ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವೇ ನೀ ಸಾಯಬಾರದೆ…

ಸಾವು ಸಾಯಬಾರದೆ

ಶ್ರೀನಿವಾಸ ಡಿ ಶೆಟ್ಟಿ

ಹಾಳು ಸಾವು
ಸಾಯಬಾರದೆ
ಯಾರ ಕೈಗೂ ಸಿಗದೆ

ಅದೆಂತಾ ಶನಿ ಅದು
ಇಷ್ಟೇ ಇಷ್ಟು ಜಾಗ ಸಾಕು
ವಕ್ಕರಿಸೋಕೆ
ಪಾಪಿ ಸಾವು ಚಿರಾಯು
 
ಸಾವೋ ಬದುಕೋ
ಯಾವುದಕ್ಕೆ ಯಾವುದು ಫೆವಿಕಾಲ್?
ಪ್ರಾರಬ್ಧ
ಪ್ರಾಣ ತಿನ್ನೋ ಸಾವನ್ನು
ಹೊತ್ತುಕೊಂಡೇ ತಿರುಗಬೇಕು
ಅದಕ್ಕಾಗೆ ಬದುಕಿ ಬಾಳಬೇಕು
 
ಮೊದಲೇ ಗೊತ್ತಿದ್ದರೆ
ಅಪ್ಪನ ಕೊರಳಪಟ್ಟಿ ಹಿಡಿದು
ಬಿತ್ತು ಬತ್ತಲಾರದ
ಬೀಜವನೆಂದು ಕೇಳುತ್ತಿದ್ದೆ
ಸಾವಿಗೆ ಜನ್ಮ ನೀಡದಿರೆಂದು
ಅವ್ವನ ಅಂಗಲಾಚುತ್ತಿದ್ದೆ.
 
ಈಗ ಅದಾಗದ ಕೆಲಸ
ನಮ್ಮವ್ವ ನಮ್ಮಪ್ಪ
ನಮ್ಮೊಂದಿಗೆ ಸಾವಿಗೂ
ಜನ್ಮವಿತ್ತಿದ್ದಾರೆ
ಅದಕ್ಕೆ ಅದು ಬೆನ್ನು ಹತ್ತಿದೆ.
 
ಈ ಬೇತಾಳ ನಮ್ಮನ್ನಷ್ಟೆ ಅಲ್ಲ
ಇತಿಹಾಸಿಗರನ್ನೇ
ಚೆಂಡಾಡಿ ಸೋಲಿಸಿ ಮಣ್ಣಾಗಿಸಿದೆ
ಇತಿಹಾಸದ ಪುಟಗಳಲಿ
ಇದರ ಅಟ್ಟಹಾಸವೆ ತುಂಬಿರುವಾಗ
ಯಾರೊಬ್ಬರ ಹೆಸರೆತ್ತುವುದು
ನಮಗೆ ಬೇಕಿಲ್ಲ.
 
ಇದೆಲ್ಲ ತಿಳಿದಿದ್ದರು
ಸಾವು ಹಾಳಾಗಲೆಂದು
ಅದು ಸಾಯಲೆಂದು
ಸಾವಿನಲ್ಲಿ ಅಂತರ್ಲೀನನಾದ
ದೇವರಿಗೆ ಮೊರೆಯಿಡುತ್ತೇನೆ.
 
‘ಹಾಳು ಸಾವು
ಸಾಯಬಾರದೆ
ಯಾರ ಕೈಗೂ ಸಿಗದೆ.’
 

‍ಲೇಖಕರು G

7 November, 2014

1 Comment

  1. mmshaik

    uttama ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading