ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ಸೊರಟೂರು ಹೊಸ ಕವಿತೆ- ನಮ್ಮ ಸರದಿಯೂ ಬರಬಹುದೇನೊ! 

ಸದಾಶಿವ ಸೊರಟೂರು

—-

ಗೂಡಲ್ಲೇ ಬೆಚ್ಚಿಗಿರುವ 

ಮರಿ ಹಕ್ಕಿಗೇನು ಗೊತ್ತು

ಹಾರಿ‌ ಹೋದ ಅಮ್ಮ ಸೋಲುವ ತನ್ನ 

ರೆಕ್ಕೆಗಳನು ಸಂಭಾಳಿಸುವುದು..?

ಕಣ್ಣಲ್ಲಿ‌, ಬಾಯಿ ತೆರೆದೇ ಕೂತ

ಪುಟ್ಟ ಕಂದನೇ ಇರುವಾಗ

ಪದೇ ಪದೇ ತಪ್ಪುತ್ತಿರುವ

ದಾರಿಯ ಕುರಿತು ಯಾರಿಗೆ ಅದು

ತನ್ನ ದೂರು ನೀಡಬೇಕು? 

ಒಂದು ಕಾಳಿಗಾಗಿ ಪಾಪ

ಅದೆಷ್ಟು ದೂರ ಹಾರಬೇಕು

ಎಷ್ಟು ಜನರ ಕಣ್ಣು ತಪ್ಪಿಸಬೇಕೊ

ಭಯದಲ್ಲಿ ಎಷ್ಟು ನಡುಗ ಬೇಕೊ..

ತಲೆ ತುಂಬಾ ತನ್ನ ಮರಿಯೇ 

ತುಂಬಿರುವಾಗ

ಅರಳಿದ ಹೂವು ನೋಡದೆ

ಹರಿವ ಝರಿಯ ಕೇಳದೆ

ಹಸಿರ ಮರವ ನೇವರಿಸದೆ

ಹೇಗೆ ಉಳಿಯಬೇಕೊ? 

ಹಾರಿ ಹಾರಿ ದಣಿದರೂ, ಕೊಕ್ಕಲ್ಲಿ 

ತಿಂಡಿ ಹಿಡಿದು ಬಳಲಿದರೂ

ಸೋತು ಸೋತೆ ಹಾರಬೇಕು

ಮತ್ತೆ ಗೂಡಿಗೆ

ಖಾಲಿ ಮುಗಿಲು ಕರೆದರೂ

ಮಲಗಲಾದೀತೆ ಅಲ್ಲಿ

ಎಲ್ಲಾ ಮರೆತು? 

ಗೂಡಿನ ಮರಿ ತೆಗೆಯಬಹುದೇ

ಹೇಳಿ ತನ್ನ ವರಾತ? 

ಏಕಿಷ್ಟು ತಡ ಎಂದು ಹೂಡಬಹುದೇ

ಜಗಳ?

ಅಮ್ಮ ದಿನವಿಡೀ ಹೀಗೆ ಕೂತು

ಕಾದೆನಮ್ಮ ತೆರೆದ ಬಾಯಿ 

ತೆರೆದುಕೊಂಡು

ಕಣ್ಣಲ್ಲಿ ಕೂತ ನಿದ್ದೆ ಒರೆಸಿಕೊಂಡು

ನೀ ಕಲಿಸಿ ಹೋದ ಹಾಡ

ಹಾಡಿಕೊಂಡು.. ಎಂದು!

ಅಮ್ಮ ಕಣ್ಣು ತುಂಬುತ್ತಾಳೆ

ಮಾತು ನುಂಗುತ್ತಾಳೆ ತನ್ನ ಹಸಿವಿಗೆ

ಸೋತ ಅಮ್ಮನ ರೆಕ್ಕೆಯ ಬಗ್ಗೆ ಏನು

ಗೊತ್ತು ಬೆಚ್ಚಗಿರುವ ಮರಿ ಹಕ್ಕಿಗೆ..

ಅದರ ಸರದಿಯೂ ಬರಬೇಕೇನೊ

ಅದು ಹಾರಬೇಕೇನೊ

ತನ್ನ ಮರಿಯೊಂದನ್ನು

ಹೀಗೆ ಗೂಡಿನಲ್ಲಿ ಬಿಟ್ಟು..

ಆಕಾಶದ ನೀಲಿಯನು ಮೆಚ್ಚದೆ

ಸೋತ ರೆಕ್ಕೆ ಸಂಭಾಳಿಸಿಕೊಂಡು

ಮನೆಗೆ ಹಾರಬೇಕೇನೊ..?

ಸೂಳ್ಪಿಡೆಯಲಪ್ಪುದು ಕಾಣಾ..

ಸರಿ ಇರಬಹುದೇನೊ! 

‍ಲೇಖಕರು avadhi

4 October, 2023

1 Comment

  1. Kusuma Patel

    ಕವನ ತುಂಬಾ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading