ಸತ್ಯಬೋಧ ಜೋಷಿ ಓದಿದ ‘ಗಿಣಿ ಬಾಗಿಲು’

ಸತ್ಯಬೋಧ ಜೋಷಿ

—-

ಪುಸ್ತಕ: ಗಿಣಿ ಬಾಗಿಲು..

ಕೃತಿಕಾರ: ಹರೀಶ್ ಕೇರ..

ಹೀಗೊಂದು ಯುಗದ ಜಾತ್ರೆಯನ್ನ ಒಬ್ಬ ಗಾರುಡಿಗನ ಬೆನ್ನೇರಿ ಕುಳಿತು ನೋಡುತ್ತ ಹೊರಟಂತಿದೆ.. ಕಾಲಾತೀತ ಬಯೋಸ್ಕೊಪಿನ  ತಾಳಕ್ಕೆ ಸರಿಸರಿದು ಹೋಗುವ ಅಸಂಖ್ಯ ಚಿತ್ರಗಳನ್ನ ತೋರುತ್ತ  ನಮ್ಮನ್ನ ಧ್ಯಾನೋದಯಕ್ಕೆ ಒಡ್ಡುವಂತಿದೆ ಈ ಗಿಣಿ ಬಾಗಿಲು…

ಅದರಲ್ಲೂ ಒಮ್ಮೆ  ಸಮಯ ಮಾಡಿಕೊಂಡು ಒಂದೇ  ಗುಕ್ಕಿಗೆ ಆ 39 ಲಹರಿಗಳ ಈ ಪುಸ್ತಕವನ್ನ ಓದಿ ನೋಡಿ ಗುಂಗೇರಿಸುವ ಆ ಮತ್ತು ಬಹು ಕಾಲ ನಿಮ್ಮಲ್ಲಿ ಉಳಿಯಲಿದೆ ಅನ್ನುವುದರಲ್ಲಿ ಮಾತ್ರ ಯಾವುದೇ ಅನುಮಾನ ಬೇಡ…ಹಾಗಂತ ಈ ಸಂಕಲನ ನಾನು ಓದುತ್ತಿರುವ  ಮೊದಲ ಪುಸ್ತಕವೂ ಅಲ್ಲ..ಹಾಗೆಯೇ ಇವುಗಳ ಹೆಚ್ಚುಗಾರಿಕೆ ಮೆರೆದು ನನಗೆ ಏನೂ ಆಗಬೇಕಿಲ್ಲ…ಆದರೆ ಹೀಗೊಂದು  ಸಂವೇದನಾಶೀಲ ಮನಸು ಅದೇ ಕಿಟಕಿಯ ಆ ಕಡೆಯ ಅಂತರಿಕ್ಷಕ್ಕೆ ಕೈ ಚಾಚಿದಾಗ ತನ್ನ ಕಾಲಘಟ್ಟದ ಕೋಲ್ಮಿಂಚುಗಳನ್ನ ಹೇಗೆಲ್ಲ ಪುಟಗಳಲ್ಲಿ ಬಿಡಿಸಬಹುದು ಅನ್ನುವುದಕ್ಕೆ ಈ ಸಂಕಲನ ಒಂದು ಸುಂದರ ಉದಾಹರಣೆ. 

ಇದನ್ನ ಪ್ರತಿ ಶತಮಾನ,ದಶಮಾನ, ಸಂವತ್ಸರದ ಅವಧಿಗಳಲ್ಲಿ ಒಂದಿಲ್ಲ ಒಂದು ಮನಸು ತನಗೆ ಹೊಸದಾಗಿ ಕಂಡ ಮೊದಲಿಂದ ಇರುವುದನ್ನೇ ತಮ್ಮ ಕಟ್ಟು ಚೌಕಟ್ಟುಗಳಲ್ಲಿ ನವ ನವೀನವಾಗಿ ಕಾಪಿಟ್ಟುಕೊಂಡು ಬರುತ್ತಲೇ ಇವೆ.  ಅವುಗಳ ಕಾಲ, ಆಳ, ಅಗಲಗಳು ಬೇರೆ ಬೇರೆ ಇರಬಹುದು…ಅವುಗಳಿಗೆ ನಾವು

ಡಿ. ಆರ್ ನಾಗರಾಜ, ಕಾರ್ನಾಡ್, ಲಂಕೇಶ್, ಬೆಳೆಗೆರೆ, ಜೋಗಿ, ಜಯಂತ ಅಂತ ಹಲವು  ಹೆಸರನ್ನಿಟ್ಟಿರಬಹುದು..

ಆದರೆ ಹಾಗೆ ನಾವು ಹಲವಾಗಿ ಜೀವಂತವಿರುವುದಿದೆಯಲ್ಲ..ಆ ಅವಧಾನ ಕಲೆಯಿಂದಲೇ ಹರೀಶ್ ಕೇರ ಅವರ ಈ ಹಳವಂಡಗಳ  ಗುಚ್ಛ ನನಗೆ ಆಪ್ತವೆನಿಸೋದು . 

ಇಲ್ಲಿ ನಮಗೆ ಕೃಷ್ಣ ಸಿಗುತ್ತಾನೆ.ಆಗಾಗ ವಾಲ್ಮೀಕಿ, ಕುಮಾರವ್ಯಾಸ ಬೇಂದ್ರೆಯವರೂ ಇಲ್ಲಿ ಬಂದು ಮಾತನಾಡಿಸಿ ಹೋಗುತ್ತಾರೆ..

ಗಾಂಧೀಜಿ ಕೂತಲ್ಲಿಂದಲೇ ಕಣ್ಣೆತ್ತಿ ನೋಡಿ ಎಚ್ಚರಿಸುತ್ತಾರೆ.

ಟಾಲ್ ಸ್ಟಾಯ್, ಸ್ಟೀಫನ್ ಹಾಕಿಂಗ್ ಅವರೂ ಜಾತ್ರೆಯ ಮಧ್ಯೆ ತಮ್ಮ ಮಾತನ್ನ ಕಿವಿಯಲ್ಲಿ ಪಿಸುರಿ ಹೋಗುತ್ತಾರೆ . ಕವಿತೆಗಳಂತೂ ನಮ್ಮನ್ನ ಹುಟ್ಟಿಸು ಅಂತ  ಎಲ್ಲಿ ಸಾಧ್ಯವೋ ಅಲ್ಲಲ್ಲಿ ಬಂದು ಇಣುಕಿ ಹೋಗುತ್ತವೆ. ಆ  ನಮ್ಮೆಲ್ಲರ ತೇಜಸ್ವಿ ಇಲ್ಲಿಯೂ ಬಂದು ಹೋಗುತ್ತಾರೆ ಹಾಗಾಗಿ ನಾಯಿಗಳು ಇಲ್ಲಿಯೂ ನಮ್ಮನ್ನ  ಹಿಂಬಾಲಿಸುತ್ತವೆ…

ಆದರೆ ಹಾವು, ಹಕ್ಕಿಯ ಮೊಟ್ಟೆಯನ್ನ ತಿಂದರೂ ಕಾಲದ ಹಕ್ಕಿಗೆ ಅದನ್ನ ಹಾವಿನ ಮೊಟ್ಟೆಯನ್ನಾಗಿಸುವುದು ಅನಿವಾರ್ಯವಾದರೇ.. ಇಲ್ಲಿ ವೈರುಧ್ಯ ನೋಡಿ..ನಕ್ಕು ಬದುಕಿಸಬೇಕಿರುವ ಮನುಷ್ಯ ಜೋಕರನಿಗೆ ಅದೇ ಕಾಲಘಟ್ಟ  ಕೊಲ್ಲುವ ಕ್ರೂರಿಯನ್ನಾಗಿಸುತ್ತಿದೆ..ಇದೂ ಮನರಂಜನೆಯಾ ಅಂತ ಕೇರರು ಕೇಳುತ್ತಾರೆ?  

ಈಗ ಇನ್ನೂ..ಯಾವುದು ಬದುಕಿದೆ ವಿಜ್ಞಾನವೋ ತತ್ವಜ್ಞಾನವೋ!!  

ಹೀಗಂತ ಹರೀಶ್ ಕೇರ ಅವರು ಹಲವಾರು ತಮ್ಮ ಲಹರಿಗಳನ್ನ 39 ಲೇಖನಗಳ ಮೂಲಕ ನಮ್ಮ ಮುಂದಿಟ್ಟಿದ್ದಾರೆ.ಇಲ್ಲಿ ಮಹಾಕಾವ್ಯ, ವಿಜ್ಞಾನ, ಸಾಹಿತ್ಯ,ಸಿನೆಮಾ,  ಹೀಗೆ ಬಹು ವೈವಿಧ್ಯಗಳನ್ನ ತಮ್ಮ ಓದಿನ ಹರಹು ಇಂತಿದೇ ಅಂತನ್ನುವ ಯಾವ ಪ್ರದರ್ಶನಕ್ಕೂ ಇಡದೇ ಬೆರಗು ಮನುಷ್ಯನ ಸಹಜ ಗುಣ ಎನ್ನುವಂತೆ ಮೂಡಿಸಿದ್ದಾರೆ ..ಅದೇ ಈ ಒಟ್ಟು ಕೃತಿಯ ಹಿರಿಮೆ ಮತ್ತು ಆಶಯವು ಅಂತ ನನಗನ್ನಿಸಿತು…ತುಂಬಾ ತೃಪ್ತಿ ಕೊಡುವ, ಹಲವು ವಿಷಯಗಳ ಕುರಿತ ಜಿಜ್ಞಾಸೆ ಮೂಡಿಸುವ ಸುಂದರ ಸಂಕಲನ ಈ ಗಿಣಿ ಬಾಗಿಲು. ಕೊನೆಯದಾಗಿ..ತಾವು ತಮಗೆ ತಿಳಿದಿರುವ ಯಕ್ಷಗಾನ, ಚಂಡೆ ಮದ್ದಳೆ ಇತ್ಯಾದಿಗಳ ಕುರಿತು ಎಲ್ಲಿಯೂ ಹೇಳಿಲ್ಲ..ಯಾಕೆ ಅದು ಎಲ್ಲರಿಗೂ ಹೆಚ್ಚು ತಿಳಿಯಲಿಕ್ಕಿಲ್ಲ ಅಂತಲೇ? ಬರೆದು ಬಿಡಿ ಹಾಗಾದರೂ ಅದು ಹೆಚ್ಚಿಗೆ ತಿಳಿಯದ ನಮಗೊಂದು ಮುನ್ನುಡಿಯಾದೀತು.

ಅಂದ ಹಾಗೆ Did he who made the Lamb make thee? ಕುರಿಮರಿಯನ್ನ ಹುಟ್ಟಿಸಿದವನೇ ಆ ಹುಲಿಯನ್ನೂ ರೂಪಿಸಿದವನೇ ಅನ್ನುವ ಬ್ಲೇಕ್ ನ ಸಾಲಿನಷ್ಟೇ ಸಾರ್ಥಕ ಸಾಲನ್ನು ತಾವು ಹುಟ್ಟು ಹಾಕಿದ್ದೀರಿ ಕೇರರೆ.. ” ಪ್ಲೈ ಓವರುಗಳ ಹಾಗಲ್ಲ ಈ ಅಂಡರ್ ಪಾಸುಗಳು ಅದನ್ನು ಕಟ್ಟಿಸಿದ ಇಂಜಿನಿಯರೇ ಇದನ್ನು ಕಟ್ಟಿರಲು ಸಾಕು.” ಅಭಿನಂದನೆಗಳು ಸರ್..

‍ಲೇಖಕರು avadhi

September 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: