ಸದಾಶಿವ್ ಸೊರಟೂರು
‘ಫಳ್..’
ಪಟಾರನೆ
ಗಾಜು ಒಡೆದಂತೆ
ಈ ಶಹರದಲಿ
ಕರೆಂಟು ಆರಿ ಹೊಯಿತು..
ಕದ ಇಷ್ಟೇ ಮುಂದು ಮಾಡಿದ
ಈ ಕೋಣೆಯಲಿ
ಬಹು ಹೊತ್ತಿನವರೆಗೂ
ಏನೊಂದೂ ಕಾಣಲಿಲ್ಲ
ನೀನು ಎದ್ದು ಹೋದ
ಆವತ್ತು
ಎಲ್ಲವೂ ಸಹ
ಹೀಗೆಯೇ ಇತ್ತು..

ಕತ್ತಲು ಮೆತ್ತಿದ ಕಣ್ಣು
ಹಾದಿ ಮರೆತ ಹೆಜ್ಜೆ!
ನೋಡು,
ಎಷ್ಟೊ ಹೊತ್ತಿನ ಬಳಿಕ
ಕತ್ತಲೆಗೂ ಹೊಂದಿಕೊಂಡವು
ಕಣ್ಣು
ಬಾಗಿಲು ಕಂಡಿದೆ
ಮಸುಕು ಮಸುಕಾಗಿ
ಮತ್ತೆ;
ಈಗ ಅರ್ಧ ತೆರೆದ
ಬಾಗಿಲೂ ಬೆಳಕಿನ
ಒಂದು ತುಂಡು..






0 Comments