ಕು.ಸ.ಮಧುಸೂದನ, ರಂಗೇನಹಳ್ಳಿ
ಮಾಯವಾದರೂ ಗಾಯದ ಕಲೆ
ನಿಂತಿಲ್ಲ ರಕ್ತ
ಒಸರುವುದು.
ಕೊಲ್ಲಲ್ಪಟ್ಟವರು ಬರಿ ಸುದ್ದಿಯಾದರು
ಕೊಂದವರೋ ಧರೆಗೆ
ಒಡೆಯರಾದರು.
ದೀಪವಾರಿಸಿ ಕತ್ತಲಾಯಿತೆಂದರು
ಉರಿವ ಸೂರ್ಯನೆದುರು ಸುಖಾ ಸುಮ್ಮನೆ
ಬೆತ್ತಲಾದರು.

ಕಟ್ಟಿದ ಮನೆಯ ಕೆಡವುವವರಿಗೆ
ಕಟ್ಟಲಾಗುವುದಿಲ್ಲ ಕನಿಷ್ಠ
ಮರಳಿನಗೂಡ.
ಮೃಗತ್ವವ ಸಾಯಿಸಿದೆವೆಂದು ಕೊಂಡೆವು
ಮನುಷ್ಯರನ್ನು ಉಳಿಸಿಕೊಳ್ಳುವಲ್ಲಿ
ವಿಫಲವಾದೆವು.
ಬಯಲು ಆಲಯವಾದವರ ಕಥೆಗಳ ಮುಂದೆ
ಬಯಲೇ ಶೌಚಾಲಯ ಮಾಡಿಕೊಂಡವರು
ನಗಣ್ಯರಾದರು.
ಕುಡಿಯುವ ನೀರು ತುಟ್ಟಿಯಾಗಿದೆ
ತೀರಾ ಬಾಯಾರಿಕೆಯಾದರೆ ಬೇಸರವೇಕೆ
ಬಡವರ ರಕ್ತವಿದೆ.
ಅವಳು ಹೆಣ್ಣಾಗಿದ್ದಳು
ಹದ್ದುಗಳು ಎರಗಿದವು ಬೆಳಕು ಹರಿಯುವಷ್ಟರಲ್ಲಿ
ಸಂತ್ರಸ್ಥೆಯಾಗಿದ್ದಳು.
ದೀಪ ಹಚ್ಚಲು ಹೋಗಿ ಮನೆಯನ್ನೇ ಸುಟ್ಟೆವು
ಉಳಿದ ಬೂದಿಯೊಳಡಗಿದ ಕೆಂಡದಲ್ಲಿ ಅವರು
ಅನ್ನ ಬೇಯಿಸಿಕೊಂಡರು.
ಮನುಷ್ಯರನ್ನೇನೊ ಕೊಲ್ಲುತ್ತಾ ಹೋದೆವು
ಉಳಿದಿರಬಹುದಾದ
ಮನುಷ್ಯತ್ವವನ್ನೇನು ಮಾಡುವೆ.
ಮನುಷ್ಯರ ಇಲ್ಲವಾಗಿಸಲು
ಬಂದೂಕು ಸಾಕು
ಸಿದ್ಧಾಂತಗಳ ಹೇಗೆ ಕೊಲ್ಲುವೆ.?






ಮೃಗತ್ವವ ಸಾಯಿಸಿದೆವೆಂದು ಕೊಂಡೆವು
ಮನುಷ್ಯರನ್ನು ಉಳಿಸಿಕೊಳ್ಳುವಲ್ಲಿ
ವಿಫಲವಾದೆವು.
ಬಯಲು ಆಲಯವಾದವರ ಕಥೆಗಳ ಮುಂದೆ
ಬಯಲೇ ಶೌಚಾಲಯ ಮಾಡಿಕೊಂಡವರು
ನಗಣ್ಯರಾದರು.
Very meaningful….
ಪ್ರತಿ ಸಾಲಿಗೂ ಒಂದು ಕವನ ಬರೆಯಬಹುದು…
ತುಂಬಾ ಅರ್ಥವತ್ತಾದ ಸಾಲುಗಳು. ಇಷ್ಟವಾಯಿತು.