ಸಿರಿಮಲ್ಲೆ ಗದ್ದೆ ಬಯಲಿನ ಗಮಲು..

ಡಾ ವಡ್ಡಗೆರೆ ನಾಗರಾಜಯ್ಯ

ಮಳೆಗಾಲ ಪ್ರಾರಂಭವಾಗುವುದರೊಂದಿಗೆ ಬೇಸಿಗೆ ರಜೆ ಮುಗಿಯುತ್ತಾ ಬಂತು. ನನ್ನ ತಾತನಾದ ತಿಮ್ಮಯ್ಯನ ಮನೆಯ ಹಿಂದೆ ಅಬ್ಬಿ ಹರಡಿಕೊಂಡಿದ್ದ ಮಲ್ಲಿಗೆ ಅಂಬಿನಲ್ಲಿ ಪ್ರತಿ ದಿನವೂ ಜಗಿ ಹಿಡಿದು ಹೂಬಿಡುತ್ತಿತ್ತು. ಮನೆಯ ಹಿಂದೆಯೇ ಹೊಂದಿಕೊಂಡಿದ್ದ ಗದ್ದೆ ಬಯಲಿಗೆ, ಸಮೀಪದಲ್ಲಿಯೇ ಇದ್ದ ತೊರೆಯಿಂದ ಕಾಲುವೆ ನೀರು ಹರಿದು ಬರುತ್ತಿತ್ತು.

ನೀರಿನ ಕಾಲುವೆಯ ದಿಡ್ಡೆಯಲ್ಲಿದ್ದ ಮಲ್ಲಿಗೆ ಅಂಬು ಸದಾ ಕಾಲ ತನ್ನ ಮೈತುಂಬಾ ದಟ್ಟ ಹಸಿರೆಲೆಗಳನ್ನೊದ್ದು ನಕ್ಷತ್ರ ರಾಶಿಗಳನ್ನೇ ಸೂರೆಹೊಯ್ದಂತೆ ಬಿಳಿಯ ಹೂಗಳಿಂದ ನಗುತ್ತಿತ್ತು. ಸಂಜೆಯಾಗುತ್ತಲೇ ಚಿಕ್ಕಮ್ಮಜ್ಜಿ ಈ ಹೂಗಳನ್ನು ಬಿಡಿಸಿ, ರಾತ್ರಿ ವೇಳೆ ಹೊಂಗೆಣ್ಣೆ ಹಣತೆಯ ಬೆಳಕಿನಲ್ಲಿ ಹೂದಂಡೆ ಕಟ್ಟಿ, ಪತ್ತಲದ ಪಾವುಡದಲ್ಲಿ ಸುತ್ತಿ, ಉಗುರು ನೀರು ಚಿಮುಕಿಸಿ ಬಾನದ ಸಾಲಿನ ಹತ್ತಿರ ಇರಿಸುತ್ತಿದ್ದಳು.

ಬೆಳ್ಳನೆ ಬೆಳಗಾಗುತ್ತಲೇ ನನ್ನ ತಾತ ತಿಮ್ಮಯ್ಯನು, ಹಸುವಿನ ಪಡ್ಡೆಯನ್ನು ಕೊಟ್ಟಿಗೆಯಿಂದಾಚೆಗೆ ತರುಮಿ, ಮನೆ ಮುಂದಿನ ಅಗಸೆ ಮರಕ್ಕೆ ಬಿಗಿದು ಕಟ್ಟಿ, ಮನೆಯಂಗಳವನ್ನು ಹಿಡಗಲುನಿಂದ ಗುಡಿಸಿ, ಕೊಟ್ಟಿಗೆ ಮತ್ತು ಅಂಗಳದ ಕಸ ಬಳಿದು ತಿಪ್ಪೆಗೆಸೆದು ಬರುತ್ತಿದ್ದ. ಕಸ ಮೆತ್ತಿದ ಕೈ ತೊಳೆದುಕೊಂಡು, ಮಲ್ಲಿಗೆ ಹೂದಂಡೆಯನ್ನು ಮುತ್ತುಗದ ಹಸಿರೆಲೆಗಳ ಪತ್ರಾವಳಿಯಲ್ಲಿ ಸುತ್ತಿ, ದೃಷ್ಟಿಯಾಗದಿರಲೆಂದು ಹಂಚಿಕಡ್ಡಿ ಮತ್ತು ಕರಿಬೊಗ್ಗನ್ನು ಸಿಲವಾರದ ಡಬ್ಬಿಯೊಳಗಿರಿಸಿಕೊಂಡು ನನ್ನೂರಾದ ವಡ್ಡಗೆರೆಗೆ ಹೋಗಲು ದಾರಿ ಹಿಡಿಯುತ್ತಿದ್ದ.

ತನ್ನ ಮಗಳಾದ ಕದರಮ್ಮ(ನನ್ನ ಅಮ್ಮ)ನಿಗೂ, ಕದರಮ್ಮನ ವಾರಗಿತ್ತಿಯಾದ ಅರಸಮ್ಮ(ನನ್ನ ಚಿಕ್ಕಮ್ಮ)ನಿಗೂ ಮತ್ತು ತನ್ನ ಮೊಮ್ಮಗಳಾದ ರತ್ನಮ್ಮ(ನನ್ನ ಅಕ್ಕ)ನಿಗೂ ಮುಡಿಯಲೆಂದು ಹೂದಂಡೆ ಕೊಡಲು ಪ್ರತಿದಿನ ಮೂರು ಮೈಲಿ ದೂರದ ಊರಿಗೆ ಬರಿಗಾಲಿನಲ್ಲಿ ನಡೆದುಹೋಗುತ್ತಿದ್ದನು.

ಚಿಕ್ಕನಹಳ್ಳಿಯ ಹೊರಪಾಸಲೆಯ ದಾರಿಯಲ್ಲಿ ತೊರೆ ದಾಟಿ ಹೋಗುವಾಗ, ತೊರೆಯ ನೀರಿನಲ್ಲಿ ಬಾಯಿ ಮುಕ್ಕಳಿಸಿ, ಇದ್ದಿಲಿನಿಂದ ಹಲ್ಲುಜ್ಜಿ ಕೈಕಾಲು ಮುಖ ತೊಳೆದು, ಸೂರ್ಯನಿಗೆ ನಮಸ್ಕರಿಸುವುದು ಅವನ ಕಡ್ಡಾಯ ಕರ್ಮವಾಗಿತ್ತು. ಅಲ್ಲಿಯವರೆಗೆ ಅವನು ಟೀ ಕಾಫಿ ಸೇವನೆಯ ಮಾತಿರಲಿ ಬೀಡಿಯನ್ನೂ ಸಹ ಮುಟ್ಟುತ್ತಿರಲಿಲ್ಲ. ತೊರೆ ದಾಟಿ ಬೀಡಿ ಹಚ್ಚಿಕೊಂಡು ದಾರಿಯಲ್ಲಿ ಹೆಜ್ಜೆ ಹಾಕುತ್ತಾ ಅರ್ಧ ಬೀಡಿ ಸೇದಿ ಉಳಿದರ್ಧ ಬೀಡಿಯನ್ನು ಕಿವಿಯ ಮೇಲೆ ಸಿಕ್ಕಿಸಿಕೊಂಡು ವಡ್ಡಗೆರೆ ತಲುಪುವ ಮುಂಚಾಲಿ ಕಿವಿಯ ಬೀಡಿಯನ್ನು ಸೇದಿಬಿಡುತ್ತಿದ್ದ.

ತಾನು ತೆಗೆದುಕೊಂಡು ಹೋಗಿ ನೀಡಿದ ಸಿರಿಮಲ್ಲಿಗೆಯನ್ನು ಮುಡಿದ ತನ್ನ ಮಗಳು, ಮಗಳ ವಾರಗಿತ್ತಿ ಮತ್ತು ಮೊಮ್ಮಗಳ ಚೆಲುವು ಚೆಂದಗಾಣಿಕೆಗಳನ್ನು ಕಣ್ತುಂಬಿಕೊಂಡು ಚಿಕ್ಕನಹಳ್ಳಿಗೆ ಬರಿಗಾಲಿನಲ್ಲಿ ನಡೆದುಕೊಂಡು ಹಿಟ್ಟಿನ್ಹೊತ್ತಿಗೆ ಹಿಂತಿರುಗಿ ಬರುತ್ತಿದ್ದ. ಒಮ್ಮೊಮ್ಮೆ ಬೆಲ್ಲ, ಕಬ್ಬಿನ ಜಲ್ಲೆ, ಕಾಕಂಬಿ, ಬೆರಕೆ ಸೊಪ್ಪು, ದೇವಮಲ್ಲಿಗೆ ಅಕ್ಕಿ, ಒಣಬಾಡು ಮುಂತಾದ ಸಾಮಾಗ್ರಿಗಳನ್ನು ತಾತನು ನಮ್ಮ ಮನೆಗೆ ಹೊತ್ತೊಯ್ದು ಕೊಡುತ್ತಿದ್ದ. ವಡ್ಡಗೆರೆಯ ನಮ್ಮ ಮನೆಯಲ್ಲಿ ವಿಧವೆ ಅಜ್ಜಿಯಾದ ಸಣ್ಣಹನುಮಕ್ಕಜ್ಜಿ, ನನ್ನ ಅಪ್ಪನಾದ ಹನುಮಂತಯ್ಯ, ನನ್ನ ಅಮ್ಮ ಕದರಮ್ಮ, ಅಕ್ಕ ರತ್ನಮ್ಮ, ಚಿಕ್ಕಪ್ಪನಾದ ವೀರಕ್ಯಾತಯ್ಯ ಮತ್ತು ಚಿಕ್ಕಮ್ಮನಾದ ಅರಸಮ್ಮ ಹೀಗೆ ನನ್ನನ್ನೂ ಸೇರಿದಂತೆ ಏಳು ಜನರಿದ್ದೆವು. ನಾವೆಲ್ಲರೂ ಒಂದೇ ಮನೆಯಲ್ಲಿ ಸುಖ- ದುಃಖ ಸಮನಾಗಿ ಹಂಚುಣ್ಣುತ್ತಾ ವಾಸವಿದ್ದೆವು.

ಮಲ್ಲಿಗೆ ಹೂದಂಡೆಯನ್ನು ಕೊಟ್ಟು ವಾಪಸ್ಸು ವಡ್ಡಗೆರೆಯಿಂದ ಚಿಕ್ಕನಹಳ್ಳಿಗೆ ಮರಳಿ ಬಂದ ತಾತನು ಹಿಟ್ಟುಂಡು, ಅಗಸೆ ಮರಕ್ಕೆ ಬಿಗಿದು ಕಟ್ಟಿದ್ದ ಹಸುವಿನ ಪಡ್ಡೆಯನ್ನು ಹಿಡಿದುಕೊಂಡು, ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಗದ್ದೆ ಹಡ್ಡಲು ಸೇರುತ್ತಿದ್ದ. ನನ್ನ ಬಾಲ್ಯದ ದಿನಗಳಲ್ಲಿ ಜಯಮಂಗಲಿ ನದಿಯ ಜಲಾನಯನದ ಚಿಕ್ಕನಹಳ್ಳಿಯ ಹೊಲಮಾಳದಲ್ಲಿ ಸದಾ ಕಾಲ ನೆಲ್ಲುಗದ್ದೆ, ಕಬ್ಬಿನ ಗದ್ದೆ, ಅಡಕೆ ತೋಟ, ವೀಳ್ಯದೆಲೆ ತೋಟಗಳು ಹಸಿರು ಮರಿಯುತ್ತಿದ್ದವು.

ಬೆಲ್ಲದ ಅಡುಗೆಯ ಆಲೆಮನೆಗಳು, ಕಬ್ಬು ಅರೆಯುವ ಎತ್ತಿನ ಗಾಣಗಳು, ಕಬ್ಬು ಸಾಗಾಟ ಮಾಡುವ ಗಾಡಿಗಳು, ಬೆಲ್ಲದ ಮೂಟೆಗಳನ್ನು ತುಂಬಿ ಸಾಗಿಸುವ ಗಾಡಿಗಳು, ಭತ್ತ ಒಕ್ಕಣೆಯ ಕಣಗಳು, ನೆಲ್ಲುಗದ್ದೆ ಕುಯಿಲು, ಭತ್ತದ ಹೊರೆ ಹೊತ್ತು ಸಾಗಿಸುವ ಕೂಲಿಯಾಳುಗಳು, ನೆಲ್ಲುಲ್ಲು ಹೊರೆಕಟ್ಟಿ ಸಾರಣಿಗೆ ಮೆದೆ ಹಾಕುವ ಗಂಡಾಳುಗಳು ಮುಂತಾದವು ಹೊಲಮಾಳದಲ್ಲಿ ಕಾಣುವ ಸಾಮಾನ್ಯ ದೃಶ್ಯಗಳಾಗಿದ್ದವು.

ಆಲೆಮನೆಯ ಕಬ್ಬಿಣದ ಕೊಪ್ಪರಿಗೆಯಲ್ಲಿ ಕಬ್ಬಿನ ಹಾಲು ಕುದಿಯುವ ಗಮಲು, ಅಡಕೆ ತೋಟದ ಗಮಲು, ನೆಲ್ಲುಗದ್ದೆಯ ಬಯಲಿನ ಗಮಲು ತುಂಬಿ ತೀಡುತ್ತಿದ್ದ ತಂಗಾಳಿಯನ್ನು ಉಸಿರಾಡಲು ಆಹ್ಲಾದಕರವೆನ್ನಿಸುತ್ತಿತ್ತು. ಗದ್ದೆ ಬಯಲಿನಲ್ಲಿ ಆಂಧ್ರಪ್ರದೇಶದ ಅನಂತಪುರದ ಕಡೆಯಿಂದ ಬಂದ ಬಾತುಕೋಳಿಗಳ ಕಾವಲುಗಾರರು ಬಾತುಕೋಳಿ ಮಂದೆಯನ್ನು ಮೇಯಿಸುತ್ತಿದ್ದರು.

ಉದ್ದ ಕತ್ತು ದೊಡ್ಡ ಮ್ಯಾತೆ(ಜಠರ)ಗಳುಳ್ಳ ಬಾತುಗಳು ನೆಲಮಟ್ಟದಲ್ಲಿ ಉರುಟಾಡಿಕೊಂಡು ನಡೆಯುತ್ತಾ ಕೊರಗುಟ್ಟಿ ಕೊಕ್ಗರೆದು ಮೇಯುವುದನ್ನು ಮತ್ತು ನೀರೊಡ್ಡುಗಳಲ್ಲಿ ಈಜುವುದನ್ನು ನೋಡಲೊಂದು ಚೆಂದ! ಹಸುವಿನ ಪಡ್ಡೆಯನ್ನು ಮೇಯಿಸುವಾಗ ತಾತನು, ಗದ್ದೆ ಬದುಗಳಲ್ಲಿ, ಕಾಲುವೆ ದಂಡೆಯಲ್ಲಿ ಬಿಲಕೊರೆದು ಬುರುದೆಯಿಂದ ಗುರುಮೆ ಹಾಕಿಕೊಂಡಿದ್ದ ಏಡಿಕಾಯಿಗಳ ಬಕ್ಕೆಗಳನ್ನು ಸಿದುಗಿ ಕೈತುರುಕಿ ಏಡಿಕಾಯಿ ಹಿಡಿದು ಕಾಲುಗಳನ್ನು ಮುರಿದು ಸಿಲವಾರದ ಡಬ್ಬಿಯೊಳಕ್ಕೆ ಹಾಕುತ್ತಿದ್ದ. ಕೆಲವೊಮ್ಮೆ ಏಡಿಕಾಯಿ ಬಕ್ಕೆಗಳಲ್ಲಿ ನೀರಾಳೆ ಬುಡುಕ ಹಾವುಗಳು ಸಿಗುತ್ತಿದ್ದವು.

ಆಗಿನ ಕಾಲದಲ್ಲಿ ಕೆರೆ ಕುಂಟೆ ಕಾಲುವೆ ಬಾವಿಗಳಲ್ಲಷ್ಟೇ ಅಲ್ಲದೆ ದಿನ್ನೆಹೊಲಗಳ ಮಳೆಯಾಶ್ರಿತ ಜೋಪಿನ ನೀರಿನಲ್ಲಿ ಬೆಳೆಯುತ್ತಿದ್ದ ಒಣನೆಲ್ಲಿನ ಪುಣಜಿ ಗದ್ದೆಗಳಲ್ಲಿಯೂ ಮೀನು ಸೀಗಡಿ ಏಡಿಕಾಯಿ ಸಿಗುತ್ತಿದ್ದವು. ಹೊಲಮಾಳಗಳ ಬಯಲಿನಲ್ಲಿ ಹಿಡಿದ ಏಡಿಕಾಯಿಗಳ ಹೊರಗವಚ ವೋಡುಗಳನ್ನು ಕಿತ್ತು, ವೋಡಿನೊಳಗಿನ ಹಳದಿ ಭಂಡಾರವನ್ನು ಕಡ್ಡಿಪುಳ್ಳೆಯ ನೆರವಿನಿಂದ ಅಡಕೆಪಟ್ಟೆಗೆ ಸೋಸಿಕೊಂಡು, ಕಾಲುಗಳನ್ನು ಮುರಿದು ಬಿಸಾಡಿ, ಸೋಸಿದ ಏಡಿಕಾಯಿಗಳನ್ನು ಕಾಲುವೆ ನೀರಿನಲ್ಲಿ ಜಾಲಿಸಿ ತೊಳೆದು ಸಿಲವಾರದ ಡಬ್ಬಿಗೆ ತುಂಬಿ, ಮುಚ್ಚಳದಿಂದ ಬಿಗಿಯಾಗಿ ಮುಚ್ಚಿ ತನ್ನ ಹೆಗಲ ಮೇಲಿನ ಒಲ್ಲಿವಸ್ತ್ರವನ್ನು ಡಬ್ಬಿಯ ಹಿಡಿಕೆಗೆ ತೂರಿಸಿ ಗಂಟುಹೂಡಿ ಹೆಗಲ ಮೇಲೆ ಬೆನ್ನ ಹಿಂದಕ್ಕೆ ನೇತುಹಾಕಿಕೊಂಡು, ಕೈಯಲ್ಲಿ ಹಸುವಿನ ಪಡ್ಡೆಯ ಹಗ್ಗವನ್ನು ಹಿಡಿದು ನಡೆಯುತ್ತಿದ್ದ.

ತಾತ ಹಸುವಿನ ಪಡ್ಡೆಯನ್ನು ನೀರೊಡ್ಡಿನಲ್ಲಿ ಮೈತೊಳೆದು ಮೇಯಿಸುವಾಗಲೇ ಅದು ರಾತ್ರಿ ಮೇಯಲು ಬೇಕಿದ್ದ ಹುಲ್ಲನ್ನೂ, ತನ್ನ ಮನೆಗೆ ಬೇಕಾದ ಸೌದೆಸೊಪ್ಪು, ಅಡಕೆಪಟ್ಟೆ, ಸುಲಿಪಟ್ಟೆ ಎಲೆ ಮುಂತಾದ ಲೆಮೆಜಮೆಗಳನ್ನೂ ಹೊಂದಿಸಿಕೊಳ್ಳುತ್ತಿದ್ದ. ಅಂತಹ ಸಮಯದಲ್ಲಿ ನಾನು ತಾತನ ಕೆಲಸಗಳಲ್ಲಿ ನೆರವಾಗುವುದರೊಂದಿಗೆ, ಗದ್ದೆ ಬಯಲಿನ ಬಣ್ಣ ಬಣ್ಣದ ಚಿಟ್ಟೆಗಳನ್ನು ಹಿಡಿಯಲು ಓಡುತ್ತಿದ್ದೆ. ಪಾರಿವಾಳ, ನೀರುಕೋಳಿ, ಬೆಳವನಹಕ್ಕಿ ಮುಂತಾದ ಪಕ್ಷಿಗಳ ಕೂಗನ್ನು ಅನುಕರಣೆ ಮಾಡಿ ಕೂಗುತ್ತಿದ್ದೆ.

ಮರದ ಹಸಿರೆಲೆಗಳ ನಡುವೆ ಕುಳಿತು ಕೂಗುತ್ತಿದ್ದ ಪಾರಿವಾಳದ ಧ್ವನಿಗೆ ಹಿಮ್ಮೇಳವಾಗಿ ನಾನು ನುಡಿಗೂಡಿಸಿ ‘ಮುತ್ತಿನ್ ಶೆಟ್ಟಿ ತೊರೆ…ತೊರೆ..ತೊರೆ..’ ಎಂದು ಅನುಕರಿಸಿ ಕೂಗುತ್ತಿದೆ. ಮುತ್ತುಗಳನ್ನು ಮಾರುವ ಶೆಟ್ಟಿಗೆ ಪಾರಿವಾಳಗಳು ನೆರವಾಗಿ ಹರಿವ ತೊರೆಯಿಂದ ಅವನು ಕೊಚ್ಚಿಕೊಂಡು ಹೋಗದಂತೆ ಕಾಪಾಡಿದ ಕಥೆಯನ್ನು ತಾತನಿಂದ ಕೇಳುತ್ತಿದ್ದೆ. ಹೊಂಗೆಲೆಯ ಪೀಪಿ ಊದಿಕೊಂಡು, ತೆಂಗಿನ ಗರಿಗಳಿಂದ ವಾಚು ಉಂಗುರ ಕನ್ನಡಕದ ಮಾದರಿಗಳನ್ನು ತಯಾರಿಸಿ ಧರಿಸಿಕೊಂಡು ಗದ್ದೆ ಬದುಗಳ ಮೇಲೆ ಓಡಾಡುತ್ತಿದ್ದೆ.

ತೆಂಗಿನ ಗರಿಯ ಗಿರಗಿಟ್ಳೆ ಮಾಡಿ ಬೀಸುಗಾಳಿಯಲ್ಲಿ ಹಸಿರೆಲೆ ಫ್ಯಾನ್ ತಿರುಗಿಸಿಕೊಂಡು ನೆಲ್ಲಿನ ಗದ್ದೆಯ ಕೂಳೆಗಳ ಮೇಲೆ ಬರಿಗಾಲಿನಲ್ಲಿ ಓಡುತ್ತಿದ್ದೆ. ಕೂಳೆಗಳು ಚುಚ್ಚಿಕೊಂಡು ಕಿಟಾರನೆ ಕಿರುಚಿಕೊಂಡು ತಾತನ ಮುಂದೆ ಅಳುತ್ತಾ ನಿಲ್ಲುತ್ತಿದ್ದೆ. ನನ್ನನ್ನು ಸಂತೈಸಲು ಪ್ರಯತ್ನಿಸುತ್ತಿದ್ದ ಅವನು, ಅಡಕೆಗರಿಯ ಎಲೆಗಳ ಪಟ್ಟೆನಾರು ಸುಲಿದು ಚಪ್ಪಲಿಯ ಮಾದರಿಗಳನ್ನು ತಯಾರಿಸಿ ಮೆಟ್ಟುಕೊಳ್ಳಲು ಕೊಡುತ್ತಿದ್ದನು.

ಆಲೆಮನೆಗಳ ಹತ್ತಿರಕ್ಕೆ ನನ್ನನ್ನು ಕರೆದೊಯ್ದು, ‘ನನ್ನ ಮೊಮ್ಮಗನಿಗೆ ಕಬ್ಬಿನಾಲು ಬಿಸಿಬೆಲ್ಲ ಕೊಡಿರಣ್ಣಾ’ ಎಂದು ಅಲ್ಲಿದ್ದ ಜನರ ಮುಂದೆ ಕೈಮುಗಿದು ಕೇಳುತ್ತಿದ್ದ. ಆಲೆಮನೆಯ ಬಳಿಗೆ ತಿನ್ನಲು ಕೇಳಿಕೊಂಡು ಬಂದವರಿಗೆ ‘ಇಲ್ಲಾ ಕೊಡೋದಿಲ್ಲ’ ಎಂದು ಕೊಡದೆ ನಿರಾಕರಿಸಿ ಕಳಿಸುವುದು ಶ್ರೇಯಸ್ಕರವಲ್ಲ ಎಂಬುದು ಆಗಿನ ಜನರಲ್ಲಿ ಬೇರೂರಿದ್ದ ನಂಬಿಕೆಯಾಗಿತ್ತು.

ಕಬ್ಬಿನ ಗಾಣದಿಂದ ಅರೆದು ಹಾಲ್ಗುಂಡಿಗೆ ಹರಿದು ಇಳಿಯುತ್ತಿದ್ದ ಬೆಲ್ಲದ ಹಾಲನ್ನು ಸುಲಿಪಟ್ಟೆ ಎಲೆ ಅಥವಾ ಮುತ್ತುಗದ ಎಲೆಯ ಜೊನ್ನೆಯಲ್ಲಿ ತುಂಬಿಸಿ ನನಗೆ ಕುಡಿಯಲು ಕೊಡುತ್ತಿದ್ದ. ಕೊಪ್ಪರಿಗೆಯಿಂದ ಅದಾಗ ತಾನೆ ಅಡುಗೆ ಇಳಿಸಿದ ಬಿಸಿ ಬೆಲ್ಲವನ್ನು ಕಬ್ಬಿನ ಸಿಪ್ಪೆಸೋಗೆಯ ಮೇಲೆ ಅಥವಾ ಮುತ್ತುಗದ ಎಲೆಯ ಮೇಲೆ ಹಾಕಿಸಿ ತಿನ್ನಲು ಕೊಡುತ್ತಿದ್ದ.

ತಾನೂ ಕಬ್ಬಿನ ಹಾಲನ್ನು ಕುಡಿದು ಬಿಸಿ ಬೆಲ್ಲವನ್ನು ತಿಂದು, ತನ್ನ ಹಸುವಿನ ಪಡ್ಡೆಗೂ ಕಬ್ಬಿನ ಹಸಿರು ಸೋಗೆಯನ್ನು ತಿನ್ನಿಸುತ್ತಿದ್ದ. ಅಲ್ಲಿಯೇ ಸ್ವಲ್ಪ ಸಮಯವಿದ್ದು ಆಲೆಮನೆಯ ಕೂಲಿಯಾಳುಗಳ ಕೆಲಸಗಳಲ್ಲಿ ತನಗೆ ಸೊಗಸಿದಮಟ್ಟಿಗೆ ನೆರವಾಗಿ ಎಲ್ಲರಿಗೂ ಕೈಮುಗಿದು, ಭತ್ತದ ಕಣಗಳಲ್ಲಿ ರಾಶಿ ಪೂಜೆಯಾಗುವ ಹೊತ್ತು ನೋಡಿಕೊಂಡು ಭತ್ತದ ಕಣಗಳ ಬಳಿಗೆ ಬರುವಷ್ಟೊತ್ತಿಗೆ ಇಳಿಹೊತ್ತು ಸಮೀಪಿಸಿರುತ್ತಿತ್ತು.
(ಮುಂದುವರೆಯುವುದು….)

‍ಲೇಖಕರು Avadhi

April 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: