ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕವಿತೆ- ಬಲೆ ವಿಚಿತ್ರ!

ಸರೋಜಿನಿ ಪಡಸಲಗಿ

ನಾಲ್ಕು ಗಳಿಗೆಗಳ ಈ ಜೀವನಕೆ 
ಅದೆಷ್ಟಾದರು ಇದ್ದೀತು ಹರಿವು
ಉದ್ದಗಲ ಆಳ ಎತ್ತರ ನಿಲುಕದ್ದು
ಇಲ್ಲವೇನೋ ಅಂಚೇ ಎಂಬಂತೆ

ಅದರೊಡಲಲಿ…..
ಹುಟ್ಟು ಬಾಲ್ಯ ಯೌವನ ಮುಪ್ಪು
ಆಕಾರ ತಿಳಿದು ಕಣ್ದೆರೆವ ಮೊದಲೇ
ಹರಡಿ ಜವನ ಉಡದ ಹಿಡಿತ ಚಾಚಿ
ಇಷ್ಟಗಲ ಕೈ ಕಪ್ಪು ನೆರಳು ಹಾಸಿದ್ದು
ಕಣ್ಚಿತ್ರ ಕಣ್ಮಾಯೆ ಇಲ್ಲವೆನೋ ಅರಿವು ಎಂಬಂತೆ
 
ಅದರೊಡಲಲಿ…..
ಕಾಲನ  ಕಾವಳದ ಹಾಸಿನ ತುಂಬ
ಬಣ್ಣಬಣ್ಣದ ಚಿತ್ತಾರ ಕುಸುರಿ ನಕ್ಷೆ
ತೆರೆಯೊಂದು ಭಯಾನಕ ಕನ್ನೆರಳಿಗೆ
ನೂರೆಂಟು ಬೇಡಿ ಬಿಗಿದು ಮೈಮರೆತ
 ಅತಿಥಿ ಆ ಹೊಳಪಿನ ತಿಳಿವು ಇಲ್ಲವೇನೋ ಎಂಬಂತೆ

ಅದರೊಡಲಲಿ…..
ತಳವೇ ಇಲ್ಲದ ಬಯಲ ದಾರಿ ತುಂಬಾ
ಇಷ್ಟೆತ್ತರದ ಬೆಟ್ಟ ಆಸೆಯ ಹೊದಿಕೆಯಡಿ 
ಅದ ತಬ್ಬಿ ಕಣ್ಣಿಟಕಿಸುವ ನಿರಾಸೆ ಸುತ್ತ
ಹಗಲಿರುಳು ಕನಸು ನನಸಿನ ಬಳ್ಳಿ ಹಿಡಿದು 
 ಜೀಕುವ ಜೀವ ಯಾವ ಹಂಗು ಇಲ್ಲವೇನೋ ಎಂಬಂತೆ

ಅದರೊಡಲಲಿ….
ಉಂಟು ಅಸಂಖ್ಯ  ಹಳವಂಡಗಳಾಟ
ಎಣಿಕೆಗೆ ಎಟುಕದ ದ್ವೀಪಗಳ ಜಾತ್ರೆ
ಅರಳು ಮರಳಿನ ಮರಳ ಮನೆಗಳ
ಗೂಡಲರಳುವ ಸಮಯದ ಹೊಸ ರಂಗು 
ಯಾರಿಚ್ಛೆ ಅಚ್ಛೆಯ ಭಿಡೆಯೇ ಇಲ್ಲವೆನೋ ಎಂಬಂತೆ 
ಬಿಡು ಬಲೆ ವಿಚಿತ್ರ!

‍ಲೇಖಕರು avadhi

22 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading