ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 1

ಮೂಲ : ನಿಕೊಲಾಯ್ ಗೊಗೊಲ್
ಅನು : ಜಿ. ವಿ. ಕಾರ್ಲೊ

ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್ ದಸ್ತವೆಸ್ಕಿ ಪ್ರಮುಖ. ನಾವೆಲ್ಲಾ ಗೊಗೊಲಾನ The Overcoat ನಿಂದ ಹೊರ ಬಂದವರೆಂದು ಅವನು ಗೊಗೊಲನನ್ನು ಸ್ಮರಿಸುತ್ತಾನೆ.

ಗೊಗೊಲ್, ಅವನ ಸಮಕಾಲಿನ ರಶ್ಯನ್ ಸಮಾಜವನ್ನು ಲೇವಡಿ ಮಾಡುವ ನಾಟಕ The Inspector General, ಮಾನವ ಸರಕುಗಳಲ್ಲೊಂದಾದ ಗುಲಾಮರ ಲೇವಾದೇವಿಯ The Dead Souls ಕಾದಂಬರಿ ಮತ್ತು ಪ್ರಭುತ್ವವನ್ನು ಅಣಕಿಸುವ, ಬಡ ಗುಮಾಸ್ತನ ಕತೆ The Overcoat ಮತ್ತು ಪ್ರಸ್ತುತ ಅಧಿಕಾರಿಶಾಹಿಯ ಒಣ ಪ್ರತಿಷ್ಠೆ ಮತ್ತು ಮಹತ್ವಾಕಾಂಕ್ಷೆಯ The Nose ಓದುವಾಗ, ‘ಮೂಗು’ ಇಲ್ಲದಿರುವುದು ಎಷ್ಟೊಂದು ಅನಾಹುತಾಕಾರಿಯಾಗಬಲ್ಲದೆಂದು ನನಗೆ ‘ರಾಮಾಯಣ’ದ ‘ಶೂರ್ಪನಖಿ’ಯ ಪಾತ್ರ ಕಣ್ಣ ಮುಂದೆ ಬಂದಿತು.

1

ಮಾರ್ಚ್ 25ರಂದು ಸೈಂಟ್ ಪೀಟರ್ಸ್​ಬರ್ಗ್​​ನಲ್ಲಿ ಒಂದು ಅಪೂರ್ವ ಘಟನೆ ಘಟಿಸಿತು. ಅಂದು ಬೆಳಿಗ್ಗೆ ಎಂದಿಗಿಂತ ಮೊದಲೇ ಎಚ್ಚತ್ತ ಕ್ಷೌರಿಕ ಇವಾನ್ ಯಾಕೊವ್‌ಲೆವಿಚನಿಗೆ ಒಲೆಯೊಳಗೆ ಬೇಯುತ್ತಿರುವ ತಾಜಾ ಬ್ರೆಡ್ಡಿನ ಸುವಾಸನೆ  ಒಮ್ಮೆಲೇ ಬಡಿದೆಬ್ಬಿಸಿತು. ಅವನ ಕಾಫಿ ಪ್ರಿಯೆ ಮಡದಿ ಒಲೆಯಿಂದ ಬೆಂದ ಬ್ರೆಡ್ಡುಗಳನ್ನು ಹೊರಗೆಳೆಯುತ್ತಿದ್ದಳು.

“ಪ್ರಸ್ಕೋವ್ಯಾ ಒಸಿಪೋವ್ನಾ, ನನಗಿವತ್ತು ಕಾಫಿ ಬೇಡ ಕಣಮ್ಮ. ಬಿಸಿ ಬಿಸಿ ಬ್ರೆಡ್ಡು, ಜೊತೆಗೆರಡು ಈರುಳ್ಳಿ ಕೊಟ್ಟು ಬಿಡು.ಅಷ್ಟೇ ಸಾಕು,” ಎಂದ. ಇವಾನನಿಗೆ ಕಾಫಿಯೂ ಬೇಕಿತ್ತು. ಆದರೆ,ಎರಡೂ ಜತೆ ಜತೆಗೆ ಸಿಗುವುದಿಲ್ಲವೆಂದು ಅವನಿಗೆ ಮನದಟ್ಟಾಗಿತ್ತು. 

“ಬ್ರೆಡ್ಡಷ್ಟೇ ಅಲ್ವ, ತಿನ್ನಲಿ ಮುದಿ ಗೂಬೆ. ಅವನ ಪಾಲಿನ ಕಾಫಿ ನಾನೇ ಕುಡಿಯುತ್ತೇನೆ,” ಎಂದುಕೊಂಡಳು ಒಸಿಪೋವ್ನಾ.

ಇರುಳು ಅಂಗಿಯ ಮೇಲೊಂದು ನಿಲುವಂಗಿಯನ್ನು ತೊಟ್ಟು ಇವಾನ್ ಊಟದ ಮೇಜಿನ ಬಳಿ ಕುಳಿತುಕೊಂಡು ಈರುಳ್ಳಿ, ಚೂರಿ,ಉಪ್ಪಿನ ಭರಣಿಯನ್ನು ತನ್ನೆಡೆಗೆ ಎಳೆದುಕೊಂಡು ಬ್ರೆಡ್ಡನ್ನು ಕತ್ತರಿಸುವ ಕಾಯಕಕ್ಕೆ ತಯಾರಾದ.

ಬ್ರೆಡ್ಡನ್ನು ಎರಡು ಭಾಗ ಮಾಡಿದ್ದೇ ಒಂದು ಭಾಗದ ಬ್ರೆಡ್ಡಿನ ಮಧ್ಯ ಭಾಗದಲ್ಲಿ ಅವನಿಗೆ ಎಂಥದ್ದೊ ಬಿಳಿಯ ಅಪರಿಚಿತ ವಸ್ತು ಕಾಣಿಸಿತು. ಅವನಿಗೆ ಆಶ್ಚರ್ಯವಾಯಿತು. ಅವನು ಚೂರಿಯಿಂದ ಅದನ್ನು ಬಿಡಿಸುತ್ತಾ ತನ್ನ ಬೆರಳಿನಿಂದ ಮುಟ್ಟಿ ನೋಡಿದ.

ಅದು ಗಟ್ಟಿಯಾಗಿತ್ತು. “ಇದೇನಪ್ಪಾ?!” ಎನ್ನುತ್ತಾ ಇವಾನ್ ಎರಡು ಬೆರಳುಗಳಿಂದ ಅದನ್ನು ಹಿಡಿದು ಹೊರಗೆಳೆದ.

ಅದೊಂದು ಮೂಗಾಗಿತ್ತು.

ಮೇಜಿನ ಮೇಲೆ ಬಾಗಿದ್ದ ಇವಾನ್ ಒಮ್ಮೆಲೇ ಹೌಹಾರಿ ಕುರ್ಚಿಗೊರಗಿ ಬ್ರೆಡ್ಡನ್ನೇ ಗಮನಿಸಿದ. ಅದು ಮೂಗೇ ಆಗಿತ್ತು. ಸಂಶಯವಿರಲಿಲ್ಲ. ಅಷ್ಟೇ ಅಲ್ಲ, ಅದು ಅವನಿಗೆ ಚಿರಪರಿಚಿತ ಮೂಗಾಗಿತ್ತು. ಅವನ ಮುಖ ಆಘಾತದಿಂದ ವಿವರ್ಣವಾಯಿತು. ಬ್ರೆಡ್ಡಿನೊಳಗೆ ಮೂಗು ನೋಡುತ್ತಲೇ ಅವನ ಹೆಂಡತಿ ಮಾರಿಯಂತಾದಳು.

“ನೀನೊಬ್ಬ ರಾಕ್ಷಸ. ಕುಡಿದ ಮತ್ತಿನಲ್ಲಿ ಯಾರ ಮೂಗನ್ನು ಕತ್ತರಿಸಿ ಮನೆಗೆ ತಂದಿದೀಯಾ? ನಾನು ಈಗಲೇ ಪೊಲೀಸರಿಗೆ ದೂರು ಕೊಡುತ್ತೇನೆ,” ಎಂದು ಚೀರಿದಳು. “ನಿನ್ನ ಮೂವರು ಗಿರಾಕಿಗಳು ಮುಖಕ್ಷೌರ ಮಾಡಿಸಿಕೊಳ್ಳುವಾಗ ನೀನು ಕಿತ್ತು ಬರುವಷ್ಟು ಜೋರಾಗಿ ಅವರ ಮೂಗು ಹಿಡಿದೆಳೆಯುತ್ತೀಯ ಎಂದು ಅವರ ಹೆಂಡತಿಯರು ನನ್ನ ಬಳಿ ಹೇಳುತ್ತಿದ್ದರು. ನೀನೊಬ್ಬ ಸೈತಾನ.”

ಇವಾನನಿಗೆ ತನ್ನ ಮಡದಿಯ ಹಾರಾಟ ಚೀರಾಟ ಕೇಳಿಸಲೇ ಇಲ್ಲ. ಅವನ ಗಮನವೆಲ್ಲಾ ಆ ಮೂಗಿನ ಮೇಲೆಯೇ ಕೇಂದ್ರಿಕೃತವಾಗಿತ್ತು. ಕೊನೆಗೂ ಅವನಿಗೆ ಆ ಮೂಗು ಸರ್ಕಾರಿ ಆಸ್ತಿ ಮೌಲ್ಯಮಾಪಕ ಕೊವಾಲ್ಯೊವ್‌ನದು ಎಂದು ಹೊಳೆಯಿತು. ಕೊವಾಲ್ಯೊವ್ ಪ್ರತಿ ಬುಧವಾರ ಮತ್ತು ಭಾನುವಾರಗಳಂದು ಅವನ ಬಳಿ ಮುಖಕ್ಷೌರ ಮಾಡಿಸಿಕೊಳ್ಳಲು ಬರುತ್ತಿದ್ದ.

“ನೀನೊಂದು ಗಳಿಗೆ ಸುಮ್ನಿರ‍್ತೀಯಾ ಪ್ರಸ್ಕೋವ್ಯಾ!” ಅವನು ಕೂಗಿ ಹೇಳಿದ. “ಸದ್ಯಕ್ಕೆ ಈ ಮೂಗನ್ನು ಕಾಗದದಲ್ಲಿ ಸುತ್ತಿ ಅಲ್ಲಿ ಮೂಲೆಯಲ್ಲಿ ಇಟ್ಟಿರುತ್ತೇನೆ. ನಾನು ಅಂಗಡಿಗೆ ಹೋಗುವಾಗ ಎಲ್ಲಾದರೂ ಬಿಸಾಕುತ್ತೇನೆ,” ಎಂದ.

“ದರಿದ್ರದವನೇ ಆ ಕೊಯ್ದ ಮೂಗು ಒಂದರೆಗಳಿಗೆಯೂ ನನ್ನ ಮನೆಯಲ್ಲಿರಕೂಡದು. ನೀನೊಬ್ಬ ಕುಡುಕ ಬೇವರ್ಸಿ. ಕುಡಿದಿದ್ದ ಮತ್ತಿನಲ್ಲಿ ಯಾರ‍್ಯಾರದೋ ಮೂಗುಗಳನ್ನು ಕೊಯ್ದು ತಂದು ಮನೆಯಲ್ಲಿಡುತ್ತೀಯ! ನಾನು ನಿನ್ನನ್ನು ಪೊಲೀಸರಿಂದ ಬಚಾವು ಮಾಡುತ್ತೇನೆಂದು ತಿಳಿದರೆ ನೀನೊಬ್ಬ ದೊಡ್ಡ ಮೂರ್ಖ. ನಿನ್ನ ದರಿದ್ರ ಮುಖಕ್ಕೆ ಬೆಂಕಿ ಹಾಕಾ!! ಇದೇ ಕ್ಷಣ! ಆ ದರಿದ್ರ ಮೂಗು ನಮ್ಮನೇಲಿ ಇರಲೇಬಾರದು. ಏನು ಬೇಕಾದರೂ ಮಾಡು, ನನಗೊತ್ತಿಲ್ಲ.”

ಇವಾನ್ ಯಾಕೊವ್‌ಲೆವಿಚ್ ಮರಗಟ್ಟಿ ಹೋಗಿದ್ದ. ಅವನ ಮೆದುಳು, ಏನು? ಎತ್ತ? ಸಂಪೂರ್ಣ ನಿಷ್ಕ್ರಿಯವಾಗಿತ್ತು

“ನನಗೊಂದೂ ಅರ್ಥವಾಗುತ್ತಿಲ್ಲ!!” ತಲೆ ಕೊಡವಿಕೊಳ್ಳುತ್ತಾ ಇವಾನ್ ಹೇಳಿದ. “ಸರಿ. ಆ ಮೂಗು ನಾನೇ ತಂದೆ ಅಂತಿಟ್ಕೊ. ಅದು ನಿನ್ನ ಹಿಟ್ಟಿನೊಳಕ್ಕೆ, ನಿನ್ನ ಬ್ರೆಡ್ನೊಲೆಗೆ ಹೇಗೆ ಹೋಯ್ತು? ತಲೆ ಬುಡ ಒಂದೂ ಅರ್ಥವಾಗ್ತಿಲ್ಲ.”

ಇತ್ತ ಹೆಂಡತಿಯ ವಾಗ್ದಾಳಿ, ಅತ್ತ ಪೊಲೀಸರ ಭಯ. ಇವಾನನ ತಲೆ ಕೆಟ್ಟು ಹೋಯಿತು. ಅವನ ಕಣ್ಣ ಮುಂದೆ ಬೆಳ್ಳಿ ಚೌಕಟ್ಟಿನ ಕಡುಕೆಂಪು ಬಣ್ಣದ ಕಾಲರಿನ ಸಮವಸ್ತ್ರತೊಟ್ಟು ಬಗಲಿನಲ್ಲಿ ಖಡ್ಗ ಸಿಗಿಸಿಕೊಂಡಿರುವ ಪೊಲೀಸರ ಚಿತ್ರ ಸುಳಿಯಿತು. ಅವನು ಕಂಪಿಸತೊಡಗಿದ. ಕೊನೆಗೂ ತನ್ನ ಮಾಸಿದ ಕೊಳಕು ಪ್ಯಾಂಟನ್ನು ಏರಿಸಿ, ಬಣ್ಣಗೆಟ್ಟ ಶೂಗಳನ್ನು ಕಾಲುಗಳಿಗೆ ಸಿಕ್ಕಿಸಿಕೊಂಡ, ಕಾಗದದಲ್ಲಿ ಸುತ್ತಿದ್ದ ಮೂಗನ್ನು ಹಿಡಿದುಕೊಂಡು ಇವಾನ್ ಮನೆಯಿಂದ ಹೊರಬಿದ್ದ. ಅವನ ಹೆಂಡತಿ ಪ್ರಸ್ಕೋವ್ಯಾ ಒಸಿಪೋವ್ನಾ ಇನ್ನೂ ಗೊಣಗಾಡುತ್ತಲೇ ಇದ್ದಳು.

ಆ ದರಿದ್ರ ಮೂಗನ್ನು ಎಲ್ಲಾದರೂ ಎಸೆದುಬಿಟ್ಟು ಕೈ ತೊಳೆದುಕೊಳ್ಳಬೇಕೆಂಬುದೇ ಅವನ ಮೊದಲ ಉದ್ದೇಶವಾಗಿತ್ತು. ಅವನ ದುರಾದೃಷ್ಟಕ್ಕೆ ದಾರಿಯುದ್ದಕ್ಕೂ ಅವನ ಗೆಳೆಯರು, ಪರಿಚಿತರೇ ಸಿಗಬೇಕೇ ಇವತ್ತು? “ಏನಪ್ಪ ಇವಾನ್ ಇವತ್ತು ಇಷ್ಟೊಂದು ಬೇಗ ಅಂಗಡಿಯ ಕಡೆಗೆ ಹೊರಟಿದ್ದೀಯ? ಈ ಹೊತ್ನಲ್ಲಿ ಯಾರಪ್ಪ ಕ್ಷೌರ ಮಾಡಿಸಿಕೊಳ್ಳುತ್ತಾರೆ?” ಎನ್ನುತ್ತಾ, ಅವನಿಗೆ ಆ ಮೂಗನ್ನು ಎಸೆಯಲು ಆಸ್ಪದವೇ ಸಿಗದಂತೆ ಮಾಡಿದರು. ಒಮ್ಮೆ ಯಶಸ್ವಿಯಾದನಾದರೂ ಒಬ್ಬ ಪೊಲೀಸ ನೋಡಿಯೇ ಬಿಟ್ಟ. ಕೈಯಲ್ಲಿದ್ದ ಉದ್ದನೆಯ ಈಟಿ ಕೊಡಲಿಯನ್ನು ಝಳಪಿಸುತ್ತಾ, “ಎತ್ತು, ಎತ್ತು. ಎಲ್ಲಿ ಬೇಕಲ್ಲಿ ಕಸ ಹಾಕುತ್ತೀಯ?” ಎಂದು ಗದರಿದ. ಇವಾನ್ ತಕ್ಷಣ ಅದನ್ನೆತ್ತಿ ತನ್ನ ಜೇಬಿನೊಳಗೆ ಅಡಗಿಸಿಟ್ಟ. ಹೊತ್ತು ಕಳೆದಂತೆ ಇವಾನ್ ಯಾಕೊವ್‌ಲೆವಿಚ್ ಹತಾಶನಾಗತೊಡಗಿದ. ಒಂದೊಂದೇ ಅಂಗಡಿಗಳು ತೆರೆಯುತ್ತಿದ್ದವು ಮತ್ತು ರಸ್ತೆಯಲ್ಲಿ ಜನಸಂಚಾರವೂ ಹೆಚ್ಚಾಗತೊಡಗಿತು.

ಇವಾನ್ ಕೊನೆಗೆ ಸೈಂಟ್ ಐಸಾಕ್ ಸೇತುವೆಯ ಮೇಲೆ ಹೋಗಿ ತನ್ನ ಜೇಬಿನಲ್ಲಿದ್ದ ಆ ದರಿದ್ರ ಮೂಗನ್ನು ಯಾರೂ ನೋಡದಂತೆ ನೆವಾ ನದಿಗೆ ಎಸೆಯಲು ತೀರ್ಮಾನಿಸಿ ಅತ್ತ ಕಡೆಗೆ ಹೆಜ್ಜೆ ಹಾಕತೊಡಗಿದ. ಈ ಇವಾನನ ಕೆಲವು, ನೀವು ಗೌರವಿಸುವಂಥ ಉತ್ತಮ ಗುಣಗಳನ್ನು ನಿಮಗೆ ತಿಳಿಸದೆ ತಪ್ಪು ಮಾಡಿದೆ ಎಂದೆನಿಸುತ್ತದೆ. ರಶ್ಯಾದ ಎಲ್ಲಾ ಪ್ರಾಮಾಣಿಕ ಕೆಲಸಗಾರರಂತೆ ಇವಾನ್ ಕೂಡ ಒಬ್ಬ ಮಹಾನ್ ಕುಡುಕನಾಗಿದ್ದ. ಎಲ್ಲಾ ಗಂಡಸರ ಗಡ್ಡವನ್ನು ದಿನವೆಲ್ಲಾ ಬೋಳಿಸುತ್ತಾ ತನ್ನ ಗಡ್ಡಕ್ಕೆ ಕೈ ಹಚ್ಚಲು ಮರೆತವನು! ಕ್ಷೌರಕ್ಕೆ ಬಳಸುವ ಕೋಟನ್ನು, ಅದೂ ಕೂಡ ನಾರುತ್ತಿತ್ತು, ಬಿಟ್ಟರೆ ಬೇರೆ ಸಂದರ್ಭಕ್ಕೆ ಉಡುವ ಕೋಟನ್ನು ಕಂಡವನೇ ಅಲ್ಲ. ಅವನ ಬಳಿಗೆ ವಾರಕ್ಕೆರಡು ಭಾರಿ ಗಡ್ಡ ಬೋಳಿಸಿಕೊಳ್ಳಲು ಬರುತ್ತಿದ್ದ ಮೌಲ್ಯಮಾಪಕ ಕೊವಾಲ್ಯೊವ್ ಅವನಿಗೆ, “ನಿನ್ನ ಕೈಗಳು ನಾರುತ್ತಿವೆ ಕಣಯ್ಯ!” ಎನ್ನುತ್ತಿದ್ದ.

“ಅದೇಗೆ ಸಾಹೆಬ್ರೇ?” ಇವನು ಕೇಳುತ್ತಿದ್ದ.

“ನಂಗೊತ್ತಿಲ್ಲ. ಒಟ್ನಲ್ಲಿ ನಾರುತ್ತಿವೆ. ಅಷ್ಟೇ!”

ಇದನ್ನು ಕೇಳಿಸಿಕೊಂಡ ಇವಾನ್ ಯಾಕೊವ್‌ಲೆವಿಚ್ ಸಿಟ್ಟಾಗಿ ಒಂದು ಚಿಟಿಕೆ ನಶ್ಯ ಏರಿಸಿ ಕೊವಾಲ್ಯೊವ್‌ನ ಮುಖದ ತುಂಬಾ ಸೋಪು ನೊರೆಯನ್ನು ಬಳಿಯುತ್ತಿದ್ದ.

ಅಂತೂ ಇವಾನ್ ಯಾಕೊವ್‌ಲೆವಿಚ್ ಸೇತುವೆಯನ್ನು ತಲುಪಿದ. ಮೊದಲಿಗೆ ಇವಾನ್ ಸುತ್ತಲೂ ಒಮ್ಮೆ ದೃಷ್ಟಿ ಹರಿಸಿದ. ಸೇತುವೆಯ ಅಡ್ಡಗೋಡೆಯ ಬಳಿಗೆ ಸಾಗಿ ಕೆಳಗೆ, ಮೀನುಗಳನ್ನು ಹುಡುಕುವವನಂತೆ ನೋಡತೊಡಗಿ ಮೆಲ್ಲಗೆ ಮೂಗಿನ ಪೊಟ್ಟಣವನ್ನು ಕೆಳಗೆ ಎಸೆದ! ಅವನ ದೇಹದ ಮೇಲಿಂದ ಒಂದು ದೊಡ್ಡ ಭಾರವೊಂದು ಕಳಚಿ ಬಿದ್ದು ಹಗುರಾದಂತೆ ಅತೀವ ಖುಷಿಪಟ್ಟ. ಅವನ ಮೊಗದ ಮೇಲೊಂದು ವಿಸ್ತಾರವಾದ ಮಂದಹಾಸ ಮೂಡಿತು

ಖುಷಿಯಿಂದ ಸಿಳ್ಳೆ ಹೊಡೆಯುವ ಮೂಡಿನಲ್ಲಿ ಇವಾನ್ ಸೇತುವೆಯ ಮೇಲೆ ಸಾಗುತ್ತಿರಬೇಕಾದರೆ ಅವನ ಎದುರು ಸಕಲ ಸಮವಸ್ತ್ರಾಭೂಷಿತ ಪೊಲೀಸನೊಬ್ಬ ಬರುತ್ತಿರುವುದನ್ನು ನೋಡಿ ಹೌಹಾರಿದ.

“ಇಲ್ಲಿ ಬಾರಪ್ಪ!”ಪೊಲೀಸ್ ಅವನನ್ನು ಕರೆದ. ಇವಾನ್ ತನ್ನ ಟೊಪ್ಪಿಗೆಯನ್ನು ತೆಗೆದು ಪೊಲೀಸನಿಗೆ ವಂದಿಸುತ್ತಾ, “ನಮಸ್ಕಾರ ಸಾರ್…” ಎಂದ ಹಲ್ಲು ಕಿಸಿಯುತ್ತಾ.

“ನಾಟಕ ಬೇಡ. ಸೇತುವೆಯಿಂದ ಕೆಳಗೆ ಇಣುಕುತ್ತಾ ಏನು ಮಾಡುತ್ತಿದ್ದೆ ಹೇಳು?” ಎಂದ ಪೊಲೀಸ್.

“ಗಿರಾಕಿಯೊಬ್ಬರಿಗೆ ಮುಖಕ್ಷೌರ ಮಾಡಲು ಹೊರಟಿದ್ದೆ ಸರ್. ಹಾಗೆಯೇ ನದಿಯೊಳಗೆ ಪ್ರವಾಹ ಎಷ್ಟಿದೆ ಎಂದು ನೋಡುತ್ತಿದ್ದೆ.”

“ನೋಡು, ನಾನು ಇದನ್ನೆಲ್ಲಾ ನಂಬುವಷ್ಟು ಮುಠ್ಠಾಳನಲ್ಲ. ನಿಜ ಹೇಳು.”

“ಸರ್, ನಿಮಗೆ ಬೇಕಾದರೆ ವಾರಕ್ಕೆರಡು… ಇಲ್ಲ, ಮೂರು ಭಾರಿ ಪುಗಸಟ್ಟೆ ಮುಖಕ್ಷೌರ ಮಾಡುತ್ತೇನೆ.”

“ಏನೂ ಅಗತ್ಯವಿಲ್ಲ ಗೆಳೆಯ. ನನ್ನ ಅಗತ್ಯಗಳನ್ನು ಈಗಾಗಲೇ ಮೂರು ಜನ ಕ್ಷೌರಿಕರು ಪೈಪೋಟಿಯಿಂದ ನೆರವೇರಿಸುತ್ತಿದ್ದಾರೆ! ನೀನು ಸೇತುವೆಯ ಕೆಳಗೆ ಬಗ್ಗಿ ಏನು ಮಾಡುತ್ತಿದ್ದೆ ಅಷ್ಟು ಹೇಳು…”

ಮುಂದಿನದು ಹೇಳಲಿಕ್ಕಾಗದಷ್ಟು ಗೋಜಗೋಜಲಾಯಿತು.

| ಮುಂದುವರೆಯುವುದು |

‍ಲೇಖಕರು Admin

November 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: