ಆಸ್ಪತ್ರೆ ಎಂಬ ಹ್ಯೂಮನ್ ಗ್ಯಾರೇಜಿಗೆ ‘ಆ ಹಾದಿ’

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಸರಿಯಾಗಿಯೇ ಓಡುತ್ತಿದ್ದ ನಿಮ್ಮ ಬೈಕು ಇದ್ದಕ್ಕಿದ್ದಂತೆ ನಡುರಸ್ತೆಯಲ್ಲಿ ನಿಂತು ಬಿಡುತ್ತದೆ. ನೀವು ಪೆಟ್ರೋಲ್ ಇದೆಯಾ ಎಂದು ಪರೀಕ್ಷಿಸುತ್ತೀರಿ. ಅದು ಗಾಡಿ ನಿಲ್ಲಲು ಕಾರಣ ಅಲ್ಲ ಎಂದು ಮಾತ್ರ ನಿಮಗೆ ತಿಳಿಯುತ್ತದೆ. ಆದರೆ ಗಾಡಿ ನಿಂತಿರುವುದೇಕೆ ಎಂದು ತಲೆಬುಡ ತಿಳಿಯುವುದಿಲ್ಲ. ತಕ್ಷಣವೇ ತಳ್ಳಿಕೊಂಡು ಹತ್ತಿರದ ಗ್ಯಾರೇಜಿಗೆ ಹೋಗುತ್ತೀರಿ. ಮೆಕಾನಿಕ್ ಹೇಳುತ್ತಾನೆ ; ‘ತುಂಬ ಕೆಲಸ ಇದೆ ಸರ್. ಎರಡು ದಿನ ಗಾಡಿ ಇಲ್ಲೇ ಬಿಟ್ರೆ ಪೂರ್ತಿ ರೆಡಿ ಆಗುತ್ತೆ‌.

ಈಗ ಎಮರ್ಜೆನ್ಸಿಗೆ ಬೇಕಾದರೆ ರೆಡಿ ಮಾಡಿ ಕೊಡ್ತೀನಿ. ಆದರೆ ಈ ಪ್ರಾಬ್ಲಂ ಇಟ್ಕೊಂಡು ಗಾಡಿ ಓಡ್ಸೋಕೆ ಆಗಲ್ಲ ಸರ್. ಸರಿ‌ ಮಾಡಸ್ಲೇಬೇಕು.’ ಸದ್ಯಕ್ಕೆ ಓಡೋ ಹಾಗೆ ಮಾಡಿಕೊಡು ಎಂದು ಅಲ್ಲಿಂದ ಹೊರಟ ನೀವು, ನಿಧಾನಕ್ಕೆ ನಿಮ್ಮ ಅನುಕೂಲ ಮತ್ತು ಸಮಯ ನೋಡಿಕೊಂಡು ನಿಮ್ಮ ಪರಿಚಯದ ಮೆಕಾನಿಕ್ ಒಬ್ಬನಿಗೆ ನಿಮ್ಮ ಗಾಡಿಯನ್ನು ತೋರಿಸುತ್ತೀರಿ.‌ ಅವನೂ ಕೂಡ, ಹೌದು,ಇಂತಿಂಥ ರಿಪೇರಿ ಆಗಬೇಕು ಎಂದು ಸಲಹೆ ನೀಡುತ್ತಾನೆ. ಆಗ ನೀವು ಅವನ ಬಳಿಯೇ ಗಾಡಿ ಬಿಟ್ಟು , ಏನೇನು ಪ್ರಾಬ್ಲಂ ಇದೆ ಎಲ್ಲಾ ಸರಿ ಮಾಡಿಬಿಡು ಎಂದು ಹೇಳುತ್ತೀರಿ. 

ಈಗ ಈ ಇಡೀ ಉದಾಹರಣೆಯಲ್ಲಿ ಬೈಕಿನ ಬದಲು ನಮ್ಮನ್ನೇ ನಾವು ಕಲ್ಪಿಸಿಕೊಳ್ಳೋಣ. ತುಂಬಾ ಆರಾಮಾಗಿಯೇ ಓಡಾಡಿಕೊಂಡಿದ್ದವ ಇದ್ದಕ್ಕಿಂದಂತೆ ಒಂದು ದಿನ ಕುಸಿದು ಬೀಳುತ್ತಾನೆ. ಆಸ್ಪತ್ರೆಗೆ ಹೋದಾಗ ಎಲ್ಲಾ ತಪಾಸಣೆಗಳ ನಂತರ ಏನೇನೋ ಸಮಸ್ಯೆಗಳಿರುವುದು ಪತ್ತೆಯಾಗುತ್ತದೆ. ಕೆಲವೊಮ್ಮೆ ಕೆಲ ದಿನಗಳ ನಂತರ ಅವಕ್ಕೆ ಚಿಕಿತ್ಸೆ ಪ್ರಾರಂಭಿಸಬೇಕಾಗಬಹುದು ಮತ್ತೆ ಕೆಲವು ಸಲ ಆ ಕ್ಷಣದಿಂದಲೇ ನಾವು ಆಸ್ಪತ್ರೆಯ ಅತಿಥಿಯಾಗಿಬಿಡಬಹುದು. ಅಲ್ಲಿ ಗ್ಯಾರೇಜು,ಇಲ್ಲಿ ಆಸ್ಪತ್ರೆ. ಅಲ್ಲಿ ಗಾಡಿ ಮೊದಲಿನಂತೆ ಆಗಬೇಕು. ಇಲ್ಲಿ ಬಾಡಿ( ಹ್ಯೂಮನ್ ಬಾಡಿ) ಮೊದಲಿನಂತಾಗಬೇಕು.

ಥೇಟ್ ಅಲ್ಲಿ ಬಿಡಿ ಭಾಗಗಳ ಸಮಸ್ಯೆಯಿರುವಂತೆಯೇ ಮನುಷ್ಯನಿಗೂ ದೇಹ ಭಾಗಗಳ ಪ್ರತ್ಯೇಕ ಸಮಸ್ಯೆಗಳು ಎದುರಾಗಬಹುದು. ಒಂದೊಂದಕ್ಕೂ ಒಬ್ಬ ತಜ್ಞ ವೈದ್ಯ. ಅವರು ಹೇಳಿದಂತೆ ನೀವು ಕೇಳುತ್ತಾ ಹೋಗಬೇಕಷ್ಟೆ. ಹೇಗೆ ನಿಮ್ಮ ಬೈಕು ಅಥವಾ ಕಾರಿನ ಭಾಗಗಳ ರಿಪೇರಿ ಮತ್ತು ರಿಪ್ಲೇಸ್ ಮೆಂಟ್ ನಡೆಯುತ್ತದೆಯೋ ಹಾಗೆಯೇ ನಮ್ಮ ದೇಹದ ಭಾಗಗಳಿಗೂ ಇದೇ ಪ್ರಕಾರ ನಾಡೆಯುತ್ತದೆ. ತುಸು ಹೆಚ್ಚಿನ ನಾಜೂಕತೆ ಗಾಡಿಗಳಿಗಿಂತ ನಮ್ಮ ಬಾಡಿಗಳಿಗೆ ಬೇಕು ಎಂಬುದು ಸತ್ಯ. 

ಇಷ್ಟೆಲ್ಲ ಹೇಳಲು ಕಾರಣವಾಗಿದ್ದು ನಿನ್ನೆ ನಾನು ಓದಿದ, ಸದಾಶಿವ ಸೊರಟೂರು ಅವರು ಬರೆದಿರುವ ‘ಆ ಹಾದಿ’ ಎಂಬ ಸಣ್ಣದೊಂದು ಪುಸ್ತಕ. ಅವರು ಹೇಳುತ್ತಿರುವುದು ಕೂಡ ಈ ಫೇಮಸ್ ಹ್ಯೂಮನ್ ಗ್ಯಾರೇಜ್ ಆದ ‘ಮಣಿಪಾಲ ಆಸ್ಪತ್ರೆ’ ಗೆ ಶಿವಮೊಗ್ಗದಿಂದ ಹೋಗುವ ಹಾದಿಯ ಬಗ್ಗೆ. ಘಟ್ಟದ ಮೇಲಿನ ಊರುಗಳ ಜನರ ಏಕೈಕ ನೆಮ್ಮದಿ ಕೇಂದ್ರದಂತಿರುವ ‘ಮಣಿಪಾಲ ಆಸ್ಪತ್ರೆ’ ಗೆ ಸಾವಿರಾರು ಜನರು ಹೋಗುವ ಹಾದಿಯನ್ನು ಮಾನವೀಯ ನೆಲೆಯಲ್ಲಿ ನೋಡಿರುವ ಈ ಪುಸ್ತಕ ರೋಗಿಗಳನ್ನು ಹೊತ್ತ ರಸ್ತೆಯ ಸಂಕಟಗಳನ್ನೂ ನಮ್ಮ ಮುಂದಿಡುತ್ತದೆ.

ಶಿವಮೊಗ್ಗದಿಂದ ಹಿಡಿದು ಮಣಿಪಾಲ ಸೇರುವವರೆಗಿನ ಎಲ್ಲಾ ಊರುಗಳ ಜನರಿಗೂ ಇಂಥದ್ದೇ ಭಾವನೆಗಳು ಇರಬಹುದು. ತಮ್ಮ ಮನೆಯ ಮುಂದೆ ಕಿಟಾರನೆ ಕಿರುಚುತ್ತ ಸಾಗುವ ಅಸಂಖ್ಯ ಅಂಬ್ಯುಲೆನ್ಸ್‌ಗಳು ಅವರ ಎದೆಯಲ್ಲಿ ಹುಟ್ಟಿಸುವ ತಲ್ಲಣಗಳನ್ನು ಮತ್ತು ಕ್ರಮೇಣ ಅದೂ ಕೂಡ ಬದುಕಿನ ಒಂದು ಭಾಗವಾಗಿ ಬಿಡುವ ರೀತಿಯನ್ನು ನಮ್ಮ ಮುಂದಿಡುತ್ತಾರೆ ಲೇಖಕರು. ಸದಾಶಿವ ಅವರ ನೋಟ ಹೇಗಿದೆ ಎಂಬುದಕ್ಕೆ ಈ ಕೆಳಗಿನ ಸಾಲುಗಳು ಚಿಕ್ಕ ಉದಾಹರಣೆಯಾಗಬಲ್ಲವು ; ‘ತಾನೇ ಎಡವಿ ಹೆಬ್ಬೆರಳಿಗೆ ನಾಲ್ಕು ಹನಿ ರಕ್ತ ಮೆತ್ತಿಸಿಕೊಂಡರೂ, ‘ಆ ರಸ್ತೆ ಸರಿ ಇಲ್ಲ ಮಾರ್ರೆ’ ಎಂದು ಷರಾ ಬರೆಯುತ್ತಾನೆ ನೋಡಿ ಮನುಷ್ಯ’. ಹಾಗಂತ ಅವರೇನು ರಸ್ತೆಗಳಿಗೆ ಪೂರ್ತಿ ವಿನಾಯಿತಿ ನೀಡುವುದಿಲ್ಲ. ಕೊಲ್ಲುವ ರಸ್ತೆಗಳ ಮೇಲೇಕೆ ಕೇಸು ದಾಖಲಾಗುವುದಿಲ್ಲ? ಎಂದು ಪ್ರಶ್ನಿಸುತ್ತಾರೆ.

ಸಕ್ರೇಬೈಲು ದಾಟಿದ ನಂತರ ಬರುವ ಒಂದು ಡೇಂಜರಸ್ ತಿರುವಿನಲ್ಲಿ  ಅಪಘಾತದಿಂದ ಮೃತಪಟ್ಟವರ ಬಗ್ಗೆ ಮಾತ್ರ ಎಲ್ಲರೂ ಮಾತಾಡಿದರೆ ಅದೇ ಜಾಗದಲ್ಲಿ ನಡುರಾತ್ರಿಯಲ್ಲಿ ದಟ್ಟಡವಿಯಲ್ಲಿ ಅಂಬ್ಯುಲೆನ್ಸ್ ನಲ್ಲಿ ಹುಟ್ಟಿದ ಮಗುವಿನ ಹೆಸರು ‘ಅಡವಿ’ ಎಂಬುದನ್ನು ನಮಗೆ ನೆನಪು ಮಾಡುತ್ತಾರೆ. ಇನ್ನು ಅವರ ಸ್ನೇಹಿತರೊಬ್ಬರು ತೀರ್ಥಹಳ್ಳಿಯ ಬಾಳೇಬೈಲಿನಲ್ಲಿನ ಮನೆಗೆ ತಮ್ಮ ಅಮ್ಮನನ್ನು ಕರೆತಂದ ನಂತರ ಅವರ ಅಮ್ಮ ಪ್ರತೀ ಅಂಬ್ಯಲೆನ್ಸ್ ನ ಶಬ್ಧಕ್ಕೆ ಹೆದರುತ್ತಿದ್ದರಂತೆ. ಯಾರಿಗೆ ಏನಾಗಿದೆಯೋ ಏನೋ? ಯಾರ ಅಪ್ಪನೋ ,ಅಮ್ಮನೋ, ಅಕ್ಕನೋ,ತಂಗಿಯೋ, ಗಂಡನೋ,ಹೆಂಡತಿಯೋ ,ಮಗನೋ ,ಮಗಳೋ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿರಬಹುದು ಎಂದು ಮರುಗುವ ಆ ತಾಯಿಯ ಸಂಕಟವನ್ನು ನಾವು ಕೂಡ ಊಹಿಸಿಕೊಳ್ಳಬಹುದು. 

ಈ ಹಾದಿಯನ್ನು ಅದೆಷ್ಟೋ ವರ್ಷಗಳಿಂದ ಕಂಡ ಲೇಖಕರ ಈ ಸೂಕ್ಷ್ಮ ಗ್ರಹಿಕೆಯನ್ನು ಗಮನಿಸಿದರೆ ಜೀವನದ ಬಗೆಗಿನ ನಮ್ಮ ಕಲ್ಪನೆ ಮತ್ತು ವಾಸ್ತವಗಳ ಬಗ್ಗೆ ಹೆಚ್ಚನ ಸ್ಪಷ್ಟತೆ ಸಿಗಬಹುದೇನೊ. ‘ಶವ ಹೊತ್ತುಕೊಂಡು ಹೋಗುವ ವಾಹನದಲ್ಲಿ ಕೂತ ಕೆಲವರ ಮುಖದಲ್ಲಿ ಒಂದು ಸಮಾಧಾನ ಇರುತ್ತದೆ. ಒಂದೇ ಏಟಿಗೆ ಕಾಣದ ಮುಚ್ಚಿದ ಸಂತಸವಿರುತ್ತದೆ. ಗುಣಮುಖರಾಗಿ ಹೋಗುವವರ ಮುಖದಲ್ಲಿ ಎಲ್ಲವನ್ನು ಕಳೆದುಕೊಂಡು ಬದುಕನ್ನು ಮತ್ತೆ ಸೊನ್ನೆಯಿಂದ ಪ್ರಾರಂಭಿಸಬೇಕಾದ ಗಾಢ ಚಿಂತೆಯನ್ನೂ ಗಮನಿಸಿದ್ದೇನೆ’ ಎನ್ನುವ ಅವರ ಮಾತು ಆಸ್ಪತ್ರೆಯೊಂದಿಗೆ ಒಡನಾಟ ಹಚ್ಚಿಕೊಂಡವರಿಗೆ ಸುಲಭವಾಗಿ ಅರ್ಥವಾಗುತ್ತದೆ. 

ಅಂಥ ಆಸ್ಪತ್ರೆಯ ಒಡನಾಟ ಈ ವರ್ಷದಲ್ಲಿ ನನಗೂ ಚೆನ್ನಾಗಿಯೇ ಅನುಭವಕ್ಕೆ ಬಂತು. ಕಾಲು ನೋವು ,ಸುಸ್ತು ಎಂದು ತಪಾಸಣೆಗೆ ಕರೆದೊಯ್ದ ಅಪ್ಪನಿಗೆ ಹೃದಯದ ಬೈಪಾಸ್ ಸರ್ಜರಿ ಮಾಡಿಸಬೇಕಾಗಿ ಬಂತು. ಹದಿನೈದು ದಿನ ಆಸ್ಪತ್ರೆಯಲ್ಲಿರಬೇಕಾಗಿ ಬಂದಾಗ ನನಗೆ ಅದು ಥೇಟ್ ಹ್ಯೂಮನ್ ಗ್ಯಾರೇಜಲ್ಲದೆ ಇನ್ನೇನು ಅನ್ನಿಸಲಿಲ್ಲ. ತಿಂಗಳಾನುಗಟ್ಟಲೆ ಕೋಮಾದಲ್ಲಿದ್ದು , ವೈದ್ಯರು ಯಾವ ಖಾತರಿಯನ್ನೂ ಕೊಡದ ಅನೇಕ ರೋಗಿಗಳನ್ನು ಕಂಡಾಗ ಗ್ಯಾರೇಜಿನಲ್ಲಿ ಕೆಲವು ವಾಹನಗಳನ್ನು ರಿಪೇರಿ ಮಾಡದೆಯೇ ನಿಲ್ಲಿಸಿರುತ್ತಾರೆ ನೋಡಿ ಹಾಗೆಯೇ ಅನ್ನಿಸಿತು.

*       *      *       * 
ಇದೆಲ್ಲ ನಡೆಯುತ್ತಿರುವಾಗಲೇ ಯಾರೋ ಅಧಿಕಾರಕ್ಕಾಗಿ , ಮತ್ಯಾರೋ ಗದ್ದುಗೆ ಏರಲು ಪಿತೂರಿ ಮಾಡುವುದು, ಆಸ್ತಿ-ಪಾಸ್ತಿಗಾಗಿ ಜನ ಹೊಡೆದಾಡುವುದು, ದೊಡ್ಡ ಭವಿಷ್ಯವಿದೆ ಎಂದು ಯಾರೋ ಫಾರಿನ್ ಗೆ ಹಾರುವುದು , ಹೊಸ ಸ್ಟಾರ್ಟ್ ಅಪ್ ಕಂಪನಿಯೊಂದು ಜಾಹೀರಾತು ನೀಡಿ  ಆಕರ್ಷಿಸುವುದು, ಕಲಿಕೆ ನಿಲ್ಲಬಾರದೆಂದು ಆನ್ ಲೈನ್ ನಲ್ಲೇ ಎಲ್ಲಾ ಕಲಿಸಲು ಹವಣಿಸುವುದು , ನಾವೇ ಮೊದಲು ವ್ಯಾಕ್ಸಿನ್ ಕೊಡುತ್ತೇವೆ ಎಂದು ಸ್ಪರ್ಧಿಸುವುದು ಕಂಡಾಗ, ಹುಟ್ಟು- ನೋವು- ಸಾವು ಗಳ ಈ ಜೀವನ ಚಕ್ರ ಇರುವುದೇ ಹೀಗೆ. ಇದನ್ನು ಹಾಗೆಯೇ ಸ್ವೀಕರಿಸುತ್ತಾ ಮುಂದೆ ಸಾಗಬೇಕು ಎಂದು ಅರಿವಾಗುತ್ತದೆ. 

ಕೆಲವು ಚಿತ್ರಗಳು ಕಣ್ಣಿಗೆ ಕಟ್ಟಿದ ಹಾಗೆ ಮನಸ್ಸಲ್ಲಿ ನಿಂತು ದಾರಿ ತೋರುತ್ತಲೇ ಇರುತ್ತವೆ. ಅಂಥ ಮೂರು ಚಿತ್ರಗಳ ಬಗ್ಗೆ ನಿಮಗೆ ಹೇಳಿ ಹಗುರಾಗುತ್ತೇನೆ. 

*  ಅಪ್ಪ, ಮಗನ ಬೆತ್ತಲೆ ದೇಹವನ್ನು ತುಂಬಾ ಸಲೀಸಾಗಿ ನೋಡಿಬಿಡಬಲ್ಲ. ಆದರೆ ಮಗ ಅಪ್ಪನದ್ದೋ ,ಅಮ್ಮನದ್ದೋ ಬೆತ್ತಲೆ ದೇಹವನ್ನು ನೋಡಲು ಎಷ್ಟೋ ಸಾರಿ ಒಂದು ಖಾಯಿಲೆ ಬರಬೇಕಾಗುತ್ತದೆ. ಆಸ್ಪತ್ರೆಗೆ ನಮ್ಮದು ಕೇವಲ ಒಂದು ದೇಹವೇ ಹೊರತು ಅಲ್ಲಿ ‘ನಗ್ನತೆ’ ಎಂಬುದು ಇರುವುದೇ ಇಲ್ಲ…
*  ಮಗುವೊಂದು ಜನಿಸಿ ಕೆಲ ದಿನಗಳ ನಂತರ ಆಸ್ಪತ್ರೆಯಿಂದ ಮನೆಗೆ ಬರುವ ದಾರಿಯಲ್ಲಿಯೇ ಇನ್ಯಾರದ್ದೋ ಮರಣಯಾತ್ರೆ ಹೋಗುತ್ತಿರುತ್ತದೆ . ಅದು ಏನನ್ನಾದರೂ ಹೇಳುತ್ತದೆಯೆ ನಮಗೆಲ್ಲ… ?
*  ಒಂದು ತಿಂಗಳಿನಿಂದ ಐಸಿಯು ನಲ್ಲಿರುವ ಗಂಡ ಮೊದಲಿನಂತಾಗಿಯೇ ಹೊರಗೆ ಬರುತ್ತಾನೆ ಎಂದು ಆಸ್ಪತ್ರೆಯ ಕೊನೇ ಮಹಡಿಯ ಮೆಟ್ಟಿಲುಗಳಲ್ಲಿ ವೃತದಂತೆ ಕಾದು ಕುಳಿತಿರುವ ಆ ಹೆಂಡತಿಯಲ್ಲಿರುವ ಸಹನೆ… 

‘ಆ ಹಾದಿ’ ಯಾರಿಗೂ ಬೇಡ ಎನ್ನುವುದು ಆಶಯ. ಆದರೆ ಆ ಹಾದಿಗೊಂದು ಮಾನವೀಯ ಮುಖವೂ ಇದೆ. ಅದನ್ನು ಹುಡುಕೋಣ. ನಿಮಗೂ ಇಂಥದ್ದೆಲ್ಲ ಎದುರಾಗಬಹುದು. Just face them. ಅವು ಹಾಗೆಯೇ ನಡೆಯುತ್ತವೆ… Doctors are our blind belief ! Hope they too understand it precisely. 

ಈ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್‌ನ್ನು ಕ್ಲಿಕ್‌ ಮಾಡಿ

https://bahuroopi.in/product/aa-haadi/

February 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: