ಪಾರ್ವತಿ ಜಿ ಐತಾಳ್
—-
ಉಡುಪಿಯ ಅಜ್ಜರಕಾಡಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ.ನಿಕೇತನಾ ತುಳು ಸಾಹಿತ್ಯದ ಕುರಿತು ಬಹಳಷ್ಟು ಅಧ್ಯಯನ -ಚಿಂತನೆಗಳನ್ನು ನಡೆಸಿ ಕನ್ನಡದಲ್ಲಿ ಅದರ ಕುರಿತು ಬರೆದವರು. ಲಿಪಿ ಇದ್ದುಕೊಂಡೂ ಅದು ಮರೆವಿನ ಗರ್ಭದೊಳಗೆ ಅಡಗಿ ಕುಳಿತು ಕೊಂಡಿದ್ದರಿಂದ ಲಿಖಿತ ರೂಪದ ಸಾಹಿತ್ಯವಿಲ್ಲದೆ ಇಪ್ಪತ್ತನೇ ಶತಮಾನದ ತನಕ ಮೌಖಿಕ ನೆಲೆಯಲ್ಲೇ ಉಳಿದುಕೊಂಡದ್ದು ಶ್ರೀಮಂತವಾದ ತುಳು ಸಾಹಿತ್ಯ. ಹದಿನೈದನೇ ಶತಮಾನದಿಂದ ತೊಡಗಿ ಶ್ರೀಭಾಗವತೋ’ ‘ಕಾವೇರಿ’ ‘ತುಳುದೇವಿ ಮಹಾತ್ಮೆ’ ‘ಮಹಾಭಾರತೋ’ ಮೊದಲಾದ ಮಹಾಕಾವ್ಯ, ಗದ್ಯ-ಪದ್ಯಗಳು ತುಳುವಿನಲ್ಲಿ ರಚಿತವಾಗಿ ಕನ್ನಡ ಲಿಪಿಯಲ್ಲಿ ತಾಳೆಗರಿಯ ಗ್ರಂಥಗಳಲ್ಲಿ ದ್ದರೂ ಅವುಗಳು ಸಂಶೋಧನೆಗಳ ಮೂಲಕ ಬೆಳಕಿಗೆ ಬಂದದ್ದು ಇಪ್ಪತ್ತನೇ ಶತಮಾನದ ಕೊನೆಗೆ.
ಲಿಖಿತ ರೂಪದಲ್ಲಿ (ಕನ್ನಡ ಲಿಪಿಯನ್ನು ಬಳಸಿಕೊಂಡು) ತುಳುವಿನಲ್ಲಿ ಮೊದಲ ಮಹಾಕಾವ್ಯ ಬಂದದ್ದು ಮಂದಾರ ಕೇಶವ ಭಟ್ಟರ ಲೇಖನಿಯಿಂದ-೧೯೭೭ರಲ್ಲಿ. ಹೀಗೆ ಮಂದಾರ ರಾಮಾಯಣಕ್ಕೆ ಒಂದು ಐತಿಹಾಸಿಕ ಮಹತ್ವವಿದೆ. ಈ ಕೃತಿಯ ಹಲವು ಮುಖಗಳನ್ನು ಅಧ್ಯಯನಕ್ಕೊಳಗಾಗಿಸಿ ನಿಕೇತನಾ ಅವರು ‘ಮಂದಾರ ರಾಮಾಯಣ -ಸ್ವರೂಪ ಮತ್ತು ಅನನ್ಯತೆ ‘ ಎಂಬ ಪಿ.ಹೆಚ್.ಡಿ. ಮಹಾಪ್ರಬಂಧವನ್ನು ಬರೆದು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮತ್ತು ಈಗ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ತುಳು ಸಾಹಿತ್ಯದ ಬಗ್ಗೆ ತಿಳಿಯ ಬಯಸುವವರಿಗೆ ಮತ್ತು ಇತರ ಭಾಷೆಗಳ ಮಹಾಕಾವ್ಯಗಳೊಂದಿಗೆ ತೌಲನಿಕ ನೆಲೆಯಲ್ಲಿ ಅಧ್ಯಯನ ಮಾಡುವವರಿಗೆ ಪರಾಮರ್ಶನ ಗ್ರಂಥವಾಗಿ ಉಪಯೋಗವಾಗಬಹುದಾದ ಒಂದು ಅಮೂಲ್ಯ ಗ್ರಂಥವಿದು.
೨೮೪ ಪುಟಗಳ ಈ ಗ್ರಂಥದಲ್ಲಿ ಪ್ರಸ್ತಾವನೆಯನ್ನು ಸೇರಿಸಿ ಒಟ್ಟು ಹತ್ತು ಅಧ್ಯಾಯಗಳಿವೆ. ರಾಮಾಯಣ ಪರಂಪರೆಗಳು, ತುಳು ಮಹಾಕಾವ್ಯಗಳು, ಮಂದಾರ ರಾಮಾಯಣದ ಹಿಂದಿನ ಪ್ರೇರಣೆ-ಪ್ರಭಾವಗಳು,, ಕಥಾವಸ್ತು ಮತ್ತು ವಿವೇಚನೆ, , ಪಾತ್ರ ವಿವೇಚನೆ, ಮಂದಾರ ರಾಮಾಯಣದಲ್ಲಿ ಚಿತ್ರಿತವಾಗಿರುವ ತುಳುನಾಡಿನ ಭೌತಿಕ ಪರಿಸರ, ತುಳು ಸಮಾಜ ಮತ್ತು ಸಂಸ್ಕೃತಿ, ಅಭಿವ್ಯಕ್ತಿ ಮತ್ತು ಛಂದಸ್ಸು, ತುಳು ಸಾಹಿತ್ಯಕ್ಕೆ ಮಂದಾರ ರಾಮಾಯಣದ ಕೊಡುಗೆ ಮತ್ತು ಉಪಸಂಹಾರ. ಕೊನೆಯಲ್ಲಿ ಮಂದಾರ ಕೇಶವ ಭಟ್ಟರ ಒಂದು ಸುದೀರ್ಘ ಸಂದರ್ಶನವಿದೆ. ಪ್ರತಿ ಅಧ್ಯಾಯದಲ್ಲೂ ಶೀರ್ಷಿಕೆಗೆ ಸಂಬಂಧಿಸಿದ ಎಲ್ಲ ಉಪವಸ್ತು ಹಾಗೂ ಅವುಗಳ ಬಗೆಗಿನ ಸೂಕ್ಷ್ಮ ವಿವರಗಳಿವೆ.
ಮಂದಾರ ಕೇಶವ ಭಟ್ಟರಿಗೆ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ತಂದ ಕೃತಿ ‘ಮಂದಾರ ರಾಮಾಯಣ ‘. ಇದನ್ನು ಬರೆಯುವಾಗ ಕೇಶವ ಭಟ್ಟರಿಗೆ ತುಳು ಪರಂಪರೆಯಲ್ಲಿ ಆಗಲೇ ಇದ್ದ ಪ್ರಾಚೀನ ಮಹಾಕಾವ್ಯಗಳ ಕಲ್ಪನೆಯೇ ಇರಲಿಲ್ಲ. ಯಾಕೆಂದರೆ ಆಗಿನ್ನೂ ಅವು ಬೆಳಕಿಗೆ ಬಂದಿರಲಿಲ್ಲ. ಮಂದಾರ ರಾಮಾಯಣವು ಆಧುನಿಕ ಮಹಾಕಾವ್ಯದ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ. ಭಾಷೆ, ಛಂದಸ್ಸು, ಕಥಾ ನಿರ್ವಹಣೆ, ಪಾತ್ರ ನಿರ್ಮಾಣ, ಆಧುನಿಕತೆಯ ಪ್ರಭಾವ-ಎಲ್ಲವನ್ನೂ ಇಲ್ಲಿ ಕಾಣಬಹುದು. ಮಂದಾರರು ಇಲ್ಲಿ ಆಡುಮಾತಿನ ತುಳು ಭಾಷೆಯನ್ನು ಬಳಸಿದ್ದಾರೆ.ಕನ್ನಡದ ಜನಪ್ರಿಯ ಛಂದಸ್ಸು ಆದ ಲಲಿತ ರಗಳೆಯಲ್ಲಿ ೧೭,೮೯೦ ಸಾಲುಗಳಲ್ಲಿ ರಚಿತವಾದ ಈ ಕೃತಿಯಲ್ಲಿ ೨೨ ಅಧ್ಯಾಯಗಳಿವೆಯೆಂದು ಕೃತಿಯ ಸ್ವರೂಪದ ಬಗ್ಗೆ ಮಾತನಾಡುವಾಗ ಲೇಖಕಿ ಹೇಳುತ್ತಾರೆ.
ಮುಂದೆ ಕೃತಿಯ ಅನನ್ಯತೆಯ ಬಗ್ಗೆ ಹೇಳುತ್ತ ಅವರು ಹೀಗೆ ಹೇಳುತ್ತಾರೆ: ‘ಮಂದಾರ ರಾಮಾಯಣದ ಮಹತ್ವವಿರುವುದೇ ಇಲ್ಲಿಯ ಸಂಸ್ಕೃತಿ ಮತ್ತು ಸಮಾಜದೊಂದಿಗೆ ಅದು ಹೊಂದಿರುವ ಸಂಬಂಧದಲ್ಲಿ ಎನ್ನ ಬಹುದು. ತುಳು ಸಮಾಜದ ಪರಿಸರದಲ್ಲೇ ಇಡೀ ಕಥೆ ಅನಾವರಣಗೊಳ್ಳುತ್ತದೆ.ತುಳುನಾಡಿನ ಭೌಗೋಳಿಕ ಪರಿಸರದ ವಿವರಗಳು ದಟ್ಟವಾಗಿ ಈ ಕೃತಿಯಲ್ಲಿ ಮೂಡಿವೆ. ಹೀಗಾಗಿ ಇಡೀ ರಾಮಾಯಣದ ಘಟನೆಗಳು ತುಳುನಾಡಿನಲ್ಲಿ ಘಟಿಸಿದಂತೆ ಭಾಸವಾಗುತ್ತವೆ.ಇದರಿಂದ ಇಲ್ಲಿಯ ನಂಬಿಕೆ, ಆಚರಣೆ, ಹಬ್ಬಗಳು, ಮೌಲ್ಯಗಳು ಅವ್ಯಾಹತವಾಗಿ ಕೃತಿಯಲ್ಲಿ ವ್ಯಕ್ತವಾಗಿವೆ. ಇಲ್ಲಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿಚಾರಗಳು ಕೃತಿಯಲ್ಲಿ ಅಂತರ್ಗತವಾಗಿವೆ. ಪ್ರಾಚೀನ ಮತ್ತು ಸಮಕಾಲೀನ ಜನಜೀವನ, ಮತ್ತು ಸಾಮಾಜಿಕ ಮೌಲ್ಯಗಳು ಕೃತಿಯಲ್ಲಿ ಹಾಸುಹೊಕ್ಕಾಗಿವೆ. ಇಲ್ಲಿಯ ಜನಾಂಗಗಳು, ಅವರ ಜೀವನ ವಿಧಾನ,, ಭೂತಾರಾಧನೆ, ಕಂಬಳದಂಥ ಆಚರಣೆಗಳು, ಶ್ರೀಮಂತಿಕೆ -ಬಡತನ, ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಇವೆಲ್ಲವೂ ಕೃತಿಯಲ್ಲಿ ಮಿಳಿತವಾಗಿವೆ. ರಾಮಾಯಣದ ಕಥೆಯ ಚೌಕಟ್ಟಿನಲ್ಲಿಯೇ ತುಳುನಾಡಿನ ಸಂಸ್ಕೃತಿಯ ತಿರುಳು ಅಂತರ್ಗತವಾದ ರೀತಿಯು ಅಧ್ಯಯನ ಯೋಗ್ಯವಾಗಿದೆ.’ (ಪುಟ ಸಂ.೧೨)
ಈ ಕೃತಿಯುದ್ದಕ್ಕೂ ಲೇಖಕಿ ಮಂದಾರ ರಾಮಾಯಣದ ಪದ್ಯಗಳನ್ನು ಅಲ್ಲಲ್ಲಿ ಉಲ್ಲೇಖಿಸಿ ಕನ್ನಡದ ಓದುಗರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಕನ್ನಡದ ರಾಮಾಯಣಗಳೊಂದಿಗೆ ತೌಲನಿಕವಾಗಿ ಅಧ್ಯಯನ ನಡೆಸಿದ್ದಾರೆ. ಕೃತಿಯ ಹಿಂದೆ ಅಪಾರವಾದ ಪರಿಶ್ರಮವಿರುವುದು ಪುಟ ಪುಟಗಳಲ್ಲೂ ವ್ಯಕ್ತವಾಗುತ್ತದೆ. ನಿರೂಪಣಾ ಶೈಲಿಯಲ್ಲಿ ಯಾವುದೇ ರೀತಿಯ ಪಾಂಡಿತ್ಯ ಪ್ರದರ್ಶನವಿಲ್ಲದೆ ಸರಳವಾಗಿದ್ದು ಸುಖವಾಗಿ ಓದಿಸಿಕೊಂಡು ಹೋಗುತ್ತದೆ. ಭಾಷಾ ಶುದ್ಧಿ ಪ್ರಶಂಸನೀಯ.
0 ಪ್ರತಿಕ್ರಿಯೆಗಳು