ಅಜ್ಞಾತ

ವಿವೇಕಾನಂದ ಕಾಮತ್ ಹೊಸ ಕಾದಂಬರಿಯೊಂದಿಗೆ ಓದುಗರ ಮುಂದೆ ಬಂದಿದ್ದಾರೆ.

ಅಜ್ಞಾತ’ ಅವರ ಹೊಸ ಕೃತಿ

ವಂಶಿ ಪಬ್ಲಿಕೇಷನ್ಸ್ ನ ಈ ಕೃತಿಯ ಪ್ರಕಾಶಕರು

ಕೃತಿಯ ಆಯ್ದ ಭಾಗ ಇಲ್ಲಿದೆ-

ವಿವೇಕಾನಂದ ಕಾಮತ್

ಅಜ್ಞಾತ ಕಾದಂಬರಿ ಕೊಳ್ಳಲು..

ವಂಶಿ ಪಬ್ಲಿಕೇಷನ್ಸ್, ನೆಲಮಂಗಲ,

ಬೆಂಗಳೂರು – 562123

ಮೊಬೈಲ್ : 9916595916

ಕಾಯಕನಾಥನಿಗೆ ಎಷ್ಟು ಅರ್ಥವಾಯಿತೋ, ಬಿಟ್ಟಿತೋ, ಅವನು ಪ್ರತಿಕ್ರಿಯಿಸಲು ಹೋಗಲಿಲ್ಲ. ಅವನು ಎಂದಿನಂತೆ ತನ್ನ ವಿಷಾದದ ಚಾದರದೊಳಗೆ ಹುದುಗಿಕೊಂಡ. ಜಂಪಯ್ಯ ಕಾರಗದ್ದೆಯಿಂದ ಬರುವಾಗ ತಂದ ಹಣ್ಣುಗಳನ್ನು, ತಿನಿಸುಗಳನ್ನು ತಿಂದ. ಕಾಯಕನಾಥನಿಗೆ ಒತ್ತಾಯ ಮಾಡಿ ತಿನ್ನಿಸಿದ. ಕಾಯಕನಾಥನ ಮನಸ್ಥಿತಿಯೂ, ಇರಾದೆಯೂ ಅವನಿಗೆ ಅರ್ಥವಾಗಿತ್ತು. ದೇಹ ದಂಡಿಸಿಕೊಂಡು ಜೀವ ತ್ಯಾಗ ಮಾಡುವ ಅವನ ಉದ್ದೇಶ ಬದಲಿಸಬೇಕೆಂದು ಜಂಪಯ್ಯ ಮನಸಲ್ಲೇ ನಿರ್ಧರಿಸಿದ್ದ. ಬಹಳಷ್ಟು ಬುದ್ಧಿ ಹೇಳಲು ಯತ್ನಿಸಿದ.

“ನೋಡು.. ಹುಟ್ಟಿದವನು ಒಂದಲ್ಲಾ ಒಂದು ದಿನ ಸಾಯಲೇ ಬೇಕು.. ಆದರೆ ಅದು ಸಾವು ತಾನಾಗಿಯೇ ಬಂದು ನಿನ್ನ ಸೆಳೆವವರೆಗೂ ನೀನು ಕಾಯಲೇ ಬೇಕು.. ನಿನಗೆ ಸಿಕ್ಕಿರುವ ಈ ಜನ್ಮ ಸರಿಯಾಗಿ ಉಪಯೋಗಿಸಿಕೋ.. ಸತ್ತರೆ ಮಣ್ಣಲ್ಲಿ ಮಣ್ಣಾಗಿ ಬಿಡುವೆ.. ಅದರಿಂದ ಏನು ಪ್ರಯೋಜನವಾಯಿತು..? ದೊರೆತ ಜೀವನದ ಆನಂದವನ್ನು ಅನುಭವಿಸು..”

“ನನ್ನ ಆನಂದ ನಿನಗೆ ಗೊತ್ತೇ..? ನನ್ನ ಮಿನಾಲಿ, ಸಾರಂಗ ನನ್ನ ಕಣ್ಣೆದುರೇ ಮಣ್ಣಾದರು.. ನಾನೂ ಅವರೊಂದಿಗೆ ಸೇರಬೇಕು.. ಆದರೆ ಸಾಯಲು ಧೈರ್ಯವಿಲ್ಲ.. ಬದುಕುವ ಆಸೆಯಿಲ್ಲ.. ಹಾಗಾಗಿ ಇಂಚಿಂಚಾಗಿ ಇಲ್ಲೇ , ಹೀಗೇ ಇದ್ದಷ್ಟು ದಿನ ಕಳೆದು ಬಿಡುವೆ.. ನನ್ನ ಉಸಾಬರಿ ನಿನಗೆ ಬೇಡಾ.. ಬಂದ ದಾರಿ ಹಿಡಿ.. ನೀನು..” ಕಾಯಕನಾಥನಿಗೆ, ಜಂಪಯ್ಯ ತನ್ನ ವೈಯುಕ್ತಿಕ ವಿಷಯಕ್ಕೆ ಹಸ್ತಕ್ಷೇಪ ಮಾಡುವುದು ಸಹ್ಯವಾಗಲಿಲ್ಲ.

ಕಾಯಕನಾಥನ ನಿರ್ಧಾರ ಸುಲಭವಾಗಿ ಬದಲಿಸಲಾಗದು ಎಂದು ಜಂಪಯ್ಯನಿಗೆ ಮನದಟ್ಟಾಯಿತು.

“ಬೇಡಾ ಬಿಡು.. ನಾನೇನೂ ಹೋಗಲು ಬರಲಿಲ್ಲ.. ಇಲ್ಲೇ ಇದ್ದು ಬಿಡಬೇಕೆಂದು ನಿರ್ಧಾರ ಮಾಡಿದೀನಿ.. ಇಷ್ಟು ದಿನ ನನ್ನ ಬಾಳ್ವೆನೂ ಅವರಿವರ ಮನೇಲಿ ಕಳೆದುಹೋಯಿತು.. ಇನ್ನು ಸಾಕು.. ಒಂದು ಕಡೆ ನೆಲೆ ನಿಲ್ಲಬೇಕು.. ಕಾರಗದ್ದೇಲಿ ಬೇಕೆಂದರೂ ಒಂದು ಹಿಡಿ ಜಾಗ ಇಲ್ಲ.. ಗೊತ್ತಾ..?

ಅಡಿಕೆ, ಭತ್ತ , ಕಾಫಿ, ಏಲಕ್ಕಿ  ಅಂತ ಬೆಳೆ ಬೆಳೆದು ಜಾಗದ ಬೆಲೆ ಕೇಳಿದರೆ ಗಂಟಲ ದ್ರವ ಆರುತ್ತೆ.. ನಮ್ಗೆ ಅಷ್ಟೆಲ್ಲಾ ಕೊಟ್ಟು ಖರೀದಿಸುವ ತಾಕತ್ತೆಲ್ಲಿದೆ..? ಅದಕ್ಕೆ ದೇವರೇ ನನ್ನನ್ನು ಇಲ್ಲಿ ಕಳಿಸಿಕೊಟ್ಟ.. ಸಾಯುವ ಕಾಲಕ್ಕಾದರೂ ನನ್ನದೇ ಅಂತ ಒಂದು ಜಾಗದಲ್ಲಿ ಸಾಯ್ತೀನಿ..” ಜಂಪಯ್ಯ ನುಡಿದಾಗ ಕಾಯಕನಾಥ ನೀರಸ ನಗೆ ನಕ್ಕ. ಅದನ್ನು ಗಮನಿಸಿ ಜಂಪಯ್ಯ ಪ್ರಶ್ನಾರ್ಥಕ ನೋಟ ಬೀರಿದಾಗ ಕಾಯಕನಾಥ ನುಡಿದ,

“ನಿನ್ನದು..?! ಅದು ಮೊದಲು ಬೇರೆ ಯಾರದ್ದೋ ಆಗಿತ್ತು.. ನೀನು ಹೋದ ಮೇಲೆ ಇನ್ನಾರದ್ದೋ ಆಗುತ್ತದೆ.. ಅದು ಇದ್ದಲ್ಲೇ ಇರುತ್ತದೆ.. ಮನುಷ್ಯರು ಬಂದು ಹೋಗುತ್ತಾರೆ.. ಮನುಷ್ಯ ಹುಟ್ಟುವಾಗಲೇ ಸಾವೆಂಬ ಸತ್ಯ ಬೆನ್ನಿಗೆ ಕಟ್ಟಿಕೊಂಡು ಬರುತ್ತಾರೆ.. ಆದರೂ ಅವನಿಗೆ ಈ ಆಸೆ, ಸ್ವಾರ್ಥ ..”

“ನಿನ್ನ ಥರ ವೈರಾಗ್ಯ ಮಾತನಾಡಲು, ನಾನು ಯಾರನ್ನೂ ಕಳೆದುಕೊಂಡಿಲ್ಲ.. ನಿನ್ನ ನೋವು ನಿನಗೆ ಹೀಗೆಲ್ಲಾ ವೇದಾಂತ , ತತ್ವ ಮಾತನಾಡಿಸುತ್ತಿರಬಹುದು.. ನಿನ್ನವರು ಇರುವಾಗ ನೀನೂ ನನ್ನಂತೇ ಜೀವನೋತ್ಸಾಹದಿಂದಲೇ , ಹೀಗೆ ಲೌಕಿಕ ಜಗತ್ತಿನಲ್ಲಿ ಕಳೆದು ಹೋಗಿದ್ದೆ ಎಂಬುದನ್ನು ಮರೆಯಬೇಡಾ.. ನಿನ್ನ ನೋವು ನಾನು ಕಲ್ಪಿಸಬಲ್ಲೆ..  ಅನುಭವಿಸಲಾರೆ.. ಅಷ್ಟೇ..” ಎಂದ ಜಂಪಯ್ಯ ಅಚ್ಚರಿಯಿಂದ ಕಾಯಕನಾಥನ ಕಡೆ ನೋಡುತ್ತಾ, “ಅಲ್ಲಾ.. ನೀನು ಪರ ರಾಜ್ಯದವನು ಅಂತೀಯಾ.. ಇಷ್ಟೊಂದು ಚೆನ್ನಾಗಿ ಗ್ರಾಂಥಿಕವಾಗಿ ಮಾತನಾಡಲು ಹೇಗೆ ಸಾಧ್ಯ ನಿನ್ನಿಂದ..?”

“ನಾನು ಚಿಕ್ಕ ವಯಸ್ಸಿಗೇ ಕರ್ನಾಟಕಕ್ಕೆ ಬಂದವನು.. ನನ್ನ ಅಣ್ಣಂದಿರು ಇಲ್ಲಿ ದುಡಿಯಲು ಬಂದಾಗ ಅವರೊಂದಿಗೇ ಬಂದೆ.. ಆದರೆ ನನಗೆ ಶಾಲೆಗೆ ಹೋಗಿ ಕಲಿಯುವ ತುಂಬಾ ಮನಸಿತ್ತು ..ಆದರೆ ಸಾಧ್ಯವಾಗಲಿಲ್ಲ.. ಆದರೆ ಕಲಿಯುವ ಅಸೆ ಇಂಗಲಿಲ್ಲ.. ಕೆಲಸ ಮಾಡುವ ಕಟ್ಟಡದ ಮಂದಿಯ ಶಾಲೆಗೆ ಹೋಗುವ ಮಕ್ಕಳಿಂದ ಕಲಿತೆ.. ಓದಲು ಶುರುಮಾಡಿದೆ.. ನಮ್ಮ ಕಟ್ಟಡದ ಸಮೀಪ ಗ್ರಂಥಾಲಯ ಇತ್ತು.. ಉಚಿತ ಓದು ಸಾಧ್ಯವಿತ್ತು.. ಅಲ್ಲಿ ಹೋಗಿ ಕುಳಿತು ಓದುತ್ತಿದ್ದೆ.. ಅದು ಅಭ್ಯಾಸವಾಯಿತು.. ದಿನಕ್ಕೆ ಒಂದರಂತೆ ಪುಸ್ತಕ ಅರಾಮಾಗಿ ಓದಿ ಮುಗಿಸುತ್ತಿದ್ದೆ..”

ಜಂಪಯ್ಯ ಬೆರಗಾದ. ಅವನ ಕಣ್ಣುಗಳಲ್ಲಿ ಮೆಚ್ಚುಗೆ ತುಳುಕಿತು. “ಇಷ್ಟು ವಿಚಾರವಂತನಾಗಿಯೂ ನೀನು ಹೀಗೆ ಕುರುಡಾಗಿ ಏಕೆ ವರ್ತಿಸುವೆ..? ನಿನ್ನ ಮನಸ್ಸು, ಜೀವ ಏಕೆ ವೈರಾಗ್ಯದ ಅಹುತಿಗೆ ಅರ್ಘ್ಯವಾಗಿಸುವೆ..? ಬಿಟ್ಟು ಬಿಡು.. ಕಳೆದು ಹೋಗಿದ್ದು ಹೋಗಲಿ.. ಇಲ್ಲಿಗೇ ಜೀವನ ನಿಂತಿಲ್ಲವಲ್ಲಾ.. ನಡಿ.. ನನ್ನ ಜೊತೆ..”. ಜಂಪಯ್ಯ ಎದ್ದು ನಿಂತ.

ಕಾಯಕನಾಥ ಕುಳಿತಲ್ಲೇ ಅವನೆಡೆಗೆ ನೋಡಿದ.

“ನಡೀ ಸ್ವಲ್ಪ ಅಡ್ಡಾಡಿ ಬರೋಣ.. ಒಂದು ಹೊಸ ಪಯಣ ಆರಂಭಿಸೋಣ..”

ಕಾಯಕನಾಥ ತಲೆಕೊಡವಿದ, “ಪಯಣ ಆರಂಭಿಸಬೇಕಾಗಿರುವುದು.. ನಡಿಗೆಯಲಲ್ಲ, ಜೀವನದಲ್ಲಲ್ಲಾ.. ಬದಲಿಗೆ ..ಒಳಗಿನದು.. ನಮ್ಮೊಳಗೆ ನಾವು ಸಂಚರಿಸಬೇಕು.. ನಮ್ಮ ಒಳಗಿನದ್ದನ್ನು ಗಮನಿಸಬೇಕು.. ನಮ್ಮನ್ನು ನಾವು ಅರಿಯಬೇಕು.. ಕಲ್ಮಷಗಳನ್ನು ತೊಳೆದು ಶುದ್ಧ ಮಾಡಿಕೊಳ್ಳಬೇಕು..  ಆ ಪಯಣದ ಗಮ್ಯ ಅತ್ಯಂತ ಸುಖವೂ, ನೆಮ್ಮದಿಯೂ ನೀಡುತ್ತದೆ.. ಅದೇ ಸಾರ್ಥಕತೆ..”

“ನೀನು ಕಾಡಲ್ಲಿದ್ದು ಋಷಿಗಳ ರೀತಿ ಮಾತನಾಡುವೆ.. ನನ್ಗೆ ಅಧ್ಯಾತ್ಮ ಬೇಡಾ.. ನನಗಿನ್ನೂ ಜೀವನ ಇದೆ.. ಇಹದಲ್ಲೇ ನನ್ಗೆ ಖುಷಿ ಇದೆ.. ನನ್ಗೆ ಮನುಷ್ಯರು ಬೇಕು.. ಜೀವನ ಬೇಕು.. ಕಷ್ಟ ಬೇಕು.. ಸುಖ ಬೇಕು.. ನೋವು, ನಲಿವು.. ಇದೆಲ್ಲವೂ ಇಲ್ಲದೇ ಹೋದರೆ ಬದುಕಲ್ಲಿ ಏನು ಸ್ವಾದ ಇದೆ..? ನೀನು ಮೌನವಾಗಿಯೇ ಬಾ ನನ್ನ ಜೊತೆ.. ನಿನ್ನನ್ನು ಕರೆದೊಯ್ಯದೇ ಬಿಡುವುದಿಲ್ಲ..” ಜಂಪಯ್ಯನ ಆಗ್ರಹಕ್ಕೆ ಕಾಯಕನಾಥ ಮಣಿಯಲೇ ಬೇಕಾಯಿತು.

ದಾರಿಯುದ್ದಕ್ಕೂ ಕಾಯಕನಾಥ ಪ್ರಕೃತಿಯ ಪ್ರತೀಕದಂತೆ ಮೌನವಾಗಿದ್ದರೆ, ಜಂಪಯ್ಯ ನಗರದ ರಾಯಭಾರಿಯಂತೆ ಗಲಗಲ ಸದ್ದು ಮಾಡುತ್ತಲೇ ಯಾವುದೋ ಲೋಕದ ರಮ್ಯ ಕಥೆ ಹೇಳುವಂತೆ ನಡೆಯುತ್ತಲೇ ಇದ್ದ. ತುಸು ಆಯಾಸವಾದಾಗ ಅಲ್ಲೇ ಮರದ ಬುಡದಲ್ಲಿ ಕುಳಿತು ವಿರಮಿಸಿದರು. ಜಂಪಯ್ಯ ಬಾಯಾರಿಕೆ ತಣಿಯಲು ನೀರು ಹಣ್ಣುಗಳನ್ನು ಕಲ್ಲು ಹೊಡೆದು ಉರುಳಿಸಿ ತಂದು ಕೊಟ್ಟ.

ಸಿಹಿ ಜೊತೆ ಒಗರೊಗರಾದ ಹಣ್ಣು ಇಬ್ಬರೂ ತಿಂದರು. ಮತ್ತೆ ಸ್ವಲ್ಪ ಮುಂದೆ ನಡೆದಾಗ, ನದಿಯ ಹರಿವಿನ ಸಪ್ಪಳ ಸ್ವಲ್ಪ ಜೋರಾಗಿಯೇ ಆಲಿಸಿತು. ಅಗಲೇ ಕಾಯಕನಾಥನಿಗೆ,  ತಾವು ಹೆಜ್ಜೆ ಹಾಕುತ್ತಾ  ಬಂದದ್ದು ಕುಮುದಿನಿ ನದಿಗೆ ಸಮನಾಂತರವಾದ ಹಾದಿಯಲ್ಲಿ ಎಂದು ಅರಿವಾಗಿದ್ದು. ಅ ಸಪ್ಪಳ ಬಂದಲ್ಲಿ ನೋಡಿದಾಗಲೇ, ಅಲ್ಲಿಂದ ಮೇಲೆದ್ದ ಹಳೇ ಕಾಲದ ಸೇತುವೆ ಕಣ್ಣಿಗೆ ಬಿದ್ದದ್ದು.

“ಹೋಗೋಣವೇ..? ಆ ಸೇತುವೆ ದಾಟಿ.. ಈ ಕಾಲು ದಾರಿ ಏರಿದರೆ, ಆ ಸೇತುವೆ ಮೇಲಿರುತ್ತೇವೆ.. ಅಲ್ಲಿಂದ ಊರಿಗೆ, ಅಂದರೆ ಕಾರಗದ್ದೆಗೋ, ಇನ್ನೆಲ್ಲಾದರೂ  ಹೋಗಬಹುದು..” ಜಂಪಯ್ಯ ಕೇಳಿದ.

ಕಾಯಕನಾಥ ತಲೆಕೊಡವಿದ. “ಇಲ್ಲ.. ಈ ಸೇತುವೆ ಯಾಕೋ, ನನಗೆ ಮತ್ತೆ ಅದೇ ಹಳೇ ಜಗತ್ತಿಗಿನ ತೆಕ್ಕೆಯೊಳಗೆ ನನ್ನನ್ನು ಎಳೆಯುತ್ತದೆ.. ಮತ್ತದೇ ಇಹದ ಚಕ್ರದ ಸುಳಿಯೊಳಗೆ ಸೇರಿಸುತ್ತದೆ.. ಅದೇ ಬಂಧನದ ಬದುಕಿನೊಳಗೆ ನಾನು ಸಿಲುಕಿ ಬಿಡುತ್ತೇನೆ.. ನನ್ನನ್ನು ಕರೆಯಬೇಡಾ..”  ಕಾಯಕನಾಥ ಪ್ರಕೃತಿಯ ಮಡಿಲಲ್ಲಿ ಇರ ಬಯಸಿದರೆ, ಜಂಪಯ್ಯ ನಗರದ ಸೆಳೆತಕ್ಕೆಳೆಯುವ ಯತ್ನ ಮಾಡಿದ.

“ಸೇತುವೆ ಕಟ್ಟಿರೋದೇ ಅದಕ್ಕಲ್ಲವೇನೋ.. ಮನುಷ್ಯ ನಾಗರಿಕನಾಗುತ್ತಲೇ ಇದೆಲ್ಲ ಕಂಡು ಹಿಡಿದ.. ನಗರ ಮಾಡಿದ..”

“ಹೌದು.. ಹಾಗೇನೇ ಜೀವಂತಿಕೆಯನ್ನು ಕೊಂದು ಹಾಕಿದ.. ಜೀವಂತಿಕೆ ಅಲ್ಲಿರೋದಲ್ಲ.. ಇಲ್ಲಿ.. ಕಾಡಿನೊಳಗೆ ಇರೋದು.. ಮನುಷ್ಯ ಎಲ್ಲವನ್ನು ತನ್ನ ಸ್ವಾರ್ಥಕ್ಕೆ ಬಳಸಲು ಇವುಗಳ ಮೇಲೆಲ್ಲಾ ಹೇರಿಕೆ ಹಾಕುತ್ತಾನೆ.. ತನ್ನ ಅನ್ವೇಷಕ ಪ್ರವೃತ್ತಿಯಿಂದ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾನೆ..  ನಿಯಂತ್ರಣದಲ್ಲಿಡಲು ಯತ್ನಿಸುತ್ತಾನೆ.. ಹಾಗೆ ಮಾಡುತ್ತಾ ಅದರ ಮೂಲ ಸತ್ವ, ಆತ್ಮ ಸಾಯಿಸುತ್ತಾನೆ.. ಕಾಡು ಕಡಿದು ನಾಡು ಮಾಡುತ್ತಾನೆ.. ಅಲ್ಲೆಲ್ಲಿ ಉಳಿಯಿತು ಜೀವಂತಿಕೆ ಹೇಳು..?”

ಹಕ್ಕಿಗಳ ಹಾಡು ಕೇಳಬೇಕಾದರೆ, ಅವುಗಳನ್ನು ಪಂಜರದಲ್ಲಿ ಬಂಧಿಯಾಗಿಟ್ಟು ಅವುಗಳ ಸ್ವಾತಂತ್ರ್ಯ ಕಸಿಯುವುದರಲ್ಲಿಲ್ಲ.. ಅವುಗಳ ಬಿಡುಗಡೆಯಲ್ಲಿದೆ..  ಇಲ್ಲಿ ಕಾಡಲ್ಲಿದೆ.. ಹರಿವ ನದಿಗೆ ಅಣೆಕಟ್ಟು ಕಟ್ಟಿ ತಡೆಯುವುದರಲ್ಲಿಲ್ಲ.. ಸ್ವಚ್ಛಂದವಾಗಿ ಹರಿಯುವುದರಲ್ಲಿದೆ.. ಅದರ ಮೂಲ ಹುಟ್ಟು, ಉದ್ದೇಶವನ್ನು ನಾವು ನಮ್ಮ ಅನುಕೂಲಕ್ಕೆ ಬಳಸಲು ತಿರುಚುತ್ತೇವೆ…

“ಈ ಪ್ರಕೃತಿಯ ಲಯವನ್ನು ನಾವು ನಿಯಂತ್ರಣದಲ್ಲಿ ಇರಿಸಿದಂತಾಗಿಲ್ಲವೇ..? ಪ್ರಕೃತಿ ಎಷ್ಟು ರಮಣೀಯವೋ, ಅಷ್ಟೇ ರೌದ್ರವೂ, ಭೀಕರವೂ ಆಗಬಲ್ಲದು .. ಈಗ ಒಂದು ಲಯದಲ್ಲಿ ಎಲ್ಲವೂ ಸಾಗುತ್ತಿದೆ.. ಅದು ಮುನಿದಾಗ ಆ ಲಯ ತಪ್ಪಿದಾಗ ಅದರ ಕರಾಳ ಮುಖದ ದರ್ಶನ ನಮಗೆ ಆಗಬಹುದೇನೋ..”

“ಈಗೇನು.. ಬರೀ ಭಾಷಣ ಕೊಡುತ್ತಾ ಕೂರುವೆಯೋ.. ಅಥವಾ ಬರುವೆಯೋ.. ನಾನೇ ಮಾತುಗಾರ ಅಂದ್ರೆ.. ನೀನು ನನಗಿಂತ ಒಂದು ತೂಕ ಹೆಚ್ಚೇ ಇದೀಯಾ.. ನೀನು ಮೌನ ಇರೋದೇ ಲೇಸು.. ನೀನು ಓದಿರುವ ಪುಸ್ತಕ ಜ್ಞಾನ ನಿನಗೆ ಇಷ್ಟೆಲ್ಲಾ ವಿಚಾರವಂತನಾಗಿ ಮಾತನಾಡಿಸುತ್ತೇ ಅಂದರೆ.. ನೀನು ನಿಜಕ್ಕೂ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕನಾಗಿದ್ದು  ಹೌದೇ ಅನಿಸುತ್ತೆ..? ಅಥವಾ ಪೂರ್ವ ಜನ್ಮದಲ್ಲಿ ನೀನು ಸನ್ಯಾಸಿಯೋ, ಏನೋ ಆಗಿದ್ದು ಅದರ ವಾಸನೆ ಇನ್ನೂ ಈ ಜನ್ಮದಲ್ಲಿ  ಉಳಿದಿರಬೇಕು..! ಹಾಗಾಗಿ ನಿನ್ನವರನ್ನು ಇಷ್ಟು ಬೇಗ ನಿನ್ನಿಂದ ಕಸಿದುಕೊಂಡು ಮತ್ತೆ ನಿನ್ನನ್ನು ಹೀಗೆ ಮಾಡಿರಬೇಕು.. ಬದುಕಿನ ಪ್ರತೀ ಘಟನೆಯ ಹಿಂದೆ ಒಂದು ಬಲವಾದ ಉದ್ದೇಶವಂತೂ ಇದ್ದೇ ಇರುತ್ತದೆ..” ಜಂಪಯ್ಯ ಅವನ ಮಾತಿನ ಝರಿಯ ಆಳದಲ್ಲಿ ಈಜಾಡುತ್ತಾ ಮನದಲ್ಲೇ ವಿಶ್ಲೇಷಿಸಿಕೊಂಡ.

“ಇಲ್ಲಿ ಸಾಮಾನ್ಯ ಜ್ಞಾನ ಎಲ್ಲಿ ಉಪಯೋಗವಾಗುತ್ತೆ..? ಓದದೇ, ಸರ್ಟಿಫಿಕೇಟುಗಳಿಲ್ಲದೇ ಏನೂ ನಡೆಯದಲ್ವಾ..? ಇಲ್ಲಿನ ವಿಶ್ವವಿದ್ಯಾನಿಲಯಗಳು ನಿಮಗೆ ಕಲಿಸಿ, ಡಿಗ್ರಿ ಕೊಟ್ಟು ಕೆಲಸಕ್ಕೆ ಲಾಯಕ್ಕು ಮಾಡಿ ಹೊರ ಕಳಿಸುವ ಕಾರ್ಖಾನೆಗಳಷ್ಟೇ..  ಅಲ್ಲಿ ಹಾಕಿದ ಬಂಡವಾಳ ನಂತರ ಕೆಲಸಕ್ಕೆ ಸೇರಿ ಆದಾಯವಾಗಿ ಪರಿವರ್ತಿಸಿಕೊಳ್ಳಬೇಕು.. ಯಾವ ವಿಶ್ವವಿದ್ಯಾನಿಲಯವೂ, ನಿಮಗೆ ಬದುಕಿನ ಪಾಠವನ್ನೂ ಕಲಿಸದು.. ನೀವು ಅದನ್ನು ಅನುಭವಿಸಿಯೇ ಕಲಿಯಬೇಕು.. ಅದೇ ಸತ್ಯ ತಾನೇ..?”

ಜಂಪಯ್ಯ ಮುಂದೆ ಮೌನಕ್ಕೆ ಮೊರೆ ಹೋದವ ಕಾಯಕನಾಥನನ್ನು ತದೇಕ ಚಿತ್ತದಿಂದ ನೋಡತೊಡಗಿದ.

ಸಾಧಾರಣ ಬಟ್ಟೆಯಲ್ಲಿ ಬದುಕಿನ ಆಸಕ್ತಿಯನ್ನೇ ಕಳೆದುಕೊಂಡ ನಿರ್ಮೋಹಿ ಕಾಯಕನಾಥ ಅವನ ಕಣ್ಣಿಗೆ ವಿಲಕ್ಷಣವಾಗಿ ಕಂಡ. ಇಷ್ಟೆಲ್ಲಾ ತಿಳುವಳಿಕೆಯಿಂದ ಮಾತನಾಡುವ ಕಾಯಕನಾಥ, ಈ ರೀತಿ ಕಾಡಿನಲ್ಲಿ ಬಂದು ಏಕೆ ವಾಸವಾದ..? ನೋವನ್ನು ಮೆಟ್ಟಿ ನಿಲ್ಲಲಾರದಷ್ಟು ಬಲಹೀನತೆಯೇ..? ಅಥವಾ ತನ್ನವರ ಮೇಲಿದ್ದ ಅಪರಿಮಿತವಾದ ಪ್ರೀತಿಯೇ..? ಜೀವನದ ಪರಮ ಸತ್ಯವನ್ನು ಅರಗಿಸಿಕೊಳ್ಳಲಾರದ ದುರ್ಬಲತೆಯೇ..?

ಇಷ್ಟು ದಿನ ಸಂಸಾರದ ಸಾಗರದಲ್ಲಿ ಮುಳುಗಿದಾಗ ಇವನಿಗೆ ಈ ಹೊಳಹುಗಳೆಲ್ಲಾ ಈಗ ಯಾವುದೋ ಅಂತಕಕ್ಷು ಜಾಗೃತವಾದಂತೆ ಮಾತನಾಡುತ್ತಾನಲ್ಲಾ..! ಇವನು ನಿಜಕ್ಕೂ ಒಬ್ಬ ಸಾಧಾರಣ ಕಾರ್ಮಿಕನೇ..? ಈ ರೀತಿಯ ವೇಷದಲ್ಲಿರುವ ಅಸಾಧಾರಣ ತಪಸ್ವಿಯೇ..? ಇವನ ಮನಸ್ಸು, ನಮ್ಮಂಥ ಸಾಧಾರಣ ಹುಲುಮಾನವ ಯೋಚನಾ ಲಹರಿಗಿಂತಲೂ ಭಿನ್ನವಾಗಿ ಹೇಗೆ ಯೋಚಿಸುತ್ತದೆ..?

ನೋವೆಂಬುದು ಮನುಷ್ಯನ ಮನಸ್ಥಿತಿಯನ್ನು ಇಷ್ಟೊಂದು ಹರಳುಗಟ್ಟಿಸಬಹುದೇ..? ಭಾವನೆಗಳ ಮಹಾಪೂರವನ್ನು, ಮನುಷ್ಯನ ಸಹಜವಾದ  ದೌರ್ಬಲ್ಯ ಆಸೆ , ಬಯಕೆಗಳನ್ನು  ಸಂಯಮದ ಹಗ್ಗದಲ್ಲಿ ಬಂಧಿಸಿ ಕಟ್ಟಿ ಹಾಕಲು ಸಾಧ್ಯವೇ..?’

ದೂರಕ್ಕೆ ಕಣ್ಣಿಗೆ ಕಾಣುತ್ತಿದ್ದ ಹಳೇ ಕಾಲದ ಸೇತುವೆಯನ್ನು, ಕಾಯಕನಾಥ ತನ್ನ ಎಂದಿನ ನಿರ್ಲಿಪ್ತ ಮನೋಧರ್ಮದೊಂದಿಗೆ ನೋಡುತ್ತಾ ಕುಳಿತಿದ್ದ. ಆ ಸೇತುವೆ ಅವನ ಕಣ್ಣಿಗೆ ಬೇರೆಯೇ ರೂಪಕಗಳಲ್ಲಿ ಗೋಚರಿಸುತ್ತಿತ್ತು.  ಆಗಸದ ಮೋಡಗಳು ಬಾಗಿ ಕೆಳಗೆ ಮುತ್ತಿಕ್ಕುವಂತಿದ್ದು, ಸುತ್ತಲೂ ಹಬ್ಬಿದ್ದ ಹಸಿರು ಕಾನನದ ನಡುವಿನ ಆ ಸೇತುವೆ ಇಹಕೂ, ಪರಕೂ ನಡುವಿನ ಒಂದು ಕೊಂಡಿಯಂತೆ ಅವನ ಕಣ್ಣಿಗೆ ಕಾಣಿಸಿತ್ತು.

‘ಈ ಸೇತುವೆ ಬರಿಯ ಊರಿನಿಂದ ಊರಿಗೆ ಸೇರಿಸುತ್ತದೆಯೋ, ಮನಸ್ಸಿನಿಂದ ಮನಸ್ಸಿಗೆ ಸೇರಿಸುತ್ತದೆಯೋ ಅಥವಾ, ಇಹದಿಂದ ಪರಕೋ, ಬಂಧನದಿಂದ ಮುಕ್ತಿಗೋ..! ಎದುರಿದ್ದ ಸೇತುವೆ ಏರದೇ ಮತ್ತೆ ಬಂದ ಹಾದಿ ಹಿಡಿದರೆ, ಕಾಡು – ಅಧ್ಯಾತ್ಮ – ಮುಕ್ತಿ..! ಆ ಸೇತುವೆ ಏರಿ ಊರು ಹಿಡಿದರೆ ಮತ್ತೆ ಇಹದ ಮಾಯೆ.. ಬಂಧನ…!

ಮಾಗಿದ ಹಣ್ಣೊಂದು ಇನ್ನೂ ಅದರ ತೊಟ್ಟಿನ ಬಲದಲ್ಲಿ ನಿಂತಂತಿದೆ ತನ್ನ ಸ್ಥಿತಿ.. ಇನ್ನೂ ಹಿಡಿದಿದ್ದರೆ ಬಂಧನ ..

ಕಳಚಿ ನೆಲಕ್ಕೆ ಬಿದ್ದರೆ ಬಿಡುಗಡೆ.. ಹಿಡಿದಿಡುವುದು, ಬೀಳಿಸುವುದು ಎಲ್ಲವೂ ಪರಿಪಕ್ವತೆಯನ್ನೂ ಬೇಡುತ್ತದೆ. ಆಯಾ ಸಮಯ ಸಂದರ್ಭ  ಬಂದಾಗ ಎಲ್ಲವೂ ಪ್ರಕೃತಿದತ್ತವಾಗಿ ನಡೆದುಹೋಗುತ್ತದೆ. ಮನುಷ್ಯನ ಕೈಯ್ಯಲ್ಲೆನಿದೆ,,? ಅದರ ನಿಯಂತ್ರಣದಲ್ಲಿರುವ ಒಂದು ಅಣುವಿನಂತೆ..

ಎಷ್ಟೇ ತಿಳುವಳಿಕೆ, ಜ್ಞಾನ, ಸ್ಥಾನ ಮಾನ, ಪದವಿ, ಅಹಂಭಾವ ಇದ್ದರೂ ಅದೆಲ್ಲವೂ ಪ್ರಕೃತಿಯ ಮುಂದೆ ಒಂದು ಅಣು ಮಾತ್ರ.. ಆ ಸತ್ಯ ಸಾಕ್ಶಾತ್ಕಾರವಾದರೆ, ಅವನಿಗೆ ತಾನೆಷ್ಟು ಸಣ್ಣವನೆಂದು ಮನವರಿಕೆಯಾಗುತ್ತದೆ. ಕಾಯಕನಾಥ ತನ್ನ ಯೋಚನೆಯ ಪದರುಗಳ ನಡುವೆ ಹೊರಳಾಡುತ್ತಿದ್ದಾಗ, ಅವನಿಗೆ ಯಾವುದೋ ಚೀತ್ಕಾರ ಕೇಳಿಸಿತು.

‍ಲೇಖಕರು Avadhi

November 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: