ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ – ಗೆರೆಗಳಿರುವುದು ದಾಟಲಿಕ್ಕೆ..

ಸದಾಶಿವ್ ಸೊರಟೂರು

ಎಂದೋ ದಾರ ಕಳಚಿ ಪುಗ್ಗೆಯ
ಗಾಳಿ ಚೆಲ್ಲಿ ಹೋದೀತೆಂದು
ಉಸಿರುಗಟ್ಟಿ ಗಾಳಿ ತುಂಬದೆ ಇರಬಹುದೆ?

ವರ್ತಮಾನಗಳೆಲ್ಲವು ಮರುಕ್ಷಣಕೆ ಮಣ್ಣು ನಿಜ
ಈ ಕ್ಷಣಕೆ ಉಣ್ಣಲೆಷ್ಟು ಉಳಿದಿದೆ ತಟ್ಟೆಯಲಿ?
ಮಣ್ಣು ಸೇರುವುದೆಂದು
ತಿನ್ನಲಾದೀತೆ ಮಣ್ಣು..?
ಉಪ್ಪು ಹುಳಿ ಕಾರ ಸಿಹಿ ಇಲ್ಲದೆ
ರುಚಿಸೀತೆ ಬಾಳು..?

ಹೆಜ್ಜೆಗೊಂದು ತಿರುವುಗಳಿವೆ ಇಲ್ಲಿ
ಯಾವ ದಾರಿಯಲ್ಲಿ ಹಾಯ್ದರು
ಅದೇ ವಿಳಾಸ, ಅದೇ ಬಾಗಿಲ ಸಂಖ್ಯೆ
ತೋರಿದಂತೆ ನಡೆದು ಬಿಡು
ವಿಳಾಸದ ಚೀಟಿ ಹೊತ್ತು ನಡೆಯುವ ದರ್ದು ಬಿಡು..

ಬೆನ್ನ ಹಿಂದಿನ ನೆರಳು ನೋಡಿ
ಬದುಕು ಗುಣಿಸಬೇಡ..
ಅದು ಬೆಳಕಿನ ಹುನ್ನಾರಷ್ಟೆ
ಹೆಚ್ಚೆಂದರೆ ಕತ್ತಲ ಹಕೀಕತ್ತು ಅಷ್ಟೆ..

ಕಣ್ಣಿಗೆ ಹಸಿವುಗಳಿರುತ್ತವೆ,
ಕತ್ತಲ ಹಸಿವು
ಬೆಳಕಿನ ಹಸಿವು
ಮಬ್ಬು ಮಿಂಚುಗಳ ಹಸಿವು
ಉಣಿಸುವುದೆ ಬದುಕು
ಉಪವಾಸ ಕೆಡುವುವುದಲ್ಲ..

ಹತ್ತು ರೂಪಾಯಿ ಶೆಲ್ಲು ಹಾಕಿದ
ಅಲಾರಂವೊಂದು
ಮತ್ತೆ ಮತ್ತೆ ಎಚ್ಚರಿಸುವ ಗೊಡವೆ
ಇರಬಾರದು ಬದುಕಿಗೆ..!
ಕಣ್ಣು ತುಂಬಿದಾಗ ನಿದ್ದೆ..
ರೆಪ್ಪೆ ತೆರೆದಾಗ ಬೆಳಕು ತುಂಬಿಕೊಂಡು
ನಡೆಯಬೇಕು..
ಅಲಾರಂ ಬಾರಿಸುತ್ತದೆಯೆಂದು..
ಬಾರಿಸೀತೆಂದು
ರಾತ್ರಿಯೀಡಿ ಕಾಯುವುದೇ..?
ಬೇಕಾದರೆ ಅದರೆ ತಲೆ ಮೇಲೊಂದು
ಮೊಟುಕಿ ಮುಂದೆ ಹೋಗುವ..

ಒಳಗೊಳಗೆ ಎಳೆದುಕೊಳ್ಳಬೇಕು
ನಾವೇ ಒಂದು ಗೆರೆ..
ಗೆರೆಗಳಿರುವುದೆ ದಾಟಲಿಕ್ಕೆಂದು
ಸುಮ್ಮನೆ ದಾಟಿ ನಡೆಯಬೇಕು.
ಬಾಳು ಗೆರೆ ಮೇಲಿಲ್ಲ
ಒಲಿಯದ ರಾಗದ ಮೇಲಿಲ್ಲ..
ಒಲಿದ ತುಣುಕು ಹಾಡು ಸಾಕು..
ಅಸಲಿ ಸತ್ಯವಾದರೂ ಏಕೆ?
ಹಿಡಿ ಭ್ರಮೆ ಸಾಕು..

ನಾಲ್ಕೇ ದಿನದ ಬಾಳು
ಬಾಳು ಬಾಳಂತಯೇ ಬಾಳು
ಉಳಿದಿದ್ದೆಲ್ಲಾ ಹಾಳು..!

‍ಲೇಖಕರು Admin

24 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading