ಸೌರಭ ರಾವ್
ಮೋಡದೊಳಗಿನ ತೇವ
ಮೋಡವೆಲ್ಲಾ ಮಳೆಯಾಗಿಬಿಡುವ ತೇವ
ಧಗೆಯಲ್ಲಿ ದಣಿದ ಧರಿತ್ರಿ ಮೊದಲ ಮಳೆಗೆ ಸೂಸುವ ಮೃದ್ಗಂಧದ ತೇವ
ಊರ ಹೊರಗಿನ ತಾವರೆ ಸರಸ್ಸಿನಲ್ಲಿ ಕಿರಿದಲೆಗಳು ಮೂಡಿ ಮರೆಯಾಗುವ ತೇವ
ಹಳದಿ ಕರವೀರದೊಳಗೆ ಅಡಗಿ ಕೂತ ಇಬ್ಬನಿಯ ತೇವ
ಮನೆಯ ಮುಂದಿನ ರಂಗೋಲಿ ಜಿನುಗು ಮಳೆಯಲ್ಲಿ ತನ್ನ ಚುಕ್ಕಿಯ ಲೆಕ್ಕ ಮರೆತು ಗಲಿಬಿಲಿಗೊಳ್ಳುವ ತೇವ
ತೊಟ್ಟಿಮನೆಯ ಹೆಬ್ಬಾಗಿಲು ಮುದ್ದಾಗಿ ಕೊಬ್ಬಿಕೊಳ್ಳುವ ತೇವ
ಗವಾಕ್ಷ-ಕಟಾಂಜನಗಳಲ್ಲಿ ಸಾಲಾಗಿ ನಿಂತ ಹನಿಗಳ ಹೊಳಪಿನ ತೇವ
ನೆನೆದು ಒದ್ದೆಯಾಗಿ ಮುದುಡಿ ಮಲಗಿದ ಬೀದಿನಾಯಿಗಳ ಮೌನದ ತೇವ
ಅವನ್ನೆಲ್ಲಾ ಹತ್ತಿರ ಕರೆದು ಅಕ್ಕರೆಯ ತುತ್ತು ನೀಡುವ ಎದುರುಮನೆಯ ಶಿವಮುದ್ದಿಯ ಮಮತೆಯ ಕಂಗಳ ಕಾಂತಿಯ ತೇವ
ಇಪ್ಪತ್ತಕ್ಕೇ ವೈಧವ್ಯ ಬಂದರೂ ಗಂಟಲಲ್ಲೇ ಹೆಪ್ಪುಗಟ್ಟಲುಬಿಟ್ಟ ಅವಳ ಕಾಣದ ಅಳುವಿನ ತೇವ
ಆ ದಿನ ಏನೂ ಅರಿಯದೇ ಅವಳ ಮಡಿಲಲ್ಲಿ ಮಲಗಿದ್ದ ಕಂದನ ಮುಗ್ಧನಗುವಿನ ತೇವ
ಹಳ್ಳಿಯ ಗಂಧಗಳ ತೇವ, ಬಣ್ಣಗಳೂ ತೇವ
ಅಲ್ಲಲ್ಲೇ ಬಿಟ್ಟುಬಂದ ಅಷ್ಟಷ್ಟು ಬಾಲ್ಯದ ನೆನಪುಗಳ ತೇವ
ಮೆಲುಕು ಹಾಕುತ್ತಾ ನಡೆವಾಗ ಪಕ್ಕವೇ ಹೇಳದೇ ಇದ್ದದ್ದೂ ಕೇಳಿಸಿದಂತೆ ಮೌನದಿ ಹೆಜ್ಜೆಹಾಕುವ ಗೆಳೆಯನ ಕಿರುನಗೆಯ ತುಂಟತನದ ತೇವ
ನಸುಕಿನಲ್ಲಿ ಎದ್ದ ತಕ್ಷಣ ಪಕ್ಕದಲ್ಲೇ ಮಗುವಿನಂತೆ ಮಲಗಿದ, ಮುದ್ದಿಗೆ ಕರೆವ ಅವನ ಜೊಲ್ಲುಗೆನ್ನೆಯ ತೇವ
ಸಂಸಾರದಿಂದ ತಾನಂತೂ ಮುಕ್ತವಾದಂತೆ ನಿಂತ ಖಾಲಿಮನೆಯ ನೀರವದ ನಿರ್ವಿಕಾರ ತೇವ
ಅಂಗಳದ ತೊಟ್ಟಿಯಲ್ಲಿ ತುಂಬಿ ತುಳುಕುವ ಮೌನದ ಅನಂತತೆಯ ತೇವ
ಅಗಲಿಕೆಯ ನೋವಿನ ತೇವ
ಹೊಸ ಗಮ್ಯಗಳೆಡೆಗೆ ಕರೆದೊಯ್ಯುವ ಕನಸುಗಳ ಬೆಳಕಿನ ತೇವ
ಮೋಡದೊಳಗಿನ ತೇವ
ಮೋಡವೆಲ್ಲಾ ಮಳೆಯಾಗಿಬಿಡುವ ತೇವ
0 Comments