
ಸರೋಜಿನಿ ಪಡಸಲಗಿ
ತರುವೊಂದು ಹುಟ್ಟಿ ದೊಡ್ಡ ಮರವಾಗಿ
ನೆಲದಾಳ ಮಣ್ಣಿನಲಿ ಆಳ ಬೇರು ಬಿಟ್ಟು
ಅಗಣಿತ ಚಿಗುರು ರೆಂಬೆ ಕೊಂಬೆ ಹರಡಿ
ತನ್ನೊಡಲ ಗೂಡಲಿ ನೂರು ಜೀವಕೆ ನೆಲೆಯಾಗಿ
ಸಂದಿ ಸಂದಿಯಲೂ ಗಂಧರ್ವಗಾನ ಗುಂಜಿಸಿ
ಕಣ್ತುಂಬುವ ಆ ವೈಭವ ಮನತುಂಬಿತಯ್ಯ ||
ಕಾಲಚಕ್ರ ತಿರುಗಿ ಮರವು ಹಿರಿದಾಗಿ ಬಲಿತು
ಮಾಗಿ ಪಕ್ವವಾಗಿ ಅನುಭವದ ತಾವೇ ತಾನಾಗಿ
ಹಿರಿತನದ ಗಾಂಭೀರ್ಯ ಗಾಢವಾಗಿ ಆವರಿಸಿ
ಭಯ ಭಕ್ತಿ ಗೌರವ ಅರಿಯದೇ ಮೂಡುವಂತೆ
ಮತಿಹೀನ ಜಾತಿಗೆ ಅದು ಗೊಡ್ಡು ಮುದಿ ಮರ
ಹಾಕೀಯೇ ಬಿಟ್ಟ ಕಾಲ ಬಲವಾದ ಕೊಡಲಿಯೇಟು ||

ಆ ಹಿರಿ ಜೀವ ಉರುಳಿ ಶೂನ್ಯತೆಯು ಅಲ್ಲಿ ತುಂಬಿ
ನೆಚ್ಚಿದ ಜೀವಗಳ ಎದೆಯ ಪ್ರವಾಹ ಉಕ್ಕಿ ಹರಿದು
ಮರಮರನೇ ಮರುಗಿ ಆ ಬೊಡ್ಡೆಯತ್ತ ತಿರುಗೆ
ಅದೇ ಹಿರಿ ಗಾಂಭೀರ್ಯ ಹಾಗೇ ಮಿರುಗುವದಲ್ಲ
ಭಾವನೆಗಳ ತರಂಗ ಅಲೆಯಾಡುವ ಕಿರು ನಗು
ಸತ್ತ ಮರ ನಾನಲ್ಲ ಎಂದು ಆ ಹೃದಯ ಉಸುರುವಂತೆ ||
ಮೆಲ್ಲ ಮೆಲ್ಲನೆ ಆ ಬೊಡ್ಡೆ ಅತ್ತಿತ್ತ ಕಣ್ಣು ತಿರುಗಿಸೆ
ಸುತ್ತಲೂ ಹರಡಿದೆ ತನ್ನದೇ ಚಿಗುರು ತನ್ನದೇ ಕೊಂಬೆ
ಆಗಲೂ ಆ ಹಿರಿ ಜೀವದ ಮನತುಂಬ ಹಾಯಿ
ಕೊಡಲಿಯೇಟು ಬಿದ್ದರೂ ನನ್ನವರ ಜೊತೆ ನನಗೆ
ನಾನಲ್ಲ ಒಂಟಿ ಇಹುದು ತುಂಬು ಭರವಸೆ
ಅದ್ಹೆಗೋ ಆಗ ಬೊಡ್ಡೆ ಮೊಗದಿ ಮತ್ತೆ ಕಿರುನಗೆ
ನಗುವ ಹೃದಯ ಹೇಳುತಿದೆ ಸತ್ತ ಮರ ನಾನಲ್ಲ
ಇರುವೆ ನಿಮ್ಮ ನೆನಪಿನಾಳದಲಿ ಎದೆಗೂಡ ಸಂದಿಲಿ ಕೆಲ ಕಾಲವಾದರೂ ನಿಮ್ಮವನಾಗಿ ||






‘ಸತ್ತ ಮರಕ್ಕೆ’ ಸತ್ವಯುತ ಭಾವಗಳಿಂದ ಜೀವ ತುಂಬಿ ಬರೆದ ಕವಿತೆ. ಹಿಡಿಸಿತು!
ಧನ್ಯವಾದಗಳು ಶ್ರೀವತ್ಸ ದೇಸಾಯಿ ಯವರೇ! ಪ್ರಕಟಿಸಿದ ಅವಧಿಗೂ ಅನೇಕ ಧನ್ಯವಾದಗಳು!