ಮಧುಕರ್ ಬಳ್ಕೂರು ಸರಣಿ ಕಥೆ 4 – ‘ಏಯ್ ಅಲ್ನೋಡು ಕಪಿಲ್ ದೇವ್..!!’

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

4

ನಮ್ಮ ಆಟಗಾರರು ನಿದ್ದೆಗಣ್ಣಿನಲ್ಲಿ ಆಡುತ್ತಿದ್ದಾರೆ ಅನ್ನೊ ಅದೇ ನಂಬಿಕೆಯಲ್ಲಿ..

ಏಯ್ ಅಲ್ನೋಡು ಕಪಿಲ್ ದೇವ್..!!’ ಹಾಗಂತ ಅಣ್ಣ ಥಟ್ ಅಂತ  ಹೇಳಿದಾಗ ಚಂಗನೆ ಎದ್ದು ನಿಂತಿದ್ದೆ ..!! ಏಯ್ ಕುತ್ಕೊಳೋ ಕಪಿಲ್ ಎಲ್ಲೂ ಹೋಗಲ್ಲ ಅಂತ ಯಾರೋ ಹಿಂದೆ ಅಂದಾಂಗಾಯಿತು. ನಮಗೆಲ್ಲಿ ತಿಳಿಬೇಕು! ಮೊಟ್ಟ ಮೊದಲ ಬಾರಿಗೆ ಟಿವಿಯಲ್ಲಿ ಇಂಡಿಯಾ ಆಡುವುದನ್ನ ನೋಡುತ್ತಿದ್ದ ನಮಗೆ ಆಗಾಗುತ್ತಿದ್ದ ಏಕ್ಸಾಯಿಟ್ ಮೆಂಟ್ ಅನ್ನ ಕಂಟ್ರೋಲ್ ಮಾಡುವುದೇ ಕಷ್ಟವಿತ್ತು. ಇನ್ನು ಮಾತೆಲ್ಲಿ ಕೇಳೋದು…!

ಎಸ್..ಕಪಿಲ್…ಕಪಿಲ್ ಎಂದರೆ ಮಿಂಚಿನ ಸಂಚಾರ….ಕಪಿಲ್ ಎಂದರೆ ಗುಡುಗು ಸಿಡಿಲು… ಕಪಿಲ್ ಎಂದರೆ ಫೈರ್….. ಇನ್ನು ಹೇಳಬೇಕೆಂದರೆ ಕಪಿಲ್ ಎಂದರೆ ಇಂಡಿಯಾ ಟೀಮಿನ ಏಕಮಾತ್ರ ಗಂಡಸು…!! ಇಂತದ್ದೆಲ್ಲಾ ಉಪಮೆ ಬರಲು ಕಾರಣ ಆಗ ಕಪಿಲ್ ಬಗ್ಗೆ ಬಹಳಷ್ಟು ಮಂದಿ ಆಡುತ್ತಿದ್ದ ಮಾತುಗಳು.!! ಭಾರತದ ಬೌಲಿಂಗ್ ಶಕ್ತಿ ಅಂದರೆ ಬರೀ ಸ್ಪಿನ್ ಅಂತಷ್ಟೇ ಇದ್ದ ಕಾಲದಲ್ಲಿ ವೇಗದೂತನಂತೆ ಸಿಕ್ಕಿದವರು ಕಪಿಲ್. ಇನ್ನು ಭಾರತೀಯರ ಬ್ಯಾಟಿಂಗ್ ಅಂದ್ರೆ ಅದು ಟೆಸ್ಟ್ ಕ್ರಿಕೆಟ್ ಗಷ್ಟೆ ಸರಿ ಅಂತಿದ್ದ ಸಮಯದಲ್ಲಿ ಅದಕ್ಕೆ ರಾಕೆಟ್ ವೇಗದ ಟಚ್ ಕೊಟ್ಟು ಪ್ರಪಂಚವೇ ನಮ್ಮತ್ತ ನೋಡುವಂತೆ ಮಾಡಿದ್ದೂ ಕೂಡಾ ಕಪಿಲೇ. ಇಂತಾ ಕಪಿಲ್ ಬಗ್ಗೆ ನಾನಾ ತರಹದ ಕಲ್ಪನೆ, ನಿರೀಕ್ಷೆಗಳು ಏಳುತ್ತಿರಬೇಕಾದರೆ ಸಹಜವಾಗಿಯೇ ನಮ್ಮೆಲ್ಲರ ಕಣ್ಣುಗಳು ಟಿವಿಯಲ್ಲಿ ಅವರನ್ನ ಹುಡುಕುತ್ತಿದ್ದವು. ಅವರ ಚಲನವಲನ, ಅವರ ಹಾವಭಾವದ ಬಗ್ಗೆನೆ ಎಲ್ಲರ ಗಮನ ಫೋಕಸ್ ಆಗಿರುತಿತ್ತು.

ಇದೇ ಸಮಯದಲ್ಲಿ ತನ್ನ ಬೌಲಿಂಗ್ ನಲ್ಲಿ ಫೀಲ್ಡರ್ ನೊಬ್ಬ ಮಿಸ್ ಫೀಲ್ಡ್ ಮಾಡ್ದ ಅನ್ನೊ ಕಾರಣಕ್ಕೆ ಕಪಿಲ್ ಅವನನ್ನೆ ದುರುಗುಟ್ಟಿಕೊಂಡ್ ನೋಡಿ ಬೈದುಬಿಟ್ಟ. ಆವಾಗಲೇ ಗೊತ್ತಾಗಿ ಹೋಗಿದ್ದು ಈಯಪ್ಪ ಸಾಮನ್ಯದ ಆಸಾಮಿಯಲ್ಲ ಅಂತ!! ಅದಕ್ಕೆ ಸರಿಯಾಗಿ ಇಂಡಿಯಾದ ಫೀಲ್ಡರ್ ಗಳು ಬೇರೆ ಜಡ ಬಡಿದವರಂತಿದ್ದರು. ಹೇಳಿ ಕೇಳಿ ಸೌತ್ ಆಫ್ರಿಕಾದೆದುರು ಮ್ಯಾಚ್. ವರ್ಣಬೇಧ ನೀತಿಯಿಂದ ಇಪ್ಪತ್ತಮೂರು ವರುಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಬ್ಯಾನ್ ಆಗಿದ್ದ ಸೌತ್ ಆಫ್ರಿಕಾ ಮೊತ್ತ ಮೊದಲ ಬಾರಿಗೆ ತನ್ನದೆ ನೆಲದಲ್ಲಿ ಇಂಡಿಯಾದೆದುರು ಆಡುತ್ತಿದ್ದರು. ಅದಾಗಲೇ ವರ್ಲ್ಡ್ ಕಪ್ ನಲ್ಲಿ ತನ್ನ ಫೀಲ್ಡಿಂಗ್ ಚಮತ್ಕಾರ ಏನೆಂದು ಇಡೀ ವಿಶ್ವಕ್ಕೆ ತೋರಿಸಿದ್ದ ಸೌತ್ ಆಫ್ರಿಕಾ ನಮ್ಮೆದುರೆ ಬೇರೆ ಟೆಸ್ಟ್ ಸರಣಿ ಗೆದ್ದಿದ್ದರು.

ಇಂತಹ ಸಮಯದಲ್ಲಿ ಒನ್ ಡೇ ಸೀರೀಸ್ ನಲ್ಲಾದ್ರು ತೀರುಗೇಟು ಕೊಡುತ್ತಾರಾ ಅಂತ ನೋಡಿದ್ರೆ ನಮ್ಮವರು ಸ್ಕೂಲ್ ಹೋಗೋ ಹುಡುಗರಿಗಿಂತಲೂ ಕಳಪೆಯಾಗಿ ಆಡುತ್ತಿದ್ದರು. ಹೇಳಿ ಕೇಳಿ ಇಂಡಿಯಾದವರದ್ದು ಫೀಲ್ಡಿಂಗೇ ಸಮಸ್ಯೆ. ಸೌತ್ ಆಫ್ರಿಕಾದವರು ನೆಗೆದು ಜಿಗಿದು ಡೈವ್ ಹೊಡೆದೆಲ್ಲ ಬಾಲ್ ತಡೆಯುತ್ತಿದ್ದರೆ, ನಮ್ಮವರು ಬರೀ ಬಾಲ್ ಹಿಂದೆ ಓಡುತ್ತಾ ಬೌಂಡರಿ ಗೆರೆಯ ಆಚೆ ಡೈವ್ ಆಗುತ್ತಿದ್ದರು. ಯಾಕೋ ಇದನ್ನೆಲ್ಲ ನಾವು ಭಾರಿ ಬೇಸರದಲ್ಲಿ ಹೊಟ್ಟೆಗ್ ಹಾಕ್ಕೊಂಡ್ ನೋಡಬೇಕಾಗಿತ್ತು! ಏಕೆಂದರೆ ಮೊದ ಮೊದಲು ಕ್ರಿಕೆಟ್ ನೋಡುತ್ತಿದ್ದವಲ್ಲ…!! ಟಿವಿಯಲ್ಲಿ ಮೆಚ್ಚಿನ ಕ್ರಿಕೆಟಿಗರನ್ನ ನೋಡುವುದೇ ಪುಣ್ಯ ಅಂತ ತಿಳಿದುಕೊಂಡಿದ್ದ ನಮಗೆ ಇನ್ನು ಅವರ ಬಗ್ಗೆ ಕೇವಲದ ಭಾವನೆ ಬರೋದು ಸರೀನಾ ಎಂಬುದು ನಮ್ಮೊಳಗಿನ ನಿಲುವಾಗಿತ್ತು.! ಹಾಗೊಂದು ವೇಳೆ ಆ ಭಾವನೆ ಬಂದಿದ್ದೆ ಆಗಿದ್ದಲ್ಲಿ ಅದೊಂದು ದ್ರೊಹದ ಮನಸ್ಥಿತಿ ಎಂಬುದು ನಮ್ಮೆಲ್ಲರ ನಂಬಿಕೆಯಾಗಿತ್ತು.!

ಹಾಗಿದ್ದರೆ ನಮ್ಮವರು ಪ್ರತಿಭಾವಂತರಲ್ವ ಅಂತಂದುಕೊಂಡರೆ ಪ್ರತಿಭೆಯಲ್ಲಿ ಸೌತ್ ಆಫ್ರಿಕಾ ಆಟಗಾರರಿಗಿಂತಲೂ ಮುಂದಿದ್ದರು. ಆದರೆ ವಿಷಯ ಇರೋದು ಮ್ಯಾಚ್ ಗೆಲ್ಲೊಕೆ ಪ್ರತಿಭೆಗಿಂತಲೂ ಸ್ಪೋರ್ಟಿವ್ ಮೆಂಟಾಲಿಟಿ ಬೇಕು ಎನ್ನುವುದರಲ್ಲಾಗಿತ್ತು. ಆ ವಿಷಯದಲ್ಲಿ ಸೌತ್ ಆಫ್ರಿಕಾದವರು ನಮಗಿಂತಲೂ ಮುಂದಿದ್ದರು. ಆ ಕಾರಣದಿಂದ ಅವರು ಸತತವಾಗಿ ಗೆಲ್ಲುತ್ತಿದ್ದರು. ಅದೇ ಕಾರಣಕ್ಕೊ ಏನೋ ಪ್ರಪಂಚದ ಬೆಸ್ಟ್ ಫೀಲ್ಡರ್ ಗಳಲ್ಲಿ ಒಬ್ಬರೆನಿಸಿದ್ದ ಅಜರುದ್ದೀನ್, ನಾಯಕರಾಗಿ ತಮ್ಮದೇ ತಂಡದ ಫೀಲ್ಡಿಂಗ್ ನ ಸುಧಾರಣೆ ಮಾಡುವಲ್ಲಿ ವಿಫಲರಾಗಿದ್ದರು. ಏಕೆಂದರೆ ಪ್ರತಿಭೆಯೆ ಆಗಲಿ ಸ್ಪೋರ್ಟಿವ್ ನೇಚರ್ ಆಗಲಿ ಹುಟ್ಟಿನಿಂದ ಬರುವ ಬಳುವಳಿಯಾಗಿರುತ್ತೆ ಹೊರತು ಹೊಸತಾಗಿ ಹುಟ್ಟುಹಾಕಲು ಸಾಧ್ಯವಲ್ಲದ ವಿಷಯವಾಗಿತ್ತು.

ಆದರೆ ಇದೆಲ್ಲ ನನಗೆಲ್ಲಿ ತಿಳಿಬೇಕು…!! ನನ್ನ ತಲೆಯಲ್ಲಿ ಕೊರೆಯುತ್ತಿದ್ದುದು ಒಂದೇ. ಇಂಡಿಯಾದವರಿಗೆ ಟೈಮ್ ವ್ಯತ್ಯಾಸವಾಗ್ತಿದೆ ಹಾಗಾಗಿ ಅವರು ಕಷ್ಟಪಡುತ್ತಿದ್ದಾರೆ ಎಂದು…!! ಹೌದು, ನಮಗೂ ಅವರಿಗೂ ಸುಮಾರು ನಾಲ್ಕು ಗಂಟೆಗಳ ವ್ಯತ್ಯಾಸವಿತ್ತು. ನಮ್ಮ ಕಾಲಮಾನದ ಪ್ರಕಾರ ಮಧ್ಯಾಹ್ನ ಒಂದು ಗಂಟೆಗೆ ಮ್ಯಾಚ್ ಶುರುವಾಗಬೇಕು. ಆದರೆ ಬಹಳಷ್ಟು ಮ್ಯಾಚ್ ಗಳು ಡೇ ಅಂಡ್ ನೈಟ್ ಆದ್ದರಿಂದ ಸಂಜೆ ಐದುವರೆಗೆ ಶುರುವಾಗುತ್ತಿತ್ತು. ಹ್ಯಾಗೆ ನೋಡಿದರೂ ಬರೀ ಒನ್ ಸೈಡ್ ಆಟವನ್ನಷ್ಟೆ ನೋಡಲು ಸಾಧ್ಯವಾಗುತ್ತಿತ್ತು. ಏಕೆಂದರೆ ಬೇರೆಯವರ ಮನೆಯ ಟಿವಿಯನ್ನು ಎಷ್ಟು ಹೊತ್ತಿನವರೆಗೆ ನೋಡಲು ಸಾಧ್ಯವಿತ್ತು ಹೇಳಿ..? ಈ ಲೆಕ್ಕಚಾರದಲ್ಲೆ ನಮ್ಮವರ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೆವು.

ಈ ಯೋಚನೆಯಲ್ಲೆ ನಾನು ಅಲ್ಪ ಸ್ವಲ್ಪ ಮ್ಯಾಚ್ ನೋಡ್ಕೊಂಡು ರಾತ್ರಿ ನಿದ್ದೆ ಕಣ್ಣಿನಲ್ಲೆಲ್ಲ ಕನವರಿಸುತ್ತಿದ್ದೆ. ಏನೇ ಭೂಮಿ ತಿರುಗುತ್ತಿದೆ ಎಂಬ ಸಂಗತಿ ತಿಳಿದುಕೊಂಡಿದ್ದರೂ ನಾವು ನಿದ್ದೆ ಮಾಡುತ್ತಿರಬೇಕಾದರೆ ನಮ್ಮ ಆಟಗಾರರಿಗೂ ನಿದ್ದೆ ಬಂದಿರುತ್ತೆ ಎಂಬುದೆ ನನ್ನ ನಂಬಿಕೆಯಾಗಿತ್ತು!! ಎಲ್ಲೊ ಕಪಿಲ್, ಅಜರ್ ಅಂತವರು ಮಾತ್ರ ನಿದ್ದೆ ಮಂಪರನ್ನು ತೆಡೆದುಕೊಂಡು ಆಡಬಲ್ಲವರು ಎಂಬುದಷ್ಟೇ ನನ್ನ ಏಣಿಕೆಯಾಗಿತ್ತು.! ನನ್ನ ಈ ಏಣಿಕೆಗೆ ತಕ್ಕಂತೆ ಮ್ಯಾಚ್ ನಾ ರೀಸಲ್ಟ್ ಕೂಡಾ ಸೋಲಾಗಿರುತ್ತಿತ್ತು. ಆದರೆ ಸೋಲೋ ಗೆಲುವೋ ಅಪ್ಪಯ್ಯ ಮಾತ್ರ ಮ್ಯಾಚ್ ಮುಗಿಯುವರೆಗೂ ಕಾಮೆಂಟರಿ ಕೇಳುತ್ತಿದ್ದರು. ಅದರಲ್ಲೂ ಡೇ ಅಂಡ್ ನೈಟ್ ಮ್ಯಾಚ್ ಮುಗಿಯುವಾಗ ರಾತ್ರಿ ಒಂದುವರೆ ಆಗಿರುತ್ತಿತ್ತು. ಆದರೂ ಪೂರ್ತಿ ಕಾಮೆಂಟರಿ ಕೇಳಿ ಮರುದಿನ ಬೆಳಗ್ಗೆ ರಿಸಲ್ಟ್ ಹೇಳುತ್ತಿದ್ದರು. ನಾನೋ ರಾತ್ರಿಯೆಲ್ಲಾ ನಿದ್ದೆಗಣ್ಣಿನಲ್ಲಿ ಸೌತ್ ಆಫ್ರಿಕಾದಿಂದಲೇ ಲೈವ್ ಕಾಮೆಂಟರಿ ಕೊಡುತ್ತಿದ್ದೆ. ಒಂಥರಾ ರಾತ್ರಿಯೆಲ್ಲ ಅಪ್ಪಯ್ಯನಿಗೆ ಎರಡೆರಡು ಕಾಮೆಂಟರಿ ಕೇಳಿದ ಅನುಭವ.! ಎಲ್ಲಾ ಹಗಲಿನಲ್ಲಿ ಟಿವಿಯಲ್ಲಿ ನೋಡಿದ ಮ್ಯಾಚ್ ನ ಪ್ರಭಾವವಾಗಿತ್ತು!

‘ಇಂಡಿಯಾ ಗೆಲ್ತು ಕಣಾ’ ಬೆಳಿಗ್ಗೆ ನಿದ್ದೆಗಣ್ಣಿನಲ್ಲಿ ಏಳುತ್ತಲೇ ಅಪ್ಪಯ್ಯ ಅಂದರು. ಕೊನೆಗೂ ಬಾಯಾರಿದ ನಾಲಿಗೆಗೆ ಐಸ್ ಕ್ಯಾಂಡಿ ಬಿದ್ದಂತಾಯಿತು. 

ಇಡೀ ಸಿರೀಸ್ ನಲ್ಲಿ ಕಟ್ಟ ಕಡೆಯ ಮ್ಯಾಚ್ ನ ಗೆಲ್ಲುವುದರ ಮೂಲಕ ಇಂಡಿಯಾದವರು ಅಲ್ಲಿನ ಟೈಮ್ ಗೆ ಅಡ್ಜಸ್ಟ್ ಆದರಾ…? ಇದು ನನ್ನ ತಲೇಲಿ ಮೂಡಿ ಬಂದ ಮೊದಲ ಪ್ರಶ್ನೆ. ಏನೇ ಆದ್ರು ಸೀರೀಸೇ ಮುಗ್ದೊಯಿತಲ್ಲ. ಏನ್ ಅಡ್ಜಸ್ಟ್ ಆದ್ರೆ ಏನ್ ಬಂತು ಹಾಗಂತ ನನಗೆ ನಾನೇ ಹೇಳಿಕೊಂಡೆ.

‘ಅಂದ ಹಾಗೆ ಯಾರು ಆಡಿರಬಹುದು…? ತೆಂಡೂಲ್ಕರ್, ಮಂಜ್ರೇಕರ್, ಜಡೇಜಾ..’ ಹೀಗೆ ಅಂದುಕೊಳ್ಳುವಾಗಲೇ ಗೊತ್ತಾಗಿದ್ದು ಯಾರು ನಿರೀಕ್ಷೆ ಮಾಡದಂತ ಪ್ರವೀಣ್ ಆಮ್ರೆ. ಎಸ್..  ಪ್ರವೀಣ್ ಆಮ್ರೆಯ ಅಜೇಯ ಎಂಬತ್ತಾನಾಲ್ಕು ರನ್ನುಗಳು ಇಂಡಿಯಾಕ್ಕೆ ಮೊದಲ ಬಾರಿಗೆ ಅಧಿಕಾರಯುತ ಜಯ ತಂದುಕೊಟ್ಟಿತ್ತು. ಆದರೆ ನಮ್ಮೆಲ್ಲರ ನಿರೀಕ್ಷೆ ಸಚಿನ್ ನ ಮೇಲಿತ್ತು. ಏಕೆಂದರೆ ಇಡೀ ಆಸ್ಟ್ರೇಲಿಯಾ ಸಿರೀಸ್ ಸೇರಿದಂತೆ ವರ್ಲ್ಡ್ ಕಪ್ ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಸಚಿನ್, ಇದೇ ಸೌತ್ ಆಫ್ರಿಕಾ ದೆದುರಿನ ಜೋಹಾನ್ಸ್ಬರ್ಗ್ ಟೆಸ್ಟ್ ನಲ್ಲೂ ಶತಕ ಸಿಡಿಸಿದ್ದರು. ಸಹಜವಾಗಿ ಅವರ ಮೇಲೆ ನಿರೀಕ್ಷೆ ಇತ್ತು. ಅವರೊಬ್ಬ ದೇಶ ಕಂಡ ಅಪ್ರತಿಮ ಹಾಗೂ ಅದೃಷ್ಟದ ಪ್ಲೇಯರ್ ಆಗಿದ್ದರು. ಇಲ್ಲಿ ಅದೃಷ್ಟ ಎಂದು  ಉಲ್ಲೇಖಿಸುವುದಕ್ಕೆ ಕಾರಣ ಹದಿನಾರು ವರ್ಷಕ್ಕೆನೆ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕದ ತೆರೆದಿದ್ದು.! ಹೌದು, ಎಷ್ಟೇ ಅದ್ಬುತ ಪ್ರತಿಭೆಯಾಗಿದ್ದರೂ ಅದೊಂದೇ ಕಾರಣಕ್ಕೆ ಹದಿನಾರನೇ ವಯಸ್ಸಿಗೆನೆ ತಂಡಕ್ಕೆ ಆಯ್ಕೆಗೊಂಡು ಅಲ್ಲಿಂದ ಹಿಂತಿರುಗಿ ನೋಡದ ಮಟ್ಟಿಗೆ ಒಬ್ಬರ ಜರ್ನಿ ಸಾಗುತ್ತದೆ ಎಂದರೆ ಈಗೀನ ಕಾಲದಲ್ಲಿ ಕಲ್ಪಿಸುವುದು ಕಷ್ಟವೇ. ಅದಕ್ಕೆ ಕಾರಣ ಅವರಲ್ಲಿನ ಶಿಸ್ತು, ಸಮಯಪ್ರಜ್ಞೆ, ಕಠಿನ ಪರಿಶ್ರಮ, ಏಕಾಗ್ರತೆಗಳೆಂಬ ಸಂಗತಿಗಳೇ ಹೌದಾಗಿದ್ದರೂ, ಅದೆಲ್ಲವನ್ನೂ ಚಾಲ್ತಿಗೆ ತರಲು ಅವರಿಗೆ ಸಿಕ್ಕ ಸಮಯಾಕಾಶ ಹಾಗೂ ತಂಡದಲ್ಲಿದ್ದ ಅನುಕೂಲಕರ ವಾತಾವರಣ ಕೂಡಾ ಪ್ರಮುಖ ಸಂಗತಿಯಾಗಿತ್ತು. ಹೌದು, ಸಚಿನ್ ತಂಡದಲ್ಲಿ ಕಾಲಿಟ್ಟಾಗ ಕಪಿಲ್, ವೆಂಗ್ ಸರ್ಕಾರ್, ಶ್ರೀಕಾಂತ್, ಶಾಸ್ತ್ರಿ, ಅಜರ್, ಸಿದ್ದುರಂತಹ ಘಟಾನುಘಟಿ ಹಿರಿಯರಿದ್ದರು. ಆದರೆ ಅವರ್ಯಾರು ಸಚಿನ್ ನನ್ನು ಎಳೆಯ ಅಂತ ಕೇವಲವಾಗಿ ನೋಡಿರಲಿಲ್ಲ. ಹಾಗಂತ ಸಚಿನ್ ರ ಪ್ರತಿಭೆ ನೋಡಿ ತಮಗೊಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಂಡ ಅಂತಲೂ ಅಸೂಯೆ ಪಡಲಿಲ್ಲ. ಇದಕ್ಕಿಂತ ಹೆಚ್ಚಾಗಿ, ಅವರೆಲ್ಲರ ಉಪಸ್ಥಿತಿಯಿಂದಾಗಿ ತಂಡದ ಬ್ಯಾಟಿಂಗ್ ಜವಾಬ್ದಾರಿ ಸಚಿನ್ ಮೇಲೆ ಬೀಳಲಿಲ್ಲ. ಮುಖ್ಯವಾಗಿ ಅವರ್ಯಾರು ಸಚಿನ್ ಗೆ ಹೀಗಿಗೆ ಆಡಬೇಕೆಂದು ನಿರ್ಬಂಧ ಹೇರಿರಲಿಲ್ಲ. ಬದಲಾಗಿ ಸಚಿನ್ ಗೆ ತಮ್ಮಿಚ್ಚೆ ಬಂದಂತೆ ಆಡುವ ಸ್ವಾತಂತ್ರ್ಯಆರಂಭದ ದಿನದಿಂದಲೇ ಸಿಕ್ಕಿತ್ತು. ಇದೆಲ್ಲವನ್ನು ಚೆನ್ನಾಗಿ ಬಳಸಿಕೊಂಡ ಸಚಿನ್ ತನ್ನ ವಯಸ್ಸಿಗೂ ಮೀರಿದ ಬದ್ಧತೆಯನ್ನು ಪ್ರದರ್ಶಿಸಿದರು. ಅದಕ್ಕೂ ಮಿಗಿಲಾಗಿ ತಂಡದಲ್ಲಿ ಒಳಜಗಳ, ರಾಜಕೀಯಗಳಿದ್ದರೂ ಅದರತ್ತ ಕಣ್ಣು ಹಾಯಿಸದೆ ತಾನಾಯಿತು ತನ್ನ ಕ್ರಿಕೆಟ್ ಆಯಿತು ಅಂತ ಇದ್ದುಬಿಟ್ಟು ಜಾಣ್ಮೆ ಮೆರೆದರು. ಕ್ರಿಕೆಟ್ ನ ಹೊರತಾಗಿ ಅನಗತ್ಯ ಯೋಚನೆಗಳನ್ನು ಎಂದಿಗೂ ತಂದುಕೊಂಡಿರದ ಸಚಿನ್, ತನ್ನಲ್ಲಿರುವ ದೈವಿಕವಾದ ಪ್ರತಿಭೆಗೆ ಮಹತ್ವಾಕಾಂಕ್ಷೆ ಅನ್ನೊ ನೀರನ್ನು ಎರೆಯುತ್ತ ದಿನದಿಂದ ದಿನಕ್ಕೆ ಗಟ್ಟಿಯಾದರು. ಇದು ಆಡಳಿತ ಮಂಡಳಿಯವರ ಗಮನವನ್ನು ಸೆಳೆದಿತ್ತು. ಅದರಂತೆಯೇ ತಮ್ಮ ವೃತ್ತಿ ಜೀವನದ ಆರಂಭದಲ್ಲಿಯೇ ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ದಂತಹ ಬೌನ್ಸಿ ಪಿಚ್ ಗಳಲ್ಲಿ ಆಡುವುದರ ಮೂಲಕ ಬಹಳ ಬೇಗ ದೊಡ್ಡ ಅನುಭವ ಗಿಟ್ಟಿಸಿಕೊಂಡರು. ಇದು ಅವರ ವೃತ್ತಿ ಜೀವನಕ್ಕೆ ಬಹಳಾನೇ ಪ್ಲಸ್ ಆಯಿತು. ಇನ್ನು ತಂಡದಲ್ಲಿನ ಅವರ ಉಪಸ್ಥತಿಯೇ ಒಂದು ಬಗೆಯ ವಿಶೇಷ ಆಕರ್ಷಣೆಯಾಗಿರುತ್ತಿತ್ತು. ಹಾಲುಗಲ್ಲದ ಗುಂಗುರು ಕೂದಲಿನ ಸಚಿನ್ ಮೈದಾನಕ್ಕೆ ಇಳಿದರೆಂದರೆ ಎಲ್ಲರ ಗಮನ ಅವರತ್ತಲೇ ನೆಟ್ಟಿರುತ್ತಿತ್ತು. ಬರೀ ಐದಡಿ ನಾಲ್ಕು ಅಂಗುಲವಷ್ಟೆ ಇದ್ದ ಅವರು, ತಮ್ಮ ಎದೆಯ ಮಟ್ಟಕ್ಕೆ ಬರುತ್ತಿದ್ದ ಬಾಲ್ ಗಳನ್ನು ಫೀಲ್ಡರ್ ಗಳ ತಲೆ ಮೇಲಿಂದ ಹೊಡೆಯುತ್ತಿದ್ದರೆ ಅದನ್ನು ನೋಡುವುದೇ ಒಂದು ಹಬ್ಬವಾಗಿರುತ್ತಿತ್ತು. ಇನ್ನು ಸಚಿನ್ ಬ್ಯಾಟನ್ನೆ ಹಿಡಿದಿರಲಿ ಬಾಲ್ ನ್ನೆ ಹಿಡಿದಿರಲಿ ಅದು ಅವರ ಕೈಯಲ್ಲಿ ಮ್ಯಾಜಿಕ್ ದಂಡದಂತೆ ಕೆಲಸ ಮಾಡುತ್ತಿತ್ತು. ಒಂಥರಾ ಛೋಟಾ ಜಾದುಗಾರನಂತೆ ಸಚಿನ್ ಬಹಳ ಬೇಗನೇ ಶತಕೋಟಿ ಭಾರತೀಯರ ಮನಸ್ಸನ್ನು ಗೆದ್ದು ಬಿಟ್ಟಿದ್ದರು.

ಇಂದಿನ ಸ್ಪರ್ಧಾತ್ಮಕ ದಿನಮಾನದಲ್ಲಿ ಅದೆಷ್ಟು ಕ್ರಿಕೆಟರ್ಸ್ ಗಳಿಗೆ ಇಂತದ್ದೊಂದು ಪ್ಲಾಟ್ ಫಾರಂ ಸಿಕ್ಕಿ ಯಶಸ್ಸಾಗಬಲ್ಲರು ಹೇಳಿ..? ಹಾಗಾಗಿನೆ ತೆಂಡೂಲ್ಕರ್ ಭಾರತಕ್ಕೆ ಸಿಕ್ಕಿದ ಅತ್ಯದ್ಭುತ ಹಾಗೂ ಅದೃಷ್ಟದ ಕ್ರಿಕೆಟರ್ ಅಂತ ಹೇಳಿದ್ದು. ಇಂತಹ ಸಚಿನ್ ಸೌತ್ ಆಫ್ರಿಕಾ ದೆದುರಿನ ಮೊದಲ ಆರು ಮ್ಯಾಚ್ ಗಳಲ್ಲಿ ಅಂತಹ ನಿರೀಕ್ಷಿತ ಪ್ರದರ್ಶನ ತೋರದೆ ಕೂತೂಹಲ ಮೂಡಿಸಿದ್ದರು. ಹಾಗಾಗಿಯೆ ಕೊನೆಯ ಮ್ಯಾಚ್ ನಲ್ಲಿ ಅವರು ಆಡಬಹುದೆಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಆದರೆ ಪ್ರವೀಣ್ ಆಮ್ರೆ ಹೊರತಾಗಿ ಇಡೀ ಇಂಡಿಯಾದ ಬ್ಯಾಟಿಂಗ್ ಡಿಪಾರ್ಟ್ಮೆಂಟೇ ಮತ್ತದೆ ರೀತಿಯಲ್ಲಿ ಹಳಿ ತಪ್ಪುವುದರ ಮೂಲಕ ಹಳೆ ಚಾಳಿ ಮುಂದುವರಿಸಿತು. ಬ್ಯಾಟಿಂಗ್ ವೈಫಲ್ಯಕ್ಕಿಂತಲೂ ಆಟಗಾರರ ನಡುವಿನ ತಾಳಮೇಳದ ಕೊರತೆ ಟೀಮ್ ಸ್ಪೀರೀಟ್ ಇಲ್ಲದಿರುವುದು ಇಂಡಿಯಾಕ್ಕೆ ದೊಡ್ಡ ಮುಳುವಾಗಿ ಪರಿಣಮಿತು.

| ಇನ್ನು ನಾಳೆಗೆ |

‍ಲೇಖಕರು Admin

July 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: