ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಚಿತ್ರಾ ಹೆಗಡೆ ಕವಿತೆ- ಹೋಳು ಹೃದಯ

ಸುಚಿತ್ರಾ ಹೆಗಡೆ

ನಿನಗೇನು ಗೊತ್ತು ಹೃದಯ ಹೋಳಾಗುವ ನೋವು
ಅದು ಬೆಂಕಿಯ ಮುಂದೆ ಚಳಿ ಕಾಸುತ್ತ
ವಿಷಣ್ಣನಾಗಿ ಕೂತು ಶೇಂಗಾ ತಿನ್ನುವದಲ್ಲ
ಅದೇ ಬೆಂಕಿ… ಚಟಪಟ ಅನ್ನುತ್ತ
ಸಿಕ್ಕಿದ್ದೆಲ್ಲ ನುಂಗಿ ನೊಣೆಯುವ
ಉರಿ ಜ್ವಾಲೆಯ ಕೆನ್ನಾಲಿಗೆ
ಮೊದಲು ಸೌದೆ ನಂತರ
ಚರ್ಮ ಮಾಂಸ ಎಲುಬು
ಒಂದೊಂದಾಗಿ ಸ್ವಾಹಾ..
ಬರೀ ಕರಕಲು…ಬಾಕಿ

ನಿನಗೇನು ಗೊತ್ತು ಹೃದಯ ಹೋಳಾಗುವ ನೋವು
ಕತ್ತಲೆ ಕೋಣೆಯಲಿ ಒಬ್ಬನೇ
ಕುಳಿತು ಬಿಕ್ಕುವದಲ್ಲ
ಅದೇ ಕಪ್ಪು ರಂಧ್ರ.. ತಳ ಕಾಣದ
ಬೆಳಕು ನುಸುಳದ ದಾರಿ ಸಿಗದ
ಮುಳುಗೇಳದ ಅಂತರಾಟಿಕೆಯ ಚೆಂಡು
ಲೆಕ್ಕವಿಲ್ಲದ ಪೆಟ್ಟುಗಳ ಕೊಟ್ಟು
ನಿನ್ನರವಿಗೆ ಬರದೇ
ನಿನ್ನ ತಿರುಳೆಲ್ಲ ಹೀರಿ
ಎಸೆದ ಎಂಜಲು ಸಿಪ್ಪೆ

ನಿನಗೇನು ಗೊತ್ತು ಹೃದಯ ಹೋಳಾಗುವ ನೋವು
ಅದು ನಾಜೂಕು ಗ್ಲಾಸಿನಲಿ
ಗುಟುಕರಿಸುವ ಪೇಯವಲ್ಲ
ಅದೇ ಗ್ಲಾಸು… ಚೂರು ಚೂರು
ಒಂದೊಂದು ತುಣುಕಲ್ಲೂ
ನಿನ್ನ ಸೋಲಿನ, ನಿನ್ನ ನೋವಿನ
ಪ್ರತಿಬಿಂಬದ ಹರಿತದಂಚುಗಳು
ಚುಚ್ಚಿ ಹರಿವ ನೆತ್ತರ ಧಾರೆ
ಅದೇ ಬೆಂಕಿಯಪ್ಪುಗೆಗೆ
ಹೆಪ್ಪುಗಟ್ಟದೇ ಕುದಿಯುತ್ತದೆ.

‍ಲೇಖಕರು Avadhi

17 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading