ಗುಂಡುರಾವ್ ದೇಸಾಯಿ ಹೊಸ ಕಥೆ- ನಾಯಿಯೊಂದಿಗಿನ ಸಖ್ಯ…

ಗುಂಡುರಾವ್ ದೇಸಾಯಿ

ನಾಯಿ ಮಕ್ಕಳ ಮುದ್ದಿನ ಪ್ರಾಣಿ..ಎಲ್ಲರ ಮನೆಯಲ್ಲೂ ನಾಯಿ ಸಾಕೋದನ್ನ ನೋಡಿ ಮಕ್ಕಳೇನೊ ಆಸೆ ಪಟ್ರು. ಒಮ್ಮೆ ನಮ್ಮ ವಠಾರದ ಕೊನೆಯ ಮನೆಯವರು ನಾಯಿ ತಂದಾಗ ಅದರ ಜೊತೆ ಆಡಿ ಸಖ್ಯ ಬೆಳಸಿಕೊಂಡಿದ್ದ ಮಕ್ಕಳು ಬಹಳ ಹಚ್ಚಿಕೊಂಡಿದ್ದರು. ತಂದವರೆ ಕಾಳಜಿ ಮಾಡದ ನಾಯಿಯನ್ನು ಇವರು ಊಟ ಹಾಕಿ ಮುದ್ದು ಮಾಡಿ ಸಲುಹಿದ್ದಕ್ಕಾಗಿ ಅದು ನಮ್ಮ ಮಕ್ಕಳೊಂದಿಗೆ ಇರಲು ಆರಂಭಿಸಿತು. ಆದರೆ ಬರಬರುತ್ತ ಅದು ಮನೆಯಲ್ಲೆ ಮಲಗಲು ಬಯಸತೊಡಗಿತು. ಅಮ್ಮನೊ ಮೊಮ್ಮಕ್ಕಳನ್ನೆ ಮುಟ್ಟಿಸಿ ಕೊಳ್ಳದಷ್ಟು ಕರ್ಮಠಳು. ನನಗೆಲ್ಲಿ ನಾಯಿಯಿಂದ ದೊಡ್ಡ ರಾದ್ಧಾಂತ ಆಗುವುದೆಂಬ ಭಯ.

ಛಳಿಗಾಲದ ಒಂದು ದಿನ…ಕೊನೆಯ ಮನೆಯವರು ಅದನ್ನು ಕಾಳಜಿ ಮಾಡೋದನ್ನೆ ಬಿಟ್ಟಿದ್ದರು. ಊಟಕ್ಕೂ ಹಾಕಿರಲ್ಲ. ಮಕ್ಕಳು ಅಂದು ಮನೆಯಲ್ಲಿದ್ದುದ್ದನ್ನೆಲ್ಲ…ಅಜ್ಜಿಗೆ ತಿಳಿಯದಂತೆ ಊಟಮಾಡಿಸಿ ಅವರ ಮನೆಯ ಕೆಳಗಿನ ಮಾಡದಲ್ಲಿ ಮಲಗಿಸಿ ಬಂದಿದ್ದರು. ಆದರೆ ರಾತ್ರಿ ಒಂದು ಸಮಯದಲ್ಲಿ ಬಾಗಿಲು ಬಡಿದ ಧ್ವನಿ….ನಾನು ‘ಈ ಸವಾ ಹೊತ್ತಿನಲ್ಲಿ ಯಾರು?’ ಎಂದು ಬಾಗಿಲು ತೆಗೆದು ನೋಡಿದರೆ ಹೊರಗೆ ನಾಯಿ ತನ್ನ ಕಾಲುಗಳಿಂದ ಬಡಿಯುತ್ತಿದೆ. ನಾನು ಬಾಗಿಲು ತೆರೆಯುತ್ತಿದ್ದಂತೆ ಒಳಹೊಕ್ಕು ಮಗಳ ಹತ್ತಿರ ಹೋಗಬೇಕೆ? ಮಲಗಿದ್ದ ಮಕ್ಕಳು ಎಲ್ಲಿ ಅಜ್ಜಿಗೆ ಗೊತ್ತಾಗುತ್ತೊ ಅನ್ನುವ ಭಯದಲ್ಲಿ ಮೆಲ್ಲಗೆ ಮುದ್ದಿಸುತ್ತಾ ಹಸಿವೆಯಾಗಿರಬೇಕೆಂದು ಭಾವಿಸಿ ಹಾಲು ಕೂಡಿಸಿ ಛಳಿಯಲ್ಲೂ ಮನೆಯಲ್ಲಿದ್ದ ಹಳೆಯ ರಗ್ಗನ್ನು ಹೊದಿಸಿ ಬಂದು ಮಲಗಿದರು.

ಮತ್ತೆ ಗಂಟೆಯಾಗಿರಲಿಲ್ಲ….ಮತ್ತೆ ಬಾಗಿಲು ತಟ್ಟಿದ ಧ್ವನಿ..ನಾನು ಈ ಸಾರಿ ತೆಗೆಯಲಿಲ್ಲ. ‘ಅಜ್ಜಿ ಸಲುವಾಗಿಯೆ ನಾನು ಧ್ವನಿ ಮಾಡದೆ ಬಾಗಿಲು ಬಾರಿಸಿದ್ದು’ ಎಂದು ಸಿಟ್ಟು ಬಂತೇನೊ ಹಿಂದಿನ ಬಾಗಿಲಿಗೆ ಬಂದು….ಬಾಗಿಲು ಬಡಿಯತೊಡಗಿತು ಕುಂಯಿ ಕುಂಯಿ ಧ್ವನಿಯೊಂದಿಗೆ….ನನಗೆ ಈ ಸಾರಿ ಪಿತ್ತ ನೆತ್ತಿಗೇರಿತು…. ಮಕ್ಕಳಿಗೆ ಬೈದೆ. “ಮೊದಲೆ ಹಚ್ಚಿಗೊ ಬ್ಯಾಡ್ರಿ ಅಂತ ಕೇಳತೀರಾ…? ಸಾಕಿದವರೂ ಅರಾಮ ಮಲಗಿದ್ದಾರೆ ನಮಗೆ ನೋಡಿದ್ರೆ ತೊಂದ್ರೆ ಕೊಡತಿದೆ ನೋಡಿ” ಎಂದು ಒದರಾಲಾರಂಭಿಸಿತು..

ಈ ಸಾರಿ ಏನಾದ್ರೂ ಮಾಡಿ ಹೊರ ಹಾಕಬೇಕೆಂದು. ಅಡುಗೆ ಮನೆಯ ಹಿಂದಿನ ಬಾಗಿಲು ತೆಗೆದ ತಕ್ಷಣೆ ‘ಟಣ್ಣನೆ’ ಹಾರಿ ಒಳಬರಬೇಕೆ…? ಅದು ಸೀದಾ ಮಗಳು ಮಲಗಿದ ಕೋಣೆಯ ಮಂಚದೊಳಗೆ ಅಡಗಬೇಕೆ….? ಹೊರದಬ್ಬಲು ಯತ್ನಿಸಿದರೆ ‘ಕುಂಯ್ಯ ಕುಂಯಿ’ ಎಂದು ಒದರಲು ಆರಂಭಿಸಿತು.. ರೂಮಿನಲ್ಲಿ ಮಲಗಿದ್ದ ಅಜ್ಜಿ “ಏನು ನಾಯಿ ಮನ್ಯಾಗ ಬಂದದನೂ…?” ಅಂತ ಬಾಗಿಲು ತೆರೆಯಾಕೂ ಇವರು ಹೊರಗಡೆ ಎತ್ತುಕೊಂಡು ಹೋಗಾಕು ಸರಿ ಹೋಗಿ ಆಗುವ ರಾದ್ಧಾಂತದಿಂದ ಪಾರಾದೆ. ಅದಕ್ಕೆ ಬ್ರೆಡ್ ತಿನ್ನಿಸಿ, ಹಾಲು ಕುಡಿಸಿ ಎಲ್ಲಾ ದೇಖರಿಕಿ ಮಾಡಿ ಮಲಗಿಸಿಬಂದ್ರೂ…ಎಬ್ಬಿಸೋದು ಬಿಡಲಿಲ್ಲ…ನಡು ರಾತ್ರಿಯಲ್ಲಿ ದೂರಕ್ಕೆ ಹೋಗಿ ಬಿಟ್ಟು ಬಂದೆ. ಅದು ಜುಮ್ಮೆನ್ನದೆ ಅರ್ಧ ತಾಸಿನೊಳಗೆ ಮತ್ತೆ ಬಂದು ಕಾಡಹತ್ತಿತು.

ಈ ಸಾರಿ ಸಿಟ್ಟು ಬಂದು ಮಲಗಿದ್ದ ಆ ಮನೆಯವರನ್ನೆ ಎಬ್ಬಿಸಿ ಬೈದೆ…ಅವರು ಅದನ್ನು ಒಳಗೆ ಕರೆದುಕೊಂಡು ಮಲಗಿಸಿದ್ರು…ಮರುದಿನ ಅವರಿಗೂ ನಿದ್ದೆಮಾಡಲು ತೊಂದರೆ ಕೊಟ್ಟಿರಬೇಕು…ಯಾವುದೊ ಅಂಗಡಿ ಹತ್ತಿರ ಬಿಟ್ಟು ಬಂದು ನಿರಾಳರಾದರೂ ಒಂದು ವಾರ ಎಲ್ಲರನ್ನು ಆಟವಾಡಿಸಿದ್ದ ಮಕ್ಕಳ ಮೆಚ್ಚಿದ ನಾಯಿ ‘ಲೂನಾ’ ಇಲ್ಲದೆ ನಮ್ಮ ಕಂಪೌಂಡಿನ ಮಕ್ಕಳೆಲ್ಲ ಡಲ್ಲಾಗಿದ್ರು.

ಮಗ ಮಗಳು ಲೂನಾ ಇಲ್ಲದೆ ತತ್ತರಿಸಿದರು. ಹೀಗೆ ಕೆಲ ದಿನಗಳು ಕಳೆದವು. ಒಂದು ದಿನ ಸಂಜೆ ಮಗಳು ಬಂದು ‘ಪಾಪ ! ನಮ್ಮ ಲೂನಾ ಇವತ್ತು ಗಾಡಿಯ ಒಳಗಾಗಿ ಸತ್ತು ಹೋಯಿತಂತೆ’ ಅನ್ನುವಾಗ ಅವಳ ಕಣ್ಣಂಚಲಿ ನೀರೆ ಬಂದಿದ್ದವು.. ’ಅಪ್ಪಾ ಆ ನಾಯಿ ಸಾಯೋದಕ್ಕೆ ನಾವು ಕೂಡಾ ಕಾರಣವಲ್ಲವೇನು?’ ಎಂದು ದೊಡ್ಡ ಮಗಳು ಹೇಳಿದಾಗ ಮನಸ್ಸು ತಾಗಿತು.

ಇದಾದ ಹಲವು ತಿಂಗಳ ನಂತರ ನನ್ನ ಗಮನಕ್ಕೆ ಬರದಂತೆ ಮಕ್ಕಳು ಏನೊ ನಡಿಸಿದ್ದಾರೆ ಎನ್ನುವ ಅನುಮಾನ ಬಂದು ಅದು ನಿಜವಾಗುವುದರಲ್ಲಿ ಬಹಳ ದಿನ ಹಿಡಿಯಲಿಲ್ಲ. ಎಲ್ಲರೂ ಕೂಡಿ ಊಟಮಾಡುತ್ತಿದ್ದುದು ಕೆಲ ದಿನಗಳಿಂದ ತಪ್ಪಿತ್ತು.. ‘ಯಾಕೆ?’ಎಂದು ಅದರ ಬೆನ್ನು ಹತ್ತಿದಾಗ ಗೊತ್ತಾಗದಂತೆ ನಾಯಿಯೊಂದನ್ನ ಸಾಕುತ್ತಿದ್ದುದು ಗಮನಕ್ಕೆ ಬಂದಿತು… ಮೂವರು ಕಂಪೌಂಡಿನ ಹೊರವಲಯದ ಗೂಡಿನಲ್ಲಿ ನಾಯಿಗೆ ಊಟ ಮಾಡಿಸುತ್ತಿದ್ದಾಗ ರೆಡ್ ಹ್ಯಾಂಡ ಆಗಿ ಸಿಕ್ಕಿಬಿದ್ದರು.

ಮೂವರು ಭಯದಿಂದ ತತ್ತರಿಸುತ್ತ “ಅಪ್ಪಾ ಪ್ಲೀಜ.. ಈ ನಾಯಿಗೆ ಏನೂ ಮಾಡಬೇಡಿ.. ಇದು ಯಾರಿಗೂ ತೊಂದರೆ ಕೊಟ್ಟಿಲ್ಲ.. ಯಾರನ್ನು ರಾತ್ರಿ ಎಬ್ಬಿಸೊಲ್ಲ.. ಯಾರನ್ನೂ ಸತಾಯಿಸಿಲ್ಲ.. ಹೇಳಿದ ಹಾಗೆ ಕೇಳುತ್ತದ” ಎಂದು ಅವಲತ್ತುಕೊಂಡಳು ದೊಡ್ಡ ಮಗಳು “ಹೌದಪ್ಪ….ಒಂದು ತಿಂಗಳಾಯ್ತು.. ನಿನ್ನ ಕಣ್ಣಿಗೆ ಅಪ್ಪಿ ತಪ್ಪಿ ಬಿದ್ದಾದನೂ..ಹ್ಯಾಂಗ ಮೆಂಟೇನ್ ಮಾಡಿವಿ ನೋಡು” ಎಂದು ತಿಂಗಳಿನಿಂದ ಸಾಕಿದ ವಿಷಯ ಬಾಯಿ ಬಿಟ್ಟ ಸಮು.

ಅನು ಬಾಯಿ ಮುಚ್ಚಿ “ಇಲ್ಲಪ್ಪ ಸುಳ್ಳು ಹೇಳ್ತಾನ.. ವಾರವಾಯ್ತು ಅಷ್ಟ” ಎಂದಳು “ನೀವೆ ಸುಳ್ಳು ಹೇಳಬಾರದು ಅಂತೀರಿ…? ಸುಳ್ಳು ಹೇಳತಿರಲ್ಲ…ಬ್ಯಾಡ್ ಸಿಸ್ರ‍್ಸ್ …” ಎಂದು ಸಮ್ಮು ಮರು ಪ್ರಶ್ನೆ ಹಾಕಿದ ಅಕ್ಕಂದಿರಿಗಿಬ್ಬರಿಗೂ ಉಭಯ ಸಂಕಟ “ಸಮ್ಮಿ ಬಿಡ್ತಿನಿ ಏಟು…. ಗಪ್ ಇರು” ಎಂದು ಕಣ್ಣು ತಿರುವಿದರು. ಅವರ ಸಂಭಾಷಣೆಯಲ್ಲಿ.. ಎಲ್ಲವೂ ಅರ್ಥವಾಯಿತು.. “ನಿಮ್ಮ ಪ್ರಾಣಿ ಪ್ರೀತಿಗೆ ನನ್ನ ತಕರಾರಿಲ್ಲ….ಆದರೆ ಅಜ್ಜಿಗೆ ಗೊತ್ತಾಗದಂತೆ ಎಚ್ಚರಿಕೆಯಿಂದಿರಿ” ಎಂದು ಎಚ್ಚರಿಸಿದೆ. ನನ್ನ ಬೆಂಬಲ ಅವರಿಗೆ ಧೈರ್ಯ ತಂದಿತು…

ಕದ್ದು ಮುಚ್ಚಿ ನಾಯಿಯ ಸಾಕುವಿಕೆ ನಡೆದಿತ್ತು…ಹೆಣ್ಣುಮಕ್ಕಳು ದೊಡ್ಡವರಾದಂತೆ ಅವರಿಗೆ ನಾಯಿಯ ಮೇಲಿನ ಆಸಕ್ತಿ ಕಡಿಮೆಯಾಗಿತ್ತು. ಮಗನಿಗೆ ಮಾತ್ರ ಇಮ್ಮಡಿಯಾಗಿತ್ತು.. ಅವನ ಒಡಹುಟ್ಟಿದವರಂತೆ ನೋಡತೊಡಗಿದ.. ಬರಬರುತ್ತ ಸಾಕಿದ್ದು ಹೆಣ್ಣುನಾಯಿ ಎಂದು ಗೊತ್ತಾಯಿತು. ‘ಮುಂದೆ ಮರಿ ಹಾಕಿದ್ರ ಸಮಸ್ಯೆಪ’ ಎಂದು ಮಗನಿಗೆ ಹೇಳಿದೆ ಆದರೆ ಅದರೊಡನೆ ಒಳ್ಳೆಯ ದೋಸ್ತಿ ಮಾಡಿಕೊಂಡಿದ್ದ ಅವನಿಗೆ ನನ್ನ ಮಾತು ಹಿಡಿಸದಾದವು… ಮೇಲಾಗಿ “ಅಪ್ಪ ಅಕ್ಕನವರು ಹೆಣ್ಣುಮಕ್ಕಳಲ್ಲವೆ? ಹೆಣ್ಣು ನಾಯಿ ಸಾಕುವುದು ತಪ್ಪಾ?” ಎಂದು ಮರು ಸವಾಲೆಸೆದಿದ್ದ..

ಅದರ ಜೊತೆ ಎಷ್ಟು ಹಚ್ಚಿಕೊಂಡಿದ್ದನೆಂದರೆ ಅದು ಇವನನ್ನು ಬಿಟ್ಟು ಒಂದು ಕ್ಷಣವು ಇರುತಿರಲಿಲ್ಲ… ಅಜ್ಜಿಯ ಇರುವಿಕೆ ಅದಕ್ಕೂ ಗೊತ್ತಾಗುತ್ತಿತ್ತೇನೊ? ತನ್ನದೆ ಆದ ಭಾಷೆಯಲ್ಲಿ ಕೂಗಿ ಇವನನ್ನು ಕರೆಯುತ್ತಿತ್ತು…ಇವನು ಹೊರ ಓಡುತ್ತಿದ್ದ. ನಾಯಿಯಂತೆ ಇವನು ಬೆಳೆದ. ಅಗಲಿರಲಾರದ ನೆಂಟೂ ಗಟ್ಟಿಯಾಗಿತ್ತು….ವಯೊ ಸಹಜ ಎಷ್ಟಾದರೂ ಬೀದಿಯ ನಾಯಿ…ಹೊರಗಿನ ಚಟವೂ ಹತ್ತಿತ್ತು…

ಒಮ್ಮೆ ಹೊರಗೆ ಆಡುತ್ತಿದ್ದ ಕೊಳಿಯನ್ನು ಹಿಡಿದು ತಿಂದು ಬಿಟ್ಟಿತು..ಮನೆಗೆ ಬಂದು ಕೋಳಿ ಸಾಕಿದಾಕೆ ಮನಸೋ ಇಚ್ಛೆ ಬಯ್ದಳು. “ನಾವು ಬ್ರಾಂಬರು…ನಮ್ಮ ಮನೆಯಲ್ಲಿ ನಾಯಿ….ನಿನಗ ಎಲ್ಲೇರ ತಲಿಕೆಟ್ಟದನೂ?” ಎಂದು ಅವ್ವ ತಿರುಗಿ ಹಿಗ್ಗಾ ಮುಗ್ಗಾ ಬೈದು ಕಳಿಸಿದ್ದಳು, ಅವರ ಮಾತುಗಳನ್ನು ಆಲಿಸದೆ. ಇನ್ನೊಮ್ಮೆ ಪಕ್ಕದ ಸಾಂಪ್ರದಾಯಿಕರ ಮನೆಯಲ್ಲಿ ಮಾಂಸದ ತುಂಡೊಂದನ್ನು ತಿಂದು ಒಗೆದು ಬಂದು ಬಿಟ್ಟಿತ್ತು. ಅವತ್ತಂತೂ ರಾದ್ಧಾಂತವೆ ಆಯಿತು…ಪಣ್ಯಕ್ಕೆ… ಅಮ್ಮ ಮಲಗಿದ್ದಳು. ನಾನು ‘ತಪ್ಪಾಯ್ತು ಇನ್ನೊಮ್ಮೆ ಹಾಗಾಗದಂತೆ ನೋಡಿಕೋತಿವಿ’ ಎಂದು ಮ್ಯಾನೇಜ್ ಮಾಡಿ ಕಳುಹಿಸಿದೆ.

ಇಂತಹ ಹಲವು ಘಟನೆಗಳು ಮರುಕಳಿಸುತ್ತಿರುವಾಗ ಅದೆ ಸಮಯಕ್ಕೆ ನಾಯಿ ಬೇರೆ ಮರಿಗಳನ್ನು ಹಾಕಿ ಬಿಟ್ಟಿತ್ತು…ನಾಯಿಗೆ ಮನೆಯ ಪರಿಸರ ಗೊತ್ತಿತ್ತು. ಪಾಪ ಹುಟ್ಟಿದ ಮರಿಗಳಿಗೇನು ಗೊತ್ತು..? ಅವ್ವ ಕಾಲಿಲ್ಲದಿದ್ದರೂ ಸವರುತ್ತ ಸವರುತ್ತ ಮನೆ ಸುತ್ತಲೂ ಹೋಗಿ ನಾಯಿಯ ಸಾಕಿರುವಿಕೆಯನ್ನು ಪತ್ತೆ ಹಚ್ಚಿ ದೊಡ್ಡ ಗುಡ್ಡಮಾಡಿದಳು.. “ಅಯ್ಯೊ ಪಾಪಿಷ್ಠರ! ಮಡಿ ಮೈಲಿಗೆ ಎಂಬುದೆ ಗೊತ್ತಿಲ್ಲ ನಿಮಗೆ…? ಎಲ್ಲಾ ಹಾಳಮಾಡಿದ್ರಿ.. ಇದರ ನಿಮ್ಮ ಅಪ್ಪ ಅಮ್ಮಂದು ಕುಮ್ಮಕ್ಕು ಬೇರೆ.. ರಾಮರಾಮ… ಬಿಟ್ಟುಬರುವವರೆಗೂ ಊಟ ಮಾಡಲಾರೆ” ಎಂದು ಹಠ ಹಿಡಿದಳು… ಹಾಗೆ ಮಾಡಿದಳು ಕೂಡಾ.

ಮಗನಿಗೆ ನಡೆದ ಘಟನೆಗಳ ಬಗ್ಗೆ ವಿವರಿಸಿದೆ… ಅದು ಆಗಲೆ ಹಾಕಿದ್ದ ಮರಿಗಳು ಚಂದಿದ್ದವು ಬೇರೆ. ಮುದ್ದುಮುದ್ದಾದ ಆ ಮರಿಗಳು ನನ್ನನ್ನೆ ಆಕರ್ಷಿಸಿದ್ದವು ಎಂದ ಮೇಲೆ… ನಿತ್ಯ ಒಡನಾಡುವ ಮಗನ ಸ್ಥಿತಿ ಹೇಗಾಗಿರಬೇಡ? ಆದರೆ ಮನೆಯ ಸ್ಥಿತಿ ಬೇರೆ ಇತ್ತು… ಮನಸಿರದಿದ್ದರೂ ಕೊನೆಗೆ ಒಪ್ಪಿ… “ಅಪ್ಪಾ ಎಲ್ಲೆಲ್ಲೊ ಬಿಟ್ಟು ಬಂದ್ರೆ ಸತ್ತು ಹೋಗತಾವೆ..ಎಲ್ಲಾದರೂ ಊಟ ಸಿಗುವಲ್ಲಿ ಬಿಟ್ಟುಬರೋಣ” ಎಂದ..

“ಆಯ್ತಪ” ಎಂದು..ಅವತ್ತು ವಿಶೇಷ ಅಡುಗೆ ಮಾಡಿಸಿ ಅವುಗಳಿಗೆ ಊಣ್ಣಿಸಿ ಬೈಕಲ್ಲಿ ಹತ್ತಿಸಿ….ಹತ್ತು ಕಿ.ಮಿ ದೂರದ ಮುದುಬಾಳ ಕ್ರಾಸ ಹತ್ತಿರದ ಡಾಬಾ ಸಮೀಪ ಸೇತುವೆ ಕೆಳಗೆ ಮೆಲ್ಲಗೆ ಆ ನಾಯಿಯನ್ನು ಮರಿಗಳನ್ನು ಕರೆದೊಯ್ದು ಅದಕ್ಕಾಗಿಯೆ ತಂದಿದ್ದ ಇಷ್ಟದ ಮೊಸರನ್ನವನ್ನು ಹಾಕಿ ಅದರ ಜೊತೆಗಿದ್ದಂತೆ ಮಾಡಿ…ನಾನು ಎದ್ದು ಬಂದೆ…. ಅವನು ಸ್ವಲ್ಪ ಹೊತ್ತಿನ ನಂತರ ಎದ್ದು ಬಂದ ದುಃಖಿಸುತ್ತಾ…

ಬೈಕನ್ನು ಒಂದು ಅರ್ಧ ಕಿ.ಮಿ ದಬ್ಬಿಕೊಂಡು ಹೋಗಿ ಅಲ್ಲಿಂದ ಊರಿಗೆ ಬಂದೆವು.. ಮನೆಗೆ ಬಂದರು ಮಗನಿಗೆ ಅದರ ಅಗಲಿಕೆಯ ನೋವು ತಾಳಲಾಗಲಿಲ್ಲ. ವಾರವಾದರೂ ಅವುಗಳ ಕ್ಷೇಮದ ಬಗಗೆ ಚಿಂತೆ. ನಾನು ‘ಅವುಗಳು ಹೇಗಿವೆ?’ ಎಂದು ನೋಡಲು ಬೈಕ ಒಯ್ದರೆ ನೋಡಿ ಹಿಂಬಾಲಸಬಹುದೇನೊ ಎಂದು ಸ್ನೇಹಿತರ ಕಾರಲ್ಲಿ ಹೋದೆ… ದಾರಿಕಾಣದ ಅದು ಅರ್ಧ ದಾರಿಗೆ ಬಂದು ಹೋಗುತ್ತಿರುವುದು ಕಂಡಿತು..ಕಂಡರೆ ಕಷ್ಟ ಎಂದು ವಾಪಾಸ್ಸಾದೆ…

ಇನ್ನೊಮ್ಮೆ ವಾರ ಬಿಟ್ಟು ಮಗನೊಂದಿಗೆ ಹೋದಾಗ ಅದು ಕಾಣಲಿಲ್ಲ ಅದರ ಮರಿಯೂ ಕಾಣಲಿಲ್ಲ..ಭಯವಾಯಿತು ಮಗನೂ ಅತ್ತುಬಿಟ್ಟ… ‘ಅಪ್ಪಾ ಎಲ್ಲವೂ ಸತ್ತುಹೋಗಿವೆ’ ಎಂದು.. ಅದೆ ಭಾವದಿಂದ ಮನೆಗೆ ಬಂದಾಗ ಬಾಗಿಲಲ್ಲಿ ನಾಯಿ ನಿಂತಿತ್ತು…ಖುಷಿಯಿಂದ ಹೋಗಿ ತಬ್ಬಿಕೊಂಡ… ಮಕ್ಕಳ ಬಗ್ಗೆ ಕೇಳಿದಾಗ ಹೊತ್ತುಕೊಂಡು ಹೋದರೆಂಬಂತೆ ತಲೆ ಅಲ್ಲಾಡಿಸಿತು…ಅದಕ್ಕೂ ಪಶ್ಚಾತ್ತಾಪವಾಗಿತ್ತೇನೊ ಸಾಯುವವರೆಗೂ ಅದೆ ಜಾಗದಲ್ಲಿ ನಿನ್ನ ಆಶ್ರಯದಲ್ಲಿರುವೆನು ಎಂಬಂತೆ ಆ ಮಾಡದಲ್ಲಿ ಹೋಗಿ ಕುಳಿತಿತು..

ಆ ನಾಯಿಯ ಮಗನ ಸಂಭ್ರಮದ ಮುಂದೆ ನನ್ನ ಕಣ್ಣುಗಳು ತೇವವಾದವು. ಅಮ್ಮನೂ “ಖೋಡಿನ ತಂದು…ನಾನೆ ತಾಯಿ ಮಕ್ಕಳನ್ನ ಅಗಲಿಸಿದಂಗ ಆತು.. ಪಾಪ ಓಡೋಡಿ ಸತುಗೊಂತ ಬಂದದ…ಇರುವಷ್ಟು ದಿನ ಇಟ್ಟುಕೊಳ್ರಿ..ಆದರ ಮನೆಯೊಳಗ ಮಾತ್ರ ಬರಂಗಿಲ್ಲ” ಎನ್ನುವ ಎಚ್ಚರಿಕೆ ಕೊಟ್ಟಳು…ಎಲ್ಲರಿಗೂ ಖುಷಿಯಾಯಿತು…

ಈಗಲೂ ನಾಯಿಗೆ ಮಸರನ್ನ ಹಾಕಲು ಹೋದರೆ ಬೈಕಲ್ಲಿ ಕೂಡಿಸಲು ಹೋದರೆ ಹೆದರಿ ತತ್ತರಿಸಿ ಬಿಡುತ್ತದೆ.. ಎಂತಹ ಜೀವ… ’ಕಣ್ಣರಿಯದಿದ್ದರೂ ಕರುಳರಿಯದೆ?’ ಎಂಬುದು ಸತ್ಯ ಅನಸ್ತದೆ

‍ಲೇಖಕರು Admin

January 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: