ವಿಧಿಯೇ !
ನೀ ಬರೆದಿರಬಹುದು
ನನ್ನ ಮಸ್ತಕದಲ್ಲಿ
ಅಗಣಿತ ವೇದನೆ
ನಿನ್ನಾಟಕೆ ಶುರುವಾಗಲಿ ಕ್ಷಣಗಣನೆ
ಹೇಡಿಯಂತೆ ಶರಣಗಲಾರೆ
ನೀ ಹೂಡಿದ ಸಮರದಿ
ಸಮಬಲದಿ ಹೋರಾಡುವೆ
ಕೊನೆವರೆಗೂ ಕದನದಿ
ಗೆಲುವು ನಿನ್ನದೇ ಇರಲಿ
ಆಸ್ವಾದಿಸುವೆ ವೀರಗತಿ
ನಾ ಸಾಯುವ ಕ್ಷಣ
ಕುಣಿಕೆ ಬಿಗಿದ
ನಿನ್ನ ಕೈಯ ನಡುಕ
ಕಣ್ಣ ಹನಿ , ಮನದಲ್ಲಿ ಮೆಚ್ಚುಗೆ
ಸಾಕಿಷ್ಟು ನನ್ನ ಪಾಲಿಗೆ
—-ಸುಗ್ಗಿ ——(ಕಾವ್ಯನಾಮ )

‍ಲೇಖಕರು Admin

10 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading