ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ದೊಡಮನಿ ಕವಿತೆ – ಅವನಲ್ಲಿ, ನಾನಿಲ್ಲ…

ಡಾ ಸದಾಶಿವ ದೊಡಮನಿ 

ತುಟಿಗೆ ತುಸು ತುಟಿ
ಬಾಯಿಗೆ ತುಸು ಮೊಲೆ
ಯಿತ್ತರೆ
ಮಗುವಿನ ಹಾಗೆ ಸುಮ್ಮನೆ
ಮಲಗಿಕೊಂಡು ಬಿಡುತ್ತಾನೆ

ಇರುಳ ನಾಭಿಯಲಿ
ಕರಿ-ಬಿಳಿ ಮೋಡ ಕೂಡಾಡಿ
ಇಳೆ ಎದೆಯ ಮೇಲೆ
ವೀರ್ಯ ಮಳೆ ಹನಿ
ಚೆಲ್ಲಿದರೂ
ನಿದ್ರೆಯಿಂದ ಎದ್ದೇಳುವುದಿಲ್ಲ

ನಡೆಯದ ಹಳೆಯ ನೆನಪು ನಾಣ್ಯವನು
ಹಲ್ಲಲ್ಲಿ ಕಡಿಯುತ್ತಲೇ
ಮಗ್ಗಲು ಬದಲಿಸುತ್ತಾನೆ
ಹಗ್ಗ ಕಡಿಯುವುದನ್ನು
ಕನಸಲ್ಲೂ ವಿರೋಧಿಸುತ್ತಾನೆ

ಹಸಿರು ತಪ್ಪಲಿನ ಮೇಲೆ
ಉರುಳಾಡಿ, ತಗ್ಗು ದಿನ್ನೆಯ ಮೇಲೆ
ಹೊರಳಾಡಿ, ಕಪ್ಪುಗುರುಳಿನ ತುಂಬಾ
ಮೋರೆ ಹುದುಗಿಸಿ, ಹೆರಳ ವಾಸನೆಯಲಿ
ಜಗವ ಮರೆಯತ್ತಾನೆ

ಮೇಲಕ್ಕೇರುವುದಿಲ್ಲ
ಕೆಳಕ್ಕಿಳಿಯುವುದಿಲ್ಲ
ಹೊಳೆ-ಹಳ್ಳ, ಕೆರೆ-ಕಾಲುವೆ
ಗಳಲ್ಲಿ ಮೀಯುವುದಕ್ಕಲ್ಲ;
ಕೈ, ಕಾಲು ತೊಳೆಯುವುದಕ್ಕೂ
ಇಳಿಯುವವನಲ್ಲ
ಹರೆಯಕ್ಕೆ ಹಣ್ಣಾಗಿ
ಬಾಳ್ವೆಗೆ ಕಣ್ಣಾಗಿ
ದಿಂಡೂರಕಿ ಹಾಕುತ್ತಾ,
ಸಾಗುತ್ತಿಹನು ನಲ್ಲ
ಅವನಲ್ಲಿ ನಾನಿಲ್ಲ

‍ಲೇಖಕರು Admin

29 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading