ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯಮಂಗಲ ಮಹಾದೇವ ಹೊಸ ಕವಿತೆ: ಕಾಲ ಸವೆದ ಹಾಗೆ ಕಣ್ಣುಗಳು ಹೊಳೆಯುತ್ತವೆ

   ಸತ್ಯಮಂಗಲ ಮಹಾದೇವ

ಹೊಸ ಹೊಸ ಹತಾರಗಳಿಂದ ಅಗೆದರು

ಕಸಕಡ್ಡಿ ಪ್ಲಾಸ್ಟಿಕ್

ತ್ಯಾಜ್ಯಗಳನ್ನೇ ನೆಲಕ್ಕೆ ಚೆಲ್ಲಿದರೂ

ಮಣ್ಣು ಮರಳಿ ಅರಳುತ್ತದೆ ತನ್ನ ತಾನು

ಸಂತೈಸಿಕೊಂಡು 

ಕೊಡಲಿ ಏಟು ಬಿದ್ದರೂ ಗರಗಸ ತನ್ನ 

ಕೊಯ್ದರೂ 

ಮರ ಮುಗುಳುನಗೆಯಿಂದ ನೆಲಕ್ಕೊರಗುತ್ತದೆ

ಮರವನ್ನು ಮಣ್ಣು ಸಂತೈಸುತ್ತದೆ

ತಲೆ ನೇವರಿಸಿ, ಕಣ್ಣೀರೊರೆಸಿ 

ಮಣ್ಣು ಮರಕ್ಕೆ ದಾಟಿಸಿದ ಪದ 

ಕಾಲ ಸವೆದ ಹಾಗೆ ಕಣ್ಣು ಹೊಳೆಯುತ್ತವೆ

ಬುದ್ಧ ಉಸಿರಾಡಿದ ಗಾಳಿಯ ಎಲರಿನ

ನರನಾಡಿಯ ತುಂಬಾ 

ಅಂಗೂಲಿ ಮಾಲನಿಗೆ ಆದ ಗಾಯದ ಗುರುತು

ಏನ ಬೇಡಲಿ ಪ್ರಭುವೇ 

ಗಾಳಿಯ ಮೈದಡವಿ ಎಲರಿನ ಕರುಳ ನೇವರಿಸುವ 

ಮಧುರಾಕ್ಷರವನು ಬರೆವ ಕೈಗಳ 

ದಿನ ರಾತ್ರಿ ಧ್ಯಾನಿಸುತ್ತಿರುವೆ

 

ನನ್ನ ಹೊತ್ತು ತಿರುವ ಚಪ್ಪಲಿ 

ಸರಿರಾತ್ರಿಯಲ್ಲಿ ಕೊರಗುತ್ತಿತ್ತು 

ಎಚ್ಚರಾಗಿ ಕೂತು ಅಂಗೈಲಿಡಿದುಕೊಂಡೆ

“ದೇಹದ ಭಾರಕ್ಕಿಂತ ಮನಸ್ಸು ಭಾರವಾಗಿದ್ದ ಕಂಡೆ

ನಿನಗಾಗಿ ಕೊರಗುತ್ತಿರುವೆ” 

ಖುಷಿ ಅಪಾರ ಸಂತಸ ಜೊತೆಯಲಿ 

ದುಃಖ ಕೈಹಿಡಿದು ನಡೆಸುತ್ತಿದೆ 

ಈಗ ನನ್ನ ಚಪ್ಪಲಿ ನನ್ನ ಸ್ನೇಹಿತ 

ಕಾಲ ಸವೆದ ಹಾಗೆ ಕಣ್ಣು ಹೊಳೆಯುತ್ತವೆ

ರೂಪ ವಿರೂಪವನ್ನು ಅಣಕಿಸುತ್ತದೆ

ವಿರೂಪವೇ ರೂಪದ ಮುಖವಾಡ ಹೊತ್ತಿದೆ

ಮಾತು ಬಚ್ಚಲ ಹುಳಗಳಂತಾಗಿವೆ

ಕಣ್ಣು ನೋಡುವುದ ಮರೆತಿದೆ

ಕನಸುಗಳು ಚಿಗುರೊಡೆಯುವುದ ನಿಲ್ಲಿವೆ

ಭಾವಗಳು ಬಂಜರಾಗಿವೆ 

ನೀರು ಇಂಗುತ್ತಿಲ್ಲ ಬಿಸಿಲು ಒಣಗುತ್ತಿಲ್ಲ

ಏನೆಲ್ಲಾ ಘಟಿಸಬಹುದು 

ಊಹಿಸಿದರೆ  ಬೆಚ್ಚಿಬೀಳುವಾಗ 

ನಾಳೆಯ ಬಗ್ಗೆ ಆಸೆ ಮೊಳೆಯುತ್ತದೆ 

ಕಾಲ ಸವೆದ ಹಾಗೆ ಕಣ್ಣುಗಳು ಹೊಳೆಯುತ್ತವೆ 

ಮಾತು-ಮೌನ -ಧ್ಯಾನ 

ತಮ್ಮ ದೇಹತ್ಯಾಗ ಮಾಡಿವೆ 

ಕಣ್ಣೀರಿಗೆ ತಮ್ಮ ವಾರಸುದಾರಿಕೆ ವಹಿಸಿ

ಅಪಾತ್ರರಿಗೆ ವ್ಯಯಿಸದಂತೆ 

ವೇಷಕ್ಕೆ ನಾಟಕದ ತಾಲೀಮು ಕಲಿಸದಂತೆ 

ಎಲೆಯು ನಲುಗುವ ಸದ್ದು ಕೇಳಿಸುತ್ತಿರಲೆಂದು 

ಪಾಠವ ಕಲಿಸಿವೆ 

ಕಾಲ ಸವೆದ ಹಾಗೆ ಕಣ್ಣು ಹೊಳೆಯುತ್ತವೆ

ಹೊಸ ದಾರಿ ಹೊಸ ಪ್ರಯಾಣ 

ಎಚ್ಚರ ಉತ್ತರದ ಹೊಸ ಹೊಳಹುಗಳಲ್ಲಿ 

ನೀರೊಡೆಯದ ಕಣ್ಣುಗಳಲ್ಲಿ 

ದುಃಖ ಪೋಷಿಸುವ ತಾಯಾಗುವ ಕನಸು

ಹೊಳೆಯುವ ಕಣ್ಣುಗಳಲ್ಲಿ ಕಾಲದ ನೆನಪು

ಕಾಲ ಕಳೆಯುತ್ತದೆ ಮಾಗುವ ದಿವ್ಯ ಔಷದ ಈಗ

ಎಲ್ಲಾ ಹೃದಯಗಳಲ್ಲೂ ದೊರೆಯುತ್ತದೆ.

   

‍ಲೇಖಕರು avadhi

1 July, 2023

1 Comment

  1. prathibha nandakumar

    ತುಂಬ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading