ಮಂಚದ ಕಾಲಿಗೆ ಕಟ್ಟಿದ್ದಾನೆ ಚಂದಿರನ ಹಿಡಿದು..

ಅನುಪಮಾ ಎನ್ ಕನುಗನಹಳ್ಳಿ

ರಾತ್ರಿಯಾದರೆ ಸಾಕು
ಆಗಸ ಜಮಖಾನ ಹಾಸಿ
ನಕ್ಷತ್ರಗಳ ಹರಾಜಿಗಿಡುತ್ತದೆ
ಕದ್ದಿಂಗಳ ಇರುಳಿನ ಹೊರತಾಗಿ
ಚಂದಿರನನ್ನೂ
ತೂಕಕ್ಕೆ ಇಟ್ಟು ಮಾರಿಬಿಡುತ್ತದೆ

ಕೊಳ್ಳುವವರ ಸಂಖ್ಯೆ ಏನು ಕಡಿಮೆಯೇ?
ನಭದಗಲ ಅಸೀಮರೂಪಿ
ಕದಿಯಲು ನೂಕು ನುಗ್ಗಲಿಲ್ಲ !

ಕಂಕುಳಲ್ಲಿ ಅಳುವ ಕೂಸು
ಕೈಯಲ್ಲಿ ಅನ್ನದ ಬಟ್ಟಲು
ಕಂದನ ಪುಟ್ಟ ಕಂಗಳಿಗೆ
ನಗುವ ಮಾವನನ್ನ ತೋರಿಸುತ್ತಾಳೆ
ಕೈ ಬೀಸಿ ಕರೆಯುತ್ತಾಳೆ
ಆಕಾಶ ಅವಳ ತವರು ಮನೆ !

ಅಲ್ಲೊಬ್ಬ ಪ್ರಣಯ ಕವಿ
ಮುಲಾಜಿಲ್ಲದೆ ಒಂದೊಂದೆ ಚುಕ್ಕೆ ತಾರಕೆಗಳ
ಎಳೆದು ಬಿಳಿ ಹಾಳೆಯಲಿ ಪೋಣಿಸಿಬಿಡುತ್ತಾನೆ
ಬಾನ ಚಂದಿರ
ಭಾವದೊಳಗೆ ಬಂಧಿತ

ನಾಳೆಯ ಹಸಿವಿಗೆ
ಹೂ ಕಟ್ಟುವ ಕಮಲಿ
ಮಣ್ಣು ಮಿದುವಾಗಿಸುವ ಕುಂಬಾರ
ಬುಟ್ಟಿ ಹೆಣೆಯುವ ರಂಗಪ್ಪನಿಗೂ
ಚಂದಿರ ಮುಗಿಲ ದೀಪ
ದಣಿವಾರಿಸಿಕೊಳ್ಳುತ್ತಾರೆ
ತಂಪಿನ ಮುಲಾಮು ಹಚ್ಚಿ

ಪ್ರೇಯಸಿಯ ಓಲೈಸಲು
ನಕ್ಷತ್ರಗಳೇ ಬೇಕು ಹುಚ್ಚು ಪ್ರೇಮಿಗೂ
ಚುಕ್ಕಿಗಳನ್ನ ಕಿತ್ತು
ಜಡೆಗೆ ಮುಡಿಸುತ್ತಾನಂತೆ
ಸಾಹಸಿ ಅವನು ! ಪ್ರೇಮ ವಿಲಾಸಿ

ಅರೆ !
ಹೋಳಿ ಹುಣ್ಣಿಮೆಯ ದಿನ
ಬಾನಂಗಳ ಖಾಲಿ ಖಾಲಿ
ಕೊಳ್ಳುವವರೆಲ್ಲಾ ಬೊಬ್ಬೆಇಟ್ಟು ಹುಡುಕುತ್ತಿದ್ದಾರೆ

ಬಡವನ ಗುಡಿಸಲದು
ಬೆಳದಿಂಗಳ ಹೊಳೆಯ ಐಸಿರಿ
ರಸಿಕನೊಬ್ಬ ಚಂದಿರನ ಹಿಡಿದು
ಮಂಚದ ಕಾಲಿಗೆ ಕಟ್ಟಿದ್ದಾನೆ
ಒಲವ ಸಿರಿವಂತನವನು.

 

‍ಲೇಖಕರು Avadhi GK

February 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: