ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಧ್ಯಕ್ಕೆ ಯಾರೂ ಬೇಕಿಲ್ಲ

-ಆಶಾ ಜಗದೀಶ್

ಒಂದಿಡೀ ದಿನ
ನಿನ್ನ ನೆನಪಿನ ಸೋನೆ
ಸುರಿಸುತ್ತಾ ಹೊಸಿಲ ಬದಿಯಲ್ಲಿ
ಕಾದು ಕುಳಿತವಳಿಗೆ
ಮೆಟ್ಟಿಲ ತುಳಿದ
ಹೆಜ್ಜೆಗುರುತುಗಳೆಷ್ಟೋ
ಸಾಂತ್ವನ ತುಂಬಲು
ಪ್ರಯತ್ನಪಟ್ಟವು

ಪಾ…ಪ
ಎನಿಸಿಬಿಟ್ಟಿತು ನನಗೆ
ಇದು ನನ್ನ ನಿತ್ಯದ ಕಾಯಕ
ಮತ್ತು ನಾನೇ ಅದನ್ನು
ಬಯಸಿದ್ದೇನೆ

ಸಾಂತ್ವನ ಎನ್ನುವ
ಎಲ್ಲವನ್ನೂ ತಣ್ಣಗಾಗಿಸಿ
ತಟಸ್ಥಗೊಳಿಸಿಬಿಡುವ
ನಿರುಪದ್ರವಿ
ಆದರೆ ಅನವಶ್ಯಕ
ದ್ರವ್ಯದ ಅಗತ್ಯ
ಸಧ್ಯಕ್ಕೆ
ನನಗಿರಲಿಲ್ಲ

ಆದರೆ ಒಂದಷ್ಟು ಹೆಜ್ಜೆಗಳು
ಹೆಗಲ ತಡವಿದವು
ಒಂದಷ್ಟು ಹೆಜ್ಜೆಗಳು
ಎದೆ ನೀವಿದವು
ಒಂದಷ್ಟು ಹೆಜ್ಜೆಗಳು
ಮಡಿಲ ಏರಿ ಜೊತೆ
ಇದ್ದೇವೆ ಎಂದವು
ಒಂದಷ್ಟು ಹೆಜ್ಜೆಗಳು
ಉಸಿರುಗಟ್ಟುವಷ್ಟು ತಬ್ಬಿ
ಅವುಚಿ ಅವಿತಿಟ್ಟುಕೊಳ್ಳಲು
ನೋಡಿದವು

ಹರಿದಾಡುತ್ತಿದ್ದ ಆಲೋಚನೆಯ
ತಪಸ್ಸು ಭಂಗವಾಯಿತು
ಚದುರಿದ ನನ್ನದೇ ಚಿತ್ರದ
ತುಂಡುಗಳು
ಕೂಡಿಕೊಳ್ಳಲು ಪ್ರಯಾಸಪಟ್ಟವು
ದನಿಯಾಕೋ ಸ್ವರ ಹೊರಡಿಸಲಾರದಷ್ಟು
ಹೂತುಹೋಗಿಬಿಟ್ಟಿತು
ಕಣ್ಣ ದೃಷ್ಟಿ ಎಲ್ಲಿ ನೆಡಬೇಕೆಂದು ತಿಳಿಯದೆ
ಅಲೆಯಿತು

ಏಕಾಂತವೊಂದು ಮಾತ್ರ ದೂರ ಕೂತು
ಕಾಯುತ್ತಿತ್ತು
ಅದಕ್ಕೆ ಈ ತಾಳ್ಮೆ ಎಲ್ಲಿಂದ ಬಂದಿರಬಹುದು

ಒಂದು ಅತೃಪ್ತಿ
ವಿಫಲ ಪ್ರೇಮ
ಮತ್ತು ಕಾಯುವಿಕೆ
ಚುಚ್ಚಿ ಮುರಕೊಂಡ ಮುಳ್ಳು
ಹಿತವಾಗಿ ಇರಿಯತ್ತಾ
ಕೀವು ತುಂಬಿಕೊಂಡು
ಮಿಡುಕುವ ನೋವು
ಬೇಕೇ ಬೇಕು ಎನಿಸುವಷ್ಟು
ಅಭ್ಯಾಸವಾಗಿಬಿಟ್ಟಿದೆ ನನಗೆ

ದಿನಾ ಸಂಜೆ
ಮಸಕು ಬೆಳಕಿನಲ್ಲಿ
ಸೂಜಿ ಹಿಡಿದು
ಮುಳ್ಳ ಬಗೆಯುತ್ತಾ
ಕೂರುತ್ತೇನೆ
ಸುತ್ತಲ ಚರ್ಮವನ್ನು
ಕೀಳುತ್ತೇನೆ
ಮುಳ್ಳ ಮೊನೆ ಕಾಣುವಷ್ಟು
ಆಳದವರೆಗೂ ಬಗೆಯುತ್ತೇನೆ
ಇನ್ನೇನು ಇನ್ನೋಂದೇ ಒಂದು ಮೀಟಿಗೆ
ಮುಳ್ಳು ಹೊರಚಿಮ್ಮಬೇಕು…
ಕತ್ತಲಾಯಿತೆಂದು ನೆಪಮಾಡಿ
ಒಳಸೇರಿಕೊಳ್ಳುತ್ತೇನೆ

ಇದು ದಿನನಿತ್ಯ ಹೀಗೆ
ನಡೆಯುತ್ತದೆ
ಬಹುಶಃ ನನಗೆ
ಮುಳ್ಳನ್ನು ಬಗೆದು ಮುಗಿಸುವುದು
ಬೇಕಿರಲಿಕ್ಕಿಲ್ಲ
ನನ್ನನ್ನು ನಾನು ಹುಡುಕಿಕೊಂಡು
ಮುಗಿಸಲಿಕ್ಕೂ

ಆದರೆ ಸಂಜೆ ಬರಲು ತೆಗೆದು
ಒಂದೂ ಬಿಡದೆ
ಹೆಜ್ಜೆಗಳಷ್ಟನ್ನೂ ಪರಪರ ಗುಡಿಸಿ
ಮೊರಕ್ಕೆ ತುಂಬಿ
ಡಸ್ಟ್ ಬಿನ್ನಿಗೆ ಸುರಿದು ಬಂದೆ
ಯಾಕೋ ಗೊತ್ತಿಲ್ಲ

‍ಲೇಖಕರು Avadhi

4 November, 2020

1 Comment

  1. ಲಲಿತಾ ಸಿದ್ಧಬಸವಯ್ಯ

    ಇಡೀ ಕವನವೇ ರೂಪಕ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading